
ಚಿಕ್ಕಬಳ್ಳಾಪುರ (ಆ.21): ಹಲವು ಕಾರಣಗಳಿಂದ ಮುಂದೂಡಲಾಗಿದ್ದ ಜನೋತ್ಸವ ಕಾರ್ಯಕ್ರಮ ಬರುವ ಸೆಪ್ಪೆಂಬರ್ 8ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಆಯೋಜಿಸಲಾಗುವುದೆಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ಜಿಲ್ಲೆಯ ಶಿಡ್ಲಘಟ್ಟತಾಲೂಕಿನ ಸಾದಲಿಯಲ್ಲಿ ಶನಿವಾರ ಆರೋಗ್ಯ ಇಲಾಖೆಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೂಮಿ ಪೂಜೆ ನೆರವೇರಿಸಿದ ಮಾತನಾಡಿದ ಅವರು, ಸೆಪ್ಪೆಂಬರ್ 8ರಂದು ಜನೋತ್ಸವ ಆಯೋಜನೆಗೆ ಕೇಂದ್ರದ ನಮ್ಮ ಪಕ್ಷದ ವರಿಷ್ಠರು ಸೂಚಿಸಿದ್ದಾರೆಂದರು.
ಹಿಂದೂಗಳಂತೆ ವರ್ತಿಸಬೇಕು: ನಾವೆಲ್ಲರೂ ಹಿಂದುಗಳೇ ಎಂಬ ರಾಹುಲ್ ಗಾಂಧಿಯವರ ಹೇಳಿಕೆ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹಿಂದೂಗಳಾದವರು ಹಿಂದೂಗಳಂತೆ ನಡೆದುಕೊಳ್ಳಬೇಕು, ರಾಜಕೀಯ ದುರುದ್ಧೇಶಗಳಿಗೆ ಓಲೈಕೆ ಮಾಡುವುದು ಸರಿಯಲ್ಲ ಎಂದು ಹೇಳಿದರು. ಅಲ್ಲದೆ ಈ ದೇಶ ಬಹುಸಂಖ್ಯಾತ ಹಿಂದುಗಳಿರುವ ದೇಶವಾಗಿದೆ. ವಿಶ್ವದಲ್ಲಿ ಒಂದೇ ಒಂದು ಹಿಂದು ರಾಷ್ಟ್ರ ಭಾರತವಾಗಿದೆ, ಹಿಂದುಗಳನ್ನು ಕಡೆಗಣಿಸಬೇಡಿ, ನಿಮ್ಮ ರಾಜಕೀಯ ಲಾಭಕ್ಕಾಗಿ, ಅವರಿಗೆ ಕೊಡಬೇಕಾದ ಪ್ರಾತಿನಿದ್ಯ ಕೊಡಬೇಕು ಎಂಬುದಷ್ಟೇ ನಮ್ಮ ಆಗ್ರಹವಾಗಿದೆ ಎಂದು ಹೇಳಿದರು. ಹಿಂದು ಧರ್ಮ ಯಾರಪ್ಪನ ಆಸ್ತಿಯೂ ಅಲ್ಲ ಸಾವಿರಾರು ವರ್ಷಗಳ ಬಳುವಳಿಯ ಸನಾತನ ಧರ್ಮವಾಗಿದೆ. ಪೂರ್ವಿಕರು ಬಿಟ್ಟುಹೋಗಿರುವ ಆಶಯ, ಸಾಂಪ್ರದಾಯ ಉಳಿಸಿಕೊಂಡು ಹೋಗಬೇಕು ಎಂಬುದು ನಮ್ಮ ಆಶಯವಾಗಿದೆ ಎಂದರು.
ಕಾಂಗ್ರೆಸ್ ಲಿಂಗಾಯತರನ್ನು ಸಿಎಂ ಮಾಡಲಿ: ಸಚಿವ ಸುಧಾಕರ್
ಮೊಟ್ಟೆ ಎಸೆದವನು ಕಾಂಗ್ರೆಸ್ಸಿಗ: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆಎಸೆದ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಸಚಿವರು, ನಮ್ಮ ಪಕ್ಷದಲ್ಲಿ ಅಂತಹ ಜನ ಇಲ್ಲ ಎಂಬುದು ಮೊದಲೇ ತಿಳಿದಿತ್ತು. ಈಗ ಮೊಟ್ಟೆಎಸೆದವನೇ ಒಪ್ಪಿಕೊಂಡಿರುವಂತೆ ಕಾಂಗ್ರೆಸ್ ಕಾರ್ಯಕರ್ತನಾಗಿದ್ದಾನೆ. ವಿರೋಧಪಕ್ಷದ ನಾಯಕರು ಮತ್ತು ಕೆಪಿಸಿಸಿ ಅಧ್ಯಕ್ಷರು ಈಗ ಏನು ಹೇಳುತ್ತಾರೆ ಎಂಬುದನ್ನು ಕೇಳುವ ಕುತೂಹಲ ನಮಗೂ ಇದೆ ಎಂದರು. ಲಿಂಗಾಯಿತ ಧರ್ಮ ಒಡೆಯುವ ಕುರಿತು ಪ್ರತಿಕ್ರಿಯಿಸಿದ ಸಚಿವರು, ಯಾರದೋ ಮಾತು ಕೇಳಿ ಧರ್ಮ ಒಡೆಯುವ ಕೆಲಸಕ್ಕೆ ಸಿದ್ದರಾಮಯ್ಯ ಅವರು ಕೈ ಹಾಕಿದ್ದರು. ಹಾಗಾಗಿಯೇ ಪಶ್ಛಾತ್ತಾಪ ಪಟ್ಟಿರುವುದು, ವೀರಶೈವ, ಲಿಂಗಾಯತ ಧರ್ಮ ಒಡೆಯುವ ಸಾಹಸಕ್ಕೆ ಯಾರೂ ಮುಂದಾಗಿರಲಿಲ್ಲ, ಆ ಪ್ರಯೋಗ ಮಾಡಲು ಇವರು ಪ್ರಯತ್ನಿಸಿದ್ದರು ಈಗ ಪಶ್ಚಾತ್ತಾಪ ಪಟ್ಟಿದ್ದಾರೆ ಎಂದರು.
ವೈದ್ಯಕೀಯ ಕಾಲೇಜು ಕಟ್ಟಡ ಕಾಮಗಾರಿ ಪರಿಶೀಲಿಸಿದ ಆರೋಗ್ಯ ಸಚಿವ ಸುಧಾಕರ್
ಸಾರ್ವಕರ್ ಟೀಕಿಸುವರಿಗೆ ಇತಿಹಾಸ ಗೊತ್ತಿಲ್ಲ: ವೀರ ಸಾವರ್ಕರ್ ಅವರು ಸ್ವಾತಂತ್ರಕ್ಕಾಗಿ ಆದರ್ಶದ ಹೋರಾಟ ಮಾಡಿದ್ದಾರೆ ಎಂಬುದರಲ್ಲಿ ಯಾವುದೇ ಸಂದೇಹ ಇಲ್ಲ. ಇದರಲ್ಲಿ ಭಿನ್ನಾಭಿಪ್ರಾಯ ಇದ್ದರೆ, ಅಂತಹವರಿಗೆ ಈ ದೇಶದ ಸ್ವಾತಂತ್ರೃ ಹೋರಾಟದ ಇತಿಹಾಸ ತಿಳಿದಿರಲು ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯಗೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಟಾಂಗ್ ನೀಡಿದರು. ಚಿಕ್ಕಬಳ್ಳಾಪುರ ತಾಲೂಕಿನ ಅಡ್ಡಗಲ್ ಗ್ರಾಮದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸ್ವಾತಂತ್ರ್ಯದ ಇತಿಹಾಸ ಮತ್ತು ಸಾವರ್ಕರ್ ಅವರ ಬಗ್ಗೆ ತಿಳಿಯುವ ಆಸಕ್ತಿ ಇದ್ದರೆ, ಅಂತಹವರಿಗೆ ನನ್ನ ಪ್ರಾಯೋಜಕತ್ವದಲ್ಲಿ ಸಾವರ್ಕರ್ ಅವರ ಬದುಕಿನ ಕುರಿತು ಇರುವ ಪುಸ್ತಕಗಳನ್ನು ಕಳುಹಿಸುತ್ತೇನೆ. ಅವುಗಳನ್ನು ಓದಿದ ನಂತರ ಮಾತನಾಡಲಿ ಎಂದು ಸಚಿವರು ಸಲಹೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.