ಉಪಚುನಾವಣೆಗಳ ಫಲಿತಾಂಶ ಮುಂದಿನ ಚುನಾವಣೆಗಳಿಗೆ ದಿಕ್ಸೂಚಿಯೇನು ಅಲ್ಲ ಎಂದಿದ್ದಾರೆ. ಉಪಚುನಾವಣೆಗೆ ಆಡಳಿತ ಪಕ್ಷಕ್ಕೆ ಎಲ್ಲಾ ಅವಕಾಶಗಳು ಇರುತ್ತವೆ. ಗೆಲುವಿಗಾಗಿ ಏನು ಮಾಡಬೇಕೋ ಅದನ್ನೆಲ್ಲಾ ಆಡಳಿತ ಪಕ್ಷ ಮಾಡುತ್ತದೆ. ಲೋಕಸಭಾ ಚುನಾವಣೆಯಲ್ಲಿ ಮೂರು ಸ್ಥಾನಗಳಿಂದ ನಮ್ಮವರು ಗೆದ್ದು ಹೋದರು. ಆ ಕೂಡಲೇ ಆಡಳಿತ ಪಕ್ಷ ಆ ಕ್ಷೇತ್ರಗಳಿಗೆ ಅನುದಾನದ ಹೊಳೆ ಹರಿಸಿದೆ: ಬಿಜೆಪಿ ಮಾಜಿ ವಿಧಾಸಭಾಧ್ಯಕ್ಷ ಕೆ.ಜಿ. ಬೋಪಯ್ಯ
ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು(ನ.23): ಆಡಳಿತ ಪಕ್ಷಕ್ಕೆ ಉಪಚುನಾವಣೆಗಳಲ್ಲಿ ಗೆಲ್ಲುವುದು ಸಾಮಾನ್ಯ. ಜನರ ಒಲವು ಆಡಳಿತ ಪಕ್ಷದ ಕಡೆಗೆ ಇರುತ್ತದೆ. ಹೀಗಾಗಿ ಕಾಂಗ್ರೆಸ್ ಮೂರು ಸ್ಥಾನಗಳಲ್ಲೂ ಗೆದ್ದಿದೆ ಅಷ್ಟೇ ಎಂದು ಬಿಜೆಪಿ ಮಾಜಿ ವಿಧಾಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಹೇಳಿದ್ದಾರೆ.
ಇಂದು(ಶನಿವಾರ) ಮಡಿಕೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಕೆ.ಜಿ. ಬೋಪಯ್ಯ ಅವರು, ಉಪಚುನಾವಣೆಗಳ ಫಲಿತಾಂಶ ಮುಂದಿನ ಚುನಾವಣೆಗಳಿಗೆ ದಿಕ್ಸೂಚಿಯೇನು ಅಲ್ಲ ಎಂದಿದ್ದಾರೆ. ಉಪಚುನಾವಣೆಗೆ ಆಡಳಿತ ಪಕ್ಷಕ್ಕೆ ಎಲ್ಲಾ ಅವಕಾಶಗಳು ಇರುತ್ತವೆ. ಗೆಲುವಿಗಾಗಿ ಏನು ಮಾಡಬೇಕೋ ಅದನ್ನೆಲ್ಲಾ ಆಡಳಿತ ಪಕ್ಷ ಮಾಡುತ್ತದೆ. ಲೋಕಸಭಾ ಚುನಾವಣೆಯಲ್ಲಿ ಮೂರು ಸ್ಥಾನಗಳಿಂದ ನಮ್ಮವರು ಗೆದ್ದು ಹೋದರು. ಆ ಕೂಡಲೇ ಆಡಳಿತ ಪಕ್ಷ ಆ ಕ್ಷೇತ್ರಗಳಿಗೆ ಅನುದಾನದ ಹೊಳೆ ಹರಿಸಿದೆ. ರಾಜ್ಯದಲ್ಲಿಯೇ ಅಭಿವೃದ್ಧಿ ಶೂನ್ಯವಾದರೂ ಈ ಕ್ಷೇತ್ರಗಳಿಗೆ ಸಾಕಷ್ಟು ಅನುದಾನ ನೀಡಲಾಗಿದೆ. ಅನುದಾನ ಕೊಟ್ಟು ಕಾಂಗ್ರೆಸ್ ನಿಂದ ಅಭಿವೃದ್ಧಿ ಆಗುತ್ತದೆ ಎನ್ನುವ ಭಾವನೆ ಜನರಿಗೆ ಬರುವಂತೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಗೆದ್ದಿದೆ ಅಷ್ಟೇ ಎಂದರು.
ಉಪಚುನಾವಣೆ ಫಲಿತಾಂಶ ಲೂಟಿಗೆ ಲೈಸನ್ಸ್ ಅಲ್ಲ: ಸಿ.ಟಿ ರವಿ
ಮಾಜಿ ಸಿಎಂಗಳು ಇದ್ದ ಕ್ಷೇತ್ರದಲ್ಲೂ ಬಿಜೆಪಿ, ಜೆಡಿಎಸ್ ಸೋತಿರುವುದಕ್ಕೆ ಪ್ರತಿಕ್ರಿಯಿಸಿದ ಬೋಪಯ್ಯ, ಚನ್ನಪ್ಪಟ್ಟಣದಲ್ಲಿ 58 ಸಾವಿರ ಮತದಾರರು ಒಂದು ಸಮುದಾಯದವರೇ ಇದ್ದಾರೆ. ಅವರು ಬಿಜೆಪಿಗೆ ಮತ ಹಾಕಲ್ಲ. ನಾವು ಸೊನ್ನೆಯಿಂದ ಮತ ಗಳಿಸಬೇಕಾಗಿತ್ತು ಆದರೆ ಅವರು 58 ಸಾವಿರದಿಂದ ಮತಗಳಿಸಿದ್ದಾರೆ. ಹೀಗಾಗಿ ಅವರು ಗೆಲವು ಸಾಧಿಸಿದ್ದಾರೆ. ಹಾಗಂತ ಅವರ ಭ್ರಷ್ಟಾಚಾರಕ್ಕೆ ಈ ಫಲಿತಾಂಶ ಮುದ್ರೆ ಅಲ್ಲ ಎಂದು ಮಡಿಕೇರಿಯಲ್ಲಿ ಬಿಜೆಪಿ ಮಾಜಿ ಶಾಸಕ ಕೆ.ಜಿ ಬೋಪಯ್ಯ ಹೇಳಿದ್ದಾರೆ.
ದೇಶದ್ರೋಹ ಪ್ರಕರಣ ದಾಖಲಿಸಲು ಆಗ್ರಹ
ಭಾರತೀಯ ಸೇನೆ ಪ್ರಥಮ ದಂಡನಾಯಕರಾಗಿದ್ದ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಮತ್ತು ಜನರಲ್ ಕೆ.ಎಸ್. ತಿಮ್ಮಯ್ಯ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ ಕೀಳು ಪದಗಳಿಂದ ಅಪಮಾನಿಸಿದ ವ್ಯಕ್ತಿಯನ್ನು ಬಂಧಿಸಿ ಕೂಡಲೇ ಬಿಡುಗಡೆ ಮಾಡಲಾಗಿದೆ. ಆದರೆ ಈ ವ್ಯಕ್ತಿಯ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ವಿಧಾನ ಪರಿಷತ್ತಿನ ಮಾಜಿ ಅಧ್ಯಕ್ಷ ಕೆ.ಜಿ. ಬೋಪಯ್ಯ ಆಗ್ರಹಿಸಿದ್ದಾರೆ.
ಮಡಿಕೇರಿಯಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಕೆ.ಜಿ. ಬೋಪಯ್ಯ ಅವರು ವೃತ್ತಿಯಿಂದ ವಕೀಲನಾಗಿರುವ ವಿದ್ಯಾಧರ ಎಂಬಾತ ಈ ದೇಶ ಕಂಡ ಮಹಾನ್ ನಾಯಕರಿಗೆ ಅಪಮಾನ ಮಾಡಿ ಪೋಸ್ಟ್ ಮಾಡಿದ್ದಾನೆ. ಇದರ ವಿರುದ್ಧ ಚಿಕ್ಕಪುಟ್ಟ ಕೇಸುಗಳನ್ನು ಹಾಕುವ ಬದಲು ದೇಶದ್ರೋಹದ ಕೇಸ್ ಹಾಕಬೇಕಿತ್ತು. ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವ ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಕೆಲಸ ಮಾಡಿರುವ ಈ ವ್ಯಕ್ತಿ ಸಮಾಜ ಘಾತುಕ ಕೆಲಸ ಮಾಡಿದ್ದಾನೆ. ವಕೀಲನಾಗಿರುವ ಈ ವ್ಯಕ್ತಿ ವಕೀಲ ವೃತ್ತಿಗೆ ಅಪಮಾನ ಮಾಡಿದ್ದಾನೆ. ಹೀಗಾಗಿ ಮಡಿಕೇರಿ ಬಾರ್ ಅಸೋಸಿಯೇಷನ್ ಈತನ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ರಾಹುಲ್ ಗಾಂಧಿ ಮತ್ತೊಮ್ಮೆ ವಿಫಲ ನಾಯಕ ಎಂಬುದು ಸಾಬೀತು: ಕೇಂದ್ರ ಸಚಿವ ಪ್ರಹ್ಲಾದ ಜೋಶಿ
ಒಂದು ಹೆಣ್ಣುಮಗಳ ಸಿಮ್ ಪಡೆದು ಅದನ್ನು ಕೂಡ ಶ್ರೀವತ್ಸಭಟ್ ಎಂಬ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಸೇನಾ ನಾಯಕರಿಗೆ ಈ ರೀತಿ ಅಪಮಾನ ಮಾಡಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತೆ ಆಗಿದೆ ಎಂದಿದ್ದಾರೆ. ಮತ್ತೊಂದೆಡೆ ನಿನ್ನೆ ಮಧ್ಯಾಹ್ನ ಕೇಸು ದಾಖಲಿಸಿಕೊಂಡಿದ್ದ ಕೊಡಗು ಪೊಲೀಸರು ರಾತ್ರಿಯೇ ಆತನನ್ನು ಅರೆಸ್ಟ್ ಮಾಡಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದಾರೆ. ಆದರೆ ನ್ಯಾಯಧೀರ ಮುಂದೆ ಸರ್ಕಾರಿ ವಕೀಲರು ಹಾಜರಾಗಿ ಬಂಧನಕ್ಕೊಳಗಾಗಿದ್ದ ವಿದ್ಯಾಧರ ಲಾಯರ್ಗೆ ಜಾಮೀನು ಕೊಡಿಸಿ ಮಧ್ಯರಾತ್ರಿಯೇ ಅಲ್ಲಿಂದ ಮನೆಗೆ ಕಳುಹಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಜನರಲ್ ತಿಮ್ಮಯ್ಯ ಮತ್ತು ಮಾರ್ಷಲ್ ಕಾರ್ಯಪ್ಪ ಅವರಿಗೆ ಅವಮಾನಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ವಿದ್ಯಾಧರ ಎಂಬ ವ್ಯಕ್ತಿಯನ್ನು ಅರೆಸ್ಟ್ ಮಾಡಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದೆವು. ಕೋರ್ಟ್ ಜಾಮೀನು ನೀಡಿದೆ. ವ್ಯಕ್ತಿ ಯಾವ ಉದ್ದೇಶದಿಂದ ಈ ರೀತಿ ಪೋಸ್ಟ್ ಹಾಕಿದರು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದಿದ್ದಾರೆ.