ಕರ್ನಾಟಕ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ವಿಧಾನಸಭಾ ಚನಾವಣೆ ವೇಳೆ ಕಾಂಗ್ರೆಸ್ ಸೇರಿದ್ದರು. ಆದರೆ, ಈಗ ಲೋಕಸಭಾ ಚುನಾವಣೆಗೆ ಮುನ್ನ ಮತ್ತೆ ಬಿಜೆಪಿಗೆ ಬರಲು ಒಪ್ಪಿಗೆ ಸೂಚಿಸಿದ್ದಾರೆ.
ಬೆಂಗಳೂರು (ಜ.25): ರಾಜ್ಯದ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿಯಿಂದ ಕಾಂಗ್ರೆಸ್‌ಗೆ ಹೋಗಿದ್ದ ಲಿಂಗಾಯತ ನಾಯಕ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಲೋಕಸಭಾ ಚುನಾವನೆಗೂ ಮುನ್ನವೇ ಬಿಜೆಪಿಗೆ ಸೇರ್ಪಡೆಯಾಗಲು ಅಮಿತ್ ಶಾ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಈಗ ಈ ಮಾತುಕತೆಯೂ ಯಶಸ್ವಿಯಾಗಿದ್ದು, ಜಗದೀಶ್ ಶೆಟ್ಟರ್ ಅವರು ಬಿಜೆಪಿಗೆ ವಾಪಸ್ ಬರುತ್ತಿದ್ದಾರೆ ಎಂಬುದು ಖಚಿತವಾಗಿದೆ.
ಜಗದೀಶ್ ಶೆಟ್ಟರ್ ಬಿಜೆಪಿ ಸೇರ್ಪಡೆ ವಿಚಾರ ಅಂತಿಮ ಘಟ್ಟಕ್ಕೆ ತಲುಪಿದೆ. ಈಗಾಗಲೇ ದೆಹಲಿಯಲ್ಲಿ ಬೀಡುಬಿಟ್ಟಿರುವ ಜಗದೀಶ್ ಶೆಟ್ಟರ್ ಅವರು ಬಿಜೆಪಿ ಹೈಕಮಾಂಡ್ ಅಮಿತ್ ಶಾ ಅವರನ್ನು ಭೇಟಿ ಮಾಡಿದ ನಂತರ ಬಿಜೆಪಿಗೆ ಸೇರ್ಪಡೆ ಆಗುವ ಬಗ್ಗೆ ಒಪ್ಪಿಕೊಂಡಿದ್ದಾರೆ. ಶೆಟ್ಟರ್ ತಮ್ಮ ಆಪ್ತ ಮಾಜಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಜೊತೆ ದೆಹಲಿ ತಲುಪಿದ್ದು, ಅಲ್ಲಿ ಬಿಜೆಪಿ ಸೇರ್ಪಡೆಗೆ ಅಂತಿಮ ತೀರ್ಮಾನ ಕೈಗೊಂಡಿದ್ದಾರೆ. ಇದರ ನಂತರ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರೂ ಕೂಡ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದು, ಶೆಟ್ಟರ್ ಅವರ ಬಿಜೆಪಿ ಸೇರ್ಪಡೆಯ ಕುರಿತು ಚರ್ಚೆ ಮಾಡಿದ್ದಾರೆ.
ಲೋಕಸಭಾ ಚುನಾವಣೆ: ಜಗದೀಶ್ ಶೆಟ್ಟರ್ ಮರಳಿ ಕರೆತರಲು ಬಿಜೆಪಿ ನಾಯಕರು ಯತ್ನ
ಬಿಜೆಪಿ ಕಚೇರಿಗೆ ಬಂದ ಶೆಟ್ಟರ್: ಕೇಂದ್ರ ಸಚಿವ ಅಮಿತ್ ಶಾ ಅವರೊಂದಿಗೆ ಚರ್ಚೆ ಬಳಿಕ ಜಗದೀಶ್ ಶೆಟ್ಟರ್ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡುವುದಕ್ಕೆ ದೆಹಲಿಯ ಬಿಜೆಪಿ ಕಚೇರಿಗೆ ಆಗಮಿಸಿದ್ದಾರೆ. ರಾಜ್ಯದ ಘಟಾನುಘಟಿ ಬಿಜೆಪಿ ನಾಯಕರು ದೆಹಲಿಯಲ್ಲೇ ಇದ್ದಾರೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ರಾಜ್ಯಾಧ್ಯಕ್ಷ ವಿಜಯೇಂದ್ರ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಅರವಿಂದ್ ಬೆಲ್ಲದ್, ಶಂಕರ್ ಪಾಟೀಲ್ ಮುನೇನಕೊಪ್ಪ ದೆಹಲಿಯಲ್ಲಿ ಬೀಡು ಬಿಟ್ಟಿದ್ದು, ಶೆಟ್ಟರ್ ಬಿಜೆಪಿ ಸೇರ್ಪಡೆ ಕುರಿತ ಅಂತಿಮ ತೀರ್ಮಾನವನ್ನು ಕೈಗೊಂಡು ಬರಲಿದ್ದಾರೆ.
ಜಗದೀಶ್ ಶೆಟ್ಟರ್ ಕಾಂಗ್ರೆಸ್ ಬಿಟ್ಟು ಹೋಗಲ್ಲ: ಡಿಕೆ ಶಿವಕುಮಾರ
ಅಧಿಕೃತ ಘೋಷಣೆಯಷ್ಟೇ ಬಾಕಿ: ವಿಧಾನಸಭಾ ಚುನಾವಣಾ ವೇಳೆ ಟಿಕೆಟ್ ಕೊಡಲಿಲ್ಲ ಎಂಬ ಕಾರಣಕ್ಕೆ ಬಿಜೆಪಿಗೆ ಕೈಕೊಟ್ಟು ಕಾಂಗ್ರೆಸ್ ಸೇರ್ಪಡೆಯಾಗಿದ್ದ ಜಗದೀಶ್ ಶೆಟ್ಟರ್ ಧಾರವಾಡದಲ್ಲಿ ಸ್ಪರ್ಧಿಸಿ ಸೋಲನುಭವಿಸಿದ್ದರು. ನಂತರ ಅವರನ್ನು ಕಾಂಗ್ರೆಸ್‌ನಿಂದ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಲಾಗಿದ್ದರೂ, ಸೂಕ್ತ ಸ್ಥಾನಮಾನ ಮತ್ತು ಗೌರವಗಳನ್ನು ಕೊಡದೇ ನಡೆಸಿಕೊಳ್ಳಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ತೀವ್ರ ಘಾಸಿಗೊಳಗಾದ ಜಗದೀಶ್ ಶೆಟ್ಟರ್ ಅವರ ಮನಸ್ಸು ಮಾತ್ರ ಬಿಜೆಪಿಗೆ ವಾಪಸ್ ಬರಲು ಹವಣಿಸುತ್ತಿತ್ತು. ಇನ್ನು ಅವರ ಶಿಷ್ಯ ಶಂಕರ್ ಪಾಟೀಲ್ ಮುನೇನಕೊಪ್ಪ ಮಧ್ಯಸ್ಥಿಕೆಯಲ್ಲಿ ಹೈಕಮಾಂಡ್‌ನೊಂದಿಗೆ ಚರ್ಚಿಸಿ ಬಿಜೆಪಿಗೆ ಸೇರಲು ತೀರ್ಮಾನಿಸಿದ್ದಾರೆ. ಈಗ ಬಿಜೆಪಿ ಕಚೇರಿಯಲ್ಲಿರುವ ಜಗದೀಶ್ ಶೆಟ್ಟರ್ ಅವರು ಬಿಜೆಪಿ ಸೇರ್ಪಡೆ ಬಗ್ಗೆ ಅಧಿಕೃತ ಘೋಷಣೆಯಷ್ಟೇ ಬಾಕಿ ಉಳಿಸಿಕೊಂಡಿದ್ದಾರೆ.