ಸಿದ್ದರಾಮಯ್ಯನವರೇ, ನಿಮ್ಮ ಮಾತು ಯಾರು ನಂಬ್ತಾರೆ?: ಎಂ.ಆರ್‌.ವೆಂಕಟೇಶ್‌

By Govindaraj SFirst Published Dec 24, 2022, 7:59 AM IST
Highlights

ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಏನು ಮಾಡಿದರು? ಟಿಪ್ಪು ಜಯಂತಿಯನ್ನು ಸರ್ಕಾರದಿಂದ ಆಚರಿಸುವುದಾಗಿ ಘೋಷಿಸಿ ರಾಜ್ಯದೆಲ್ಲೆಡೆ ಅಶಾಂತಿ ಮೂಡಿಸಿದರು. ಕೇಂದ್ರ ಸರ್ಕಾರ ಕೊಟ್ಟಅಕ್ಕಿಗೆ ತಮ್ಮ ಫೋಟೋ ಅಂಟಿಸಿ ನಾನು ಉಚಿತ ಅಕ್ಕಿ ಕೊಟ್ಟೆ ಎಂದು ಡಂಗೂರ ಬಾರಿಸಿದರು. ಲಿಂಗಾಯತರನ್ನು ರಾಜಕೀಯ ಲಾಭಕ್ಕಾಗಿ ಒಡೆಯಲು ನೋಡಿದರು. ಇದೇ ಅವರು ಮಾಡಿದ ಸಾಧನೆ.

ಎಂ.ಆರ್‌.ವೆಂಕಟೇಶ್‌, ಬಿಜೆಪಿ ನಾಯಕ

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೊಸದೊಂದು ರಾಗ ಆರಂಭಿಸಿದ್ದಾರೆ. ನಮ್ಮ ಸರ್ಕಾರ ಬಂದರೆ ಇದನ್ನು ಮಾಡುತ್ತದೆ, ನಮ್ಮ ಸರ್ಕಾರ ಬಂದರೆ ಅದನ್ನು ಮಾಡುತ್ತದೆ ಎಂದು ಹೇಳುತ್ತಿದ್ದಾರೆ. ಈಗಿನ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರ ಏನೂ ಮಾಡಲಿಲ್ಲ ಎಂದು ಆರೋಪಗಳನ್ನು ಮಾಡುತ್ತಾರೆ. ಆದರೆ ನಿಜಕ್ಕೂ ಸಿದ್ದರಾಮಯ್ಯನವರ ಮಾತನ್ನು ಯಾರು ನಂಬುತ್ತಾರೆ?

Latest Videos

ಜಾತಿ ಗಣತಿ: ಇತ್ತೀಚೆಗೆ ಅನೇಕ ಬಾರಿ ಸಿದ್ದರಾಮಯ್ಯ ಒಂದು ಮಾತು ಹೇಳುತ್ತಿದ್ದಾರೆ. ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬಂದರೆ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮೂಲಕ ನಡೆಸಿದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ (ಜಾತಿ ಗಣತಿ) ವರದಿಯನ್ನು ಸ್ವೀಕರಿಸುತ್ತೇವೆ’ ಎಂದು. ಜಾತಿ ಗಣತಿ ನಡೆದಿದ್ದು ಈ ಹಿಂದೆ 1931ರಲ್ಲಿ. ಆ ನಂತರ ನಡೆದಿಲ್ಲದ ಕಾರಣಕ್ಕೆ ಅನೇಕ ಜಾತಿಗಳ ಸಂಖ್ಯೆ, ಸಾಮಾಜಿಕ ಸ್ಥಿತಿಗತಿ ತಿಳಿದೇ ಇಲ್ಲ ಎಂದು ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲೇ 163 ಕೋಟಿ ರು. ಖರ್ಚು ಮಾಡಿ ಗಣತಿ ನಡೆಸಲಾಯಿತು. ಅದರ ವರದಿಯನ್ನು ಆಯೋಗವು ಸಿದ್ಧವಾಗಿಟ್ಟುಕೊಂಡರೂ ಸರ್ಕಾರ ಅದನ್ನು ಸ್ವೀಕರಿಸುವುದಾಗಲಿ, ಸದನದಲ್ಲಿ ಮಂಡಿಸುವುದಾಗಲಿ ಮಾಡಲೇ ಇಲ್ಲ. ಆ ಸಮೀಕ್ಷೆ ವೈಜ್ಞಾನಿಕವಾಗಿಲ್ಲ ಎಂದು ಅನೇಕ ಸಮುದಾಯಗಳು ಆರೋಪಿಸಿದವು. 

ಹೀಗಾಗಿ ಸಾರ್ವಜನಿಕರಿಗೆ ವರದಿಯನ್ನು ಲಭ್ಯವಾಗಿಸದೇ ಇರಲು ನಿರ್ಧರಿಸಿದ ಸಿದ್ದರಾಮಯ್ಯ, ಅದರಲ್ಲಿರುವ ಅಂಕಿ ಅಂಶಗಳನ್ನು ಬಳಸಿಕೊಂಡು ವೀರಶೈವ ಲಿಂಗಾಯತ ಸಮುದಾಯವನ್ನೇ ವಿಭಜನೆ ಮಾಡಲು ಮುಂದಾದರು. ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡುವುದಾಗಿ ಹೇಳಿ ಬಿಜೆಪಿಯನ್ನು ಸೋಲಿಸಬೇಕೆಂಬ ದುರಾಲೋಚನೆ ಅವರದ್ದಾಗಿತ್ತು. ಆದರೆ ವೀರಶೈವ ಲಿಂಗಾಯತ ಸಮುದಾಯದ ಒಗ್ಗಟ್ಟಿನ ಮಂತ್ರ, ಆ ಸಮುದಾಯದ ಮಠಾಧೀಶರ ಮಾರ್ಗದರ್ಶನದಲ್ಲಿ ಈ ತಂತ್ರ ವಿಫಲವಾಯಿತು. ಸಿದ್ದರಾಮಯ್ಯ ಸೋತರು. ಆಗೆಲ್ಲ ವರದಿಯ ಕುರಿತು ಮಾತನ್ನೇ ಆಡದ ಸಿದ್ದರಾಮಯ್ಯ ಈಗ ವರದಿ ಕುರಿತು ಹೇಳುತ್ತಿದ್ದಾರೆ. ಅಧಿಕಾರಕ್ಕೆ ಬಂದರೆ ವರದಿ ಸ್ವೀಕರಿಸುತ್ತೇನೆ ಎನ್ನುತ್ತಾರೆ. ನಿಮ್ಮ ಮಾತನ್ನು ಯಾರು ನಂಬುತ್ತಾರೆ?

ಕ್ಷೇತ್ರ ಹುಡುಕಾಟ ಸಿದ್ದುಗೆ ಅನಿವಾರ್ಯವೇ?: ಮಾಜಿ ಎಂಎಲ್ಸಿ ರಮೇಶ್‌ ಬಾಬು

ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ: ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಕ್ರಮವಾಗಿ ಇರುವ ಶೇ.15 ಹಾಗೂ ಶೇ.3ರ ಮೀಸಲಾತಿಯನ್ನು ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಿಸಬೇಕು ಎಂದು ಮೂರು ದಶಕದಿಂದ ನಡೆಯುತ್ತಿದದ ಹೋರಾಟಕ್ಕೆ ಕಾಂಗ್ರೆಸ್‌ ಎಂದಿಗೂ ಸೊಪ್ಪು ಹಾಕಲಿಲ್ಲ. ದಲಿತರ ಮತಗಳನ್ನೇ ಪಡೆದು ಗೆದ್ದು ಬರುತ್ತಿದ್ದ ಕಾಂಗ್ರೆಸ್‌ ನಾಯಕರಿಗೆ ದಲಿತರು ಮತ್ತೆ ನೆನಪಾಗುತ್ತ ಇದ್ದದ್ದು ಚುನಾವಣೆ ಸಂದರ್ಭದಲ್ಲೇ. ಮೀಸಲಾತಿ ಪ್ರಮಾಣ ಹೆಚ್ಚಿಸಿ ಎಂದು ಕೇಳಿದರೆ ಒಟ್ಟು ಮೀಸಲಾತಿಯು ಶೇ.50 ಮೀರಬಾರದು ಎಂದು ಇಂದಿರಾ ಸಾಹನಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ಹೇಳಿರುವುದಾಗಿ ಸಬೂಬು ಹೇಳುತ್ತಿದ್ದರು. ಆದರೆ ಸಮುದಾಯದ ಒತ್ತಾಯಕ್ಕೆ ಮಣಿದು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನ್ಯಾ.ನಾಗಮೋಹನದಾಸ್‌ ಸಮಿತಿಯನ್ನು ನೇಮಕ ಮಾಡಲಾಗಿತ್ತು. 

ಆನಂತರ ಯಡಿಯೂರಪ್ಪ ನೇತೃತ್ವದ ಸರ್ಕಾರ ಬಂದರೂ ಸಮಿತಿಯನ್ನು ರದ್ದು ಮಾಡದೆ, ದಲಿತ ಸಮುದಾಯಗಳ ಮೇಲಿನ ಕಾಳಜಿಯಿಂದಾಗಿ ವರದಿ ಸಿದ್ಧಪಡಿಸುವ ಪ್ರಕ್ರಿಯೆ ಮುಂದುವರಿಸುವಂತೆ ತಿಳಿಸಿತು. ಅದರಂತೆ ವರದಿಯನ್ನು ಪಡೆದು, ಈಗಾಗಲೇ ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಲಾಗಿದೆ. ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಅದಕ್ಕೆ ಸಂಬಂಧಿಸಿದ ಮಸೂದೆಯೂ ಅಂಗೀಕಾರವಾಗಲಿದೆ. ಆದರೆ ಈಗ ಸಿದ್ದರಾಮಯ್ಯ, ಮೀಸಲಾತಿ ಹೆಚ್ಚಳಕ್ಕೆ ಕಾಯ್ದೆ ಮಾಡಿದರೆ ಸಾಲದು, ಅದನ್ನು ಸಂವಿಧಾನದ 9ನೇ ಷೆಡ್ಯೂಲ್‌ನಲ್ಲಿ ಸೇರಿಸಬೇಕು, ಇಲ್ಲದಿದ್ದರೆ ಜಾರಿಯಾಗುವುದಿಲ್ಲ ಎನ್ನುತ್ತಿದ್ದಾರೆ. ಬಸವರಾಜ ಬೊಮ್ಮಾಯಿ ಈ ಎಲ್ಲ ಕಾನೂನು ದೃಷ್ಟಿಕೋನಗಳನ್ನೂ ಕಣ್ಣಮುಂದೆ ಇರಿಸಿಕೊಂಡೇ ಮೀಸಲು ಹೆಚ್ಚಿಸಿದ್ದಾರೆ. ಆದರೆ ತಮ್ಮ ಕಾಲದಲ್ಲಿ ಏನನ್ನೂ ಮಾಡದೆ ಸುಮ್ಮನಿದ್ದ ಸಿದ್ದರಾಮಯ್ಯ ಈಗ ಸರ್ಕಾರಕ್ಕೆ ಬುದ್ಧಿವಾದ ಹೇಳಲು ಬರುತ್ತಿದ್ದಾರೆ. ನಿಮ್ಮ ಮಾತನ್ನು ಯಾರು ನಂಬುತ್ತಾರೆ?

ಸದಾಶಿವ ಆಯೋಗದ ವರದಿ: ಒಳಮೀಸಲಾತಿ ಕಲ್ಪಿಸುವ ಕುರಿತು ಸರ್ಕಾರಕ್ಕೆ ವರದಿ ನೀಡಲು ನ್ಯಾ.ಎ.ಜೆ.ಸದಾಶಿವ ಆಯೋಗವನ್ನು 2005ರಲ್ಲಿ ಧರ್ಮಸಿಂಗ್‌ ನೇತೃತ್ವದ ಕಾಂಗ್ರೆಸ್‌-ಜೆಡಿಎಸ್‌ ಸರ್ಕಾರ ರಚಿಸಿತು. ವಿವಿಧ ಕಾರಣಕ್ಕೆ ಕಾರ್ಯ ವಿಳಂಬವಾಗಿತ್ತು. 2008ರಲ್ಲಿ ಯಡಿಯೂರಪ್ಪ ಸರ್ಕಾರ ಆಯೋಗಕ್ಕೆ ಮೂಲಸೌಲಭ್ಯಗಳನ್ನು ಕಲ್ಪಿಸಿತು. ಸುದೀರ್ಘ ಅಧ್ಯಯನದ ನಂತರ 2012ರಲ್ಲಿ ಡಿ.ವಿ.ಸದಾನಂದ ಗೌಡ ಸಿಎಂ ಆಗಿದ್ದ ಅವಧಿಯಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಕೆಯಾಯಿತು. ನಂತರ ಬಿಜೆಪಿ ಸರ್ಕಾರ ಪತನಗೊಂಡಿತ್ತು. ಆನಂತರ ಐದು ವರ್ಷ ಸಿದ್ದರಾಮಯ್ಯ ಸರ್ಕಾರ ಈ ವರದಿಯತ್ತ ಕಣ್ಣೆತ್ತಿಯೂ ನೋಡಲಿಲ್ಲ. ನ್ಯಾ.ಸದಾಶಿವ ಆಯೋಗದಲ್ಲಿ, ಎಸ್‌ಸಿ ಸಮುದಾಯಕ್ಕೆ ದೊರಕಿರುವ ಶೇ.15 ಮೀಸಲಾತಿಯನ್ನು ಜನಸಂಖ್ಯೆಗೆ ಅನುಗುಣವಾಗಿ ಉಪಪಂಗಡಗಳಿಗೆ ಹಂಚಿಕೆ ಮಾಡಬೇಕು ಎಂದು ಹೇಳಿದೆ ಎನ್ನಲಾಗಿದೆ. 

ಆದರೆ ಸಿದ್ದರಾಮಯ್ಯ ಈ ಸಾಮಾಜಿಕ ನ್ಯಾಯ ನೀಡಲು ಮುಂದಾಗುವ ಬದಲು ಓಟಿನ ಚಿಂತೆ ಮಾಡಿದರು. ಕೆಲವು ಸಮುದಾಯಗಳು ವಿರೋಧಿಸುತ್ತಿದ್ದವು ಎಂಬ ಕಾರಣ ನೀಡಿ ಕಾಲ ದೂಡಿದರು. ವರದಿಯಲ್ಲಿ ಏನಿದೆ ಎಂದು ಅಧ್ಯಯನ ಮಾಡಿ ಎಲ್ಲ ಸಮುದಾಯಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನ್ಯಾಯ ಒದಗಿಸುವ ಗೋಜಿಗೆ ಹೋಗಲಿಲ್ಲ. ಆದರೆ ಇದೀಗ ಬಿಜೆಪಿ ಸರ್ಕಾರ ಒಳಮೀಸಲಾತಿಯ ಅನುಷ್ಠಾನದ ಕುರಿತು ಅಧ್ಯಯನಕ್ಕಾಗಿ ಸಂಪುಟ ಉಪಸಮಿತಿ ರಚನೆ ಮಾಡಿದೆ. ಒಳಮೀಸಲಾತಿ ಕುರಿತು ಶೀಘ್ರದಲ್ಲೆ ಸರ್ಕಾರ ಸೂಕ್ತ ನಿರ್ಧಾರವನ್ನೂ ಕೈಗೊಳ್ಳಲಿದೆ. ಆದರೆ ಇಲ್ಲಿವರೆಗೆ ಕೈಕಟ್ಟಿಕುಳಿತಿದ್ದ ಸಿದ್ದರಾಮಯ್ಯ ತಾವು ಅಧಿಕಾರಕ್ಕೆ ಬಂದರೆ ಒಳಮೀಸಲಾತಿ ನೀಡುವುದಾಗಿ ಟ್ವೀಟ್‌ ಮಾಡಿದ್ದಾರೆ. 5 ವರ್ಷ ಏನೂ ಮಾಡದ ನಿಮ್ಮ ಮಾತನ್ನು ಈಗ ಯಾರು ನಂಬುತ್ತಾರೆ?

ಕೃಷ್ಣಾ ನದಿ ನೀರು: ಕೃಷ್ಣಾ ನದಿ ನೀರು ಯೋಜನೆ ಅನುಷ್ಠಾನಕ್ಕಾಗಿ 2013ರಲ್ಲಿ ಕಾಂಗ್ರೆಸ್‌ ನಡಿಗೆ ಕೃಷ್ಣೆಯ ಕಡೆಗೆ ಎಂದು ಪಾದಯಾತ್ರೆ ನಡೆಸಿದ್ದರು. ಕೃಷ್ಣಾ ಮೇಲ್ದಂಡೆ ಯೋಜನೆಗೆ ವಾರ್ಷಿಕ ಹತ್ತು ಸಾವಿರ ಕೋಟಿ ರು. ಅನುದಾನ ಕೊಡುವುದಾಗಿ ಘೋಷಣೆ ಮಾಡಿ, ಕೊನೆಗೆ ಐದು ವರ್ಷದಲ್ಲಿ ಕೇವಲ 8 ಸಾವಿರ ಕೋಟಿ ರು. ವೆಚ್ಚ ಮಾಡಿದರು. 2018ರಲ್ಲಿ ಸದನದಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ, ನಾವು ಕೃಷ್ಣಾ ಮೇಲ್ದಂಡೆಗೆ 10 ಸಾವಿರ ಕೋಟಿ ರು. ಕೊಡುತ್ತೇವೆ ಅಂತ ಹೇಳಿರಲೇ ಇಲ್ಲ, ಒಟ್ಟಾರೆ ನೀರಾವರಿಗೆ 50 ಸಾವಿರ ಕೋಟಿ ರು. ನೀಡುತ್ತೇವೆ ಎಂದಿದ್ದೆ ಎಂದು ಮಾತು ಬದಲಿಸಿದರು. ಸಾವಿರಾರು ಜನರೆದುರಿಗೆ ಮಾಡಿದ ಪ್ರತಿಜ್ಞೆಯನ್ನೇ ಸುಳ್ಳು ಎಂದು ವಾದಿಸುವ ಸಿದ್ದರಾಮಯ್ಯ ಇತ್ತೀಚೆಗೆ ವಿಜಯಪುರದಲ್ಲಿ ಮಾತನಾಡುತ್ತ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಎಲ್ಲ ನೀರಾವರಿ ಯೋಜನೆ ಪೂರ್ಣಗೊಳಿಸುತ್ತೇವೆ ಎನ್ನುತ್ತಾರೆ. ನಿಮ್ಮ ಮಾತನ್ನು ಯಾರು ನಂಬುತ್ತಾರೆ?

ಮಹದಾಯಿ ನದಿ ನೀರು: ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿದ್ದಾಗ ಮಹದಾಯಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಕಿಂಚಿತ್ತೂ ಪ್ರಯತ್ನ ಮಾಡಲಿಲ್ಲ. ಕೇವಲ ಕೇಂದ್ರ ಸರ್ಕಾರ ಹಾಗೂ ಗೋವಾ ಸರ್ಕಾರವನ್ನು ದೂರುವುದರಲ್ಲೇ ಕಾಲ ಕಳೆದರು. ಯಾವಾಗ ಅಧಿಕಾರದಿಂದ ಕೆಳಗಿಳಿದರೋ, ಆಗಿನಿಂದಲೇ ಮಹದಾಯಿ ಕುರಿತು ಸಿದ್ದರಾಮಯ್ಯಗೆ ಪ್ರೀತಿ ಉಕ್ಕಿಬರುತ್ತಿದೆ. ಆದರೆ ಬಿಜೆಪಿ ಸರ್ಕಾರ ಈ ಯೋಜನೆ ಜಾರಿಗೆ ಸತತ ಪ್ರಯತ್ನ ನಡೆಸುತ್ತಿದೆ. ಯೋಜನೆಗೆ ಅರಣ್ಯ ಇಲಾಖೆಯ ಅನುಮತಿ ಸಿಗುವುದು ಅಂತಿಮ ಹಂತದಲ್ಲಿದೆ. ಈಗ ಕರ್ನಾಟಕದ ಪಾಲಿನ 13.5 ಟಿಎಂಸಿ ನೀರನ್ನು ಬಳಸಿಕೊಳ್ಳಲು ಯಾವುದೇ ಅಡ್ಡಿ ಇಲ್ಲ. ಒಟ್ಟಾರೆ ನೀರು ಹಂಚಿಕೆ ಬಗ್ಗೆ ಸುಪ್ರಿಂಕೋರ್ಟ್‌ನಿಂದ ತೀರ್ಪು ಬರಬೇಕಿದೆ. ಅದನ್ನು ಮೂರು ರಾಜ್ಯಗಳು ಒಪ್ಪಿಕೊಳ್ಳಬೇಕಾಗುತ್ತದೆ. ಹೀಗಾಗಿ ಯೋಜನೆ ಶೀಘ್ರ ಆರಂಭವಾಗುವ ವಿಶ್ವಾಸವಿದೆ. ಈ ಬಾರಿಯ ಬಜೆಟ್‌ನಲ್ಲಿ ಯೋಜನೆಗೆ 1,000 ಕೋಟಿ ರು. ಮೀಸಲಿಡಲಾಗಿದೆ. ಮಹದಾಯಿ ಯೋಜನೆಗೆ ಅತಿ ದೊಡ್ಡ ಶತ್ರು ಕಾಂಗ್ರೆಸ್‌ ಪಕ್ಷ. ಈ ಹಿಂದೆ ಗೋವಾದಲ್ಲಿ ಸೋನಿಯಾ ಗಾಂಧಿ, ಮಹದಾಯಿಯ ಒಂದು ಹನಿ ನೀರನ್ನೂ ಬೇರೆಡೆಗೆ ತಿರುಗಿಸಲು ಬಿಡುವುದಿಲ್ಲ ಎಂದಿದ್ದರು. ಅದಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯೆಯನ್ನೇ ನೀಡಲಿಲ್ಲ. ಈಗ ನಿಮ್ಮ ಮಾತನ್ನು ಯಾರು ನಂಬುತ್ತಾರೆ?

ಜ.9ಕ್ಕೆ ಮತ್ತೆ ಕೋಲಾರಕ್ಕೆ ಸಿದ್ದರಾಮಯ್ಯ ಭೇಟಿ: ಸ್ಪರ್ಧೆ ಬಗ್ಗೆ ಘೋಷಣೆ?

ಮೇಕೆದಾಟು ಯೋಜನೆ: ಮೇಕೆದಾಟು ಯೋಜನೆ ಕುರಿತೂ ಕಾಂಗ್ರೆಸ್‌ನದ್ದು ಇಬ್ಬಗೆಯ ನೀತಿ. ನಮ್ಮದೇ ನೆಲದಲ್ಲಿ ಸಣ್ಣ ಜಲಾಶಯ ನಿರ್ಮಿಸಿಕೊಳ್ಳುವ ಯೋಜನೆಗೆ ಒಪ್ಪಿಗೆ ಪಡೆಯಲು ಕಾಂಗ್ರೆಸ್‌ ಸರ್ಕಾರ ಮಾಡಿದ ಪ್ರಯತ್ನ ಶೂನ್ಯ. ಐದು ವರ್ಷದಲ್ಲಿ ಡಿಪಿಆರ್‌ ವರದಿಯನ್ನು ಸಲ್ಲಿಕೆ ಮಾಡಲೂ ಅವರಿಂದ ಆಗಲಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಡಿಪಿಆರ್‌ ರೂಪಿಸಿದರೂ ಅದನ್ನೂ ಸರಿಯಾಗಿ ಗುರಿ ಮುಟ್ಟಿಸಲಿಲ್ಲ. ಅಚ್ಚರಿಯ ವಿಷಯ ಏನೆಂದರೆ, ಸಿದ್ದರಾಮಯ್ಯ ಅವಧಿಯಲ್ಲಿ ಸ್ವತಃ ನೀರಾವರಿ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್‌ ಅವರೇ ಇತ್ತೀಚೆಗೆ ಮೇಕೆದಾಟು ಉಳಿಸಿ ಎಂದು ಪಾದಯಾತ್ರೆ ನಡೆಸಿದರು. ಆದರೆ, ಮೇಕೆದಾಟನ್ನು ಉಳಿಸಲು ಏನು ಮಾಡಬೇಕು ಎಂದರೆ ಅವರಲ್ಲಿ ಉತ್ತರ ಇಲ್ಲ. ನಮ್ಮ ಸರ್ಕಾರ ಇತ್ತೀಚೆಗಷ್ಟೆಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿ ಬಂದಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇದು ಬಿಜೆಪಿಯ ಬದ್ಧತೆ. ಈಗ ಹೇಳಿ, ನಿಮ್ಮ ಮಾತನ್ನು ಯಾರು ನಂಬುತ್ತಾರೆ?

ಹಾಗಾದರೆ ಸಿದ್ದರಾಮಯ್ಯ ಅಧಿಕಾರದಲ್ಲಿ ಇದ್ದಾಗ ಏನು ಮಾಡಿದರು? ತಮ್ಮ ಪಾಡಿಗೆ ಮುಸ್ಲಿಂ ಸಮುದಾಯ ಮಾಡಿಕೊಳ್ಳುತ್ತಿದ್ದ ಟಿಪ್ಪು ಜಯಂತಿಯನ್ನು ಸರ್ಕಾರದಿಂದ ಆಚರಿಸುವುದಾಗಿ ಘೋಷಿಸಿ ರಾಜ್ಯದೆಲ್ಲೆಡೆ ಅಶಾಂತಿ ಮೂಡಿಸಿದರು. ಕೇರಳದಿಂದ ಗೂಂಡಾಗಳು ಆಗಮಿಸಿದ ಸಂದರ್ಭದಲ್ಲಿ ನಡೆದ ಪ್ರತಿಭಟನೆಯ ವೇಳೆ ವಿಶ್ವ ಹಿಂದು ಪರಿಷತ್‌ ಕಾರ್ಯಕರ್ತ ಕುಟ್ಟಪ್ಪ ಅವರ ನಿಧನವಾಯಿತು. ಕೇಂದ್ರ ಸರ್ಕಾರ ಕೊಟ್ಟ30 ರುಪಾಯಿ ಅಕ್ಕಿ ಮೇಲೆ ಮೂರು ರುಪಾಯಿಯ ಚೀಲ ಹೊದೆಸಿ ತಮ್ಮ ಫೋಟೋ ಅಂಟಿಸಿಕೊಂಡು ನಾನು ಉಚಿತ ಅಕ್ಕಿ ಕೊಟ್ಟೆಎಂದು ಡಂಗೂರ ಬಾರಿಸಿದರು. ಲಿಂಗಾಯತರನ್ನು ರಾಜಕೀಯ ಲಾಭಕ್ಕಾಗಿ ಒಡೆಯಲು ನೋಡಿದರು. ಇದೇ ಸಿದ್ದರಾಮಯ್ಯ ಮಾಡಿದ ಸಾಧನೆ. ಸಿದ್ದರಾಮಯ್ಯನವರೇ ಈಗ ಹೇಳಿ, ನಿಮ್ಮ ಮಾತನ್ನು ಯಾರು ನಂಬುತ್ತಾರೆ?

click me!