
ಬೆಂಗಳೂರು (ಸೆ.11) : ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಮೈತ್ರಿಯಾಗುವುದು ಬಹುತೇಕ ನಿಶ್ಚಿತವಾಗಿದ್ದು, ಜೆಡಿಎಸ್ ವರಿಷ್ಠ ನಾಯಕರು ಅಧಿಕೃತವಾಗಿಯೇ ಅದರ ಬಗ್ಗೆ ಘೋಷಣೆ ಮಾಡಿದ್ದಾರೆ.
ಭಾನುವಾರ ನಗರದ ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹಾಗೂ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಇಬ್ಬರೂ ಬಿಜೆಪಿ ಜತೆಗಿನ ಮೈತ್ರಿಯ ವಿಷಯವನ್ನು ಅಧಿಕೃತವಾಗಿ ತಿಳಿಸಿ ಬಲವಾಗಿ ಸಮರ್ಥಿಸಿಕೊಂಡರು. ಪಕ್ಷದ ಇತರ ಮುಖಂಡರೂ ಈ ಮೈತ್ರಿಗೆ ಅಧಿಕೃತ ಮುದ್ರೆ ಒತ್ತಿದರು.
ಜನರ ಹಿತಕ್ಕಾಗಿ ಬಿಜೆಪಿ ಜತೆ ಮೈತ್ರಿ:
ಕುಮಾರಸ್ವಾಮಿ ಮಾತನಾಡಿ, ಕೇವಲ ಮೂರೇ ತಿಂಗಳ ಆಡಳಿತಾವಧಿಯಲ್ಲಿ ದುರಾಡಳಿತದ ಪರಾಕಾಷ್ಠೆ ಮುಟ್ಟಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯದಲ್ಲಿ ಹೊಸ ರಾಜಕೀಯ ಅಧ್ಯಾಯ ಆರಂಭವಾಗುತ್ತಿದೆ. ಪ್ರತಿಪಕ್ಷಗಳಾಗಿ ನಾವು ಒಟ್ಟಾಗಿ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ. ಜನರ ಹಿತಕ್ಕಾಗಿ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುತ್ತಿದ್ದೇವೆ ಎಂದು ಕುಮಾರಸ್ವಾಮಿ ಪ್ರಕಟಿಸಿದರು.
ದೇಶದ ಎಮರ್ಜೆನ್ಸಿ ವೇಳೆ ಹುಟ್ಟಿಕೊಂಡ ಜನತಾಪಾರ್ಟಿಯ ತುಣುಕು ಬಿಜೆಪಿ: ಮಾಜಿ ಸಿಎಂ ಕುಮಾರಸ್ವಾಮಿ
ಜೆಡಿಎಸ್-ಬಿಜೆಪಿ ಮೈತ್ರಿ ಮಾಡಿಕೊಳ್ಳುವ ವಿಚಾರದಲ್ಲಿ ಯಾವುದೇ ಸ್ವಾರ್ಥ ಇಲ್ಲ. 2006ರ ಅಧ್ಯಾಯ ಮತ್ತೆ ಪುನರಾವರ್ತನೆ ಮಾಡಲು ತೀರ್ಮಾನಿಸಲಾಗಿದೆ. ಪಕ್ಷದ ಕಾರ್ಯಕರ್ತರು, ಮುಖಂಡರು, ಶಾಸಕರ ವಿಶ್ವಾಸಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಎಲ್ಲವನ್ನೂ ತೀರ್ಮಾನ ಮಾಡುತ್ತೇನೆ. ಜನರ, ನಾಡಿನ ರಕ್ಷಣೆ ಉದ್ದೇಶದಿಂದ ಹೊಸ ಅಧ್ಯಾಯ ಪ್ರಾರಂಭಿಸುತ್ತಿದ್ದೇವೆ ಎಂದು ಹೇಳಿದರು.
ಸೀಟು ಹಂಚಿಕೆ ಎಚ್‌ಡಿಕೆ ಹೊಣೆ:
ದೇವೇಗೌಡ ಮಾತನಾಡಿ, ಕೆಲವು ದಿನಗಳ ಹಿಂದೆ ನಾನು ದೆಹಲಿಗೆ ಹೋಗಿದ್ದು ನಿಜ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದೆ. ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರ ಸಂಬಂಧ ಚರ್ಚೆಯಾಗಿದೆ. ಈ ವಿಚಾರವಾಗಿ ಕುಮಾರಸ್ವಾಮಿ ಅವರು ಅಂತಿಮವಾಗಿ ಎಷ್ಟುಸೀಟು ಹಂಚಿಕೆ ಮಾಡಿಕೊಳ್ಳಬೇಕಿದೆ ಎಂಬುದನ್ನು ಬಿಜೆಪಿ ನಾಯಕರ ಜತೆ ಕುಳಿತು ಚರ್ಚೆ ನಡೆಸಿ ತೀರ್ಮಾನಿಸಲಿದ್ದಾರೆ ಎಂದರು.
ಕುಮಾರಸ್ವಾಮಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿಗೆ ವಿಶೇಷ ಪ್ರೀತಿ-ವಿಶ್ವಾಸ ಇದೆ. 2018ರಲ್ಲಿಯೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಹೊಸದಾಗಿ ಪ್ರಮಾಣ ಸ್ವೀಕಾರ ಮಾಡಿ ಎಂದಿದ್ದರು. ಬಿಹಾರದ ನಿತೀಶ್ ಕುಮಾರ್ ಅವರಂತೆ ನಿಮ್ಮನ್ನೂ ದೀರ್ಘಾವಧಿ ಮುಖ್ಯಮಂತ್ರಿಯನ್ನಾಗಿ ಮಾಡುವುದು ನನ್ನ ಜವಾಬ್ದಾರಿ ಎಂದು ಹೇಳಿದ್ದರು. ಆದರೆ, ನನ್ನನ್ನು ನೋಡಿಕೊಂಡು ಕುಮಾರಸ್ವಾಮಿ ಅವರು ಮೋದಿ ಅವರ ಆಹ್ವಾನವನ್ನು ನಯವಾಗಿಯೇ ತಿರಸ್ಕರಿದ್ದರು ಎಂದು ಸ್ಮರಿಸಿದರು.
ನನ್ನ ಪಕ್ಷವನ್ನು ಉಳಿಸಲು ಮೋದಿಯವರು ಅವರಾಗಿಯೇ ವಿಶ್ವಾಸದಿಂದ ಭೇಟಿ ಮಾಡಲು ಮುಂದೆ ಬಂದಾಗ ಅವರ ಜತೆ ಮಾತನಾಡಿದ್ದು ಸತ್ಯ. ಆದರೆ, ನಾವು ಯಾವ ಸೀಟನ್ನು ಕೇಳಲಿಲ್ಲ. ಹೊಸ ಮೈತ್ರಿ ಮಾತುಕತೆಯ ನೈತಿಕತೆ ಬಗ್ಗೆ ಕೆಲವರು ಮಾತನಾಡುತ್ತಿದ್ದಾರೆ. ನಾನು ದೆಹಲಿಯಲ್ಲಿ ಯಾರನ್ನು ಭೇಟಿ ಮಾಡಿದೆ ಎನ್ನುವುದರಲ್ಲಿ ರಹಸ್ಯ ಏನೂ ಇಲ್ಲ. ಆದರೆ, ನೈತಿಕತೆ ಬಗ್ಗೆ ಮಾತನಾಡುವ ರಾಜ್ಯದ ಯಾವ ನಾಯಕರಿಗೆ ಅದೆಷ್ಟುನೈತಿಕತೆ ಇದೆ ಎಂಬುದನ್ನು ವಿಶ್ಲೇಷಣೆ ಮಾಡಬಲ್ಲೆ. ಆದರೆ, ವ್ಯಕ್ತಿಗತ ನಿಂದನೆ ಮಾಡುವುದು ನನ್ನ ಉದ್ದೇಶ ಅಲ್ಲ, ಈ 91ನೇ ವಯಸ್ಸಿನಲ್ಲಿ ಅಂತಹ ನಿಂದನೆಯಿಂದ ನಾನೇನು ಸಾಧಿಸುತ್ತೇನೆ ಎಂದು ಹೇಳಿದರು.
ಬಿಜೆಪಿ-ಜೆಡಿಎಸ್ ಮೈತ್ರಿಗೆ ನಮ್ಮ ತಕರಾರು ಇಲ್ಲ: ಸಚಿವ ಪರಮೇಶ್ವರ್
ಸಮಾವೇಶದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ, ಮಾಜಿ ಸಚಿವರಾದ ಎಚ್.ಡಿ.ರೇವಣ್ಣ, ಬಂಡೆಪ್ಪ ಕಾಶೆಂಪೂರ, ವೆಂಕಟರಾವ್ ನಾಡಗೌಡ, ಅಲ್ಕೋಡ್ ಹನುಮಂತಪ್ಪ, ಕೋರ್ ಕಮಿಟಿ ಸಂಚಾಲಕ ವೈ.ಎಸ್.ವಿ.ದತ್ತಾ ಸೇರಿದಂತೆ ಇತರರು ಭಾಗವಹಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.