
ಬೆಂಗಳೂರು(ಆ.20): ಕಾಂಗ್ರೆಸ್ ಪಕ್ಷದ ರಾಜ್ಯ ಸರ್ಕಾರವು ಅತಿಯಾಗಿ ವರ್ತಿಸಿದರೆ ಹಸ್ತಕ್ಕೆ ಆಪರೇಷನ್ ಹೇಗೆ ಮಾಡಬೇಕು ಎಂಬುದು ನಮಗೆ ಗೊತ್ತಿದೆ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದ್ದಾರೆ. ಬಿಜೆಪಿ ರಾಜ್ಯ ಕಚೇರಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಸ್ತಕ್ಕೆ ಆಪರೇಷನ್ ಮಾಡಿದರೆ ಏನಾಗುತ್ತದೆ ಎಂಬುದನ್ನು ನಾನೀಗ ಹೇಳುವುದಿಲ್ಲ. ನಮಗೆ ಹಿಂದೆ 104 ಸೀಟು ಬಂದಿತ್ತು. ಯಾರಿಗೂ ಬಹುಮತ ಇರಲಿಲ್ಲ. ಕಾಂಗ್ರೆಸ್-ಜೆಡಿಎಸ್ ಸೇರಿ ಸರ್ಕಾರ ನಡೆಸಿದ್ದವು. ಮೂರು ತಿಂಗಳಿಗೇ ಅಧ್ವಾನ ಆಗಿತ್ತು. ಒಬ್ಬರಿಗೆ ಒಬ್ಬರನ್ನು ಕಂಡರೆ ಆಗದ ಸ್ಥಿತಿ ಇತ್ತು. ಅದರ ಪರಿಣಾಮ ಲೋಕಸಭಾ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಂಡರೂ ಎರಡೂ ಪಕ್ಷಗಳು ಹೀನಾಯವಾಗಿ ಸೋತಿದ್ದವು ಎಂದರು.
ಅನಿಶ್ಚಿತತೆ, ಅರಾಜಕೀಯ ಪರಿಸ್ಥಿತಿ ಬಂದಾಗ ಶಾಸಕರಿಗೆ ಬಿಜೆಪಿಯೇ ಪರ್ಯಾಯ ಎನಿಸಿತ್ತು. ಈಗ ಪೂರ್ಣ ಬಹುಮತ ಇದೆ. ಅತಿ ಮಾಡಲು ಹೋದರೆ ಪರಿಸ್ಥಿತಿ ಕೆಟ್ಟದ್ದಾಗಲಿದೆ. ಕಾಂಗ್ರೆಸ್ ಪಕ್ಷ ಸಂಪೂರ್ಣ ಬಹುಮತ ಪಡೆದು ಆಡಳಿತ ನಡೆಸುತ್ತಿದೆ. ಒಳ್ಳೆಯ ಆಡಳಿತ ನಡೆಸುವ ಗುರಿ ಇಟ್ಟುಕೊಳ್ಳಬೇಕು. ಇಲ್ಲದೇ ಇರುವುದನ್ನು ಮಾಡಲು ಹೊರಟರೆ ಸುಮ್ಮನೆ ಕುಳಿತುಕೊಳ್ಳುವವರು ನಾವಲ್ಲ. ನಾವೇನಾದರೂ ಮಾಡಿದರೆ ಮೇಲೇಳಲು ಆಗಲ್ಲ. ನಾವೇನು ಮಾಡುತ್ತೇವೆಂದು ಹೇಳುವುದಿಲ್ಲ. ಮುಟ್ಟಿನೋಡುವಂತೆ ಮಾಡುತ್ತೇವೆ ಎಂದು ಕಾಂಗ್ರೆಸ್ ಪಕ್ಷಕ್ಕೆ ಟಾಂಗ್ ನೀಡಿದರು.
ಇನ್ನೂ ಮೂರೇ ತಿಂಗಳು ಮುಂದಾನಾಗುತ್ತೆ ಕಾದು ನೋಡಿ: ಸಿ.ಟಿ.ರವಿ ಸ್ಫೋಟಕ ಹೇಳಿಕೆ
ನಾವು ಮಾಡಿದಾಗ ಆಪರೇಷನ್ ಎನ್ನುತ್ತಾರೆ. ಆ ಪಟ್ಟಿನಮ್ಮಲ್ಲಿದೆ. ಅದನ್ನು ಮುಖಕ್ಕೆ ಹಿಡಿಯಬಯಸುತ್ತೇವೆ. ತಮ್ಮ ಪಕ್ಷದ ಹಿರಿಯ ಶಾಸಕರನ್ನು ಹಿಡಿದಿಡಲಾಗದ ಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷ ಇದೆ. ನಮ್ಮ ಪಕ್ಷ ಬಿಟ್ಟು ಯಾರೂ ಹೋಗುವುದಿಲ್ಲ. ಇವತ್ತು ನಾಲ್ಕು ಮಂದಿ ಸಚಿವರು ಪತ್ರ ಬರೆದಿದ್ದಾರೆ. ಎಲ್ಲವೂ ಸರಿ ಇದ್ದರೆ ಯಾಕೆ ಪತ್ರ ಬರೆಯುತ್ತಾರೆ ಎಂದು ಸಿ.ಟಿ.ರವಿ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದರು.
ಎಲ್ಲವೂ ಸರಿ ಇಲ್ಲದಾಗ ರಾಜಕೀಯದಲ್ಲಿ ಪ್ರೇಮಪತ್ರಗಳು ಶುರುವಾಗುತ್ತವೆ. ಈಗ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇಲ್ಲವೆಂದು ಸಚಿವರು, ಶಾಸಕರೇ ಹೇಳುವಾಗ ಯಾರೂ ಅಲ್ಲಿಗೆ ಹೋಗುವುದಿಲ್ಲ. ಇದನ್ನು ಮೀರಿ ಅತಿರೇಕಕ್ಕೆ ಕೈ ಹಾಕಿದರೆ ನಮಗೂ ಏನು ಮಾಡಬೇಕೆಂದು ಗೊತ್ತಿದೆ ಎಂದು ಎಚ್ಚರಿಕೆ ನೀಡಿದರು.
ಸತ್ಯ ಹೇಳಿದರೆ ಸಿ.ಟಿ.ರವಿಗೆ ಕೆಳಗಿಂದ ಮೇಲಿನವರೆಗೆ ಉರಿಯುತ್ತೆ: ಕೆಪಿಸಿಸಿ ರಾಜ್ಯ ವಕ್ತಾರ ಲಕ್ಷ್ಮಣ್
ನಮಗೆ ಪಾರ್ಟಿ ಕಟ್ಟಲು ಗೊತ್ತು, ಅದನ್ನು ಉಳಿಸಿಕೊಳ್ಳುವುದೂ ಗೊತ್ತು. ಅಡ್ಡ ಬಂದವರಿಗೆ ಹೇಗೆ ಉತ್ತರ ಕೊಡಬೇಕೆಂದು ಗೊತ್ತಿದೆ. ನಾವು ರಾಜಕೀಯ ದೃಷ್ಟಿಯಿಂದ ಕಾಂಗ್ರೆಸ್ ಶಾಸಕರನ್ನು ಸಂಪರ್ಕ ಮಾಡಿಲ್ಲ ಎಂದು ಪ್ರಶ್ನೆವೊಂದಕ್ಕೆ ಉತ್ತರಿಸಿದ ಅವರು, ರಾಜಕೀಯದ ಪಗಡೆ ದಾಳ ಏಕಮುಖ ಅಲ್ಲ. ಚೆಸ್ ಏಕಮುಖ ಅಲ್ಲ. ನಮಗೆ ಚೆಕ್‌ಮೇಟ್ ಮಾಡಲು ಬಂದರೆ ನಾವೂ ಚೆಕ್‌ಮೇಟ್ ಮಾಡಲು ಸಿದ್ಧರಿದ್ದೇವೆ ಎಂದು ಮಾರ್ಮಿಕವಾಗಿ ಹೇಳಿದರು.
ಸೈನಿಕನಿಗೆ ಚೆಕ್‌ಮೇಟ್ ಮಾಡುವುದಿಲ್ಲ. ನಮ್ಮ ಚೆಕ್‌ಮೇಟ್ ರಾಜನಿಗೇ ಇರುತ್ತದೆ. ಡಿ.ಕೆ.ಶಿವಕುಮಾರ್ ಡಿಸಿಎಂ ಆಗಿದ್ದಾರೆ. ತಮ್ಮ ಹುದ್ದೆಯ ಜವಾಬ್ದಾರಿಯಿಂದ ಮಾತನಾಡಲಿ. ‘ಆ ದಿನಗಳ’ ಧ್ವನಿ ಅವರದಾಗಬಾರದು ಎಂದು ಪ್ರಶ್ನೊಂದಕ್ಕೆ ಪ್ರತಿಕ್ರಿಯಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.