
ಬೆಂಗಳೂರು (ಮೇ.15): ಶಾಲೆ, ಕಾಲೇಜುಗಳಲ್ಲಿ ಹಿಜಾಬ್‌ಗೆ ಅನುಮತಿಸುವ ಆದೇಶ ಪ್ರಶ್ನಿಸುತ್ತಿರುವ ಬಿಜೆಪಿ ನಾಯಕರಿಗೆ ನನ್ನ ಉತ್ತರ ಬೇಕೆಂದರೆ ಮೊದಲು ಅನ್ಯಾಯಕ್ಕೊಳಗಾಗಿರುವ 25 ಲಕ್ಷ ನೀಟ್ ವಿದ್ಯಾರ್ಥಿಗಳ ಕಾಲ ಕೆಳಗೆ ನುಸುಳಿ ಕ್ಷಮೆ ಕೇಳಿ ಬರಲಿ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಗುರುವಾರ ಕೆಲ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿ, ಹಿಜಾಬ್ ಅನುಮತಿ ವಿಚಾರವಾಗಿ ಬಿಜೆಪಿಯವರ ವಿರೋಧ, ಟೀಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಹಿಜಾಬ್ ಅನುಮತಿ ಪ್ರಶ್ನಿಸುವವರು ಮೊದಲು 25 ಲಕ್ಷ ನೀಟ್ ಅಭ್ಯರ್ಥಿಗಳಲ್ಲಿ ಶೇ.95ರಷ್ಟು ಮಂದಿ ಹಿಂದುಗಳಿದ್ದಾರೆ. ಅವರಿಗೆ ಆಗಿರುವ ಅನ್ಯಾಯದ ಬಗ್ಗೆ ಮಾತನಾಡಲಿ. ಪರೀಕ್ಷಾ ಪೇ ಚರ್ಚೆ ನಡೆಸುವ ಪ್ರಧಾನಿ ಮೋದಿ ಅವರು ಬರೀ ಪರೀಕ್ಷಾ ಶುಲ್ಕ ನಾವು ಕಟ್ಟುತ್ತೇವೆ, ಮರು ಪರೀಕ್ಷೆ ಬರೆಯಿರಿ ಎಂದಿದ್ದಾರೆ. ಆದರೆ, ಮಕ್ಕಳ ಭಾವನೆ, ವರ್ಷ ಪೂರ್ತಿ ಓದಿ ಬರೆದ ಶ್ರಮಕ್ಕೆ ಬೆಲೆ ಇಲ್ಲವೇ? ಎಂದು ಪ್ರಶ್ನಿಸಿದರು. ಅಲ್ಲದೆ, ಹಿಜಾಬ್ ಬಗ್ಗೆ ಮಾತನಾಡುತ್ತಿರುವ ಬಿಜೆಪಿಯವರಿಗೆ ಅದೇ ಆದೇಶದಲ್ಲಿರುವ ಜನಿವಾರ, ಶಿವಧಾರಕ್ಕೂ ಅನುಮತಿಸಿರುವುದು ಕಾಣುತ್ತಿಲ್ಲವೇ? ಹಾಗಾದರೆ ಅವರೆಲ್ಲ ಜನಿವಾರ, ಶಿವದಾರದ ವಿರೋಧಿಗಳಾ? ಜನಿವಾರ ತೆಗೆಯುವಾಗ ಆದ ನೋವು ಹಿಜಾಬ್ ತೆಗೆಯುವಾಗಲೂ ಆಗಿರುತ್ತದೆಯಲ್ಲವಾ ಎಂದು ಪ್ರಶ್ನಿಸಿದ್ದಾರೆ.
ಕೇಂದ್ರ ಶಿಕ್ಷಣ ಸಚಿವರನ್ನು ಮಾಧ್ಯಮಗಳು ಪ್ರಶ್ನಿಸಿದಾಗ ಉತ್ತರ ನೀಡದೆ ಕಾರಿನಲ್ಲಿ ಪರಾರಿಯಾಗಿದ್ದು ಯಾರು? ಪ್ರತಿಪಕ್ಷ ನಾಯಕ ಆರ್.ಅಶೋಕ್ ಸೇರಿ ಹಿಜಾಬ್‌ಗೆ ಅನುಮತಿ ನೀಡಿರುವುದು ಪ್ರಶ್ನಿಸುತ್ತಿರುವವರು ಮೊದಲು ಅನ್ಯಾಯಕ್ಕೊಳಗಾದ ವಿದ್ಯಾರ್ಥಿಗಳ ಕಾಲ ಕೆಳಗೆ ನುಸುಳಿ ಕ್ಷಮೆ ಕೇಳಲಿ ಎಂದರು.
ಕೇಂದ್ರ ಸರ್ಕಾರದ ಶೈಕ್ಷಣಿಕ ಸಂಸ್ಥೆಗಳಲ್ಲಿ ಪಾಲಿಸುವ ನಿಯಮಗಳನ್ನೇ ನಾವು ಅನುಸರಿಸಿ ರಾಜ್ಯದಲ್ಲಿ ಕಾನೂನಾಗಿ ಅನುಷ್ಠಾನಗೊಳಿಸುತ್ತಿದ್ದೇವೆ. ಯಾವುದೇ ಕಾರಣಕ್ಕೂ ಆದೇಶ ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ. ನಮ್ಮ ಆದೇಶ ಪ್ರಶ್ನಿಸುವವರು ಮೊದಲು ಮೋದಿ ಅವರನ್ನು ಪ್ರಶ್ನಿಸಲಿ. ಮಹಾರಾಷ್ಟ್ರದಲ್ಲಿ ಬಿಜೆಪಿಯೇ ಅಧಿಕಾರದಲ್ಲಿದೆ. ಹಿಜಾಬ್ ನಿಷೇಧಿಸುವ ನಿರ್ಧಾರ ಕೈಗೊಂಡು ಕೋರ್ಟ್‌ಗೆ ಹೋಗಿದ್ದು, ನ್ಯಾಯಾಲಯದಿಂದ ಛೀಮಾರಿ ಹಾಕಿಸಿಕೊಂಡಿದೆ ಎಂದು ಹೇಳಿದರು. ಶಿಕ್ಷಣವೇ ಧರ್ಮ. ಅದಕ್ಕೆ ಕೈಹಾಕಬಾರದು, ಸ್ವತಂತ್ರವಾಗಿ ಇರಲು ಬಿಡಬೇಕು. ರಾಜ್ಯಸರ್ಕಾರ ಮಕ್ಕಳ ಹಿತದೃಷ್ಟಿಯಿಂದ ಅದೇಶ ಹೊರಡಿಸಿದೆ ಎಂದು ಹೇಳಿದರು.
ರಾಜ್ಯದಲ್ಲಿ ಉತ್ತಮ ಪರೀಕ್ಷಾ ಪದ್ಧತಿ ಪಾಲನೆ ಮಾಡಲಾಗುತ್ತಿದೆ. ಇದರಿಂದಾಗಿ ಎಸ್ಸಿ-ಎಸ್ಟಿ-ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇದನ್ನು ನೋಡಿ, ಕೆಲವರಿಗೆ ಹೊಟ್ಟೆಕಿಚ್ಚು ಬಂದಿದೆ. ಅದಕ್ಕೆ ಹಿಜಾಬ್ ವಿವಾದ ಮುಂದಿಟ್ಟುಕೊಂಡು ಗಲಾಟೆ ಮಾಡುತ್ತಿದ್ದಾರೆ ಎಂದರು.
ಈ ಹಿಂದೆ ಶಿಕ್ಷಣ ಸಚಿವರಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ, ಎಸ್.ಸುರೇಶ್‌ಕುಮಾರ್, ಎನ್.ಮಹೇಶ್ ಅವರು ಪರೀಕ್ಷಾ ವ್ಯವಸ್ಥೆಯಲ್ಲಿ ಏಕೆ ಬದಲಾವಣೆ ತರಲಿಲ್ಲ? ಆಗೆಲ್ಲಾ ಕಳ್ಳರಂತೆ ಕಾಪಿ ಹೊಡೆಸಿ ಶಿಕ್ಷಣ ವ್ಯವಸ್ಥೆಯನ್ನೇ ಹಾಳು ಮಾಡಿದ್ದರು. ಈಗ ಇದ್ದಕ್ಕಿದ್ದಂತೆ ಎಚ್ಚೆತ್ತುಕೊಂಡು ಕುಳಿತಿದ್ದಾರೆ ಎಂದು ಮಧು ಬಂಗಾರಪ್ಪ ಲೇವಡಿ ಮಾಡಿದರು.
- ಹಿಜಾಬ್ ಆದೇಶ ಕುರಿತ ಪ್ರಶ್ನೆಗೆ ಆಕ್ರೋಶ । ಅವರಿಗೆ ಜನಿವಾರ, ಶಿವದಾರ ಕಾಣುತ್ತಿಲ್ಲವಾ? । ಶಿಕ್ಷಣವೇ ಧರ್ಮ, ಅದಕ್ಕೆ ಕೈಹಾಕಬಾರದು: ಸಚಿವ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.