
ಬೆಂಗಳೂರು : ಮುಂಬರುವ ರಾಜ್ಯ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಹೊಂದಾಣಿಕೆ ಸಾಧ್ಯವಿಲ್ಲ. ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿ ಮುಂದುವರೆಯಲಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಹೋರಾಟ ಮಾಡುತ್ತೇವೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ಇತ್ತೀಚೆಗೆ ನಡೆದ ನಾಲ್ಕು ಪುರಸಭೆ ಚುನಾವಣೆಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ರಾಜ್ಯದಲ್ಲಿ ಯಾವಾಗ ಚುನಾವಣೆ ನಡೆದರೂ ಬಿಜೆಪಿ ಸ್ವಂತ ಶಕ್ತಿಯ ಮೇಲೆ 130ರಿಂದ 140 ಸ್ಥಾನಗಳನ್ನು ಗೆಲ್ಲಲಿದೆ ಎಂದು ಗುರುವಾರ ಹೇಳಿದ್ದರು. ಇದರ ಬೆನ್ನಲ್ಲೇ ಶುಕ್ರವಾರ ಪಕ್ಷದ ರಾಜ್ಯ ಕಚೇರಿಯಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ ಎಚ್.ಡಿ.ದೇವೇಗೌಡರು ಮಾತನಾಡಿದರು.
ಬಿಜೆಪಿಯವರು ನಾಲ್ಕು ಪುರಸಭೆಗಳಲ್ಲಿ ಗೆಲುವು ಸಾಧಿಸಿದ್ದಾರೆ. ಜೆಡಿಎಸ್ ಪ್ರಾಬಲ್ಯ ಇರುವ ದೊಡ್ಡಬಳ್ಳಾಪುರದಲ್ಲೂ ಬಿಜೆಪಿ ಗೆದ್ದಿದೆ. ರಾಷ್ಟ್ರದಲ್ಲಿ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಜೊತೆಗೆ ನಾನು ಮತ್ತು ಎಚ್.ಡಿ.ಕುಮಾರಸ್ವಾಮಿ ಉತ್ತಮ ಸಂಬಂಧ ಹೊಂದಿದ್ದೇವೆ. ಇದರಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಆದರೆ, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಜೊತೆಗೆ ಹೊಂದಾಣಿಕೆ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷರು ನೀಡಿರುವ ಹೇಳಿಕೆಗೆ ನಮ್ಮ ವಿರೋಧವಿಲ್ಲ. ನಮ್ಮ ಪಕ್ಷಕ್ಕೆ ಎಲ್ಲೆಲ್ಲಿ ಶಕ್ತಿ ಇದೆಯೋ ಅಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದು ಕಷ್ಟವಿದೆ. ಅವರು ಹೇಳಿರುವುದನ್ನು ನಾನು ತಪ್ಪು ಎಂದು ಹೇಳುವುದಿಲ್ಲ.
ಬಿಜೆಪಿ ರಾಜ್ಯಾಧ್ಯಕ್ಷರು ಯಂಗ್‌ಸ್ಟರ್. ಉತ್ಸಾಹದಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ. ಆ ಬಗ್ಗೆ ನಾನು ಕಾಮೆಂಟ್ ಮಾಡುವುದಿಲ್ಲ. ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಚಾರದಲ್ಲಿ ಅವರು ಏನು ಮಾಡಬೇಕು ಎನ್ನುತ್ತಿದ್ದಾರೋ ಅದನ್ನು ನಾವು ಮಾಡುತ್ತೇವೆ. ಈ ಬಗ್ಗೆ ಚರ್ಚಿಸಲು ಈ ಸಭೆ ಕರೆದಿದ್ದೇನೆ. ಅಮಿತ್ ಶಾ ಮತ್ತು ಪ್ರಧಾನಿ ಮೋದಿ ಬಳಿ ಈ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂಬಂಧ ಸೀಟು ಹಂಚಿಕೆ ಕುರಿತು ಚರ್ಚಿಸಲು ಸಾಧ್ಯವಿಲ್ಲ. ದೇಶದಲ್ಲಿ ಹಲವು ಸಮಸ್ಯೆಗಳಿವೆ. ಅವರೊಂದಿಗೆ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ಸೀಟು ಹಂಚಿಕೆ ಬಗ್ಗೆ ಚರ್ಚಿಸುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ವಿಧಾನ ಪರಿಷತ್ ನಾಲ್ಕು ಸ್ಥಾನಗಳಲ್ಲಿ ಮೂರು ಬಿಜೆಪಿಗೆ ಮತ್ತು ಒಂದು ಜೆಡಿಎಸ್‌ಗೆ ಎಂದು ಪ್ರಾಥಮಿಕವಾಗಿ ಚರ್ಚೆಯಾಗಿದೆ. ಆ ಒಂದು ಕ್ಷೇತ್ರ ಯಾವುದು ಎಂಬುದು ನನಗೆ ಗೊತ್ತಿಲ್ಲ. ಕುಮಾರಸ್ವಾಮಿ ಅವರು ಬಂದ ಬಳಿಕ ಅದು ಗೊತ್ತಾಗಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷರು
ಯಂಗ್‌ಸ್ಟರ್, ಉತ್ಸಾಹಿ
ಸ್ವಂತ ಬಲದಿಂದ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೇರುವ ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆಗೆ ನನ್ನ ವಿರೋಧವಿಲ್ಲ. ಅವರು ಯಂಗ್‌ಸ್ಟರ್. ಉತ್ಸಾಹದಲ್ಲಿ ಕೆಲಸ ಮಾಡುತ್ತಿದ್ದಾರೆ.
- ಎಚ್.ಡಿ. ದೇವೇಗೌಡ, ಜೆಡಿಎಸ್ ವರಿಷ್ಠ
ಅಹಿಂದ ನಾಯಕ ಸಿದ್ದು
ಪುತ್ರನ ಕ್ಷೇತ್ರದಲ್ಲಿ ಏಕೆ
ಸ್ಪರ್ಧಿಸಿದರು?: ಗೌಡ
ಬೆಂಗಳೂರು: ಅಹಿಂದ ಬಗ್ಗೆ ವ್ಯಾಖ್ಯಾನ ಮಾಡಲು ನಾನು ತಡವರಿಸುತ್ತೇನೆ. ಸಿದ್ದರಾಮಯ್ಯ ಅವರು ಅಹಿಂದ ನಾಯಕ ಆಗಿದ್ದರೆ ರಾಜ್ಯದ ಎಲ್ಲಿ ಬೇಕಾದರೂ ಸ್ಪರ್ಧಿಸಿ ಗೆಲ್ಲಬಹುದಿತ್ತು. ಅದು ಬಿಟ್ಟು ತಮ್ಮ ಪುತ್ರ ಬಿಟ್ಟುಕೊಟ್ಟ ಕ್ಷೇತ್ರವನ್ನೇಕೆ ಆಯ್ಕೆ ಮಾಡಿಕೊಂಡರು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ವ್ಯಂಗ್ಯವಾಡಿದರು. ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಲ್ಲಿ ಮುಂದುವರಿಸಲು ಮೈಸೂರಿನಲ್ಲಿ ಅಹಿಂದ ಸಮಾವೇಶ ನಡೆಯುತ್ತಿದೆಯಲ್ಲ ಎಂಬ ಪ್ರಶ್ನೆಗೆ ಅವರು ಕೊಟ್ಟ ಉತ್ತರ ಇದಾಗಿತ್ತು.
ದೇವೇಗೌಡರ
ಹೇಳಿಕೆ ಬಗ್ಗೆ ಚರ್ಚೆ
ಕೇಂದ್ರ ಸರ್ಕಾರದಲ್ಲಿ ಜೆಡಿಎಸ್ ಜೊತೆ ನಮ್ಮ ಹೊಂದಾಣಿಕೆ ಇದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯ ವಿಚಾರದಲ್ಲಿ ಯಾವುದೇ ಗೊಂದಲ ಇರಬಾರದು. ಈ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷರು, ವಿಪಕ್ಷ ನಾಯಕರು ಮತ್ತು ಮಾಜಿ ಮುಖ್ಯಮಂತ್ರಿ ಸೇರಿದಂತೆ ಎಲ್ಲರ ಜೊತೆ ಸೇರಿ ಚರ್ಚಿಸುತ್ತೇವೆ.
- ಎನ್. ರವಿಕುಮಾರ್, ಬಿಜೆಪಿ ಎಂಎಲ್ಸಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.