* ಸಿಎಂ ಬೊಮ್ಮಾಯಿ ದಿಲ್ಲಿಗೆ, ನಡ್ಡಾ ಜೊತೆ ಭೇಟಿ
* ಪೂರ್ಣ ಪ್ರಮಾಣದ ಸಂಪುಟ ರಚನೆ ಸಾಧ್ಯತೆ ಇಲ್ಲ
* ಸಂಪುಟ ಕಸರತ್ತು ಇಂದು ಫೈನಲ್
ಬೆಂಗಳೂರು(ಆ.02): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸಂಪುಟ ರಚನೆಗೆ ಸಂಬಂಧಿಸಿದಂತೆ ಬಹುತೇಕ ಸೋಮವಾರ ಸ್ಪಷ್ಟಚಿತ್ರಣ ಹೊರಬೀಳುವ ನಿರೀಕ್ಷೆಯಿದೆ. ಸೋಮವಾರ ಬೆಳಗ್ಗೆ ಅಥವಾ ಮಧ್ಯಾಹ್ನದ ಹೊತ್ತಿಗೆ ನೂತನ ಸಚಿವರ ಪಟ್ಟಿಅಂತಿಮಗೊಳ್ಳಬಹುದು ಎಂದು ತಿಳಿದುಬಂದಿದೆ.
ಭಾನುವಾರ ಸಂಜೆ ದಿಢೀರನೆ ದೆಹಲಿಗೆ ತೆರಳಿದ ಮುಖ್ಯಮಂತ್ರಿ ಬೊಮ್ಮಾಯಿ ಅವರು ತಡರಾತ್ರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ನಿವಾಸಕ್ಕೆ ತೆರಳಿ ಸುದೀರ್ಘ ಸಮಾಲೋಚನೆ ನಡೆಸಿದರು.
undefined
ಒಂದೇ ಹಂತದಲ್ಲಿ ಪೂರ್ಣ ಪ್ರಮಾಣದ ಸಂಪುಟ ರಚಿಸುವ ಸಾಧ್ಯತೆ ಕಡಮೆ ಎನ್ನಲಾಗುತ್ತಿದ್ದು, ಅತೃಪ್ತಿ ಸ್ಫೋಟಗೊಳ್ಳದಂತೆ ತಡೆಗಟ್ಟುವ ನಿಟ್ಟಿನಲ್ಲಿ ಕೆಲವು ಸ್ಥಾನಗಳನ್ನು ಖಾಲಿ ಉಳಿಸಿಕೊಂಡು ಸಂಪುಟ ರಚಿಸುವ ಲೆಕ್ಕಾಚಾರ ನಡೆದಿದೆ. ಒಂದು ವೇಳೆ ವರಿಷ್ಠರು ಏಕಕಾಲದಲ್ಲೇ ಸಂಪುಟವನ್ನು ಪೂರ್ಣ ಪ್ರಮಾಣದಲ್ಲಿ ರಚಿಸಲು ನಿರ್ದೇಶನ ನೀಡಿದಲ್ಲಿ ಮಾತ್ರ ಎಲ್ಲ ಸ್ಥಾನಗಳನ್ನೂ ಭರ್ತಿ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.
ಸೋಮವಾರ ವರಿಷ್ಠರು ಸಂಪುಟ ರಚನೆ ಪ್ರಕ್ರಿಯೆಗೆ ಹಸಿರು ನಿಶಾನೆ ತೋರಿದಲ್ಲಿ ಬಹುತೇಕ ಬುಧವಾರದ ಹೊತ್ತಿಗೆ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲು ವೇದಿಕೆ ಸಜ್ಜಾಗಿದೆ. ಇನ್ನು ವಿಳಂಬವೇ ಬೇಡ ಎಂದಾದಲ್ಲಿ ಸೋಮವಾರ ಸಂಜೆಯೇ ಪ್ರಮಾಣವಚನ ಸ್ವೀಕಾರಕ್ಕೆ ಸೂಚಿಸಿದರೂ ಅಚ್ಚರಿಯಿಲ್ಲ ಎಂಬ ಮಾತು ಕೇಳಿಬಂದಿದೆ.
ಶುಕ್ರವಾರ ಬೊಮ್ಮಾಯಿ ಅವರು ವರಿಷ್ಠರನ್ನು ಭೇಟಿ ಮಾಡಿದ ವೇಳೆ ಸಂಪುಟಕ್ಕೆ ಸೇರಬಹುದಾದವರ ಪಟ್ಟಿಯೊಂದನ್ನು ಸಿದ್ಧಪಡಿಸಿಕೊಂಡು ಬರುವಂತೆ ಸೂಚಿಸಿದ್ದರು. ಆ ಶನಿವಾರ ಬೆಂಗಳೂರಿಗೆ ವಾಪಸಾಗಿದ್ದ ಅವರು ಪಕ್ಷದ ವಿವಿಧ ನಾಯಕರೊಂದಿಗೆ ಚರ್ಚೆ ನಡೆಸಿ ಪಟ್ಟಿಯೊಂದನ್ನು ಸಿದ್ಧಪಡಿಸಿದರು. ದೆಹಲಿಯಿಂದ ಬುಲಾವ್ ಬರುತ್ತಿದ್ದಂತೆಯೇ ಸಂಜೆ ತೆರಳಿದರು.
ರಾಜ್ಯಾದ್ಯಂತ ಸುರಿಯುತ್ತಿರುವ ಮಳೆಯಿಂದ ಆಗಿರುವ ಹಾನಿ, ಪ್ರವಾಹ ಹಾಗೂ ಕೋವಿಡ್‌ನ ಮೂರನೇ ಅಲೆಯ ಭೀತಿ ಎದುರಾಗುತ್ತಿರುವುದರಿಂದ ಸಂಪುಟ ರಚನೆಯಾಗದಿದ್ದರೆ ಪರಿಸ್ಥಿತಿ ನಿಭಾಯಿಸಲು ಕಷ್ಟವಾಗುತ್ತದೆ. ಹೀಗಾಗಿ, ಸಂಪುಟ ರಚನೆಯನ್ನು ಯಾವುದೇ ಕಾರಣಕ್ಕೂ ವಿಳಂಬ ಮಾಡಬೇಡಿ ಎಂಬ ಮನವಿಯನ್ನು ಬೊಮ್ಮಾಯಿ ಅವರು ಶುಕ್ರವಾರವೇ ಮಾಡಿದ್ದರಿಂದ ವರಿಷ್ಠರು ಸಮಾಲೋಚನೆಗೆ ಮುಂದಾಗಿದ್ದಾರೆ.
ಭಾನುವಾರ ರಾತ್ರಿ ನಡ್ಡಾ ಅವರ ನಿವಾಸದಲ್ಲಿ ನಡೆದ ಸಮಾಲೋಚನೆ ವೇಳೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರೂ ಉಪಸ್ಥಿತರಿದ್ದರು. ಆದರೆ, ಮಾತುಕತೆಯ ವಿವರಗಳು ಸ್ಪಷ್ಟವಾಗಿ ಹೊರಬಿದ್ದಿಲ್ಲ. ಸೋಮವಾರ ಬೆಳಗ್ಗೆ ಅಥವಾ ಮಧ್ಯಾಹ್ನದ ಹೊತ್ತಿಗೆ ನೂತನ ಸಚಿವರ ಪಟ್ಟಿಅಂತಿಮಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
ಯಾರು ಇರುತ್ತಾರೆ? ಯಾರು ಸೇರುತ್ತಾರೆ?
- ಬಿಎಸ್‌ವೈ ಸಂಪುಟದಲ್ಲಿದ್ದ ಬಹುತೇಕರು ಮುಂದುವರಿಯುವ ಸಂಭವ
- ಚುನಾವಣೆ ಸನಿಹ ಹಿನ್ನೆಲೆಯಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳಲು ಒಲವು
- ಇಬ್ಬರು ಅಥವಾ ಮೂವರು ಹಿರಿಯ ಮಾಜಿ ಸಚಿವರಿಗೆ ಕೊಕ್ ಸಾಧ್ಯತೆ
- ಬೆಂಗಳೂರು, ಬೆಳಗಾವಿಗೆ ಸಚಿವ ಸ್ಥಾನ ಕಡಿತಗೊಳ್ಳುವ ಸಾಧ್ಯತೆ ಹೆಚ್ಚು
- ಸಂಘದಿಂದ ಸುನೀಲ್‌ಕುಮಾರ್, ದತ್ತಾತ್ರೇಯ ರೇವೂರು ಹೆಸರು ಪ್ರಸ್ತಾಪ
- ರಮೇಶ್ ಜಾರಕಿಹೊಳಿ ಬದಲು ಸೋದರ ಬಾಲಚಂದ್ರ ಜಾರಕಿಹೊಳಿಗೆ ಅದೃಷ್ಟ?
- ತಮ್ಮನ್ನು ಇಳಿಸಲು ಯತ್ನಿಸಿದವರಿಗೆ ಮಂತ್ರಿಗಿರಿ ಸಿಗದಂತೆ ಬಿಎಸ್‌ವೈ ಪಟ್ಟು?