* ಚುನಾವಣಾ ವೇಳೆ ಭಿನ್ನಾಭಿಪ್ರಾಯ ಮರೆತ ಕಮಲ ಪಡೆ
* ಟಿಕೆಟ್ ಹಂಚಿಕೆಯಲ್ಲಿ ನಿರ್ಲಕ್ಷ್ಯ ತೋರಿದ ಕೈ ಮುಖಂಡರು
* ಬಿಜೆಪಿ ನಾಯಕರ ಚಾಣಾಕ್ಷ ನಡೆ
ಶಿವಕುಮಾರ ಕುಷ್ಟಗಿ
ಗದಗ(ಡಿ.31): ‘ಜೋರ್ ಸೆ ಜಟ್ಕಾ.. ಧೀರೇಸೆ ಲಗಿ’ ಈ ಹಿಂದಿ ಗಾದೆ ಮಾತು ಗದಗ- ಬೆಟಗೇರಿ ನಗರಸಭೆ(Gadag-Betageri City Municipal Council) ಫಲಿತಾಂಶ ಗಮನಿಸಿದಾಗ ಕಾಂಗ್ರೆಸ್‌ಗೆ(Congress) ಹೊಂದುತ್ತಿದೆ. ಆ ಪಕ್ಷದ ನಾಯಕರ ನಿರ್ಲಕ್ಷ್ಯದ ವರ್ತನೆಯಿಂದ ಕಾಂಗ್ರೆಸ್ ನಗರಸಭೆ ಅಧಿಕಾರದಿಂದ ದೂರ ಉಳಿಯುವಂತಾಯಿತು. ಬಿಜೆಪಿಯ(BJP) ‘ಮನೆಯೊಂದು ಮೂರು ಬಾಗಿಲು’ ಇದ್ದರೂ ಒಗ್ಗಟ್ಟು ಪ್ರದರ್ಶಿಸಿದ ಫಲವಾಗಿ ಹಿನ್ನೆಲೆ ಸ್ಪಷ್ಟ ಬಹುತಮದೊಂದಿಗೆ ನಗರಸಭೆ ಗದ್ದುಗೆ ಏರಿದೆ.
ಕಾಂಗ್ರೆಸ್ ನಿರ್ಲಕ್ಷ್ಯ:
ಕಾಂಗ್ರೆಸ್ ನಾಯಕರು ನಗರಸಭೆ ಚುನಾವಣೆಯ(Election) ಟಿಕೆಟ್ ಹಂಚಿಕೆ ವಿಷಯದಲ್ಲಿ ಸಾಕಷ್ಟು ನಿರ್ಲಕ್ಷ್ಯ ಮತ್ತು ಅನಗತ್ಯ ವಿಳಂಬ ತೋರಿದರು. ಪಕ್ಷಕ್ಕಾಗಿ ಶ್ರಮಿಸಿದವರನ್ನು ಹೊರತುಪಡಿಸಿ ಬೇರೆಯವರಿಗೆ ಟಿಕೆಟ್ ನೀಡಿದ್ದು ಆ ಪಕ್ಷದ ಸೋಲಿಗೆ ಕಾರಣವಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
Illegal Sand Mining: ರೈತರ ಜಮೀನಲ್ಲೇ ಅಕ್ರಮ ಮರಳುಗಾರಿಕೆ: ಗ್ರಾಮಸ್ಥರ ಆಕ್ರೋಶ
ಕಾಂಗ್ರೆಸ್ ನಾಯಕರು ಟಿಕೆಟ್ ಆಯ್ಕೆಯ ವೇಳೆಯಲ್ಲಿ ಆಯಾ ವಾರ್ಡ್‌ನ ಹಿರಿಯರು ಮತ್ತು ಮೂಲ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸದೇ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡರು. ಕೆಲವು ವಾರ್ಡ್‌ಗಳಲ್ಲಿ ಬಿ ಫಾರಂ ನೀಡಿದ್ದ ಅಭ್ಯರ್ಥಿಗಳು ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದು, ಕೊನೆಯ ಕ್ಷಣದಲ್ಲಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದು ಹಿನ್ನಡೆಗೆ ಕಾರಣ ಎನ್ನುವ ಮಾತುಗಳು ಕಾಂಗ್ರೆಸ್‌ನಿಂದಲೇ ಕೇಳಿ ಬರುತ್ತಿವೆ.
ಬಿಜೆಪಿ ಒಗ್ಗಟ್ಟು:
ಜಿಲ್ಲಾ ಬಿಜೆಪಿಯಲ್ಲಿ 3 ಬಣಗಳಿವೆ. ‘ಮನೆಯೊಂದು ಮೂರು ಬಾಗಿಲು’ ಎನ್ನುವ ವಿರೋಧ ಪಕ್ಷಗಳ ಟೀಕೆಯಂತೆಯೇ ಜಿಲ್ಲಾ ಬಿಜೆಪಿ ಸ್ಥಿತಿ ಇತ್ತು. ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ(Assembly Election) ಅತಿ ಕಡಿಮೆ ಅಂತರದಲ್ಲಿ ಸೋಲು ಕಂಡ ಅನಿಲ ಮೆಣಸಿನಕಾಯಿ ಗದುಗಿಗೆ(Gadag) ಬರುವುದಿಲ್ಲ, ಜಿಲ್ಲಾ ಬಿಜೆಪಿ ಅಧ್ಯಕ್ಷ ಮೋಹನ ಮಾಳಶೆಟ್ಟಿ ಗಮನ ನೀಡುವುದಿಲ್ಲ, ಇನ್ನು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ(CC Patil) ಅವರು ನರಗುಂದ ಬಿಟ್ಟು ಬರುವುದಿಲ್ಲ, ಹಿರಿಯ ಶಾಸಕ ಕಳಕಪ್ಪ ಬಂಡಿ ಗಜೇಂದ್ರಗಡ ಬಿಟ್ಟು ಬರಲ್ಲ ಎಂದು ಕಾಂಗ್ರೆಸ್ 2ನೇ ದರ್ಜೆಯ ನಾಯಕರ ಟೀಕೆ ಮಾಡುತ್ತಿದ್ದರು. ಚುನಾವಣೆಯ ವೇಳೆ ತಪ್ಪು ತಿದ್ದಿಕೊಂಡ ಬಿಜೆಪಿಯು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹಾಗೂ ಶಾಸಕ ಕಳಕಪ್ಪ ಬಂಡಿ ನೇತೃತ್ವದಲ್ಲಿ ತಂಡ ಕಟ್ಟಿಕೊಂಡು ಒಗ್ಗಟ್ಟಾಗಿ ಚುನಾವಣೆ ಎದುರಿಸಿದ್ದ ಫಲವಾಗಿ ನಗರಸಭೆ ಗದ್ದುಗೆ ಬಿಜೆಪಿ ಪಾಲಾಗಿದೆ.
Belagavi Riot: ಗಲಭೆ ಮಾಡಿದವರು ಕಾಂಗ್ರೆಸ್ ಚೇಲಾಗಳು: ಸಚಿವ ರಾಮುಲು
ಚಾಣಾಕ್ಷ ನಡೆ
ಜಿಲ್ಲಾ ಬಿಜೆಪಿ ನಗರಸಭೆ ಚುನಾವಣೆಯನ್ನು ಎಷ್ಟೊಂದು ಗಂಭೀರವಾಗಿ ತೆಗೆದುಕೊಂಡಿತ್ತು ಎಂದರೆ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳಿಸುವ ಪೂರ್ವದಲ್ಲಿ 3 ಸುತ್ತಿನ ಸಭೆಗಳನ್ನು ನಡೆಸಿತ್ತು. ಆ ಸಭೆಗಳಲ್ಲಿ ಪ್ರತಿ ವಾರ್ಡ್‌ಗಳಲ್ಲಿಯೂ 5 ಜನ ಹಿರಿಯ ಕಮಿಟಿಯನ್ನು ರಚಿಸಿ ಅವರೇ ಅಂತಿಮಗೊಳಿಸಿದ ವ್ಯಕ್ತಿಗಳಲ್ಲಿಯೇ ಮತ್ತೆ ಯಾರು ಸೂಕ್ತರು ಎನ್ನುವುದನ್ನು ಅಳೆದು ತೂಗಿ ಟಿಕೆಟ್ ನೀಡಲಾಯಿತು. ನಾಮಪತ್ರ ಸಲ್ಲಿಸಿಕೆ ಪ್ರಾರಂಭವಾಗುವ ದಿನವೇ ಎಲ್ಲ 35 ವಾರ್ಡ್‌ಗಳಲ್ಲಿನ ಅಭ್ಯರ್ಥಿಗಳನ್ನು ಒಮ್ಮೆಲೇ ಘೋಷಣೆ ಮಾಡಿ, ಬಂಡಾಯ ಏಳದಂತೆ ಎಚ್ಚರ ವಹಿಸಿತ್ತು. ಆದರೂ ಕೆಲವೆಡೆ ಉಂಟಾದ ಬಂಡಾಯವನ್ನು ಶಮನ ಮಾಡಲು ಅವರಿಗೆ ಸಾಕಷ್ಟುಕಾಲಾವಕಾಶ ಸಿಕ್ಕ ಹಿನ್ನೆಲೆ ಅವಳಿ ನಗರದಲ್ಲಿ 2 ಸುತ್ತು ಭರ್ಜರಿ ಪ್ರಚಾರ ನಡೆಸಿ ಗೆಲುವಿನ ನಗೆ ಬೀರಿತು.
ತಂಡಗಳಾಗಿ ಪ್ರಯತ್ನ
ನಗರಸಭೆ ಚುನಾವಣಾ ಪ್ರಚಾರ ಸಂದರ್ಭದಲ್ಲಿಯೇ ಬೆಳಗಾವಿ ಅಧಿವೇಶನ(Belagavi Assembly Session) ನಡೆಯುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ, ರೋಣ ಶಾಸಕ ಕಳಕಪ್ಪ ಬಂಡಿ, ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಸಂಸದ ಶಿವಕುಮಾರ ಉದಾಸಿ, ಬಿಜೆಪಿ ಯುವ ಮುಖಂಡ ಅನಿಲ ಮೆಣಸಿನಕಾಯಿ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷ ಮೋಹನ ಮಾಳಶೆಟ್ಟಿಸೇರಿ ತಲಾ 8 ವಾರ್ಡ್‌ಗಳನ್ನು ಹಂಚಿಕೆ ಮಾಡಿಕೊಂಡು ಅಲ್ಲಿ ವ್ಯಾಪಕವಾಗಿ ಪ್ರಚಾರ ಮಾಡಿದರು. ಕಾಂಗ್ರೆಸ್ ಎಲ್ಲ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ವೇಳೆಗೆ ಬಿಜೆಪಿ ಒಂದು ಸುತ್ತಿನ ಪ್ರಚಾರವನ್ನು ಪೂರ್ಣಗೊಳಿಸಿತ್ತು. ಜಿಲ್ಲಾ ಉಸ್ತುವಾರಿ ಸಚಿವರೇ ಖುದ್ದಾಗಿ ನಿಂತು ಮಾರ್ಗದರ್ಶ ಮಾಡಿದರು. ಅದಕ್ಕೆ ಯುವ ಮುಖಂಡ ಅನಿಲ ಮೆಣಸಿನಕಾಯಿ ಸಾಥ್ ನೀಡಿದ್ದರ ಫಲವಾಗಿ ಬಿಜೆಪಿ ಗೆಲುವಿನ ದಡ ಸೇರಿದೆ.