ತೆರಿಗೆ, ಬರ ಪರಿಹಾರ ವಿಚಾರದಲ್ಲಿ ಬಿಜೆಪಿಯಿಂದ ರಾಜ್ಯಕ್ಕೆ ಅನ್ಯಾಯ: ಸಚಿವ ಬೋಸರಾಜು

By Kannadaprabha NewsFirst Published Apr 14, 2024, 5:35 PM IST
Highlights

ತೆರಿಗೆ, ಬರ ಪರಿಹಾರ ಸೇರಿದಂತೆ ಹಲವಾರು ವಿಚಾರದಲ್ಲಿ ಮಲತಾಯಿ ಧೋರಣೆ ತೋರುತ್ತಿರುವ ಕೇಂದ್ರದ ಬಿಜೆಪಿ ಸರ್ಕಾರದಿಂದ ರಾಜ್ಯಕ್ಕೆ ತೀವ್ರ ಅನ್ಯಾಯವಾಗಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಎನ್.ಎಸ್.ಬೋಸರಾಜು ಆಕ್ರೋಶ ವ್ಯಕ್ತಪಡಿಸಿದರು.

ರಾಯಚೂರು (ಏ.14): ತೆರಿಗೆ, ಬರ ಪರಿಹಾರ ಸೇರಿದಂತೆ ಹಲವಾರು ವಿಚಾರದಲ್ಲಿ ಮಲತಾಯಿ ಧೋರಣೆ ತೋರುತ್ತಿರುವ ಕೇಂದ್ರದ ಬಿಜೆಪಿ ಸರ್ಕಾರದಿಂದ ರಾಜ್ಯಕ್ಕೆ ತೀವ್ರ ಅನ್ಯಾಯವಾಗಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಎನ್.ಎಸ್.ಬೋಸರಾಜು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳೀಯ ಖಾಸಗಿ ಹೋಟೆಲ್‌ನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಇತಿಹಾಸದಲ್ಲಿ ಯಾವ ಸರ್ಕಾರ ತೋರದ ರೀತಿಯಲ್ಲಿ ಬಿಜೆಪಿ ದ್ವೇಷದ ರಾಜಕೀಯ ಮಾಡುತಿದೆ. ಇದಕ್ಕೆ ಜನರು ಲೋಕಸಭಾ ಚುನಾವಣೆಯಲ್ಲಿ ಉತ್ತರ ನೀಡಲಿದ್ದಾರೆ ಎಂದರು.

ಪ್ರಸ್ತುತ ನಡೆಯುತ್ತಿರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ಸಾಕಷ್ಟು ಕೆಲಸ ಮಾಡಲಿವೆ. ಅವುಗಳೇ ಪಕ್ಷದ ಗೆಲುವಿಗೆ ಸಹಕಾರಿಯಾಗಲಿವೆ ಎಂದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಎ.ವಸಂತ ಕುಮಾರ ಮಾತನಾಡಿ, ಯಾವ ಕಾರಣಕ್ಕೆ ಮೋದಿ ಮುಖ ನೋಡಿ ವೋಟ್ ಹಾಕಬೇಕು ಎಂದು ಜನ ಪ್ರಶ್ನಿಸುತ್ತಿದ್ದಾರೆ. 10 ವರ್ಷದಲ್ಲಿ ನೀವೇನು ಮಾಡಿದ್ದೀರಿ ಎಂದು ಕೇಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಸೈದ್ಧಾಂತಿಕ ನೆಲೆಯಲ್ಲಿ ಚುನಾವಣೆ ಎದುರಿಸುತ್ತಿದ್ದೇವೆ. ಗ್ಯಾರಂಟಿಗಳಲ್ಲೆ ನಮ್ಮ ವಿಚಾರಗಳು ಅಡಗಿದೆ. ಲೋಕಸಭೆ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದೇವೆ. ಒಮ್ಮತದಿಂದ ಚುನಾವಣೆಯನ್ನು ಗೆಲ್ಲಲೇಬೇಕು ಎಂಬ ಸಂಕಲ್ಪದೊಂದಿಗೆ ಎಲ್ಲರೂ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್, ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಲು ಸಿದ್ಧರಾಗಿದ್ದೇವೆ. ಕಾರ್ಯಕರ್ತರು ಎದೆ ತಟ್ಟಿ ಮತ ಕೇಳುವ ರೀತಿಯಲ್ಲಿ ಗ್ಯಾರಂಟಿಗಳ ಅನುಷ್ಠಾನದ ಜತೆಗೆ ಅಭಿವೃದ್ಧಿ ಕೂಡ ಮಾಡಲಾಗಿದೆ. ಬಡವರಿಗೆ ನೀಡಿದ ಯೋಜನೆಗಳ ಬಗ್ಗೆ ಬಿಜೆಪಿಗೆ ಹೊಟ್ಟೆಕಿಚ್ಚಿದೆ. ಸಾಧನೆಗಳ ನೋಡಿ, ಸ್ಥಳೀಯ ಮುಖಂಡರ ನೋಡಿ ವೋಟು ಕೇಳಲು ಬಿಜೆಪಿಯವರಿಗೆ ಮುಖ ಇಲ್ಲ. ಮೋದಿ ಹೆಸರಲ್ಲಿ, ಧರ್ಮದ ಆಧಾರದಲ್ಲಿ ಮತ ಕೇಳುತ್ತಿದ್ದಾರೆ ಎಂದರು.

ಭಕ್ತರ ಹಣದಿಂದ ರಾಮಮಂದಿರ ಆಗಿದೆ, ಬಿಜೆಪಿ ಸರ್ಕಾರ ಕಟ್ಟಿದ್ದಲ್ಲ: ಆಯನೂರು ಮಂಜುನಾಥ್

ಪಕ್ಷದ ಅಭ್ಯರ್ಥಿ ಜಿ.ಕುಮಾರ ನಾಯಕ ಮಾತನಾಡಿ, ರಾಯಚೂರು ಯಾದಗಿರಿ ಜಿಲ್ಲೆಯಲ್ಲಿ ಶಿಕ್ಷಣ, ಆರೋಗ್ಯ ಸುಧಾರಣೆಗೆ ಒತ್ತು ನೀಡಲಾಗುವುದು. ಏಮ್ಸ್ ಕೇವಲ ಒಂದು ಅಧ್ಯಯನ ಕೇಂದ್ರವಾಗಿರದೆ ಗುಣಮಟ್ಟದ ಆಸ್ಪತ್ರೆಯೂ ಆಗಿದೆ. ಹೀಗಾಗಿ ಈ ಜಿಲ್ಲೆಯಲ್ಲಿ ಏಮ್ಸ್ ಸ್ಥಾಪನೆಗೆ ಆದ್ಯತೆ ನೀಡಲಾಗುವುದು. ಜನರ ಜತೆ ಸೌಹಾರ್ದಯುತವಾದ ಪಕ್ಷ. ನನ್ನ ಸೇವಾನುಭವ ವಿನಿಯೋಗಿಸಲು ಶ್ರಮಿಸಲಾಗುವುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ಮಾನ್ವಿ ಶಾಸಕ ಜಿ.ಹಂಪಯ್ಯ ನಾಯಕ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸವರಾಜ ಪಾಟೀಲ್ ಇಟಗಿ, ಮುಖಂಡರಾದ ಕೆ.ಶಾಂತಪ್ಪ, ಜಯಣ್ಣ, ಮಲ್ಲಿಕಾರ್ಜುನಗೌಡ ಸೇರಿ ಅನೇಕರಿದ್ದರು.

click me!