ಮಾಜಿ ಡಿಸಿಎಂ ಸವದಿ, ಮಾಜಿ ಸಚಿವ ಶಶಿಕಾಂತ, ಮಾಜಿ ಸಂಸದ ಅಮರಸಿಂಹ ಕಾಂಗ್ರೆಸ್ ಸೇರ್ಪಡೆಯಿಂದ ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಬಲ
ಶ್ರೀಶೈಲ ಮಠದ
ಬೆಳಗಾವಿ(ಏ.21): ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ರಾಜ್ಯ ರಾಜಕಾರಣದಲ್ಲಿ ಸಂಚಲಗಳು ಸೃಷ್ಟಿಯಾಗುತ್ತಿವೆ. ಪಕ್ಷಾಂತರ, ರಾಜೀನಾಮೆ ಪರ್ವ ಜೋರಾಗಿದೆ. ಆಡಳಿತಾರೂಢ ಬಿಜೆಪಿಗೆ ಪಕ್ಷಾಂತರ ದೊಡ್ಡ ಹೊಡೆತ ಬಿದ್ದಂತಾಗಿದೆ. ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಬೆನ್ನಲ್ಲೇ ಮಾಜಿ ಸಿಎಂ ಜಗದೀಶ ಶೆಟ್ಟರ್ ಕಾಂಗ್ರೆಸ್ ಸೇರಿದ್ದಾರೆ. ಮತ್ತಷ್ಟು ನಾಯಕರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾಗಿದೆ.
ತಮ್ಮನ್ನು ಪಕ್ಷದಲ್ಲಿ ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಟಿಕೆಟ್ ತಪ್ಪಿಸಿ, ಅನ್ಯಾಯ ಮಾಡಲಾಗಿದೆ ಎಂದು ಬಿಜೆಪಿ ವಿರುದ್ಧ ಸಿಡಿದೆದ್ದಿರುವವರೆಲ್ಲರೂ ಪ್ರಮುಖವಾಗಿ ವೀರಶೈವ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕರು. ಚುನಾವಣೆ ಹೊಸ್ತಿನಲ್ಲಿ ಈ ರಾಜಕೀಯ ಬೆಳವಣಿಗೆ ಯಾವ ಪಕ್ಷದ ಮೇಲೆ ಎಷ್ಟುಪರಿಣಾಮ ಬೀರುತ್ತದೆ ಎನ್ನುವುದು ತೀವ್ರ ಕುತೂಹಲ ಕೆರಳಿಸುವಂತೆ ಮಾಡಿದೆ. ಪ್ರಭಾವಿ ನಾಯಕರು ಬಿಜೆಪಿಗೆ ಗುಡ್ ಬೈ ಹೇಳಿರುವುದರಿಂದ ಅವರ ಹಾದಿಯಲ್ಲೇ ಮಾಜಿ ಸಚಿವರು, ಮಾಜಿ ಸಂಸದರು ಸಾಗಿದ್ದಾರೆ.
ಸಾಹುಕಾರ್ ಕೋಟೆಗೆ ಸವದಿ ಲಗ್ಗೆ: ಜಾರಕಿಹೊಳಿ ತಂತ್ರಕ್ಕೆ ಪ್ರತಿತಂತ್ರ!
ಹುಕ್ಕೇರಿ ಕ್ಷೇತ್ರದಲ್ಲಿ ಕತ್ತಿ ಕುಟುಂಬಕ್ಕೆ ಬಿಜೆಪಿ ಮಣೆ ಹಾಕಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ ಮಾಜಿ ಸಚಿವ ಶಶಿಕಾಂತ ನಾಯಕ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ದಿ.ಉಮೇಶ ಕತ್ತಿ ವಿರುದ್ಧ ಗೆಲುವು ಸಾಧಿಸಿದ್ದ ಶಶಿಕಾಂತ ನಾಯಕ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಲಾಗಿತ್ತು. ಉಮೇಶ ಕತ್ತಿ ಆಪರೇಷನ್ ಕಮಲಕ್ಕೆ ಒಳಗಾಗಿ ಬಿಜೆಪಿ ಸೇರಿದ ಬಳಿಕ ಶಶಿಕಾಂತ ನಾಯಕ ಅವರ ರಾಜಕೀಯ ಅಸ್ತಿತ್ವಕ್ಕೆ ಧಕ್ಕೆ ಉಂಟಾಯಿತು. ಉಮೇಶ ಕತ್ತಿ ಅವರ ಹಿಡಿತದಲ್ಲೇ ಹುಕ್ಕೇರಿ ಕ್ಷೇತ್ರ ಉಳಿದಿತ್ತು. ಈ ಬಾರಿ ತಮಗೆ ಟಿಕೆಟ್ ಸಿಗುತ್ತದೆ ಎಂದು ನಂಬಿದ್ದ ಶಶಿಕಾಂತ ನಾಯಕಗೆ ಬಿಜೆಪಿ ಟಿಕೆಟ್ ಕೈಕೊಟ್ಟಿದೆ. ಮತ್ತೆ ಈ ಬಾರಿಯೂ ಬಿಜೆಪಿ ಟಿಕೆಟ್ ಕತ್ತಿ ಕುಟುಂಬದ ಪಾಲಾಗಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ, ಬಿಜೆಪಿ ತೊರೆದು ಶಶಿಕಾಂತ ನಾಯಕ ಕಾಂಗ್ರೆಸ್ ಸೇರಿದ್ದಾರೆ.
ಕುರುಬ ಸಮುದಾಯದ ಪ್ರಬಲ ನಾಯಕ, ಮಾಜಿ ಸಂಸದ ಅಮರಸಿಂಹ ಪಾಟೀಲ ಕೂಡ ಸದ್ದಿಲ್ಲದೇ ಕಾಂಗ್ರೆಸ್ ಸೇರಿದ್ದಾರೆ. 1999 ರಲ್ಲಿ ಕಾಂಗ್ರೆಸ್ ಪಕ್ಷದಿಂದಲೇ ಬೆಳಗಾವಿ ಲೋಕಸಭೆಗೆ ಆಯ್ಕೆಯಾಗಿದ್ದ ಅವರು, 2016ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಬಿಜೆಪಿಯಲ್ಲಿ ಸೂಕ್ತ ಸ್ಥಾನಮಾನ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದ ಅಮರಸಿಂಹ ಈಗ ಮತ್ತೆ ಕಾಂಗ್ರೆಸ್‌ಗೆ ಸೇರಿದ್ದಾರೆ. ಹೀಗೆ ಸಾಲು ಸಾಗಾಗಿ ಪ್ರಭಾವಿ ನಾಯಕರು ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತಿರುವುದರಿಂದ ಜಿಲ್ಲಾ ಕಾಂಗ್ರೆಸ್‌ಗೆ ಮತ್ತಷ್ಟು ಬಲ ಬಂದಂತಾಗಿದೆ.
ಜಗದೀಶ ಶೆಟ್ಟರ ಸಿಎಂ ಇದ್ದಾಗ ಕಿತ್ತೂರನ್ನು ತಾಲೂಕನ್ನಾಗಿ ಘೋಷಣೆ ಮಾಡಿದ್ದರು. ಆದರೆ, ಇದೀಗ ಅವರಿಗೂ ಬಿಜೆಪಿ ಟಿಕೆಟ್ ನೀಡದೇ ಮೊಸ ಮಾಡಿದೆ. ಇದರಿಂದಾಗಿ ಜಗದೀಶ ಶೆಟ್ಟರನ್ನು ಬೆಂಬಲಿಸುವ ಮೂಲಕ ನಾವು ಸಹ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತೇವೆ ಎಂದು ಕಿತ್ತೂರ ಮತಕ್ಷೇತ್ರದ ಮಾಜಿ ಶಾಸಕ ಸುರೇಶ ಮಾರಿಹಾಳ ಕುಟುಂಬಸ್ಥರು ಹಾಗೂ ಅಭಿಮಾನಿಗಳು ಕಾಂಗ್ರೆಸ್ ಸೇರ್ಪಡೆಗೊಂಡಿರುವುದು ಬಿಜೆಪಿಗೆ ಹಿನ್ನಡೆಯಾಗುವ ಸಾಧ್ಯತೆಗಳೇ ಹೆಚ್ಚಾಗಿವೆ.
ಬಿಜೆಪಿ ಟಿಕೆಟ್ ಘೋಷಣೆಯಾಗುತ್ತಿದ್ದಂತೆಯೇ ಮೊದಲು ಬಿಜೆಪಿ ವಿರುದ್ಧ ಲಕ್ಷ್ಮಣ ಸವದಿ ಸಿಡಿದೆದ್ದರು. ವಿಧಾನ ಪರಿಷತ್, ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್ ಸೇರಿದರು. ಕಾಂಗ್ರೆಸ್ ಅಭ್ಯರ್ಥಿಯಾಗಿ ಅಥಣಿಯಿಂದ ಸವದಿ ಕಣಕ್ಕಿಳಿದಿದ್ದಾರೆ. 2018ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಲಕ್ಷ್ಮಣ ಸವದಿ ಅವರ ವಿರುದ್ಧ ಕಾಂಗ್ರೆಸ್‌ನಿಂದ ಮಹೇಶ ಕುಮಟಳ್ಳಿ ಆಯ್ಕೆಯಾಗಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ 2019ರಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದ ಮಹೇಶ ಕುಮಟಳ್ಳಿ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದರು. ಆಗ ಅವರ ಗೆಲುವಿಗೆ ಸವದಿಯವರು ಪ್ರಯತ್ನವೂ ಇತ್ತು. ಈ ಬಾರಿ ಟಿಕೆಟ್ ನಿರೀಕ್ಷೆಯಲ್ಲಿದ್ದ ಸವದಿಗೆ ಕೈಕೊಟ್ಟಬಿಜೆಪಿ ಮಹೇಶ ಕುಮಟಳ್ಳಿಗೆ ಟಿಕೆಟ್ ಘೋಷಿಸಿದೆ. ಹಾಗಾಗಿ, ಲಕ್ಷ್ಮಣ ಸವದಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ತಮ್ಮ ಕ್ಷೇತ್ರದ ಮೇಲೆ ವೈಯಕ್ತಿಕ ವರ್ಚಸ್ಸು ಹೊಂದಿರುವ ಸವದಿ ಬೇರೆ ಕ್ಷೇತ್ರಗಳಲ್ಲಿಯೂ ತಮ್ಮ ಪ್ರಭಾವ ಹೊಂದಿದ್ದಾರೆ. ಇದು ಕಾಂಗ್ರೆಸ್ ಪರ ಪ್ರಚಾರಕ್ಕೆ ಅನುಕೂಲವಾಗಬಹುದು. ರಮೇಶ ಜಾರಕಿಹೊಳಿ ಮತ್ತು ಲಕ್ಷ್ಮಣ ಸವದಿ ನಡುವೆಯೇ ನಿಜವಾದ ಫೈಟ್ ಇರುವುದು. ಪ್ರಭಾವಿ ಲಿಂಗಾಯತ ಸಮುದಾಯದ ನಾಯಕರಾಗಿರುವ ಸವದಿ ಕಾಂಗ್ರೆಸ್ ಸೇರಿರುವುದರಿಂದ ಈ ಭಾಗದಲ್ಲಿನ ಬಿಜೆಪಿಯ ಲಿಂಗಾಯತ ಮತಬ್ಯಾಂಕ್‌ಗೆ ದೊಡ್ಡ ಹೊಡೆತ ಬೀಳುವ ಪ್ರಶ್ನೆ ಎದುರಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಎಷ್ಟರ ಮಟ್ಟಗೆ ಲಾಭ ತಂದುಕೊಡುತ್ತದೆ ಎನ್ನುವ ಕುತೂಹಲ ಕೆರಳಿಸುವಂತೆ ಮಾಡಿದೆ.
ಹಾಗೆ ನೋಡಿದರೆ ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಭದ್ರಕೋಟೆ ಇತ್ತು. ಬಳಿಕ ಅದು ತನ್ನ ಅಸ್ತಿತ್ವ ಕಳೆದುಕೊಂಡಿತ್ತು. ಇದೀಗ ಮತ್ತೆ ಪ್ರಭಾವಿ ಲಿಂಗಾಯತ ನಾಯಕರು ಕಾಂಗ್ರೆಸ್ ಸೇರ್ಪಡೆಯಾಗುತ್ತಿರುವುದರಿಂದ ಜಿಲ್ಲಾ ಕಾಂಗ್ರೆಸ್‌ಗೆ ಮತ್ತಷ್ಟು ಬಲ ಬಂದಂತಾಗಿದೆ.
ಈ ಸಲದ ವಿಧಾಸಭಾ ಚುನಾವಣೆಗೆ ಸ್ಪರ್ಧಿಸಲು ಒಂದೇ ಕುಟುಂಬಕ್ಕೆ ಬಿಜೆಪಿಯಿಂದ 2 ಟಿಕೆಟ್ ನೀಡಿ ಕತ್ತಿ ಕುಟುಂಬಕ್ಕೆ ಮನ್ನಣೆ ನೀಡಿದೆ. ನಾನು ಬಿಜೆಪಿಯಲ್ಲಿ 25 ವರ್ಷಗಳ ಕಾಲ ನಿಷ್ಠಾವಂತರಾಗಿ ಕೆಲಸ ಮಾಡಿದ್ದು, ಕೇವಲ 30 ತಿಂಗಳ ಸಚಿವನಾಗಿ, 11 ತಿಂಗಳ ವಿಧಾನ ಪರಿಷತ್ ಸದಸ್ಯರಾಗಿ ಅಧಿಕಾರ ಅನುಭವಿಸಿದ್ದೇನೆ. ಇತ್ತೀಚೆಗೆ ಬಿಜೆಪಿಯಲ್ಲಿ ವಲಸಿಗರಿಗೆ ಹೆಚ್ಚಿನ ಮನ್ನಣೆ ನೀಡುತ್ತಿದ್ದು, ಮೂಲ ಬಿಜೆಪಿ ಕಟ್ಟಿಬೆಳಸಿದ ನಿಷ್ಠಾವಂತರನ್ನು ಕಡಗಣನೆ ಮಾಡಲಾಗುತ್ತಿದೆ. ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಕತ್ತಿ ಕುಟುಂಬದವರನ್ನು ವಿರೋಧ ಮಾಡುತ್ತೇನೆ ಅಂತ ಮಾಜಿ ಸಚಿವ ಶಶಿಕಾಂತ ನಾಯಿಕ ತಿಳಿಸಿದ್ದಾರೆ.
ರಮೇಶ ಜಾರಕಿಹೊಳಿ ಆಸ್ತಿ 72.25 ಕೋಟಿ ಕುಸಿತ: ಸಾಹುಕಾರ್ ವಿರುದ್ಧ ಇದೆ ಲೈಂಗಿಕ ದೌರ್ಜನ್ಯ ಪ್ರಕರಣ..!
ಬಿಜೆಪಿ ಪಕ್ಷದಲ್ಲಿ ಪಕ್ಷ ನಿಷ್ಠರಿಗೆ ಯಾವುದೇ ಬೆಲೆ ಇಲ್ಲ. ಸುರೇಶ ಮಾರಿಹಾಳ ಶಾಸಕರ ಇದ್ದಾಗ ಆಗಿನ ಸಿಎಂ ಜಗದೀಶ ಶೆಟ್ಟರ ಅವರು ರಾಜ್ಯದಲ್ಲಿಯೇ ಕಿತ್ತೂರನ್ನು ಏಕಮಾತ್ರ ತಾಲೂಕನ್ನಾಗಿ ಘೋಷಣೆ ಮಾಡುವ ಮೂಲಕ ಕಿತ್ತೂರಿಗೆ ಸ್ಥಾನಮಾನ ನೀಡಿದ್ದರು. ಆದರೆ, ಬಿಜೆಪಿ ಪಕ್ಷ ಇದೀಗ ಅವರಿಗೂ ಟಿಕೆಟ್ ನೀಡದೇ ಮೊಸ ಮಾಡಿದೆ. ಇದರಿಂದಾಗಿ ಜಗದೀಶ ಶೆಟ್ಟರ ಅವರನ್ನು ಬೆಂಬಲಿಸುವ ಮೂಲಕ ನಾವುಗಳು ಸಹ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇವೆ ಅಂತ ಮಾಜಿ ಶಾಸಕ ಸುರೇಶ ಮಾರಿಹಾಳ ಕುಟುಂಬಸ್ಥರು ಸಚಿನ ಮಾರಿಹಾಳ ಹೇಳಿದ್ದಾರೆ.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.