ಮರ್ಯಾದೆಗೆ ಅಂಜಿದ ಬಿಜೆಪಿ: ಶಾಸಕ ಮಾಡಾಳು ವಿರುಪಾಕ್ಷಪ್ಪ ಪಕ್ಷದಿಂದ ಉಚ್ಛಾಟನೆ..!

Published : Mar 06, 2023, 02:01 PM IST
ಮರ್ಯಾದೆಗೆ ಅಂಜಿದ ಬಿಜೆಪಿ: ಶಾಸಕ ಮಾಡಾಳು ವಿರುಪಾಕ್ಷಪ್ಪ ಪಕ್ಷದಿಂದ ಉಚ್ಛಾಟನೆ..!

ಸಾರಾಂಶ

ಚುನಾವಣೆ ಹೊಸ್ತಲಿನಲ್ಲಿ ಅಕ್ರಮ ಹಣ ಸಂಪಾದನೆ ಪ್ರಕರಣದಲ್ಲಿ ಲೋಕಾಯುಕ್ತ ದಾಳಿಗೆ ಬಿಜೆಪಿ ಶಾಸಕ ಸಿಲುಕಿದ್ದಾರೆ. ಹೀಗಾಗಿ, ಬಿಜೆಪಿ ತನ್ನ ಮಾನ ಉಳಿಸಿಕೊಳ್ಳಲು ಶಾಸಕನನ್ನೇ ಪಕ್ಷದಿಂದ ಉಚ್ಛಾಟನೆ ಮಾಡಲು ಮುಂದಾಗಿದೆ.

ಬೆಂಗಳೂರು (ಮಾ.06): ರಾಜ್ಯದ ವಿಧಾನಸಭಾ ಚುನಾವಣೆಯ ಹೊಸ್ತಿಲಿನಲ್ಲಿಯೇ ವಿಪಕ್ಷಗಳಿಂದ ಆಡಳಿತಾರೂಢ ಬಿಜೆಪಿ ವಿರುದ್ಧ ಶೇ.40 ಸರ್ಕಾರ ಎಂಬ ಆರೋಪ ವ್ಯಕ್ತವಾಗುತ್ತಿತ್ತು. ಇದರ ಬೆನ್ನಲ್ಲೇ ಚನ್ನಗಿರಿ ಬಿಜೆಪಿ ಶಾಸಕ ಮಾಡಾಳು ವಿರುಪಾಕ್ಷಪ್ಪ ಅವರು ಕೆಎಸ್‌ಡಿಎಲ್‌ ಅಧ್ಯಕ್ಷರಾಗಿ ಕೋಟ್ಯಂತರ ರೂ. ಲೂಟಿಗೆ ಮುಂದಾಗಿದ್ದಾಗ ಲೋಕಾಯುಕ್ತ ದಾಳಿ ನಡೆದಿದೆ. ಇದರಿಂದ ಬಿಜೆಪಿ ತನ್ನ ಮಾನ ಉಳಿಸಿಕೊಳ್ಳಲು ಪರದಾಡುತ್ತಿದ್ದು, ಶಾಸಕ ಮಾಡಾಳು ವಿರುಪಾಕ್ಷಪ್ಪ ಅವರನ್ನೇ ಪಕ್ಷದಿಂದ ಉಚ್ಛಾಟನೆ ಮಾಡಲು ಮುಂದಾಗಿದೆ ಎಂದು ತಿಳಿದುಬಂದಿದೆ.

ಬಿಜೆಪಿ ಸರ್ಕಾರವನ್ನು ಶೇ.40 ಕಮೀಷನ್‌ ಸರ್ಕಾರ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪೇಸಿಎಂ ಎಂದು ಕಾಂಗ್ರೆಸ್‌ ನಾಯಕರು ಟೀಕೆ ಮಾಡುತ್ತಿದ್ದಾರೆ. ಈಗ ವಿಧಾನಸಭಾ ಚುನಾವಣೆ ಹೊಸ್ತಿಲಿನಲ್ಲಿಯೇ ಕಾಂಗ್ರೆಸ್‌ನ ಮುಖಂಡರ ಆರೋಪಕ್ಕೆ ಸಾಕ್ಷಿ ಎಂಬಂತೆ ಟೆಂಡರ್‌ ಹಂಚಿಕೆ ವಿಚಾರವಾಗಿ ಶಾಸಕ ಮಾಡಾಳು ವಿರುಪಾಕ್ಷಪ್ಪ 40 ಲಕ್ಷ ರೂ. ಕಮೀಷನ್‌ ಪಡೆಯುವಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ಈಗ ಆಡಳಿತ ಪಕ್ಷ ಬಿಜೆಪಿಗೆ ಭಾರಿ ಮುಖಭಂಗವಾಗಿದೆ. ಇದರಿಂದ ಹೊರಬರಲು ಯಾವುದೇ ಕಾರಣಗಳು ಸಿಗದ ಹಿನ್ನೆಲೆಯಲ್ಲಿ ಶಾಸಕ ವಿರುಪಾಕ್ಷಪ್ಪನನ್ನೇ ಪಕ್ಷದಿಂದ ಉಚ್ಛಾಟನೆ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ. 

ಮನಸ್ಸು ಮಾಡಿದ್ರೆ ಮಾಡಾಳು ವಿರುದ್ಧ ಕೇಸ್‌ ತಪ್ಪಿ​ಸ​ಬ​ಹು​ದಿ​ತ್ತು: ಪ್ರಲ್ಹಾದ್ ಜೋಶಿ

ಗಂಭೀರ ಕ್ರಮಕ್ಕೆ ಶಿಸ್ತು ಸಮಿತಿ ಶಿಫಾರಸು: ಶಾಸಕ ಮಾಡಾಳು ವೀರೂಪಾಕ್ಷಪ್ಪ ವಿರುದ್ಧ ಬಿಜೆಪಿಯಿಂದ ಗಂಭೀರ ಕ್ರಮ ಕೈಗೊಳ್ಳಲಾಗುತ್ತಿದೆ. ಪಕ್ಷದಿಂದಲೇ ಮಾಡಾಳು ವೀರೂಪಾಕ್ಷಪ್ಪ ಉಚ್ಛಾಟನೆಗೆ ಕೇಂದ್ರ ಶಿಸ್ತು ಸಮಿತಿಗೆ ಶಿಫಾರಸು ಮಾಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ನೇತೃತ್ವದಲ್ಲಿ ರಾಜ್ಯ ಶಿಸ್ತು ಸಮಿತಿಯು ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡುವ ಬಗ್ಗೆ ಕ್ರಮ ಕೈಗೊಳ್ಳಲು ಮುಂದಾಗಿದೆ. ಈ ಬಗ್ಗೆ ಇಂದು ಸಂಜೆಯೊಳಗೆ ಆದೇಶ ಹೊರಬೀಳುವ ಸಾಧ್ಯತೆಯೂ ಇದೆ. ಸರ್ಕಾರ ಆಡಳಿತ ನಡೆಸಲು ಇನ್ನು ಕೆಲವೇ ದಿನಗಳು ಬಾಕಿಯಿದ್ದು, ಇದರಿಂದ ಸರ್ಕಾರ ಮರ್ಯಾದೆಯನ್ನು ಕಾಪಾಡಿಕೊಳ್ಳಲು ಪ್ರಯತ್ನ ಮುಂದುವರೆಸಿದೆ.

ಶಾಸಕರ ಪುತ್ರ ಪ್ರಶಾಂತ್‌ ಮಾಡಾಳು ಪೊಲೀಸರ ವಶಕ್ಕೆ: ಕಳೆದ ಮೂರ್ನಾಲ್ಕು ದಿನಗಳಿಂದ ಚನ್ನಗಿರಿ ಬಿಜೆಪಿ ಶಾಸಕ ಮಾಡಾಳು ವಿರುಪಾಕ್ಷಪ್ಪ ಅವರ ಮಗ ಲಂಚ ಹಾಗೂ ಟೆಂಡರ್‌ನ ನೀಡಲು ಕಮೀಷನ್‌ ಪಡೆಯುತ್ತಿದ್ದ ವೇಳೆ 40 ಲಕ್ಷ ರೂ. ನಗದು ಹಣದ ಸಮೇತವಾಗಿ ಲೋಕಾಯುಕ್ತರ ಬಲೆಗೆ ಬಿದ್ದಿದ್ದರು. ನಂತರ ಮನೆಯ ಹಾಗೂ ಕಚೇರಿಯ ಮೇಲೆ ದಾಳಿ ಮಾಡಿದಾಗ ಅಧಿಕೃತ ದಾಖಲೆಗಳಿಲ್ಲದ 8 ಕೋಟಿ ರೂ.ಗಿಂತ ಅಧಿಕ ಹಣ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲು ಲೋಕಾಯುಕ್ತ ಪೊಲೀಸರು ಎರಡು ದಿನಗಳಿಂದ ಹುಡುಕಾಡುತ್ತಿದ್ದರೂ ಕೈಗೆ ಸಿಗುತ್ತಿಲ್ಲ. ಇಂದು ಅವರ ಪುತ್ರ ಮಾಡಾಳು ಪ್ರಶಾಂತ ಅವರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮುಜುಗರ ತಪ್ಪಿಸಿಕೊಳ್ಳಲು ಯತ್ನ: ಇನ್ನು ರಾಜ್ಯದಲ್ಲಿ ನಾವು ಭ್ರಷ್ಟಾಚಾರ ರಹಿತ ಆಡಳಿತ ಮಾಡುತ್ತಿದ್ದು, ಕಾಂಗ್ರೆಸ್‌ ಸುಳ್ಳು ಆರೋಪಗಳನ್ನು ಮಾಡುತ್ತಿದೆ. ಯಾವುದೇ ಆರೋಪಗಳಿಗೆ ಸಾಕ್ಷಿಗಳು ಇದ್ದರೆ ದಾಖಲೆ ಸಮೇತ ಸರ್ಕಾರಕ್ಕೆ ಕೊಡಲಿ. ಭ್ರಷ್ಟಾಚಾರ ಮಾಡಿದವರನ್ನು ವಶಕ್ಕೆ ಪಡೆದು ಕೂಡಲೇ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದರು. ಆದರೆ, ಬಿಜೆಪಿಗೆ ಚುನಾವಣೆ ಸಂದರ್ಭದಲ್ಲಿ ದೊಡ್ಡ ಮುಜುಗರ ಉಂಟಾಗುವ ಘಟನೆ ಸಂಭವಿಸಿದೆ. ಒಂದೆಡೆ ಲೋಕಾಯುಕ್ತಕ್ಕೆ ತನಿಖೆ ಕೈಗೊಂಡು ಕ್ರಮ ಕೈಗೊಳ್ಳಲು ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ಅಭ್ಯರ್ಥಿಯನ್ನೇ ಕೈಬಿಡಲು ನಿರ್ಧರಿಸಿದ್ದು, ಈ ಬಗ್ಗೆ ಕೇಂದ್ರ ಶಿಸ್ತು ಸಮಿತಿಯೇ ಶಿಫಾರಸು ಮಾಡಿದೆ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ. 

ತಪ್ಪುಗಳನ್ನು ಮುಚ್ಚಿ ಹಾಕುವುದು ಕಾಂಗ್ರೆಸ್‌ ನೈತಿಕತೆ: ಸಿಎಂ ಬೊಮ್ಮಾಯಿ ಆರೋಪ

ಲೋಕಾಯುಕ್ತ ಕ್ರಮಕ್ಕೆ ತಡೆಯಿಲ್ಲ:
ರಾಜ್ಯದಲ್ಲಿ ಕೆಎಸ್‌ಡಿಎಲ್‌ ಅಧ್ಯಕ್ಷ ಮಾಡಾಳು ವಿರುಪಾಕ್ಷಪ್ಪ ಅವರ ವಿರುದ್ಧ ಅನಧಿಕೃತ ಹಣ ಸಂಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಕ್ರಮಗಳನ್ನು ಕೈಗೊಳ್ಳುವುದಕ್ಕೆ ಲೋಕಾಯುಕ್ತಕ್ಕೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಲಾಗಿದೆ. ಕಾನೂನು ಪ್ರಕಾರ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕೋ ಅದನ್ನು ಮಾಡಲಾಗುತ್ತದೆ. ಯಾವುದಕ್ಕೂ ನಾವು ತಡೆ ಒಡ್ಡುವುದಿಲ್ಲ.
- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
'ಅಹಿಂದ ಕಿಂಗ್ ಸಿದ್ದರಾಮಯ್ಯ' ಜೀವಂತ ಇರುವಾಗಲೇ ಪರ್ಯಾಯ ನಾಯಕತ್ವದ ಕೂಗು ಏಕೆ?: ಬೈರತಿ ಸುರೇಶ್