ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮುಮಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಸೋಲುಕಂಡಿರುವ ಬಗ್ಗೆ ನೋವು ತೋಡಿಕೊಂಡಿದ್ದಾರೆ. ಇದ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರತಿಕ್ರಿಯಿಸಿದ್ದಾರೆ.
ಚಿಕ್ಕಮಗಳೂರು, (ಡಿ.18): ಎರಡೂವರೇ ವರ್ಷದ ಬಳಿಕ ಸಿದ್ದರಾಮಯ್ಯ ಸೋಲಿಗೆ ಕಾರಣ ಹುಡುಕುತ್ತಿದ್ದಾರೆ. ಯಾರೂ ಕೂಡ ಉಗಿದಿರುವುದ್ದನ್ನ ಬಾಯಿಗೆ ಹಾಕಿಕೊಳ್ಳುವುದಿಲ್ಲ. ಸೋಲಿನ ಕಾರಣ ಗೊತ್ತಿತ್ತು, ಮತ್ತೇಕೆ ಜೆಡಿಎಸ್ ಜೊತೆ ಸರ್ಕಾರ ಮಾಡಿದಿರಿ. ಸಿದ್ದರಾಮಯ್ಯನವರು ಗೋಸುಂಬೆ ತರ ಆಡಬಾರದು ಎಂದು ಸಿ.ಟಿ. ರವಿ ವ್ಯಂಗ್ಯವಾಡಿದ್ದಾರೆ.
ಇಂದು (ಶುಕ್ರವಾರ) ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಜೊತೆ ಒಳ ಒಪ್ಪಂದ ಮಾಡಿಕೊಂಡಿಲ್ಲ. ಒಂದು ವೇಳೆ ಬಿಜೆಪಿ-ಜೆಡಿಎಸ್ ಬಾದಾಮಿಯಲ್ಲೂ ಒಳ ಒಪ್ಪಂದ ಮಾಡಿಕೊಂಡಿದ್ದರೇ, ನೀವು ಅಲ್ಲೂ ಸೋಲಬೇಕಿತ್ತು. ಅಲ್ಲಿ ಗೆದ್ದಿದ್ದು ಕೇವಲ ಸಾವಿರ ಚಿಲ್ಲರೆ ವೋಟಿನಲ್ಲಿ. ಅದು ಮುಖ್ಯಮಂತ್ರಿ ಆದವರಿಗೆ ಗೌರವ ತರುವ ಗೆಲುವೇ ಅಲ್ಲ ಎಂದು ಟಾಂಗ್ ಕೊಟ್ಟರು.
ಪಕ್ಷದ್ರೋಹಿ ಪಕ್ಷ ಬಿಡಲಿ: ಚಾಮುಂಡೇಶ್ವರಿ ಸೋಲಿನ ಬಗ್ಗೆ ಸಿದ್ದು ಸ್ಫೋಟಕ ಹೇಳಿಕೆ..!
ಸಿದ್ದರಾಮಯ್ಯನವರು ಅವರ ಸೋಲಿಗೆ ಕಾರಣ ಹುಡುಕಿದ್ದಾರೆ. ಆದರೇ ಅವರ ಸರ್ಕಾರ ಅಧಿಕಾರ ಕಳೆದುಕೊಂಡಿದ್ದಕ್ಕೆ ಕಾರಣ ಹುಡುಕಬೇಕಿತ್ತು. ದುರಹಂಕಾರ, ಭ್ರಷ್ಟಾಚಾರ, ಕೆಟ್ಟ ಆಡಳಿತದಿಂದ ಸೋತಿದ್ದಾರೆ ಎಂದರು.
ನನ್ನ ಸೋಲಿಗೆ ನಮ್ಮವರೇ ಕಾರಣ ಎಂಬ ಸಿದ್ದು ಹೇಳಿಕೆಗೆ ಪ್ರತಿಕ್ರಿಯಿಸಿದ ಸಿ.ಟಿ. ರವಿ, ನಮಗೆ ಜನಾಭಿಪ್ರಾಯವಿಲ್ಲ, ವಿರೋಧ ಪಕ್ಷದಲ್ಲಿ ಕೂರುತ್ತೇವೆ ಎನ್ನಬೇಕಿತ್ತು. ಆದರೇ ಏಕೆ ಜೆಡಿಎಸ್ ಜೊತೆ ಸರ್ಕಾರ ಮಾಡಿದ್ದರು ? ಉಗಿದದ್ದನ್ನ ಯಾರಾದರೂ ಬಾಯಿಗೆ ಹಾಕಿಕೊಳ್ಳುತ್ತಾರೆಯೇ ? ತನ್ನನ್ನ ಸೋಲಿಸಿದವರ ಜೊತೆನೇ ಸರ್ಕಾರ ಮಾಡುತ್ತಾರಾ ? ಎಂದು ಪ್ರಶ್ನಿಸಿದರು.
ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕೆಂದೇ ಒಟ್ಟಿಗೆ ಆಗಿದ್ದರು. ಇದೀಗ ಯಾವ ಮುಖ ಇಟ್ಟುಕೊಂಡು ಸತ್ಯವನ್ನು ಒಪ್ಪಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯನವರದ್ದು ನೈತಿಕ ರಾಜಕಾರಣಾನ ? ಈಗ ಕೈಗೆಟಕದ ದ್ರಾಕ್ಷಿ ಹುಳಿ ಎಂದು ನರಿ ಕಥೆ ಹೇಳಿದರೇ ಯಾರು ಕೇಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.