ಬಿಜೆಪಿ ಸುಳ್ಳಿನ ಕಾರ್ಖಾನೆ ಬಿಜೆಪಿ ಮರಿನಾಯಕನೊಬ್ಬ ನನ್ನ ಮೇಲೆ ದುರುದ್ದೇಶಪೂರಿತವಾಗಿ ಆರೋಪ ಮಾಡಿದ್ದಾನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸರಣಿ ಟ್ವೀಟ್ ಮಾಡುವ ಮೂಲಕ ಕಿಡಿಕಾರಿದ್ದಾರೆ. ಲಾಲ್‌ಬಾಗ್ ಸಿದ್ಧಾಪುರದ ಜಮೀನುಗಳ ಕುರಿತ ಸುಳ್ಳಿನ ಕಂತೆಗಳ ಮೂಲಕ ನನ್ನ ಚಾರಿತ್ರ್ಯಹನನ ಮಾಡಲು ಪ್ರಯತ್ನಿಸುತ್ತಿರುವ ಬಿಜೆಪಿಯ ಮರಿನಾಯಕನ ವಿರುದ್ಧ ತಕ್ಷಣ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಬೆಂಗಳೂರು (ಅ.17) : ಲಾಲ್‌ಬಾಗ್ ಸಿದ್ಧಾಪುರದ ಜಮೀನುಗಳ ಕುರಿತ ಸುಳ್ಳಿನ ಕಂತೆಗಳ ಮೂಲಕ ನನ್ನ ಚಾರಿತ್ರ್ಯಹನನ ಮಾಡಲು ಪ್ರಯತ್ನಿಸುತ್ತಿರುವ ಬಿಜೆಪಿಯ ಮರಿನಾಯಕನ ವಿರುದ್ಧ ತಕ್ಷಣ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್(Tweet) ಮಾಡಿರುವ ಸಿದ್ದರಾಮಯ್ಯ(Siddaramaiah)ನವರು, ಭೂ ಹಗರಣಗಳನ್ನು ಬಯಲಿಗೆಳೆಯುವ ಪ್ರಾಮಾಣಿಕವಾದ ಉದ್ದೇಶವನ್ನು ರಾಜ್ಯ ಬಿಜೆಪಿ ಸರ್ಕಾರ ಹೊಂದಿದ್ದರೆ 2008 ರಿಂದ ಇದುವರೆಗೆ ಬೆಂಗಳೂರು ಮತ್ತು ರಾಜ್ಯದ ಬೇರೆ ನಗರಗಳಲ್ಲಿನ ಜಮೀನು ಉಪಯೋಗ ಬದಲಾವಣೆಯ ಪ್ರತಿ ಪ್ರಕರಣದ ಮಾಹಿತಿಯನ್ನೂ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಲಾಲ್‌ಬಾಗ್ ಸಿದ್ಧಾಪುರ ಗ್ರಾಮದ ಸರ್ವೆನಂ 27/1, 28/4, 5,6 ರಲ್ಲಿನ 2 ಎಕರೆ 39.5 ಗುಂಟೆ ಜಮೀನನ್ನು ನಾನು ಡಿನೋಟಿಫಿಕೇಷನ್/ರೀಡೂ ಮಾಡಿದ್ದೇನೆ ಎಂಬ
ರಾಜ್ಯ ಬಿಜೆಪಿ ನಾಯಕರ ಆರೋಪ ಸಂಪೂರ್ಣ ಸುಳ್ಳು ಮತ್ತು ದುರುದ್ದೇಶಪೂರಿತವಾಗಿದೆ. ನನ್ನ ವಿರುದ್ಧದ ಆರೋಪದಲ್ಲಿ ಉಲ್ಲೇಖಿಸಿರುವ ಜಮೀನುಗಳನ್ನು ಭೂ ಸ್ವಾಧೀನ ಪಡಿಸಿಕೊಂಡಿದ್ದು 1948 ರಲ್ಲಿ. ಆ ಜಮೀನುಗಳನ್ನು ಭೂಸ್ವಾಧೀನದಿಂದ ಕೈ ಬಿಟ್ಟು ‘ದಿ ಮೈಸೂರು ಗೆಜೆಟ್’ನಲ್ಲಿ ಪ್ರಕಟವಾಗಿದ್ದು 11/2/1954 ಮತ್ತು 28/12/1954ರಲ್ಲಿ. ಇದರಲ್ಲಿ ನಮ್ಮ ಸರ್ಕಾರದ ಪಾತ್ರ ಏನಿದೆ? ಎಂದು ಪ್ರಶ್ನಿಸಿದ್ದಾರೆ.
1954 ರಲ್ಲಿ ಡಿನೋಟಿಫಿಕೇಷನ್ ಮಾಡಿದ್ದ ಈ ಜಮೀನುಗಳನ್ನು 2007 ರಲ್ಲಿ ನಗರದ ಮಾಸ್ಟರ್ ಪ್ಲಾನ್ ಮಾಡುವಾಗ ಭೂ ಸ್ವಾಧೀನ ಮಾಡಿಕೊಂಡು ಭೂಮಾಲೀಕರಿಗೆ ಪರಿಹಾರ ಕೊಡದೆ ಪಾರ್ಕ್ ಗೆಂದು ಗುರ್ತಿಸಲಾಗಿದೆ. 2007ರಲ್ಲಿ ಯಾವ ಪಕ್ಷದ ಸರ್ಕಾರ ಇತ್ತು ಸದರಿ ಜಮೀನನ್ನು ಭೂ ಸ್ವಾಧೀನ ಪಡಿಸಿಕೊಂಡು ಪಾರ್ಕ್ ಮಾಡದೆ ವಸತಿ ಉದ್ದೇಶಕ್ಕಾಗಿ ಪರಿವರ್ತನೆ ಮಾಡಬಹುದೆಂದು 18/01/2013 ರ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಆಗ ಯಾವ ಪಕ್ಷದ ಸರ್ಕಾರ ಇತ್ತು ಎಂದು ಪ್ರಶ್ನಿಸಿದ್ದಾರೆ.
ನಮ್ಮ ಸರ್ಕಾರವು ಈ ಜಮೀನುಗಳಿಗೆ ನೀಡಿರುವ ಭೂ ಉಪಯೋಗವನ್ನು ಬದಲಾಯಿಸಿಕೊಟ್ಟಿದ್ದರ ಬಗ್ಗೆ ಕೆಲವರು ಅಪಸ್ವರ ಎತ್ತಿದ ಕಾರಣಕ್ಕೆ ಮತ್ತೊಮ್ಮೆ ಮರುಪರಿಶೀಲಿಸಿ ದಿನಾಂಕ 13/3/2015 ರಂದು ವಸತಿ ಉದ್ದೇಶಕ್ಕೆ ನೀಡಿದ್ದ ಅನುಮತಿಯನ್ನು ಹಿಂಪಡೆಯಲಾಗಿತ್ತು. ಸರ್ಕಾರ ಭೂಬಳಕೆ ಬದಲಾವಣೆಯನ್ನು ಹಿಂಪಡೆದ ಕಾರಣಕ್ಕೆ ಸಲ್ಲಿಸಲಾಗಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್ ಭೂಬಳಕೆ ಬದಲಾವಣೆಯ ತೀರ್ಮಾನವನ್ನು ರದ್ದು ಮಾಡಿತ್ತು. ಇದಕ್ಕೆ ಸಂಬಂಧಿಸಿದ ರಿಟ್ ಮೇಲ್ಮನವಿಯನ್ನೂ ವಜಾ ಮಾಡಿತ್ತು. ಈಗ ಪ್ರಕರಣ ಸುಪ್ರೀಂಕೋರ್ಟ್ ನಲ್ಲಿದೆ. ಇದರಲ್ಲಿ ನನ್ನ ಪಾತ್ರ ಏನಿದೆ? ಆ ಮರಿನಾಯಕ ನನ್ನ ವಿರುದ್ದ ದುರುದ್ದೇಶಪೂರಕವಾಗಿ ಆರೋಪಿಸಿದ್ದಾನೆ ಎಂದು ಟ್ವೀಟ್ ಮೂಲಕ ಕಿಡಿಕಾರಿದ ಸಿದ್ದರಾಮಯ್ಯ.
'ಬಿಎಸ್‌ವೈ ಪ್ರಮಾಣ: ಸಂವಿಧಾನದ ಮೇಲೆ ರಾಷ್ಟ್ರೀಯ ಬಿಜೆಪಿಗಿಲ್ಲ ನಂಬಿಕೆ'
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 3 ವರ್ಷ 3 ತಿಂಗಳಾಯಿತು. ಆದರೆ ಇದುವರೆಗೂ ಕೂಡ ಸಿ.ಡಿ.ಪಿ ಗೆ ಅನುಮೋದನೆ ನೀಡಿಲ್ಲ. ಸಿ.ಡಿ.ಪಿ ಯನ್ನು ಅಂತಿಮಗೊಳಿಸದ ಕಾರಣ ನಗರದ ಬೆಳವಣಿಗೆ ಅಡ್ಡಾದಿಡ್ಡಿಯಾಗಿದೆ. ಆದ್ದರಿಂದ ಕೂಡಲೆ ಸಿ.ಡಿ.ಪಿ ಯನ್ನು ಅಂತಿಮಗೊಳಿಸಿ ಗೆಜೆಟ್ ಹೊರಡಿಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.