
ಬೆಂಗಳೂರು (ಜು.19): ಬಿಡದಿ ಟೌನ್‌ಶಿಪ್ ಯೋಜನೆ(Bidadi township project) ವಿರೋಧಿಸಿ ಬಿಜೆಪಿ ಬಿಡದಿಯಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸುವ ಘೋಷಣೆ ಮಾಡಿದ ಮರುದಿನವೇ ಜೆಡಿಎಸ್ ಒಂದು ಹೆಜ್ಜೆ ಮುಂದೆ ಹೋಗಿ ದಿನಾಂಕ ಸಮೇತ ತನ್ನ ಪಾದಯಾತ್ರೆಯನ್ನು ಪ್ರಕಟಿಸಿದೆ.
ಮಿತ್ರಪಕ್ಷವಾದ ಬಿಜೆಪಿಯು ತನ್ನ ಜತೆ ಯಾವುದೇ ಸಮಾಲೋಚನೆ ನಡೆಸದೆ ಏಕಾಏಕಿ ಪಾದಯಾತ್ರೆ ಘೋಷಣೆ ಮಾಡಿದ ಬೆನ್ನಲ್ಲೇ ಅದಕ್ಕೆ ತಿರುಗೇಟು ನೀಡುವ ಉದ್ದೇಶದಿಂದ ಜೆಡಿಎಸ್ ಪಕ್ಷವು ಇದೀಗ ಪ್ರತ್ಯೇಕವಾಗಿ ಪಾದಯಾತ್ರೆ ನಡೆಸುವ ಘೋಷಣೆ ಮಾಡಿದೆ.
ಇದೇ ತಿಂಗಳ 30 ರಿಂದ ಮೂರು ದಿನಗಳ ಕಾಲ ಬಿಡದಿಯ ಬೈರಮಂಗಲ ವೃತ್ತದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ವರೆಗೆ ಬೃಹತ್ ಪಾದಯಾತ್ರೆ ನಡೆಸಲು ನಿರ್ಧರಿಸಲಾಗಿದೆ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಕೃಷ್ಣಾ ರೆಡ್ಡಿ ಹಾಗೂ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ತಿಳಿಸಿದ್ದಾರೆ.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಪಾದಯಾತ್ರೆಗೆ ಸಂಬಂಧಿಸಿದ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದರು.
ಬಿಡದಿ ಟೌನ್‌ಶಿಪ್ ಯೋಜನೆ ವಿರುದ್ಧ ಜೆಡಿಎಸ್ 495 ದಿನಗಳಿಂದ ನಿರಂತರ ಹೋರಾಟ ಮಾಡಿಕೊಂಡು ಬಂದಿದೆ. ಸರ್ಕಾರ ಹೊರಡಿಸಿರುವ ಅಂತಿಮ ಅಧಿಸೂಚನೆಯನ್ನು ತಕ್ಷಣ ಹಿಂಪಡೆಯಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆ. ಜೆಡಿಎಸ್ ಪಕ್ಷ ರೈತರ ಹೋರಾಟಕ್ಕೆ ಬೆಂಬಲ ನೀಡಿದೆ. ನಮ್ಮ ಹೋರಾಟಕ್ಕೆ ರೈತ ಮುಖಂಡರು ಮತ್ತು ರೈತರು ಅಭೂತಪೂರ್ವ ಬೆಂಬಲ ವ್ಯಕ್ತಪಡಿಸಿದ್ದಾರೆ.
ಈ ಯೋಜನೆಗೆ ಕೇವಲ ಶೇ.9 ರಷ್ಟು ಜನರಿಗೆ ಮಾತ್ರ ಒಪ್ಪಿಗೆ ಇದೆ. ನಾವು ಈಗಾಗಲೇ 11 ಕಿ.ಮೀ. ಪಾದಯಾತ್ರೆ ಮಾಡಿದ್ದೇವೆ. ಅಲ್ಲಿ ಹೈನುಗಾರಿಕೆ, ವ್ಯವಸಾಯ ಮಾಡಿಕೊಂಡು ರೈತರಿದ್ದಾರೆ. ಸಿಎಂ ಬಹಳ ಹಠಮಾರಿಯಾಗಿದ್ದು, ಈ ಯೋಜನೆ ಕೈಬಿಡಲ್ಲ. ಹೀಗಾಗಿ ನಾವು ಅವತ್ತೇ ಪಾದಯಾತ್ರೆ ಮಾಡುತ್ತೇವೆ ಎಂದು ಹೇಳಿದ್ದೇವು. ಜತೆಗೆ ವಿಧಾನಸೌಧ ಚಲೋ ಕೂಡ ಮಾಡುತ್ತೇವೆ ಎಂದು ಹೇಳಿದ್ದೆವು. ಸಿಎಂ ಡಿ.ಕೆ.ಶಿವಕುಮಾರ್ ಅವರು ರೈತರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಭೂಮಿ ಕೊಡಲು ಇಷ್ಟಇರುವವರು ಕೊಡಿ, ಬೇಡವಾದವರು ಬೇಡ ಎಂಬ ಹೇಳಿಕೆ ನೀಡುವ ಮೂಲಕ ರೈತರಲ್ಲಿ ಮುಖ್ಯಮಂತ್ರಿಗಳು ದ್ವಂದ್ವ ಸೃಷ್ಟಿಸಿದ್ದಾರೆ. ನಾವು ಬರ ಪ್ರವಾಸ ಮಾಡುವ ವೇಳೆ ಪಾದಯಾತ್ರೆ ಮಾಡುವ ಬಗ್ಗೆ ನಿರ್ಧಾರ ಮಾಡಿದ್ದೆವು. ಜು.30, 31 ಮತ್ತು ಆ.1 ವರೆಗೆ ಪಾದಯಾತ್ರೆ ಮಾಡುತ್ತೇವೆ. ಈ ಹಿಂದೆ ನಿಖಿಲ್ ಕುಮಾರಸ್ವಾಮಿ ಮತ್ತು ಪಕ್ಷದ ಹಿರಿಯ ನಾಯಕರ ನೇತೃತ್ವದಲ್ಲಿ ಕಾಂಚಗಾರಹಳ್ಳಿಯಿಂದ ಹೊಸೂರು ಗ್ರಾಮದವರೆಗೂ 11 ಕಿ.ಮೀ. ಪಾದಯಾತ್ರೆ ನಡೆಸಿ ಸರ್ಕಾರದ ನಿಲುವನ್ನು ಉಗ್ರವಾಗಿ ವಿರೋಧಿಸಲಾಯಿತು. ಇದೀಗ ಬೆಂಗಳೂರಿನ ಫ್ರೀಡಂ ಪಾರ್ಕ್‌ವರೆಗೆ ಪಾದಯಾತ್ರೆ ಮಾಡುತ್ತೇವೆ ಎಂದು ತಿಳಿಸಿದರು.
ಜು.30 ರಂದು ನಡೆಯಲಿರುವ ಪಾದಯಾತ್ರೆಗೆ ಪಕ್ಷದ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ಚಾಲನೆ ನೀಡಲಿದ್ದಾರೆ. ಇದರ ನೇತೃತ್ವ ನಿಖಿಲ್ ಕುಮಾರಸ್ವಾಮಿ ವಹಿಸಲಿದ್ದಾರೆ. ಜು.31 ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಪಾದಯಾತ್ರೆಯಲ್ಲಿ ಪಾಲ್ಗೊಂಡು ರೈತರಿಗೆ ಧೈರ್ಯ ತುಂಬಲಿದ್ದಾರೆ. ಆ.1 ರಂದು ಸಾವಿರಾರು ರೈತರೊಂದಿಗೆ ಪಾದಯಾತ್ರೆ ಫ್ರೀಡಂ ಪಾರ್ಕ್ ತಲುಪಲಿದ್ದು, ಅಲ್ಲಿ ಬೃಹತ್ ಪ್ರತಿಭಟನಾ ಸಮಾವೇಶದೊಂದಿಗೆ ಪಾದಯಾತ್ರೆ ಮುಕ್ತಾಯವಾಗಲಿದೆ ಎಂದು ಹೇಳಿದರು.
ಮುಖ್ಯಮಂತ್ರಿಗಳ ದ್ವಂದ್ವ ಹೇಳಿಕೆ:
ಈ ಸರ್ಕಾರಕ್ಕೆ ರೈತರ ಮೇಲೆ ಕಿಂಚಿತ್ತೂ ಕಾಳಜಿಯಿಲ್ಲ ಎನ್ನುವುದಕ್ಕೆ ಅವರ ನಡವಳಿಕೆಯೇ ಸಾಕ್ಷಿ. ಒಂದು ಕಡೆ ಸ್ವತಃ ಮುಖ್ಯಮಂತ್ರಿಗಳೇ ಮಾಧ್ಯಮಗಳ ಮುಂದೆ ನಿಂತು, ಈ ಬಿಡದಿ ಟೌನ್‌ಶಿಪ್ ಸಮಸ್ಯೆ ಬಗೆಹರಿಸಲು ಉನ್ನತ ಮಟ್ಟದ ಸಮಿತಿ ರಚಿಸುತ್ತೇವೆ ಎಂದು ಭರವಸೆ ನೀಡುತ್ತಾರೆ. ಆದರೆ ಇನ್ನೊಂದು ಕಡೆ, ಅದೇ ಬೆನ್ನಲ್ಲೇ ಗುಟ್ಟಾಗಿ ಮತ್ತೆ 4 ಹಳ್ಳಿಗಳಿಗೆ ಅಂತಿಮ ಅಧಿಸೂಚನೆ ಹೊರಡಿಸುತ್ತಾರೆ. ಸಿಎಂ ಅವರ ಈ ದ್ವಂದ್ವ ನೀತಿ ರೈತರಿಗೆ ಮಾಡಿದ ದ್ರೋಹವಲ್ಲವೇ ಎಂದು ಪ್ರಶ್ನಿಸಿದರು.
ಪಕ್ಷಾತೀತ ಹೋರಾಟಕ್ಕೆ ಕರೆ:
ಇದು ಕೇವಲ ಒಂದು ರಾಜಕೀಯ ಪಕ್ಷದ ಹೋರಾಟವಲ್ಲ. ಇದು ನಮ್ಮ ರೈತರ ಬದುಕಿನ ಹೋರಾಟ. ಹಾಗಾಗಿ ರಾಜ್ಯದ ಎಲ್ಲಾ ರೈತ ಸಂಘಟನೆಗಳು, ಪ್ರಗತಿಪರ ಚಿಂತಕರು, ರೈತ ಬಾಂಧವರು ಪಕ್ಷಾತೀತವಾಗಿ ಈ ಬೃಹತ್ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಮನವಿ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.