
ಮುಂಬೈ: ದೇಶದ ಸಿರಿವಂತ ಮಹಾನಗರ ಪಾಲಿಕೆಯಾಗಿರುವ ಬೃಹನ್ಮುಂಬೈ ಮಹಾನಗರ ಪಾಲಿಕೆಯ(ಬಿಎಂಸಿ) ಮೇಯರ್ ಆಗಿ ಬಿಜೆಪಿಯ ರೀತು ತಾವ್ಡೆ ಅವಿರೋಧವಾಗಿ ಆಯ್ಕೆಯಾಗಿದ್ದು, ಬುಧವಾರ ಅಧಿಕಾರ ಸ್ವೀಕರಿಸಿದ್ದಾರೆ.
ಇದರೊಂದಿಗೆ 44 ವರ್ಷಗಳ ಬಳಿಕ ಬಿಎಂಸಿ ಮೇಯರ್ ಹುದ್ದೆ ಬಿಜೆಪಿ ಪಾಲಾಗಿದೆ. ಅರ್ಥಾತ್ ಇವರು ಮುಂಬೈನ 2ನೇ ಬಿಜೆಪಿ ಮೇಯರ್ ಆಗಿದ್ದಾರೆ. ಅಲ್ಲದೆ, 25 ವರ್ಷ ಬಳಿಕ ಪಾಲಿಕೆಯು ಉದ್ಧವ ಠಾಕ್ರೆ ನೇತೃತ್ವದ ಶಿವಸೇನೆಯ ಕೈಯಿಂದ ಜಾರಿದೆ.
ಇದೇ ವೇಳೆ ಉಪಮೇಯರ್ ಹುದ್ದೆಗೆ ಶಿವಸೇನೆಯ (ಶಿಂಧೆ ಬಣ) ಸಂಜಯ್ ಶಂಕರ್ ಘಾಡೀ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಜ.15ರಂದು ನಡೆದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ತಾವ್ಡೆ ಅವರು ವಾರ್ಡ್ 132 ಮತ್ತು ಘಾಡೀ ಅವರು ವಾರ್ಡ್ 5ರ ಕಾರ್ಪೊರೇಟರ್ ಆಗಿ ಚುನಾಯಿತರಾಗಿದ್ದರು. ಮೇಯರ್ ಹಾಗೂ ಉಪಮೇಯರ್ ಹುದ್ದೆಗೆ ಇವರಿಬ್ಬರ ಹೊರತು ಬೇರೆ ಯಾರೂ ಸ್ಪರ್ಧಿಸಿರಲಿಲ್ಲ. ಆದಕಾರಣ ಬಿಎಂಸಿಯ ಸಾಮಾನ್ಯ ಸಭೆಯಲ್ಲಿ ಇವರನ್ನೇ ಆಯ್ಕೆ ಮಾಡಲಾಗಿದೆ. ಇಬ್ಬರಿಗೂ ಸಿಎಂ ದೇವೇಂದ್ರ ಫಡ್ನವೀಸ್ ಹಾಗೂ ಡಿಸಿಎಂ ಏಕನಾಥ್ ಶಿಂಧೆ ಅವರು ಶುಭ ಕೋರಿದ್ದಾರೆ.
ನವದೆಹಲಿ: ಪಂದ್ಯವೊಂದರಲ್ಲಿ ಜಯಶಾಲಿಯಾದ ಅಮೆರಿಕದ ಸಿಯಾಟಲ್‌ನ ಸೀಹಾಕ್ಸ್ ಫುಟ್ಬಾಲ್ ತಂಡಕ್ಕೆ ಶುಭಕೋರಿ ಮೈಕ್ರೋಸಾಫ್ಟ್ ಸಿಇಒ, ಭಾರತ ಮೂಲದ ಸತ್ಯ ನಾಡೆಲ್ಲ ಮಾಡಿದ ಪೋಸ್ಟ್ ವಿವಾದವನ್ನು ಹುಟ್ಟುಹಾಕಿದೆ. ‘ನನ್ನ ಹುಟ್ಟೂರಿನ ತಂಡಕ್ಕೆ ಅಭಿನಂದನೆ’ ಎಂದು ಅವರು ಟ್ವೀಟ್ ಮಾಡಿದ್ದನ್ನು ಪ್ರಶ್ನಿಸಿರುವ ಕೆಲವರು ‘ನೌಕರಿಯಲ್ಲಿ ಭಾರತೀಯರಿಗೆ ಆದ್ಯತೆ ನೀಡುವ ನೀವು, ಈಗಷ್ಟೇ ಅಮೆರಿಕ ನಗರವನ್ನು ಹುಟ್ಟೂರು ಎಂದಿರಿ?’ ಎಂದು ಕಾಲೆಲೆದಿದ್ದಾರೆ.ಇನ್ನೂ ಕೆಲವರು ‘ಹೈದರಾಬಾದ್ ಮೂಲದವರಾದ ನಿಮಗೆ ಸಿಯಾಟಲ್ ಹೇಗೆ ತವರಾಯಿತು?’ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಜತೆಗೆ, ‘ಭಾರತೀಯರು ಮಾತ್ರ ನಿಮ್ಮವರು’ ಎಂದು ನೆನಪಿಸಿದ್ದಾರೆ.ಹೈದರಾಬಾದ್‌ನಲ್ಲಿ ಜನಿಸಿದ ನಾಡೆಲ್ಲಾ ಅವರು ಅಲ್ಲೇ ತಮ್ಮ ಆರಂಭಿಕ ಶಿಕ್ಷಣವನ್ನು ಪೂರೈಸಿದ್ದರು. ಕರ್ನಾಟಕದ ಮಣಿಪಾಲ ಕಾಲೇಜಿನಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದು, ಬಳಿಕ 1988ರಲ್ಲಿ ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ತೆರಳಿದ್ದರು.
ಪುಣೆ: ಉಸಿರಾಟ ಸಮಸ್ಯೆ ಹಾಗೂ ಕಫದ ಸಮಸ್ಯೆ ಕಾರಣ ಪುಣೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ನ್ಯಾಷನಲ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ವರಿಷ್ಠ ಶರದ್ ಪವಾರ್ ಆರೋಗ್ಯ ಸ್ಥಿರವಾಗಿದ್ದು 2 ದಿನದಲ್ಲಿ ಬಿಡುಗಡೆಯಾಗಲಿದ್ದಾರೆ.ಈ ಕುರಿತು ಬುಧವಾರ ಮಾಹಿತಿ ನೀಡಿರುವ ವೈದ್ಯ ಡಾ.ಸೈಮನ್ ಗ್ರ್ಯಾಂಟ್, ‘ಪವಾರ್ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ಮುಂದಿನ 2 ದಿನಗಳಲ್ಲಿ ಅವರನ್ನು ಬಿಡುಗಡೆ ಮಾಡಲು ಚಿಂತಿಸಲಾಗಿದೆ’ ಎಂದಿದ್ದಾರೆ.
ಉಸಿರಾಟ, ಕಫದ ತೊಂದರೆಯಿಂದ ಶರದ್ ಪವಾರ್‌ರನ್ನು ಬಾರಾಮತಿಯ ನಿವಾಸದಿಂದ ಪುಣೆಯ ರುಬಿ ಹಾಲ್ ಕ್ಲಿನಿಕ್‌ಗೆ ಸೋಮವಾರ ದಾಖಲಿಸಲಾಗಿತ್ತು.
ನವದೆಹಲಿ: 9 ಕೋಟಿ ರು. ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆ.5ರಂದು ಶರಣಾಗಿ ತಿಹಾರ್ ಜೈಲು ಸೇರಿರುವ ನಟ ರಾಜ್‌ಪಾಲ್ ಯಾದವ್ ಅವರಿಗೆ ಆರ್ಥಿಕ ನೆರವು ನೀಡಲು ನಟರಾದ ಸಲ್ಮಾನ್ ಖಾನ್, ಅಜಯ್ ದೇವಗನ್, ಸೋನು ಸೂದ್, ವರುಣ್ ಧವನ್, ಡೇವಿಡ್ ಧವನ್ ಮುಂತಾದವರು ಮುಂದೆ ಬಂದಿದ್ದಾರೆ.ಅತ್ತ ಜನಶಕ್ತಿ ಜನತಾ ದಳದ ಅಧ್ಯಕ್ಷ ತೇಜ್ ಪ್ರತಾಪ್ ಯಾದವ್ ಹೂಡ ನೆರವಿನ ಹಸ್ತ ಚಾಚಿದ್ದಾರೆ. ಈ ಬಗ್ಗೆ ಯಾದವ್‌ರ ಮ್ಯಾನೇಜರ್ ಗೋಲ್ಡೀ ಮಾಹಿತಿ ನೀಡಿದ್ದಾರೆ.
ಆದರೆ ಬೇಲ್ ತಿರಸ್ಕೃತವಾದ ಕಾರಣ ಜೈಲು ಸೇರುವ ಮೊದಲು ರಾಜ್‌ಪಾಲ್ ಅವರೇ ಸಹಾಯಕ್ಕಾಗಿ ಕೇಳಿದ್ದರೇ ಎಂಬ ಬಗ್ಗೆ ಮಾತಡಲು ನಿರಾಕರಿಸಿದ್ದಾರೆ.
ಪ್ರಕರಣವೇನು?:2010ರಲ್ಲಿ ನಿರ್ದೇಶನಕ್ಕೆ ಕೈ ಹಾಕಿದ ರಾಜ್‌ಪಾಲ್, ತಮ್ಮ ‘ಅತಾ ಪತಾ ಲಾಪತಾ’ ಚಿತ್ರಕ್ಕಾಗಿ ಮುರಳಿ ಪ್ರಾಜೆಕ್ಸ್ಟ್ ಪ್ರೈವೇಟ್ ಲಿ.ಯಿಂದ 5 ಕೋಟಿ ರು. ಸಾಲ ಪಡೆದಿದ್ದರು. ಆದರೆ ಚಿತ್ರ ಯಶಸ್ಸು ಕಾಣದ ಕಾರಣ ಅವರಿಗೆ ಭಾರೀ ನಷ್ಟವಾಗಿತ್ತು. ಪರಿಣಾಮ ಮರುಪಾವತಿ ಸಾಧ್ಯವಾಗಿರಲಿಲ್ಲ. ವರ್ಷ ಕಳೆದಂತೆ ಅದರ ಬಡ್ಡಿ ಬೆಳೆಯುತ್ತಾ ಸಾಗಿ 9 ಕೋಟಿ ರು. ಆಗಿದೆ. ಇದನ್ನು ತೀರಿಸಲು ಅವರು ಕಂಪನಿಗೆ ನೀಡಿದ್ದ ಚೆಕ್ ಹಲವು ಬಾರಿ ಬೌನ್ಸ್ ಆದ ಕಾರಣ ದೆಹಲಿ ಹೈಕೋರ್ಟ್ ಶರಣಾಗುವಂತೆ ಆದೇಶಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.