ಜೆಡಿಎಸ್ ಪಕ್ಷದ ಕದ ತಟ್ಟಿದ ಕಮಲ ನಾಯಕ?: ಬಿಜೆಪಿ ಬಿಡಲು ಕಾರಣವೇನು?

By Kannadaprabha NewsFirst Published Feb 28, 2024, 12:32 PM IST
Highlights

ಮಾಜಿ ಸಚಿವ ವರ್ತೂರು ಪ್ರಕಾಶ್ ಬಿಜೆಪಿ ತೊರೆದು ಜೆಡಿಎಸ್‌ಗೆ ಸೇರ್ಪಡೆಯಾಗಲು ಸಂಸತ್ ಸದಸ್ಯ ಮುನಿಸ್ವಾಮಿ ಅವರೊಂದಿಗೆ ಈಚೆಗೆ ವೈಮನಸ್ಯ ಹೊಂದಿರುವುದೇ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.

ಕೋಲಾರ(ಫೆ.28): ಕಳೆದ ಎರಡು ವರ್ಷದ ಹಿಂದಷ್ಟೇ ಬಿಜೆಪಿಯನ್ನು ಅಪ್ಪಿಕೊಂಡಿದ್ದ ಮಾಜಿ ಸಚಿವ ವರ್ತೂರು ಪ್ರಕಾಶ್ ಇದೀಗ ಜೆಡಿಎಸ್ ಪಕ್ಷ ಸೇರಲು ಮುಂದಾಗಿದ್ದಾರೆ. ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವ ಸಂದರ್ಭದಲ್ಲಿ ಬಿಜೆಪಿಯನ್ನು ತೊರೆದು ಜಾತ್ಯಾತೀತ ಜನತಾದಳ ಸೇರುವ ಸಲುವಾಗಿ ಅವರು ಈಗಾಗಲೇ ತಮ್ಮ ಆಪ್ತರೊಂದಿಗೆ ಎರಡು-ಮೂರು ಸಭೆಗಳನ್ನು ನಡೆಸಿದ್ದಾರೆ.

೨೦೨೨ರ ಆರಂಭದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಚುನಾವಣೆ ವೇಳೆ ಪಕ್ಷೇತರರಾಗಿದ್ದ ವರ್ತೂರು ಪ್ರಕಾಶ್ ಬಂದರೆ ಅನುಕೂಲವಾಗುತ್ತದೆ ಎಂಬ ಕಾರಣಕ್ಕಾಗಿ ಮಾಜಿ ಸಚಿವ ಡಾ.ಕೆ.ಸುಧಾಕರ್, ಮುನಿರತ್ನ ಹಾಗೂ ಸಂಸತ್ ಸದಸ್ಯ ಎಸ್.ಮುನಿಸ್ವಾಮಿ ಸೇರಿ ಬಿಜೆಪಿಯ ಮುಖಂಡರು ವರ್ತೂರು ಪ್ರಕಾಶ್‌ರನ್ನು ಬಿಜೆಪಿಗೆ ಕರೆ ತರುವಲ್ಲಿ ಯಶಸ್ವಿಯಾಗಿದ್ದರು.

ಲೋಕಸಭಾ ಚುನಾವಣೆ: ಮಂಡ್ಯದಿಂದ ಸ್ಪರ್ಧೆ ಸುಳಿವು ನೀಡಿದ ಎಚ್‌ಡಿ ಕುಮಾರಸ್ವಾಮಿ! ಹೇಳಿದ್ದೇನು?

ಆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಎಂ.ಎಲ್.ಅನಿಲ್ ಕುಮಾರ್, ಜೆಡಿಎಸ್‌ನಿಂದ ವಕ್ಕಲೇರಿ ರಾಮು ಮತ್ತು ಬಿಜೆಪಿಯಿಂದ ಜಿಲ್ಲಾಧ್ಯಕ್ಷ ಡಾ.ಕೆ.ಎನ್.ವೇಣುಗೋಪಾಲ್ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ ಎಂಬಂತೆ ಬಿಜೆಪಿ ಎರಡನೇ ಸ್ಥಾನಕ್ಕೆ ಬಂದಿತ್ತು ಹಾಗೂ ಜೆಡಿಎಸ್‌ನ ಸೋಲಿಗೆ ಕಾರಣವಾಗಿತ್ತು

ಈಗ ಅಚ್ಚರಿ ಎಂಬಂತೆ ವರ್ತೂರು ಪ್ರಕಾಶ್ ಜೆಡಿಎಸ್ ಸೇರ್ಪಡೆಗೆ ಆಗ ಮೂರನೇ ಸ್ಥಾನಕ್ಕೆ ಇಳಿದು ಪರಾಭವಗೊಂಡಿದ್ದ ವಕ್ಕಲೇರಿ ರಾಮು ಅವರೇ ಪೌರೋಹಿತ್ಯ ವಹಿಸಿದ್ದಾರೆ ಎನ್ನಲಾಗಿದೆ. ಈ ಕುರಿತ ನಿರ್ಣಾಯಕ ಸಭೆ ಬೆಂಗಳೂರಿನಲ್ಲಿ ವರ್ತೂರು ಮತ್ತು ವಕ್ಕಲೇರಿ ರಾಮು ಸಮ್ಮುಖದಲ್ಲಿ ನಡೆದಿದೆ. ಒಂದೆರಡು ದಿನಗಳಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಭೇಟಿ ಮಾಡಿಸಿ ಪಕ್ಷಕ್ಕೆ ಸೇರ್ಪಡೆ ಮಾಡುವ ಎಲ್ಲಾ ಸಾಧ್ಯತೆಗಳು ನಿಚ್ಚಳವಾಗಿವೆ.

ವರ್ತೂರು ಬಿಜೆಪಿ ಬಿಡಲು ಕಾರಣವೇನು?:

ಮಾಜಿ ಸಚಿವ ವರ್ತೂರು ಪ್ರಕಾಶ್ ಬಿಜೆಪಿ ತೊರೆದು ಜೆಡಿಎಸ್‌ಗೆ ಸೇರ್ಪಡೆಯಾಗಲು ಸಂಸತ್ ಸದಸ್ಯ ಮುನಿಸ್ವಾಮಿ ಅವರೊಂದಿಗೆ ಈಚೆಗೆ ವೈಮನಸ್ಯ ಹೊಂದಿರುವುದೇ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.
ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ ವರ್ತೂರು ಪ್ರಕಾಶ್‌ಗೆ ಬಿಜೆಪಿಯಿಂದ ಅವಕಾಶ ನೀಡಲಾಗಿತ್ತು. ತಮ್ಮ ಪರವಾಗಿ ಮುನಿಸ್ವಾಮಿ ಸಮರ್ಪಕವಾಗಿ ಕೆಲಸ ಮಾಡಲಿಲ್ಲ ಎಂಬ ಅಸಮಾಧಾನ ವರ್ತೂರಿಗೆ ಅವರ ಸೋಲಿನ ದಿನಗಳಿಂದಲೂ ಇದೆ.

ಈ ಬಾರಿ ಮುನಿಸ್ವಾಮಿಗೆ ಟಿಕೆಟ್ ನೀಡಬಾರದು ಎಂದು ಪಕ್ಷದ ವೇದಿಕೆಗಳಲ್ಲಿ ಅವಕಾಶ ಸಿಕ್ಕಿದಾಗಲೆಲ್ಲ ವರ್ತೂರು ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಕೋಲಾರಕ್ಕೆ ವೀಕ್ಷಕರು ಬಂದಿದ್ದ ವೇಳೆ ಕೋರ್ ಕಮಿಟಿ ಸಭೆಯಲ್ಲಿಯೂ ವರ್ತೂರು ಪರೋಕ್ಷವಾಗಿ ಮುನಿಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದರು.

ನಮ್ಮ ಮುಖಂಡರೇ ಚುನಾವಣೆ ವೇಳೆ ಕಾಂಗ್ರೆಸ್ ನವರ ಮನೆಗೆ ಹೋಗಿ ಕೈ ಕುಲುಕಿ ಬಂದರೆ ಯಾವ ಸಂದೇಶ ಹೋಗುತ್ತದೆ?, ಕೋಲಾರ ಜಿಲ್ಲೆಯಲ್ಲಿ ಬಿಜೆಪಿ ಸೋಲಲು ನಮ್ಮ ಜಿಲ್ಲೆಯ ಮುಖಂಡರೇ ಕಾರಣ ಎಂದು ವರ್ತೂರು ಮುನಿಸ್ವಾಮಿ ವಿರುದ್ಧ ಬೊಟ್ಟು ಮಾಡಿದ್ದರು.

ಲೋಕಸಭೆ ಚುನಾವಣೆ ವೇಳೆ ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಯಾದರೆ ಮುನಿಸ್ವಾಮಿ ವಿರುದ್ಧದ ತಮ್ಮ ಅಸಮಾಧಾನಕ್ಕೆ ತಾರ್ಕಿಕ ಅಂತ್ಯ ಕೊಡಬಹುದು ಎಂಬ ಉದ್ದೇಶ ವರ್ತೂರಿಗೆ ಇದೆ ಎನ್ನಲಾಗಿದೆ. ಅಲ್ಲದೆ ೨೦೨೮ರ ವಿಧಾನಸಭೆ ಚುನಾವಣೆಗೆ ಜೆಡಿಎಸ್‌ನಲ್ಲಿ ಈಗಿನಿಂದಲೇ ವೇದಿಕೆ ಸೃಷ್ಟಿ ಮಾಡಿಕೊಳ್ಳಬಹುದು ಎಂಬ ದೂರಾಲೋಚನೆಯೂ ಸಹ ವರ್ತೂರಿಗೆ ಇದೆ.

ಜಾತ್ರೆಯಲ್ಲಿ ಒಂದಾಗಿದ್ದ ಉತ್ತರ, ದಕ್ಷಿಣ ಧ್ರುವಗಳು: 

ಅಂದ ಹಾಗೆ ವರ್ತೂರು ಜೆಡಿಎಸ್ ಸೇರ್ಪಡೆಗೆ ಪೌರೋಹಿತ್ಯ ವಹಿಸಿರುವ ವಕ್ಕಲೇರಿ ರಾಮು ಮತ್ತು ವರ್ತೂರು ಪ್ರಕಾಶ್ ಒಂದು ಕಾಲಕ್ಕೆ ಆತ್ಮೀಯರಾಗಿದ್ದರು, ನಂತರ ಉತ್ತರ-ದಕ್ಷಿಣ ಧ್ರುವಗಳಾಗಿ ಪರಿವರ್ತನೆಗೊಂಡಿದ್ದರು. ವರ್ತೂರು ಪ್ರಕಾಶ್ ೨೦೦೮ರಲ್ಲಿ ಕಾಂಗ್ರೆಸ್ ಟಿಕೆಟ್ ಸಿಗದೇ ಪಕ್ಷೇತರರಾಗಿ ಸ್ಪರ್ಧಿಸಿದಾಗ ಅವರಿಗೆ ಊರುಗೋಲುಗಳಾಗಿ ಇದ್ದವರಲ್ಲಿ ರಾಮು ಸಹ ಒಬ್ಬರು. ನಂತರ ವಕ್ಕಲೇರಿ ಕ್ಷೇತ್ರದಿಂದ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ರಾಮು ಅವರ ಪತ್ನಿ ಚೌಡೇಶ್ವರಿ ಗೆದ್ದಾಗ ಜಿಲ್ಲಾ ಪಂಚಾಯತ್ ಅಧ್ಯಕ್ಷ ಚುನಾವಣೆ ಸಂದರ್ಭದಲ್ಲಿ ರಾಮು ಕೊನೆಯ ಗಳಿಗೆಯಲ್ಲಿ ಜೆಡಿಎಸ್ ಸೇರ್ಪಡೆಯಾಗಿ ಚೌಡೇಶ್ವರಿ ಅಧ್ಯಕ್ಷೆಯಾಗಿ ಬಿಟ್ಟರು.

ಕೋಲಾರ: ಪೊಲೀಸರಿಗೇ ಸುಪಾರಿ ಕೊಟ್ಟು ಠಾಣೆಯಲ್ಲಿ ಯುವಕನಿಗೆ ಚಿತ್ರಹಿಂಸೆ..!

ಆನಂತರ ರಾಮು ಮತ್ತು ವರ್ತೂರು ಉತ್ತರ-ದಕ್ಷಿಣ ಧ್ರುವಗಳಾಗಿ ಪರಿವರ್ತನೆಯಾಗಿದ್ದರು. ಕ್ಯಾಲನೂರು ಕ್ಷೇತ್ರದಿಂದ ನಂತರ ಜಿಪಂಗೆ ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಚೌಡೇಶ್ವರಿಯವರನ್ನು ಸೋಲಿಸಲು ವರ್ತೂರು ಹಗಲು ರಾತ್ರಿ ಶ್ರಮಿಸಿ ಮುಯ್ಯಿ ತೀರಿಸಿಕೊಂಡಿದ್ದರು. ಇದೇ ಕಾರಣಕ್ಕೆ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಚುನಾವಣೆ ವೇಳೆ ವರ್ತೂರು ಬಿಜೆಪಿಗೆ ಸೇರ್ಪಡೆಯಾಗಿ ಜೆಡಿಎಸ್ ನ ರಾಮು ಸೋಲಿಗೂ ಕಾರಣರಾಗಿದ್ದರು. ಆದರೆ ಈಗ ಎರಡು ಧ್ರುವಗಳು ಒಂದಾಗಿರುವುದು ಕಾಲಾಯ

ತಸ್ಮೈ ನಮಃ ಎಂಬುದಕ್ಕೆ ಉದಾಹರಣೆ.

ಎರಡು ತಿಂಗಳ ಹಿಂದೆ ವೇಮಗಲ್ ಸಮೀಪದ ಜಾತ್ರೆಯೊಂದರಲ್ಲಿ ವರ್ತೂರು ಮತ್ತು ರಾಮು ಅಕ್ಕ ಪಕ್ಕ ಕುಳಿತುಕೊಳ್ಳುವ ಮೂಲಕ ತಮ್ಮಿಬ್ಬರ ಬಾಂಧವ್ಯ ಸುಧಾರಿಸಿರುವುದರ ಸೂಚನೆ ನೀಡಿದ್ದರು.

click me!