ಸಿದ್ದರಾಮಯ್ಯ ಪದತ್ಯಾಗಕ್ಕೆ ಹೋರಾಟ: ವಿಧಾನಪರಿಷತ್‌ ಸದಸ್ಯ ರವಿಕುಮಾರ್

By Govindaraj SFirst Published Nov 20, 2022, 12:54 PM IST
Highlights

ಮತದಾರರ ಪಟ್ಟಿಪರಿಷ್ಕರಣೆಗಾಗಿ ಚಿಲುಮೆ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಗೆ ಅನುಮತಿ ನೀಡಿರುವುದು ಪ್ರತಿಪಕ್ಷ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಆಗಿರುವುದರಿಂದ ಮಾನ-ಮರ್ಯಾದೆ ಇದ್ದರೆ ಮೊದಲು ಅವರು ಪ್ರತಿಪಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. 
 

ಬೆಂಗಳೂರು (ನ.20): ಮತದಾರರ ಪಟ್ಟಿಪರಿಷ್ಕರಣೆಗಾಗಿ ಚಿಲುಮೆ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಗೆ ಅನುಮತಿ ನೀಡಿರುವುದು ಪ್ರತಿಪಕ್ಷ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಆಗಿರುವುದರಿಂದ ಮಾನ-ಮರ್ಯಾದೆ ಇದ್ದರೆ ಮೊದಲು ಅವರು ಪ್ರತಿಪಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಎಚ್ಚರಿಕೆ ನೀಡಿದ್ದಾರೆ.

ಶನಿವಾರ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್‌ ವಿರುದ್ಧ ಬಿಜೆಪಿ ನಿಯೋಗ ದೂರು ನೀಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಚಿಲುಮೆ ಸಂಸ್ಥೆಯನ್ನು ನೇಮಕ ಮಾಡಿದ್ದು ಯಾರು ಎಂಬುದನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಮುಖಕ್ಕೆ ರಾಚುವಂತೆ ತೋರಿಸುತ್ತೇನೆ. 2017ರಲ್ಲಿ ಯಾವ ಸರ್ಕಾರ ಇತ್ತು? ಮನೆ ಮನೆಗೆ ಹೋಗಬೇಕು ಎಂದು ಅನುಮತಿ ನೀಡಿದ್ದು ಯಾರು? ಇದಕ್ಕೆ ಸಿದ್ದರಾಮಯ್ಯ ಏನು ಹೇಳುತ್ತಾರೆ? ಇದನ್ನು ನಾವು ಕೊಟ್ಟೆವಾ? ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೊಟ್ಟರಾ? ನಮ್ಮ ಮುಖ್ಯಮಂತ್ರಿಗಳು ಯಾಕೆ ರಾಜೀನಾಮೆ ನೀಡಬೇಕು? ಸಿದ್ದರಾಮಯ್ಯ ಅವರು ಪ್ರತಿಪಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಟೀಕಾಪ್ರಹಾರ ನಡೆಸಿದರು.

ಚಿಲುಮೆಗೆ ಕೆಲಸ ನೀಡಿದ್ದು ಎಚ್‌ಡಿಕೆ ಸರ್ಕಾರ: ವಿಧಾನಪರಿಷತ್‌ ಸದಸ್ಯ ರವಿಕುಮಾರ್

ಕಾಂಗ್ರೆಸ್‌ ಮತದಾರರನ್ನು ಗುರುತಿಸಿ, ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಕಾಂಗ್ರೆಸ್‌ ರಾದ್ಧಾಂತ ಮಾಡಿದೆ. ಚಿಲುಮೆ ಸಂಸ್ಥೆಗೆ ಮತದಾರರ ಪಟ್ಟಿಪರಿಷ್ಕರಣೆ ಮಾಡಲು ಬಿಜೆಪಿ ಸರ್ಕಾರ ಅನುಮತಿ ನೀಡಿದೆ ಎಂದು ಆರೋಪಿಸಿದೆ. ಸುಳ್ಳು ಆರೋಪ ಮಾಡುತ್ತಿರುವ ಕಾಂಗ್ರೆಸ್‌ಗೆ ಉತ್ತರ ನೀಡಲು ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ. ಯಾವ ಮುಖ ಇಟ್ಟುಕೊಂಡು ಆಯೋಗಕ್ಕೆ ಕಾಂಗ್ರೆಸ್‌ ದೂರು ನೀಡಿದೆ. ಕಾಂಗ್ರೆಸ್‌ನ ಹೈಕಮಾಂಡ್‌ ಮೊದಲು ಸಿದ್ದರಾಮಯ್ಯ ರಾಜೀನಾಮೆಯನ್ನು ಪಡೆದುಕೊಳ್ಳಬೇಕು. ಕಾಂಗ್ರೆಸ್‌ಗೆ ಪ್ರತಿಪಕ್ಷದ ಸ್ಥಾನದಲ್ಲಿ ಇರಲು ಅರ್ಹತೆಯೇ ಇಲ್ಲ ಎಂದು ಕಿಡಿಕಾರಿದರು.

6,73,422 ಮತದಾರರ ಹೆಸರನ್ನು ಈವರೆಗೆ ತೆಗೆದು ಹಾಕಲಾಗಿದೆ ಎಂಬುದು ಚುನಾವಣಾ ಆಯೋಗವು ನೀಡಿರುವ ಅಧಿಕೃತ ಮಾಹಿತಿ. ಒಂದೇ ರೀತಿಯ ಭಾವಚಿತ್ರ ಇರುವುದು, 2-3 ಕಡೆ ಹೆಸರು ಇರುವುದು ಸೇರಿದಂತೆ ಲೋಪದೋಷಗಳಿರುವ ಹೆಸರನ್ನು ತೆಗೆದು ಹಾಕಲಾಗಿದೆ. ಹೆಸರನ್ನು ತೆಗೆದುಹಾಕಬಾರದು ಎಂದು ಕಾಂಗ್ರೆಸ್‌ ಹೇಳುತ್ತಿದ್ದು, ಏಕೆ ತೆಗೆದು ಹಾಕಬಾರದು? ಎರಡು ಕಡೆ ಮತದಾನ ಮಾಡಲು ತಡೆ ಬೇಡ ಎನ್ನುತ್ತಿದ್ದಾರೆಯೇ? ಎಂದು ಟೀಕಿಸಿದರು.

ವಿಧಾನಪರಿಷತ್‌ ಸದಸ್ಯ ಛಲವಾದಿ ನಾರಾಯಣ ಸ್ವಾಮಿ ಮಾತನಾಡಿ, ಕಾಂಗ್ರೆಸ್‌ನವರು ದಿನಕ್ಕೊಂದು ಟೂಲ್‌ಕಿಟ್‌ ರೆಡಿ ಮಾಡುತ್ತಿದ್ದಾರೆ. ಅವರಿಗೆ ಉತ್ತರ ನೀಡಲು ನಮ್ಮ ಮಷಿನ್‌ ರೆಡಿ ಇದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೆಸರು ಕೇಳಿದರೆ ಸಾಕು ನಾವು ಎಲ್ಲಿ ಅಧಿಕಾರಕ್ಕೆ ಬರುವುದಿಲ್ಲವೋ ಎಂದು ಹೆದರುತ್ತಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಮೇಲೆ ಗನ್‌ ಇಡಲಾಗಿದೆ. ಕಾಂಗ್ರೆಸ್‌ನ ಟೂಲ್‌ಕಿಟ್‌ ಗುರಿ ಇರುವುದು ಅಶ್ವತ್ಥ ನಾರಾಯಣ ಎಂಬುದು ಗೊತ್ತಿದೆ ಎಂದು ಹೇಳಿದರು.

ಜೆಡಿಎಸ್‌ನದ್ದು ಮೊಸರಲ್ಲಿ ಕಲ್ಲು ಹುಡುಕುವ ಯತ್ನ: ರವಿಕುಮಾರ್‌

ಶಾಸಕ ರವಿಸುಬ್ರಹ್ಮಣ್ಯ ಮಾತನಾಡಿ, ಅಧಿಕಾರದ ಹಪಾಹಪಿಯಲ್ಲಿ ಸಾಕಷ್ಟುಆರೋಪ ಮಾಡಿಕೊಂಡು ಕಾಂಗ್ರೆಸ್ಸಿಗರು ಬರುತ್ತಿದ್ದಾರೆ. ಜನರನ್ನು ಗೊಂದಲಕ್ಕೆ ಸಿಲುಕಿಸುವ ಕೆಲಸ ಮಾಡುತ್ತಿದ್ದಾರೆ. ಚುನಾವಣಾ ಆಯೋಗವು ತನ್ನ ಕೆಲಸವನ್ನು ಮಾಡಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಿಲುಮೆ ಸಂಸ್ಥೆಗೆ ಅನುಮತಿ ನೀಡಿದರು. ಅವರ ಸರ್ಕಾರದ ಅವಧಿಯಲ್ಲಿ ಆರು ಲಕ್ಷಕ್ಕೂ ಹೆಚ್ಚು ಹೆಸರು ತೆಗೆದು ಹಾಕಲಾಗಿದೆ. ಈಗ ಅನುಮತಿ ಕೊಟ್ಟನಂತರ 15 ಸಾವಿರ ಹೆಸರನ್ನು ತೆಗೆದುಹಾಕಲಾಗಿದೆ. ಜನರು ತಮ್ಮನ್ನು ತಿರಸ್ಕರಿಸುತ್ತಾರೆ ಎಂಬುದು ಅವರಿಗೆ ಗೊತ್ತಿದೆ. ಸೋಲನುಭವಿಸಿದ ಬಳಿಕ ಕಾರಣ ಬೇಕು. ಹೀಗಾಗಿ ಹೆಸರು ತೆಗೆದು ಹಾಕಿರುವ ಹೆಸರಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಕಾಂಗ್ರೆಸ್ಸಿಗರು ಜನರ ಕ್ಷಮೆ ಕೇಳಬೇಕು ಎಂದು ತಿಳಿಸಿದರು.

click me!