ಕೋಲಾರ ಕ್ಷೇತ್ರ ಅಧಿಕೃತವಾಗಿ ಜೆಡಿಎಸ್‌ಗೆ ಬಿಟ್ಟುಕೊಟ್ಟ ಬಿಜೆಪಿ; ದೊಡ್ಡಗೌಡ್ರಿಗೆ ಗುನ್ನಾ ಇಟ್ಟ ಪ್ರೀತಂಗೌಡರ ಶಿಷ್ಯ!

By Sathish Kumar KH  |  First Published Mar 23, 2024, 11:46 AM IST

ಹಾಸನ, ಮಂಡ್ಯ ಹಾಗೂ ಕೋಲಾರ ಕ್ಷೇತ್ರವನ್ನು ಅಧಿಕೃತವಾಗಿ ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದೇವೆ. ನಮ್ಮ ಕಾರ್ಯಕರ್ತರು ಶ್ರದ್ಧೆಯಿಂದ ಕೆಲಸ ಮಾಡಬೇಕು ಎಂದು ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ರಾಧಾ ಮೋಹನ್‌ದಾಸ್ ಅಗರ್‌ವಾಲ್ ತಿಳಿಸಿದರು.


ಬೆಂಗಳೂರು (ಮಾ.23): ರಾಜ್ಯದಲ್ಲಿ ಬಿಜೆಪಿಯ 25 ಲೋಕಸಭಾ ಕ್ಷೇತ್ರಗಳ ಟಿಕೆಟ್ ಹಂಚಿಕೆ ಪ್ರಕ್ರಿಯೆಯಲ್ಲಿ ಮೈತ್ರಿಪಕ್ಷ ಜೆಡಿಎಸ್‌ ಎಲ್ಲಿಯೂ ಹಸ್ತಕ್ಷೇಪ ಮಾಡಿಲ್ಲ. ಈಗ ಕೋಲಾರ ಲೋಕಸಭಾ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಲಾಗಿದ್ದು, ನಮ್ಮ ಕಾರ್ಯಕರ್ತರು ಪೂರ್ತಿ ಶ್ರದ್ಧೆ, ಮನಪರ್ವಕವಾಗಿ ಕೆಲಸ ಮಾಡಬೇಕು ಎಂದು ಬಿಜೆಪಿ  ಲೋಕಸಭಾ ಚುನಾವಣಾ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರವಾಲ್ ಮಾಹಿತಿ ನೀಡಿದ್ದಾರೆ. ಮತ್ತೊಂದೆಡೆ ಜೆಡಿಎಸ್‌ ಭದ್ರಕೋಟೆ ಆಗಿರುವ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮೈತ್ರಿಗೆ ಬಂಡಾಯವಾಗಿ ಸ್ಪರ್ಧೆ ಮಾಡುವುದಕ್ಕೆ ಕಿರಣ್ ಕುಮಾರ್ ಸಿದ್ಧವಾಗಿದ್ದಾರೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರಿನ ಅರಮನೆ ಮೈದಾನದ ವೃಕ್ಷ ಸಭಾಂಗಣದಲ್ಲಿ ನಡೆಯುತ್ತಿರುವ ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ರಾಜ್ಯ ಮಟ್ಟದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಕೋಲಾರ, ಮಂಡ್ಯ ಹಾಗೂ ಹಾಸನ ಲೋಕಸಭಾ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡಲಾಗಿದೆ. ಈ ಲೋಕಸಭಾ ಕ್ಷೇತ್ರಗಳಲ್ಲಿ ನಮ್ಮ ಕಾರ್ಯಕರ್ತರು ಪೂರ್ತಿ ಶ್ರದ್ಧೆ ಹಾಗೂ ಮನಪರ್ವಕವಾಗಿ ಕೆಲಸ ಮಾಡಬೇಕು. ಅಲ್ಲಿ ಯಾರು ಅಭ್ಯರ್ಥಿ ಎನ್ನೋದು ಮುಖ್ಯ ಅಲ್ಲ. ಮನಪೂರ್ವಕವಾಗಿ ಕೆಲಸ ಮಾಡಿ ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಬೇಕು ಎಂದು ತಿಳಿಸಿದರು.

Tap to resize

Latest Videos

ಪ್ರಧಾನಿ ಮೋದಿ ಹಿಟ್ಲರ್ ರೀತಿ ಸರ್ವಾಧಿಕಾರಿ: ಸಿಎಂ ಸಿದ್ದರಾಮಯ್ಯ

ಮುಂದುವರೆದು, ರಾಜ್ಯದಲ್ಲಿ 28 ಕ್ಷೇತ್ರಗಳ ಪೈಕಿ 25 ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಜೆಡಿಎಸ್ ಎಲ್ಲೂ ಹಸ್ತಕ್ಷೇಪ ಮಾಡಿಲ್ಲ. ಹೀಗಾಗಿ, ಅವರಿಗೆ ಹಂಚಿಕೆ ಮಾಡಲಾದ ಕ್ಷೇತ್ರಗಳಲ್ಲಿಯೂ ಯಾರೂ ಕೂಡ ಹಸ್ತಕ್ಷೇಪ ಮಾಡಬಾರದು. ರಾಜ್ಯದಲ್ಲಿ ಜೆಡಿಎಸ್‌ಗೆ ಮೂರು ಕ್ಷೇತ್ರಗಳು (ಹಾಸನ, ಮಂಡ್ಯ ಹಾಗೂ ಕೋಲಾರ) ಬಿಟ್ಟು ಕೊಟ್ಟಿದ್ದೇವೆ ಎಂದು ಮಾಹಿತಿ ನೀಡಿದರು. ಈ ಕಾರ್ಯಾಗಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ‌, ಶಾಸಕಾಂಗ ಪಕ್ಷದ ನಾಯಕ ಆರ್. ಅಶೋಕ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್, ಹಾಸನದ ಪ್ರೀತಮ್ ಗೌಡ, ವಿಧಾನ ಪರಿಷತ್ ಸದಸ್ಯ ಭಾರತಿ ಶೆಟ್ಟಿ, ಕೇಸವ ಪ್ರಸಾದ್ ಉಪಸ್ಥಿತರಿದ್ದರು.

ಮತ್ತೊಂದೆಡೆ ಹಾಸನ ಮೈತ್ರಿಯಲ್ಲಿ ಬಂಡಾಯದ ಬಿಸಿ:  ಹೌದು, ರಾಜ್ಯದಲ್ಲಿ ಜೆಡಿಎಸ್ ಭದ್ರಕೋಟೆಯಾಗಿರುವ ಹಾಸನ ಲೋಕಸಭಾ ಕ್ಷೇತ್ರವನ್ನು ಎನ್‌ಡಿಎ ಮೈತ್ರಿಯಿಂದ ಜೆಡಿಎಸ್‌ಗೆ ಬಿಟ್ಟುಕೊಟ್ಟಿದೆ. ಆದರೆ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಪ್ರೀತಂ ಗೌಡ ಅವರ ಆಪ್ತ ಹೆಚ್.ಪಿ. ಕಿರಣ್ ಕುಮಾರ್ ಹಾಸನದಲ್ಲಿ ಮೈತ್ರಿ ಅಭ್ಯರ್ಥಿಯ ವಿರುದ್ಧ ಬಂಡಾಯವಾಗಿ ಸ್ಪರ್ಧೆ ಮಾಡಲು ಸಿದ್ಧತೆ ಮಾಡಿದ್ದಾರೆ. ಇದರಿಂದ ಹಾಸನದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಡುವಿನ ಅಂತಃ ಕಲಹ ಬೀದಿಗೆ ಬಂದಿದೆ. ಜೆಡಿಎಸ್ ನಾಯಕರಿಗೆ ತಿರುಗೇಟು ಕೊಡಲು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ಅವರ ತಂಡ ಮುಂದಾಗಿದೆ. ಜೆಡಿಎಸ್ ಅಭ್ಯರ್ಥಿಗೆ ಪರ್ಯಾಯವಾಗಿ ಬಿಜೆಪಿ ಟಿಕೆಟ್ ಆಕಾಂಕ್ಷಿ ಅಖಾಡಕ್ಕಿಳಿದಿದ್ದಾರೆ. 

ನಾನು ರಾಜಕಾರಣಿಯಲ್ಲ, ರಾಷ್ಟ್ರಕಾರಣಿ: ಡಾ.ಸಿ.ಎನ್‌.ಮಂಜುನಾಥ್

ಹಾಸನದಲ್ಲಿ ಅಧಿಕೃತವಾಗಿ ಜಿಲ್ಲಾಮಟ್ಟದಲ್ಲಿ ಮೈತ್ರಿ ಮಾತುಕತೆ ನಡೆಯದ ಹಿನ್ನೆಲೆಯಲ್ಲಿ ತಾನೇ ಬಿಜೆಪಿ ಅಭ್ಯರ್ಥಿ ಎಂದು ಬಿಜೆಪಿ ರಾಜ್ಯ ಪ್ರಧಾನಕಾರ್ಯದರ್ಶಿ ಪ್ರೀತಂಗೌಡರ ಅತ್ಯಾಪ್ತ ಹೆಚ್.ಪಿ. ಕಿರಣ್ ಕುಮಾರ್ ಅವರು ನಾಮಪತ್ರ ಅರ್ಜಿಗೆ ಪೂಜೆ ಸಲ್ಲಿಸಿ ಪ್ರಚಾರ ಆರಂಭಿಸಿದ್ದಾರೆ. ಕಿರಣ್ ಕುಮಾರ್ ಇಂದು ತಮ್ಮ ಬೆಂಬಲಿಗರ ಜೊತೆ ಹಾಸನದ ಸಿದ್ದೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಕೆ ಮಾಡಿದ್ದಾರೆ. ಜೆಡಿಎಸ್ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ. ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ಅವರು ಜಿಲ್ಲೆಯ ಪ್ರಭಾವಿ ನಾಯಕ ಪ್ರೀತಂಗೌಡರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಪ್ರಚಾರ ಶುರುಮಾಡಿದ್ದಾರೆ. ಬಿಜೆಪಿ ನಾಯಕರು ಜೆಡಿಎಸ್ ನಾಯಕರ ನಡೆಗೆ ತಿರುಗೇಟು ನೀಡಲು ಮುಂದಾಗಿದ್ದಾರೆ.

ದೇಶದ 18ನೇ ಲೋಕಸಭೆಗೆ ಏಪ್ರಿಲ್‌ 19 ರಿಂದ ಜೂನ್‌ 1 ರವರೆಗೆ 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಉತ್ತರ ಹಾಗೂ ದಕ್ಷಿಣ ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ.  ಮೊದಲ ಹಂತ ಏಪ್ರಿಲ್‌-26 (ಚಿತ್ರದುರ್ಗ, ಉಡುಪಿ-ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ಸೆಂಟ್ರಲ್​),  ಹಾಗೂ 2ನೇ ಹಂತದ ಮತದಾನ ಮೇ- 7 (ಶಿವಮೊಗ್ಗ, ದಾವಣಗೆರೆ, ಹಾವೇರಿ, ಉತ್ತರ ಕನ್ನಡ, ಬಳ್ಳಾರಿ, ಧಾರವಾಡ, ಕೊಪ್ಪಳ, ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ರಾಯಚೂರು, ಬಿಜಾಪುರ ಕಲಬುರಗಿ ಮತ್ತು  ಬೀದರ್‌) ರಂದು ನಡೆಯಲಿದೆ. ಫಲಿತಾಂಶ ಜೂನ್‌ 4ಕ್ಕೆ ಪ್ರಕಟವಾಗಲಿದೆ.

click me!