ಶೇ.40 ಸರ್ಕಾರ ಎಂದು ಆರೋಪ ಮಾಡುತ್ತಿರುವ ಕಾಂಗ್ರೆಸ್ ಸಾಕ್ಷಿ ಕೊಡಲಿ: ಸಂಸದ ಪ್ರತಾಪ ಸವಾಲ್
ವಿಜಯಪುರ(ಮಾ.05): ಕಾಂಗ್ರೆಸ್ ಸರ್ಕಾರ ಎಸಿಬಿ ಹುಟ್ಟು ಹಾಕಿ ಲೋಕಾಯುಕ್ತ ಸಂಸ್ಥೆಯ ಕತ್ತು ಹಿಚುಕಿ ಕೊಂದು ಹಾಕಿತ್ತು. ಆದರೆ ಬಿಜೆಪಿ ಸರ್ಕಾರ ಲೋಕಾಯುಕ್ತ ಸಂಸ್ಥೆ ಪುನರ್ ಸ್ಥಾಪನೆ ಮಾಡಿ ಮರು ಜೀವ ನೀಡಿದೆ ಎಂದು ಮೈಸೂರು ಸಂಸದ ಪ್ರತಾಪ ಸಿಂಹ ಹೇಳಿದರು.
ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಲೋಕಾಯುಕ್ತ ಸಂಸ್ಥೆಗೆ ಬಿಜೆಪಿ ಎಲ್ಲ ಪರಮಾಧಿಕಾರ ನೀಡಿದೆ. ಹಾಗಾಗಿಯೇ ಆಡಳಿತರೂಢ ಬಿಜೆಪಿ ಶಾಸಕನ ಪುತ್ರನನ್ನು ಭ್ರಷ್ಟಾಚಾರ ಆರೋಪದ ಮೇಲೆ ಬಂಧಿಸಿದೆ. ಭ್ರಷ್ಟರು ಯಾರೇ ಆಗಿರಲಿ. ಅಂಥವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತದೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಬಿಜೆಪಿ ಸರ್ಕಾರ ಹಿಂದೆ ಮುಂದೆ ನೋಡುವುದಿಲ್ಲ ಎಂದರು.
3 ಕ್ಷೇತ್ರಗಳ ಟಿಕೆಟ್‌ಗೆ ಅರ್ಜಿ ಸಲ್ಲಿಕೆ: ಕೆಪಿಸಿಸಿ ಸೂಚಿಸಿದಲ್ಲಿ ಸ್ಪರ್ಧಿಸುತ್ತೇನೆಂದ ಶಾಸಕ ಶಿವಾನಂದ ಪಾಟೀಲ
ಕೋಟಿ ಕೋಟಿ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕನ ಪುತ್ರ ಲೋಕಾಯುಕ್ತ ಬಲೆಗೆ ಸಿಕ್ಕಿ ಹಾಕಿಕೊಂಡಿದ್ದಾನೆ. ಆತ ಬಿಜೆಪಿ ಶಾಸಕನ ಪುತ್ರ ಎಂದು ಲೋಕಾಯುಕ್ತ ಬಿಡಲಿಲ್ಲ. ಶಾಸಕನ ಪುತ್ರನನ್ನು ಬಂಧಿಸಿದೆ. ಈಗ ಲೋಕಾಯುಕ್ತದ ಮೇಲೆ ಜನರ ವಿಶ್ವಾಸ ಹೆಚ್ಚಿದೆ ಎಂದ ಅವರು, ಭ್ರಷ್ಟಾಚಾರ ನಡೆಸಿದವರು ಯಾರೇ ಆಗಿರಲಿ. ಅವರನ್ನು ಬಂಧಿಸಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಮುಂದಾಗಿದೆ. ಇದಕ್ಕೆ ಬಿಜೆಪಿ ಶಾಸಕನ ಪುತ್ರನನ್ನು ಬಂಧಿಸಿರುವುದೇ ಸಾಕ್ಷಿಯಾಗಿದೆ ಎಂದು ತಿಳಿಸಿದರು.
ಆದರೆ ಕಾಂಗ್ರೆಸ್ಸಿನವರು ಜಯಮಾಲಾ ಪ್ರಕರಣ, ಆಂಜನೇಯ ಮನೆಯಲ್ಲಿ ಹಣ ಸಿಕ್ಕಿತು. ಆದರೂ ಕಾಂಗ್ರೆಸ್ ಗಾಢ ಮೌನ ವಹಿಸಿತು. ಕಾಂಗ್ರೆಸ್ ಸರ್ಕಾರ ಬದನೆಕಾಯಿ ತಿಂದು ವೇದ ಹೇಳುವುದಕ್ಕೆ ಹೊರಟಿದೆ, ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟೇಜ್ ಸರ್ಕಾರ ಎಂದು ಆರೋಪ ಮಾಡುತ್ತಿರುವ ಕಾಂಗ್ರೆಸ್ ಪಕ್ಷ ಈ ಬಗ್ಗೆ ಸಾಕ್ಷಿ ನೀಡಲಿ. ದೂರು ಕೊಡಲಿ ಎಂದ ಅವರು, ಹ್ಯಾರಿಸ್, ಜಾಜ್‌ರ್, ಪ್ರಿಯಾಂಕ ಖರ್ಗೆ, ಬಡವರಾಗಿದ್ದರಾ? ಈ ಹಿಂದೆ ಹೇಗಿದ್ದರು? ಈಗ ಹೇಗಿದ್ದಾರೆ ಎಂಬುವುದನ್ನು ನೋಡಿದರೆ ಗೊತ್ತಾಗುತ್ತದೆ. ರಮೇಶಕುಮಾರ ಅವರೇ ಮೂರು ತಲೆಮಾರುವರೆಗೆ ಕೂತು ತಿನ್ನುವಷ್ಟುಮಾಡಿಕೊಂಡಿದ್ದಾಗಿ ಹೇಳಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ನನ್ನ ಸ್ಪರ್ಧೆ ತೀರ್ಮಾನಿಸಲು ಯಡಿಯೂರಪ್ಪ ಯಾರು?: ಸಿದ್ದರಾಮಯ್ಯ
ಶಾಸಕನ ಪುತ್ರ ಕೆಡಬ್ಲ್ಯುಎಸ್‌ಎಚ್‌ಡಿ ಅಧಿಕಾರಿಯಾಗಿದ್ದು, ಸಿಕ್ಕಿರುವ ಹಣ ಅವನ ವೃತ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಹಣ ಸಿಕ್ಕಿರೋದಾ? ಅಥವಾ ಅವರ ತಂದೆಯ ವಿಚಾರದಲ್ಲಿ ಸಿಕ್ಕಿರೋದಾ? ಎಂಬುವುದು ತನಿಖೆ ನಡೆಯಬೇಕಿದೆ. ತಪ್ಪು ಯಾರೇ ಮಾಡಿರಲಿ. ತಪ್ಪು ತಪ್ಪೇ ಎಂದು ತಿಳಿಸಿದರು.
ಈ ವೇಳೆ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಬಿಜೆಪಿ ಮುಖಂಡರಾದ ಸುರೇಶ ಬಿರಾದಾರ, ದಯಾಸಾಗರ ಪಾಟೀಲ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ಕೇಂದ್ರ ಹಾಗೂ ರಾಜ್ಯದಲ್ಲಿನ ಡಬಲ್ ಎಂಜಿನ್ ಸರ್ಕಾರ ಉತ್ತರ ಕರ್ನಾಟಕ ಅದರಲ್ಲೂ ವಿಜಯಪುರ ಜಿಲ್ಲೆಯಲ್ಲಿ ಅಭಿವೃದ್ಧಿ ಕ್ರಾಂತಿಯನ್ನೇ ಮಾಡಿದೆ. ನೀರಾವರಿ, ವಿಮಾನ ನಿಲ್ದಾಣ, ರಸ್ತೆ ಇವೇ ಮುಂತಾದ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದೆ. ಹಾಗಾಗಿ ಜಿಲ್ಲೆಯಲ್ಲಿ ಅಭಿವೃದ್ಧಿ ಗಾಳಿ ಬೀಸಿದೆ. ವಿಜಯಪುರ ಜಿಲ್ಲೆಯ 8 ವಿಧಾನಸಭೆ ಕ್ಷೇತ್ರಗಳ ಚುನಾವಣೆಯಲ್ಲಿ ಬಿಜೆಪಿ ಬಾವುಟ ಹಾರಲಿದೆ ಅಂತ ಸಂಸದ ಪ್ರತಾಪ ಸಿಂಹ ತಿಳಿಸಿದ್ದಾರೆ.