ಕೊಡಗಿನ ಅಭ್ಯರ್ಥಿಗಳ ಆಯ್ಕೆಗೆ ಮತದಾನದ ಮೂಲಕ ಅಭಿಪ್ರಾಯ ಸಂಗ್ರಹಿಸಿದ ಬಿಜೆಪಿ!

By Govindaraj S  |  First Published Mar 31, 2023, 8:23 PM IST

ರಾಜ್ಯ ಚುನಾವಣೆಗೆ ಈಗಾಗಲೇ ಮುಹೂರ್ತ ಫಿಕ್ಸ್ ಆಗಿದೆ. ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಈಗಾಗಲೇ ಸಾಕಷ್ಟು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿವೆ. ಆದರೆ ಕೊಡಗು ಜಿಲ್ಲೆಯಲ್ಲಿ ಕಾಂಗ್ರೆಸ್ ಮಾತ್ರವೇ ವಿರಾಜಪೇಟೆ ಕ್ಷೇತ್ರಕ್ಕೆ ತನ್ನ ಅಭ್ಯರ್ಥಿಯನ್ನು ಘೋಷಿಸಿರುವುದು ಬಿಟ್ಟರೆ, ಮತ್ಯಾವ ಪಕ್ಷಗಳು ಯಾವ ಕ್ಷೇತ್ರಕ್ಕೂ ಅಭ್ಯರ್ಥಿಗಳನ್ನು ಘೋಷಿಸಿಲ್ಲ.


ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಮಾ.31): ರಾಜ್ಯ ಚುನಾವಣೆಗೆ ಈಗಾಗಲೇ ಮುಹೂರ್ತ ಫಿಕ್ಸ್ ಆಗಿದೆ. ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಈಗಾಗಲೇ ಸಾಕಷ್ಟು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿವೆ. ಆದರೆ ಕೊಡಗು ಜಿಲ್ಲೆಯಲ್ಲಿ ಕಾಂಗ್ರೆಸ್ ಮಾತ್ರವೇ ವಿರಾಜಪೇಟೆ ಕ್ಷೇತ್ರಕ್ಕೆ ತನ್ನ ಅಭ್ಯರ್ಥಿಯನ್ನು ಘೋಷಿಸಿರುವುದು ಬಿಟ್ಟರೆ, ಮತ್ಯಾವ ಪಕ್ಷಗಳು ಯಾವ ಕ್ಷೇತ್ರಕ್ಕೂ ಅಭ್ಯರ್ಥಿಗಳನ್ನು ಘೋಷಿಸಿಲ್ಲ. ಆದರೆ ಇಂದು ಬಿಜೆಪಿ ಎರಡು ಕ್ಷೇತ್ರಗಳಿಗೂ ಅಭ್ಯರ್ಥಿಗಳು ಯಾರಾಗಬೇಕು ಎನ್ನುವುದಕ್ಕೆ ಸಂಬಂಧಿಸಿದಂತೆ ಪಕ್ಷದ ಪ್ರಮುಖರ ಅಭಿಪ್ರಾಯವನ್ನು ಗುಪ್ತಮತದಾನದ ಮೂಲಕ ಸಂಗ್ರಹಿಸಿದೆ. 

Tap to resize

Latest Videos

undefined

ಕೊಡಗು ಜಿಲ್ಲೆಯ ಮಡಿಕೇರಿ ಮತ್ತು ವಿರಾಜಪೇಟೆ ಕ್ಷೇತ್ರಕ್ಕೆ ಹಾಲಿ ಶಾಸಕರೇ ಅಭ್ಯರ್ಥಿಗಳು ಎನ್ನುವುದು ಜನವಲಯದಲ್ಲಿ ಚರ್ಚೆಯಾಗುತ್ತಿದೆ. ಈ ಚರ್ಚೆಗೆ ಕಾರಣವೂ ಇದೆ. ಎರಡು ಕ್ಷೇತ್ರಗಳಲ್ಲಿ ಆಯಾ ಶಾಸಕರು ಈಗಾಗಲೇ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಹಗಲಿರುಳು ಸುತ್ತಾಡುತ್ತಾ ದುಡಿಯುತ್ತಿದ್ದಾರೆ. ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ಹೀಗಾಗಿ ಮಡಿಕೇರಿ ಕ್ಷೇತ್ರಕ್ಕೆ ಅಪ್ಪಚ್ಚು ರಂಜನ್, ವಿರಾಜಪೇಟೆ ಕ್ಷೇತ್ರಕ್ಕೆ ಕೆ.ಜಿ. ಬೋಪಯ್ಯ ಅಭ್ಯರ್ಥಿ ಎನ್ನಲಾಗುತ್ತಿದೆ. ಆದರೂ ಪಕ್ಷದಿಂದ ಕೊಡಗಿನ ಎರಡು ಕ್ಷೇತ್ರಗಳಿಗೆ ಯಾರು ಅಭ್ಯರ್ಥಿಗಳಾಗಬೇಕು ಎಂದು ರಾಜ್ಯ ಬಿಜೆಪಿ ಪ್ರಮುಖರ ಅಭಿಪ್ರಾಯ ಸಂಗ್ರಹಿಸಿದೆ. 

ಬಿಜೆಪಿ, ಕಾಂಗ್ರೆಸ್‌ಗೆ ಬಹುಮತ ಸಿಗದ ಭೀತಿ: ಎಚ್‌.ಡಿ.ಕುಮಾರಸ್ವಾಮಿ

ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿರುವ ಪಕ್ಷದ ಕಚೇರಿಯಲ್ಲಿ ಬಿಜೆಪಿ ರಾಜ್ಯ ವಕ್ತಾರ  ಗಣೇಶ್ ಕಾರ್ಣಿಕ್ ಮತ್ತು ರಾಜ್ಯ ಉಪಾಧ್ಯಕ್ಷ ಶಂಕ್ರಪ್ಪ ಅವರ ನೇತೃತ್ವದಲ್ಲಿ ಗುಪ್ತಮತದಾನದ ಮೂಲಕ ಅಭಿಪ್ರಾಯ ಸಂಗ್ರಹಿಸಲಾಯಿತು. ಮಡಿಕೇರಿ ಮತ್ತು ವಿರಾಜಪೇಟೆ ಎರಡು ಕ್ಷೇತ್ರಗಳ ಅಭ್ಯರ್ಥಿಗಳ ಪರವಾಗಿ ಮತದಾನ ಮಾಡುವುದಕ್ಕೆ ಶಕ್ತಿ ಕೇಂದ್ರಗಳ ಪ್ರಮುಖರು, ಮಂಡಲ ಸಮಿತಿಗಳ ಪ್ರಮುಖರು ಹಾಗೂ ಜಿಲ್ಲಾ ಸಮಿತಿಗಳ ಮುಖಂಡರಿಗೆ ಅವಕಾಶ ನೀಡಲಾಗಿತ್ತು. ಪ್ರತಿ ವಿಧಾನಸಭಾ ಕ್ಷೇತ್ರದಿಂದ ತಲಾ 80 ಪ್ರಮುಖರಿಗೆ ಮತದಾನದ ಅವಕಾಶ ನೀಡಲಾಗಿತ್ತು. ಬ್ಯಾಲೆಟ್ ಪೇಪರ್ ನಲ್ಲಿ ಯಾರು ಅಭ್ಯರ್ಥಿ ಆಗಬೇಕು ಎಂದು ಪ್ರತಿಯೊಬ್ಬರು ಬರೆದು ತಮ್ಮ ಮೊಬೈಲ್ ಸಂಖ್ಯೆ ಸಹಿತ ಮತದಾನ ಚಲಾಯಿಸಿದರು. 

ಇದುವರೆಗೆ ಹಾಲಿ ಶಾಸಕರಿಬ್ಬರಿಗೆ ಮತ್ತೆ ಟಿಕೆಟ್ ಎನ್ನುವ ಚರ್ಚೆ ಇತ್ತಾದರೂ ಶುಕ್ರವಾರ ಅಭ್ಯರ್ಥಿಗಳ ಕುರಿತು ಅಭಿಪ್ರಾಯ ಸಂಗ್ರಹ ಇದ್ದ ಹಿನ್ನೆಲೆಯಲ್ಲಿ ಗುರುವಾರ ಅಪ್ಪಚ್ಚು ರಂಜನ್ ಅವರು ಮತ್ತೆ ಅಭ್ಯರ್ಥಿ ಆಗುವುದು ಬೇಡ ಎನ್ನುವ ತೀವ್ರ ಚರ್ಚೆಗಳಾಗಿವೆ. ಹೀಗಾಗಿ ಬಿಜೆಪಿಯಲ್ಲಿ ಅಪ್ಪಚ್ಚು ರಂಜನ್ ಅವರಿಗೆ ಟಿಕೆಟ್ ಕೊಡುವ ವಿಷಯದಲ್ಲಿ ತೀವ್ರ ವಿರೋಧವಿದ್ದರೆ, ಹೊಸ ಅಭ್ಯರ್ಥಿಗಾಗಿ ಸಾಕಷ್ಟು ತುಡಿತ ಇದೆ ಎನ್ನುವುದು ಬಹಿರಂಗವಾಗಿದೆ. ಅದರಲ್ಲೂ ಕುಶಾಲನಗರ ತಾಲ್ಲೂಕಿನಿಂದ ಬಂದಿದ್ದ ಬಿಜೆಪಿ ಜಿಲ್ಲಾ ಮುಖಂಡರೊಬ್ಬರು ಬಹಿರಂಗವಾಗಿಯೇ ಅಪ್ಪಚ್ಚು ರಂಜನ್ ಅವರಿಗೆ ಟಿಕೆಟ್ ನೀಡುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿದರು. 

30 ವರ್ಷಗಳಿಂದ ಒಬ್ಬರಿಗೆ ಟಿಕೆಟ್ ನೀಡಲಾಗಿದೆ. ಇದು ಬದಲಾವಣೆಯ ಕಾಲವಾಗಿದ್ದು, ಹೊಸಬರಿಗೆ ಟಿಕೆಟ್ ಕೊಡಬೇಕು ಎನ್ನುವುದು ನಮ್ಮ ಅಭಿಪ್ರಾಯ ಎಂದು ಹೇಳಿದರು.  ಒಟ್ಟಿನಲ್ಲಿ ಚುನಾವಣೆಗೆ ಘೋಷಣೆಯಾಗುವುದಕ್ಕೂ ಆರೇಳು ತಿಂಗಳು ಮೊದಲಿನಿಂದಲೇ ಸಿದ್ದತೆ ಮಾಡಿಕೊಳ್ಳುತ್ತಿದ್ದ ಬಿಜೆಪಿಯಲ್ಲಿ ಇದೀಗ ಒಂದಷ್ಟು ಅಸಮಾಧಾನ ಬಹಿರಂಗವಾಗತೊಡಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಗಣೇಶ್ ಕಾರ್ಣಿಕ್ ಅವರು ಪಕ್ಷದ ಆಂತರಿಕ ಪ್ರಜಾಪ್ರಭುತ್ವಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಹೀಗಾಗಿ ಗುಪ್ತ ಮತದಾನದ ಮೂಲಕ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ ಎಂದರು. 

ಸಿದ್ದು ಪಾಳೇಗಾರಿಕೆ ಮಾಡ್ಕೊಂಡು, ದೇವೇಗೌಡರನ್ನು ಹೆದರಿಸ್ತಿದ್ರು: ಎಚ್‌.ಡಿ.ಕುಮಾರಸ್ವಾಮಿ

ಇನ್ನು ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಅವರು ಮಾತನಾಡಿ ಯಾರು ಅಭ್ಯರ್ಥಿ ಆಗಬೇಕು ಎನ್ನುವ ವಿಷಯವನ್ನು ಪ್ರತಿಯೊಬ್ಬರಿಗೂ ಮುಕ್ತವಾಗಿ ತಿಳಿಸಲು ಅವಕಾಶ ನೀಡಿದೆ ಎಂದಿದ್ದಾರೆ. ಏಪ್ರಿಲ್ 10 ರಂದು ಬಿಜೆಪಿ ಅಭ್ಯರ್ಥಿಗಳನ್ನು ಘೋಷಿಸಲಿದ್ದು, ಅಂತಿಮವಾಗಿ ಯಾರಿಗೆ ಟಿಕೆಟ್ ಸಿಗುತ್ತೆ ಎನ್ನುವುದನ್ನು ಕಾದು ನೋಡಬೇಕಾಗಿದೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!