* ರಾಜ್ಯದಲ್ಲಿ ಬಿಜೆಪಿ ಜನ ಸ್ವರಾಜ್ ಯಾತ್ರೆ
* ರಾಯಚೂರು ಜಿಲ್ಲೆಯ ಜನ ಸ್ವರಾಜ್ ಯಾತ್ರೆಯಲ್ಲಿ ಗದ್ದಲ-ಜಗಳ
* ವೇದಿಕೆ ಮೇಲೆಯೇ ಪಕ್ಷದ ಮುಖಂಡರು ಕೈ ಕೈ ಮಿಲಾಯಿಸುವ ಹಂತಕ್ಕೆ
ರಾಯಚೂರು, (ನ.19): ವಿಧಾನಪರಿಷತ್ ಚುನಾವಣೆ ಹಾಗೂ ಮುಂಬರುವ ವಿಧಾನಸಭಾ ಚುನಾವಣೆ ಗುರಿಯಾಗಿಸಿಕೊಂಡು ಬಿಜೆಪಿ(BJP) ಅಖಾಡಕ್ಕಿಳಿದೆ. ಮತಗಳನ್ನ ಹಿಡಿದಿಟ್ಟುಕೊಳ್ಳಲು ಬಿಜೆಪಿ ನಾಲ್ಕು ತಂಡಗಳಾಗಿ ರಾಜ್ಯಾದ್ಯಂತ ಜನ ಸ್ವರಾಜ್ ಯಾತ್ರೆ (Jan Swaraj Yatra) ನಡೆಸುತ್ತಿದೆ. ಆದ್ರೆ, ರಾಯಚೂರು ಜಿಲ್ಲೆಯ ಜನ ಸ್ವರಾಜ್ ಯಾತ್ರೆಯಲ್ಲಿ ಗದ್ದಲ-ಜಗಳ ಆಗಿದೆ.
ಬಿಜೆಪಿ ಪಕ್ಷದ ವತಿಯಿಂದ ಜಿಲ್ಲೆಯ ಸಿರವಾರದಲ್ಲಿ ಹಮ್ಮಿಕೊಂಡ ಜನ ಸ್ವರಾಜ್ ಯಾತ್ರೆ ಕಾರ್ಯಕ್ರಮದ ವೇದಿಕೆ ಮೇಲೆಯೇ ಪಕ್ಷದ ಮುಖಂಡರು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಪ್ರಸಂಗ ನಡೆದಿದೆ.
Jan Swaraj Yatra| 'ಪ್ರಿಯಾಂಕಾ ಎಂದರೆ ಹೆಣ್ಣಾ ಗಂಡಾ?: ಪ್ರತಾಪ್ ಸಿಂಹ
undefined
ಮಾನ್ವಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಜಕ್ಕಲದಿನ್ನಿ ವಿರುದ್ಧ ಬಿಜೆಪಿ ಎಸ್ ಟಿ ಮೋರ್ಚಾದ ಜಿಲ್ಲಾಧ್ಯಕ್ಷ ಅಯ್ಯಪ್ಪ ಮ್ಯಾಕಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬ್ಯಾನರ್ ನಲ್ಲಿ ಮುಖಂಡರ ಭಾವಚಿತ್ರ ಕಡೆಗಣಿಸಿರುವುದರ ಜತೆಗೆ ಇಡೀ ಕಾರ್ಯಕ್ರಮ ತಾವೆ ರೂಪಿಸಿದ್ದಾರೆ ಎಂಬ ರೀತಿ ನಡೆದುಕೊಂಡಿದ್ದಾರೆ ಎಂದು ಜಗಳ ಆರಂಭಿಸಿದ್ದಾರೆ. ಪಕ್ಷದ ಕಾರ್ಯಕ್ರಮವೋ ವೈಯಕ್ತಿಕ ಕಾರ್ಯಕ್ರಮವೋ ಎಂದು ಏರುದನಿಯಲ್ಲಿ ವಾಗ್ವಾದ ನಡೆಸಿ ಕೈ- ಕೈ ಮಿಲಾಯಿಸುವ ಹಂತಕ್ಕೆ ತೆರಳಿದ್ದಾರೆ.
ಸ್ಥಳದಲ್ಲಿದ್ದ ಮಾಜಿ ಶಾಸಕ ತಿಪ್ಪರಾಜ್, ಮಾಜಿ ಜಿಲ್ಲಾಧ್ಯಕ್ಷ ಜೆ.ಶರಣಪ್ಪಗೌಡ ಸಮಾಧಾನ ಪಡಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಮಲ್ಲಿಕಾರ್ಜುನ ಜಕ್ಕಲದಿನ್ನಿ ಕಾರ್ಯಕ್ರಮದಲ್ಲಿ ಯಾರನ್ನೂ ಲೆಕ್ಕಕ್ಕೆ ತೆಗೆದುಕೊಂಡಿಲ್ಲ ಎಂದು ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಳಗ್ಗೆಯಿಂದಲೇ ಕಾರ್ಯಕ್ರಮಕ್ಕೆ ಹಲವು ವಿಘ್ನಗಳು ಎದುರಾಗಿದ್ದು, ಮಳೆ ಕಾರಣಕ್ಕೆ ಕಾರ್ಯಕ್ರಮವನ್ನು ಬೇರೆಡೆ ಸ್ಥಳಾಂತರಿಸಲಾಗಿದೆ.
ಮಾನ್ವಿ ಕ್ರಾಸ್ ಸಮೀಪದ ಆವರಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭ ಕಲ್ಯಾಣ ಮಂಟಪಕ್ಕೆ ಸ್ಥಳಾಂತರ ಮಾಡಲಾಗಿದ್ದು,
ಬಿಜೆಪಿ ರಾಜ್ಯಾಧ್ಯಕ್ಷ ನಳಿನ ಕುಮಾರ ಕಟೀಲ್, ಸಚಿವ ಮುರಗೇಶ ನಿರಾಣಿ ಸೇರಿ ಹಲವರು ಭಾಗಿಯಾಗಲಿದ್ದಾರೆ.
ಯಾತ್ರೆಯ ಉದ್ದೇಶ?
ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆ ಕುರಿತು ಜನಜಾಗೃತಿ ಮೂಡಿಸುವುದು ಜನ ಸ್ವರಾಜ್ ಯಾತ್ರೆಯ ಮುಖ್ಯ ಉದ್ದೇಶ. ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆ ಶೀಘ್ರ ನಡೆವ ಸಾಧ್ಯತೆ ಹಿನ್ನೆಲೆಯಲ್ಲಿ, ಬಹುತೇಕ ಗ್ರಾಮಾಂತರ ಪ್ರದೇಶದಲ್ಲಿ ಪ್ರವಾಸ ನಿಗದಿ.
ಕಟೀಲ್ ತಂಡ:
ನಳಿನ್ ಕುಮಾರ್ ನೇತೃತ್ವದ ತಂಡದಲ್ಲಿ ವಸತಿ ಸಚಿವ ವಿ.ಸೋಮಣ್ಣ, ಗೃಹ ಸಚಿವ ಆರಗ ಜ್ಞಾನೇಂದ್ರ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಶಾಸಕರಾದ ರಾಜೂಗೌಡ, ಎನ್.ಮಹೇಶ್, ಪಕ್ಷದ ರಾಜ್ಯ ಉಪಾಧ್ಯಕ್ಷ ಮಾಲಿಕಯ್ಯ ಗುತ್ತೇದಾರ, ಸಂಸದ ಪ್ರತಾಪ್ ಸಿಂಹ ಇರಲಿದ್ದಾರೆ. ಸಂಚಾಲಕರಾಗಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಸಹ ಸಂಚಾಲಕರಾಗಿ ರಾಜ್ಯ ಕಾರ್ಯದರ್ಶಿ ಎಸ್.ಕೇಶವ ಅವರು ಕಾರ್ಯನಿರ್ವಹಿಸಲಿದ್ದಾರೆ.
ಬಿಎಸ್‌ವೈ ತಂಡ:
ಬಿ.ಎಸ್.ಯಡಿಯೂರಪ್ಪ ನೇತೃತ್ವದ ತಂಡದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಬೃಹತ್ ಮತ್ತು ಮಧ್ಯಮ ನೀರಾವರಿ ಸಚಿವ ಗೋವಿಂದ ಕಾರಜೋಳ, ಸಾರಿಗೆ ಸಚಿವ ಬಿ.ಶ್ರೀರಾಮುಲು, ಪಕ್ಷದ ರಾಜ್ಯ ಉಪಾಧ್ಯಕ್ಷರಾದ ತೇಜಸ್ವಿನಿ ಅನಂತಕುಮಾರ್, ಎಂ.ಬಿ.ನಂದೀಶ್ ಇರಲಿದ್ದಾರೆ. ಸಂಚಾಲಕರಾಗಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ಸಹ ಸಂಚಾಲಕರಾಗಿ ರಾಜ್ಯ ಕಾರ್ಯದರ್ಶಿ ಕೆ.ಎಸ್.ನವೀನ್ ಕಾರ್ಯನಿರ್ವಹಿಸಲಿದ್ದಾರೆ.
ಈಶ್ವರಪ್ಪ ತಂಡ:
ಕೆ.ಎಸ್.ಈಶ್ವರಪ್ಪ ನೇತೃತ್ವದ ತಂಡದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಕಂದಾಯ ಸಚಿವ ಆರ್.ಅಶೋಕ್, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್, ಮೀನುಗಾರಿಕೆ ಸಚಿವ ಎಸ್.ಅಂಗಾರ, ಶಾಸಕ ಅರವಿಂದ ಲಿಂಬಾವಳಿ, ರಾಜ್ಯ ಉಪಾಧ್ಯಕ್ಷ ಎಂ.ಶಂಕರಪ್ಪ ಇರಲಿದ್ದಾರೆ. ಸಂಚಾಲಕರಾಗಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥ ನಾರಾಯಣ, ಸಹ ಸಂಚಾಲಕರಾಗಿ ರಾಜ್ಯ ಕಾರ್ಯದರ್ಶಿ ವಿನಯ್ ಬಿದರೆ ಕಾರ್ಯ ನಿರ್ವಹಿಸಲಿದ್ದಾರೆ.
ಶೆಟ್ಟರ್ ತಂಡ:
ಜಗದೀಶ್ ಶೆಟ್ಟರ್ ನೇತೃತ್ವದ ತಂಡದಲ್ಲಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್, ಅಬಕಾರಿ ಸಚಿವ ಗೋಪಾಲಯ್ಯ, ರಾಜ್ಯ ಉಪಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ, ಎಂ.ರಾಜೇಂದ್ರ ಇರಲಿದ್ದಾರೆ. ಸಂಚಾಲಕರಾಗಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ, ಸಹ ಸಂಚಾಲಕರಾಗಿ ರಾಜ್ಯ ಕಾರ್ಯದರ್ಶಿ ಮುನಿರಾಜು ಗೌಡ ಕಾರ್ಯನಿರ್ವಹಿಸಲಿದ್ದಾರೆ.