ರಾಜ್ಯ ಕಾಂಗ್ರೆಸ್‌ಗೆ ಬಿಜೆಪಿ ಹಾಗೂ ಜೆಡಿಎಸ್‌ನಿಂದ ಇನ್ನೂ ಅನೇಕರು ಬರುತ್ತಾರೆ. ಬಿಜೆಪಿ ಬಿಟ್ಟು ಹೋಗದಂತೆ ತಡೆಯಲು ಆದಾಯ ತೆರಿಗೆ (ಐಟಿ) ದಾಳಿ ಮಾಡಿಸಲಾಗುತ್ತಿದೆ.
ಬೆಂಗಳೂರು (ಮಾ.24): ರಾಜ್ಯ ಕಾಂಗ್ರೆಸ್‌ಗೆ ಬಿಜೆಪಿ ಹಾಗೂ ಜೆಡಿಎಸ್‌ನಿಂದ ಇನ್ನೂ ಅನೇಕರು ಬರುತ್ತಾರೆ. ಬಿಜೆಪಿ ಬಿಟ್ಟು ಹೋಗದಂತೆ ತಡೆಯಲು ಆದಾಯ ತೆರಿಗೆ (ಐಟಿ) ದಾಳಿ ಮಾಡಿಸಲಾಗುತ್ತಿದೆ. ಸ್ವತಃ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಕುಟುಂಬದವರನ್ನು ಹೆದರಿಸಿ ನಿಯಂತ್ರಿಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪೂರ್ಣಿಮಾ ಶ್ರೀನಿವಾಸ್ ಹಾಗೂ ನಾರಾಯಣ ಗೌಡ ಅವರನ್ನು ಕರೆದು ಮಾತನಾಡಿದ್ದೇನೆ. ಅವರು ಕಾಂಗ್ರೆಸ್‌ಗೆ ಹೋಗಲ್ಲ’ ಎಂಬ ಬಿ.ಎಸ್. ಯಡಿಯೂರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.
ಈ ನಾಯಕರುಗಳು (ಪೂರ್ಣಿಮಾ ಶ್ರೀನಿವಾಸ್, ನಾರಾಯಣಗೌಡ) ಕಾಂಗ್ರೆಸ್ ಸೇರುತ್ತಿದ್ದಾರೆ ಎಂದು ಅವರಿಗೆ ಹೇಳಿದವರಾರು? ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿನೋಡಿಕೊಳ್ಳುತ್ತಿರುವುದೇಕೆ? ಅವರು ಏನು ಮಾಡಿಕೊಳ್ಳುತ್ತಿದ್ದಾರೋ ಗೊತ್ತಿಲ್ಲ. ಅವರ ಪಕ್ಷದವರು ಬಿಟ್ಟು ಹೋಗುತ್ತಾರೆ ಎಂಬ ಭಯದಲ್ಲಿ ಐ.ಟಿ.-ಇ.ಡಿ. ದಾಳಿ ಮಾಡಿಸುತ್ತಿದ್ದಾರೆ. ಬಿಜೆಪಿ ಸಚಿವರುಗಳು ಹಣ ಮಾಡಿಲ್ಲವೇ? ಅವರ ಮನೆ ಮೇಲೆ ದಾಳಿ ಏಕಿಲ್ಲ? ಎಂದು ಪ್ರಶ್ನಿಸಿದರು. ಇನ್ನು ಯಡಿಯೂರಪ್ಪ ಹಾಗೂ ಅವರ ಕುಟುಂಬದವರನ್ನು ನಿಯಂತ್ರಿಸಲು ಕೆಲವು ಅಧಿಕಾರಿಗಳನ್ನು ಬಿಟ್ಟಿದ್ದಾರೆ. ಅವರ ಮೂಲಕ ಯಡಿಯೂರಪ್ಪ ಅವರನ್ನು ನಿಯಂತ್ರಿಸಲಾಗುತ್ತಿದೆ.
ಧ್ರುವನಾರಾಯಣ ಪುತ್ರಗೆ ಅನುಕಂಪ ‘ಕಾಂಗ್ರೆಸ್’ ಹಿಡಿಯುವುದೇ?: ಬಿಜೆಪಿಯಿಂದ ಹರ್ಷವರ್ಧನ್ ಸ್ಪರ್ಧೆ
ಅವರನ್ನೂ ಹೆದರಿಸುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿಯೇ ಪಕ್ಷ ಬಿಟ್ಟು ಹೋಗದಂತೆ ಕರೆದು ಮಾತನಾಡುತ್ತಿದ್ದಾರೆ ಎಂದು ‘ಹೊಸ ಬಾಂಬ್’ ಸಿಡಿಸಿದರು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಪಕ್ಷ ತೊರೆದಿದ್ದವರು ಮತ್ತೆ ಬರುತ್ತಿರುವ ಬಗೆಗಿನ ಪ್ರಶ್ನೆಗೆ, ‘ಇನ್ನೂ ಕೆಲವು ಮಂದಿ ಪಕ್ಷಕ್ಕೆ ಆಗಮಿಸುತ್ತಿದ್ದಾರೆ. ಈಗ ಅವರ ಹೆಸರು ಪ್ರಸ್ತಾಪ ಮಾಡುವುದಿಲ್ಲ. ಬಿಜೆಪಿಯವರು ಕೆಲವರ ಮೇಲೆ ಅನುಮಾನ ಪಡುತ್ತಾ ಅವರಿಗೆ ಕಿರುಕುಳ ನೀಡುತ್ತಿದ್ದಾರೆ. ನಾವು ಯಾರನ್ನೂ ಆಹ್ವಾನಿಸುತ್ತಿಲ್ಲ. ಸ್ವಇಚ್ಛೆಯಿಂದ ಯಾರು ಪಕ್ಷ ಸೇರಲು ಬಯಸುತ್ತಾರೋ ಅವರನ್ನು ನಾವು ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ’ ಎಂದು ಹೇಳಿದರು.
ನೀತಿ ಸಂಹಿತೆ ಜಾರಿಯಾಗಬೇಕಿತ್ತು: ರಾಜ್ಯದಲ್ಲಿ ಈ ವೇಳೆಗಾಗಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಬೇಕಿತ್ತು. ಆದರೆ ಸರ್ಕಾರಿ ಹಣದಲ್ಲಿ ನರೇಂದ್ರ ಮೋದಿ ಅವರ ಪ್ರಚಾರ ಮಾಡಲು, ಜಾಹೀರಾತು ನೀಡಲು ಚುನಾವಣಾ ದಿನಾಂಕ ಮುಂದಕ್ಕೆ ಹಾಕುತ್ತಿದ್ದಾರೆ. ಕಳೆದ ಚುನಾವಣೆ ಸಮಯದಲ್ಲಿ ಇಷ್ಟುಹೊತ್ತಿಗಾಗಲೇ ನೀತಿ ಸಂಹಿತೆ ಜಾರಿಯಾಗಿತ್ತು. ಬಿಜೆಪಿ ಕಾರ್ಯಕ್ರಮಗಳಿಗೆ ಜನ ಹೋಗುತ್ತಿಲ್ಲ. ಹೀಗಾಗಿ ಸರ್ಕಾರದ ದುಡ್ಡಲ್ಲಿ ಪ್ರಚಾರ ಮಾಡಿ, ಪಿಡಿಓ, ಸರ್ಕಾರಿ ಶಿಕ್ಷಕರು, ಹಾಲು ಒಕ್ಕೂಟಗಳ ಮೂಲಕ ಜನರನ್ನು ಕರೆಸಲು ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಈ ಸರ್ಕಾರದ ಅವಧಿ ಇನ್ನು 10 ರಿಂದ 15 ದಿನ ಮಾತ್ರ ಎಂದರು.
ಅಮಾವಾಸ್ಯೆ ಬಳಿಕ ಚಂದ್ರ ಉದಯವಾಗಬೇಕಲ್ಲವೇ?: ಪಟ್ಟಿ ಬಿಡುಗಡೆ ಬಗ್ಗೆ ಡಿಕೆಶಿ ಬುಧವಾರ ಮಲ್ಲಿಕಾರ್ಜುನ ಖರ್ಗೆ ಅವರು ದೆಹಲಿಗೆ ಮರಳಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಅವರು ತೀರ್ಮಾನ ಮಾಡುತ್ತಾರೆ. ಅಮಾವಾಸ್ಯೆ ನಂತರ ಚಂದ್ರ ಉದಯವಾಗಬೇಕಲ್ಲವೇ? ಎಂದು ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಬಿಡುಗಡೆ ಕುರಿತು ಮಾರ್ಮಿಕವಾಗಿ ನುಡಿದರು. ಯಾವುದೇ ಕ್ಷೇತ್ರದಲ್ಲಿ ಗೊಂದಲವಿಲ್ಲ. ನಾವು ಎಲ್ಲರನ್ನೂ ಕರೆದು ಮಾತನಾಡಿ, ರಾಜಿ ಮಾಡುತ್ತೇವೆ. ಎಲ್ಲರಿಗೂ ನಾವು ಅಧಿಕಾರ ಹಂಚುತ್ತೇವೆ. ಎಲ್ಲರಿಗೂ ಸಮಬಾಳು, ಸಮಪಾಲು ನೀಡುತ್ತೇವೆ. ಸಿದ್ದರಾಮಯ್ಯ ಅವರ ಕ್ಷೇತ್ರದ ಬಗ್ಗೆಯೂ ಗೊಂದಲವಿಲ್ಲ ಎಂದು ತಿಳಿಸಿದರು.
ಸಿಎಂ ಸ್ಥಾನದ ಆಮಿಷ ತೋರಿದ್ರೂ ಬಿಜೆಪಿ ತೊರೆಯಲ್ಲ: ಮಾಲೀಕಯ್ಯ ಗುತ್ತೇದಾರ್
ಪ್ರಣಾಳಿಕೆ ಬಗ್ಗೆ ಚರ್ಚೆಗೆ ಬರಲಿ: ಕಾಂಗ್ರೆಸ್ ಪಕ್ಷ ಗ್ಯಾರಂಟಿ ಯೋಜನೆಗಳಿಗೆ ಬದ್ಧವಾಗಿದೆ. ಇದನ್ನು ಹೇಗೆ ಅನುಷ್ಠಾನಗೊಳಿಸುತ್ತೇವೆ ಎಂಬ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ನಳೀನ್‌ಕುಮಾರ್ ಕಟೀಲ್ ಬಹಿರಂಗ ವೇದಿಕೆಯಲ್ಲಿ ಚರ್ಚೆಗೆ ಬರಲಿ. ಎಲ್ಲವನ್ನೂ ಚರ್ಚೆ ನಡೆಸಲು ನಾವು ಸಿದ್ಧರಿದ್ದೇವೆ ಎಂದು ಡಿ.ಕೆ. ಶಿವಕುಮಾರ್ ಸವಾಲು ಹಾಕಿದರು.