Chikkamagaluru: ಕಾಂಗ್ರೆಸ್ಸಿನ ಪೇಸಿಎಂ ಪೇ ಪೋಸ್ಟರ್‌ಗೆ ಸಿ.ಟಿ.ರವಿ ಟಾಂಗ್

By Govindaraj SFirst Published Sep 24, 2022, 7:46 PM IST
Highlights

ಪಿಎಫ್ಐ ಮತ್ತು ಎಸ್‌ಡಿಪಿಐ ಸಂಘಟನೆಗಳ ದೇಶದ್ರೋಹಿ ಚಟುವಟಿಕೆಗಳನ್ನು ಗಮನಿಸಿದರೆ ಒಂದು ರಾಷ್ಟ್ರದೊಳಗೆ ಎರಡು ರಾಷ್ಟ್ರೀಯರು ಇರಲು ಸಾಧ್ಯವಿಲ್ಲ ಎನ್ನುವ ಅಂಬೇಡ್ಕರ್ ಅವರ ಮಾತು ನಿಜವಾಗುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ. 

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಸೆ.24): ಪಿಎಫ್ಐ ಮತ್ತು ಎಸ್‌ಡಿಪಿಐ ಸಂಘಟನೆಗಳ ದೇಶದ್ರೋಹಿ ಚಟುವಟಿಕೆಗಳನ್ನು ಗಮನಿಸಿದರೆ ಒಂದು ರಾಷ್ಟ್ರದೊಳಗೆ ಎರಡು ರಾಷ್ಟ್ರೀಯರು ಇರಲು ಸಾಧ್ಯವಿಲ್ಲ ಎನ್ನುವ ಅಂಬೇಡ್ಕರ್ ಅವರ ಮಾತು ನಿಜವಾಗುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ. ಚಿಕ್ಕಮಗಳೂರು ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ದೇಶ ವಿಭಜನೆ ಸಂದರ್ಭದಲ್ಲಿ ಅಂಬೇಡ್ಕರ್ ಅವರು ಒಂದು ರಾಷ್ಟ್ರದೊಳಗೆ ಎರಡು ರಾಷ್ಟ್ರೀಯರು ಇರಲು ಸಾಧ್ಯವಿಲ್ಲ ಎಂದಿದ್ದರು. ಆದರೂ ಸರ್ಕಾರ ಬಲವಾಗಿದೆ. ದೇಶದ ಹಿತಾಸಕ್ತಿ ಜೊತೆಗೆ ರಾಜಿ ಮಾಡಿಕೊಂಡು ರಾಜಕಾರಣ ಮಾಡುವ ಕೆಟ್ಟ ಸರ್ಕಾರ ಇದಲ್ಲ. 

ಕೆಟ್ಟ ಶಕ್ತಿಗಳನ್ನ ಬೇರು ಸಹಿತ ಕಿತ್ತುಹಾಕುವ ಗಟ್ಟಿ ಸರ್ಕಾರವಿದೆ ಎಂದರು. ಪಿಎಫ್ಐ ಮತ್ತು ಎಸ್‌ಡಿಪಿಐ ದೇಶದಲ್ಲಿ ಅಂತರ್ಯುದ್ಧ ಮಾಡುವ ಸಿದ್ಧತೆ ಮತ್ತು ಷಡ್ಯಂತ್ರದಲ್ಲಿ ತೊಡಗಿದ್ದವು ಎನ್ನುವ ಪ್ರಾಥಮಿಕ ಮಾಹಿತಿ ಅಘಾತಕಾರಿಯಾದದ್ದು, ಶಸ್ತ್ರ ಸಂಗ್ರಹಣೆ ಮಾಡಿ, ತರಬೇತಿ ಕೊಟ್ಟು, ಇಡೀ ದೇಶದಲ್ಲಿ ಆರಾಜಕತೆ ಹುಟ್ಟುಹಾಕುವ ಷಡ್ಯಂತ್ರ ದೇಶದ ಸುರಕ್ಷತೆಗೆ ಮಾರಕಾವಾಗಿತ್ತು. ಎನ್ಐಎ ಮಾಹಿತಿ ಆಧರಿಸಿ ದಾಳಿ ನಡೆಸಿ 100ಕ್ಕೂ ಹೆಚ್ಚು ಜನರನ್ನು ಬಂಧಿಸಿದೆ. ಅದನ್ನು ನಾವು ಸ್ವಾಗತಿಸುತ್ತೇವೆ. ಇಡೀ ದೇಶ ರಾಜಕಾರಣದಿಂದ ಹೊರತಾಗಿ ದೇಶದ ಹಿತದೃಷ್ಠಿಯಿಂದ ಒಂದಾಗಿ ನಿಲ್ಲಬೇಕಾದ ಅವಶ್ಯಕತೆ ಇದೆ ಎಂದರು.

ಸಿಮಿ ಇನ್ನೊಂದು ಮುಖ ಪಿಎಫ್‌ಐ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಎನ್‌ಐಎ ದಾಳಿ-ಸ್ವಾಗತ: ಎನ್ಐಎ ದಾಳಿ ನಂತರ ನಡೆಸಿದ ಪ್ರತಿಭಟನೆಯಲ್ಲಿ ಕೆಲವಡೆ ಪಾಕಿಸ್ಥಾನ ಜಿಂದಾಬಾದ್ ಘೋಷಣೆ ಕೂಗಿರುವ ಅವರ ಮನಸ್ಥಿತಿ ಅವರು ದೇಶದ ವಿರುದ್ಧ ಇದ್ದಾರೆ ಎನ್ನುವುದನ್ನು ತೋರಿಸುತ್ತದೆ. ಇದಾವುದಕ್ಕೂ ಹೆದರುವ ಪ್ರಶ್ನೆ ಇಲ್ಲ. ಭಯೋತ್ಪಾದನೆಗೆ ಬೆಂಬಲಿಸುವವರು ಮತ್ತು ಆರಾಜಕತೆ ಹುಟ್ಟು ಹಾಕುವವರು, ದೇಶವನ್ನು ವಿಭಜಿಸಬೇಕು ಎನ್ನುವ ಷಡ್ಯಂತ್ರ ಮಾಡುತ್ತಿರುವ ವ್ಯಕ್ತಿ ಮತ್ತು ಸಂಘಟನೆಗಳನ್ನು ಮಟ್ಟಹಾಕಲೇ ಬೇಕಿದೆ. ಅದಕ್ಕಾಗಿ ಎನ್ಐಎ ಕ್ರಮವನ್ನು ಸ್ವಾಗತಿಸುತ್ತೇವೆ ಎಂದರು. 20 ವರ್ಷಗಳ ಹಿಂದೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪವನ್ನು ಅವರು ಸ್ಲೀಪರ್ ಸೆಲ್ ಮಾಡಿಕೊಂಡಿದ್ದರು. ಅಲ್ಲಿ ತರಬೇತಿ ನೀಡುವುದು, ಅಪರಾಧಿಗಳನ್ನು ರಕ್ಷಿಸುವ ಕೆಲಸ ಮಾಡಿದ್ದರು. ಈ ಬಗ್ಗೆ ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿಗಳ ಜೊತೆ ಮಾತನಾಡಿದ್ದೇನೆ. 

ಚಿಕ್ಕಮಗಳೂರನ್ನು ಸ್ಲೀಪರ್ ಸೆಲ್ ಮಾಡಿಕೊಳ್ಳುವ, ತರಬೇತಿ ಸೆಂಟರ್ ಮಾಡಿಕೊಳ್ಳುವ ಸಾಧ್ಯತೆಗಳು ಹೆಚ್ಚಿವೆ ಇದಕ್ಕಾಗಿ ಗುಪ್ತಚರ ವ್ಯವಸ್ಥೆಯನ್ನು ಬಲಪಡಿಸಬೇಕು. ಅಪರಿಚಿತರು ಯಾರಾದರೂ ಅನುಮಾನಾಸ್ಪದವಾಗಿ ಓಡಾಡುವುದು ಕಂಡುಬಂದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡುವ ಕೆಲಸವನ್ನು ನಾಗರೀಕರೂ ಮಾಡಬೇಕು ಎಂದು ಹೇಳಿದರು. ಸಮಾಜವನ್ನು ಜಾಗೃತಿಗೊಳಿಸಬೇಕು. ಎಲ್ಲಾ ಕೆಲಸವನ್ನು ಪೊಲೀಸರು ಮಾಡಲು ಸಾಧ್ಯವಿಲ್ಲ. ಮುಂಚೆ ಭಟ್ಕಳದ ಉಗ್ರರು, ಮಂಗಳೂರಿನಲ್ಲಿ ಉಗ್ರಗಾಮಿ ಚಟುವಟಿಕೆ ನಡೆಸಿದವರು ನಮ್ಮ ಜಿಲ್ಲೆಯಲ್ಲಿ ನೆಲೆ ಕಂಡುಕೊಂಡಿದ್ದರು. ಈಗ ತೀರ್ಥಹಳ್ಳಿಯಲ್ಲಿ ಬಾಂಬ್ ತಯಾರಿಕೆ ತರಬೇತಿ ಮತ್ತು ಪ್ರಾಯೋಗಿಕ ಪರೀಕ್ಷೆ ಮಾಡಿರುವುದು ಗಂಭೀರವಾಗಿ ತೆಗೆದುಕೊಳ್ಳುವ ವಿಚಾರ. ಇದನ್ನು ಬೇರು ಸಹಿತ ಕಿತ್ತು ಹಾಕಲು ಸಮಾಜ ಜಾಗೃತಿ ಮಾಡಬೇಕು. ಯಾರೂ ಓಟ್ ಬ್ಯಾಂಕ್ ದೃಷ್ಠಿಯಿಂದ ಜೊಲ್ಲು ಸುರಿಸಿಕೊಂಡು ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ಹೋಗಬಾರದು ಎಂದರು. 

Chikkamagaluru: ಸಾವಿನಲ್ಲೂ ಸಾರ್ಥಕತೆ ಮೆರೆದ ರಕ್ಷಿತಾ ಕುಟುಂಬಕ್ಕೆ 8 ಲಕ್ಷ ಪರಿಹಾರ

ಕಾಂಗ್ರೆಸ್ಸಿನ ಪೇ ಸಿಎಂ ಪೇ ಪೋಸ್ಟರ್‌ಗೆ ಟಾಂಗ್: ಪೇ ಫಾರ್ ಕಾಂಗ್ರೆಸ್ ಮೇಡಂ ಎನ್ನುವ ಗುಂಗಿನಲ್ಲೇ ಪೇಸಿಎಂ ಎಂದು ಹಾಕಿದ್ದಾರೆ. ಫೋಟೋ ಮಾತ್ರ ತಪ್ಪಾಗಿ ಹಾಕಿದ್ದಾರೆ ಎಂದು ಕಾಂಗ್ರೆಸ್‌ನ ಪೇಸಿಎಂ ಅಭಿಯಾನವನ್ನು ಸಿ.ಟಿ.ರವಿ ಮೂದಲಿಸಿದ್ದಾರೆ. ಅದರಲ್ಲಿ ಫೋಟೋವನ್ನು ಅವರ ಅಧಿನಾಯಕಿಯದ್ದೇ ಹಾಕಬೇಕಿತ್ತು. ಕಾಂಗ್ರೆಸನ್ನು ಬೇರು ಸಹಿತ ಕಿತ್ತುಹಾಕಬೇಕು. ನರೇಂದ್ರ ಮೋದಿ ಕೈ ಬಲಪಡಿಸಬೇಕು ಎಂದು ಹೇಳಿರುವುದು ಸಿದ್ದರಾಮಯ್ಯ ಅವರೇ ಅದೇ ಗುಂಗಿನಲ್ಲಿ ಪೇ ಫಾರ್ ಕಾಂಗ್ರೆಸ್ ಮೇಡಂ ಎನ್ನುವುದನ್ನು ಪೇ ಫಾರ್ ಸಿಎಂ ಎಂದು ಹಾಕಿದ್ದಾರೆ ಎಂದು ವ್ಯಂಗ್ಯವಾಡಿದರು. ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ  ಅವರ ಹೈಕಮಾಂಡ್‌ಗೆ ಕಪ್ಪ ಕೊಡುವ ಎಟಿಎಂ ಆಗಿ ಕರ್ನಾಟಕವನ್ನು ಮಾಡಿಕೊಂಡಿದ್ದರು. ಅಂದಿನ ಎಂಎಲ್ಸಿ ಗೋವಿಂದರಾಜು ಎಂಬುವವರು ಡೈರಿಯಲ್ಲಿ ಯಾರ್ಯಾರಿಗೆ ಕಪ್ಪ ಕೊಟ್ಟರು, ಯಾರ್ಯಾರು ಕೊಟ್ಟಿದ್ದರು ಎನ್ನುವುದನ್ನು ಬರೆದಿದ್ದರು. ಅದರ ಪ್ರಕಾರ ಸೋನಿಯಾಗಾಂದಿ, ರಾಹುಲ್ ಗಾಂಧಿ, ಅಹಮದ್ ಪಟೇಲ್, ದಿಗ್ವಿಜಯ ಸಿಂಗ್ ಅವರಿಗೆ ಕಪ್ಪ ಕೊಟ್ಟಿರುವುದನ್ನು ಕೋಡ್ ವರ್ಡ್‌ಗಳಲ್ಲಿ ನಮೂದಿಸಿದ್ದರು. ಅವರು ಈಗಲೂ ಅದೇ ಗುಂಗಿನಲ್ಲಿದ್ದಾರೆ ಎಂದು ಟೀಕಿಸಿದರು.

click me!