
ಬೆಂಗಳೂರು : ಕಳೆಗುಂದಿದ್ದ ರಾಜ್ಯ ಕಾಂಗ್ರೆಸ್‌ಗೆ ಶಕ್ತಿ ನೀಡಿ, ಹೊಸ ಚೈತನ್ಯ ತುಂಬಿದ್ದಲ್ಲದೇ ಸಾಲು-ಸಾಲು ಚುನಾವಣೆ ಗೆಲ್ಲುವ ಮೂಲಕ ಸಂಘಟನಾ ಚತುರ ಎನಿಸಿಕೊಂಡಿರುವ ಡಿ.ಕೆ. ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಆರು ವರ್ಷ ಪೂರೈಸಿದ್ದಾರೆ.
2019ರ ಲೋಕಸಭೆ ಚುನಾವಣೆಯಲ್ಲಿ ಕೇವಲ 1 ಸ್ಥಾನ ಗೆದ್ದು ಕಾಂಗ್ರೆಸ್ ನೀರಸಗೊಂಡಿದ್ದ ಸಂದರ್ಭದಲ್ಲಿ ಅಂದರೆ, 2020ರ ಮಾರ್ಚ್ 11ರಂದು ಪಕ್ಷದ ಅಧ್ಯಕ್ಷರಾಗಿ ನೇಮಕಗೊಂಡ ಶಿವಕುಮಾರ್ ಪಕ್ಷದ ಬಲವರ್ಧನೆ, ಕಾರ್ಯಕರ್ತರ ಸಂಘಟನೆ, ಚುನಾವಣಾ ರಣನೀತಿ ಮೂಲಕ ಬೂಸ್ಟ್ ನೀಡಿದರು. 2018ರ ವಿಧಾನಸಭೆ ಚುನಾವಣೆಯಲ್ಲಿ 80 ಸ್ಥಾನ ಗಳಿಸಿ ಅಧಿಕಾರ ಕಳೆದುಕೊಂಡಿದ್ದ ಕಾಂಗ್ರೆಸ್ 2019ರ ಲೋಕಸಭೆ ಚುನಾವಣೆಯಲ್ಲಿ ಕೇವಲ ಒಂದು ಸ್ಥಾನ ಗೆದ್ದು ಮುಖಭಂಗ ಅನುಭವಿಸಿತ್ತು. ಅಂತಹ ಸಮಯದಲ್ಲಿ ಪಕ್ಷದ ಚುಕ್ಕಾಣಿ ಹಿಡಿದು 2023ರ ವಿಧಾನಸಭೆ ಚುನಾವಣೆ ವೇಳೆಗೆ ಪಕ್ಷವನ್ನು ಬೃಹತ್ ಶಕ್ತಿಯಾಗಿ ನಿಲ್ಲಿಸಿದ್ದರು.
ಪರಿಣಾಮ ಚುನಾವಣೆಗೆ ಮೊದಲೇ 136 ಸ್ಥಾನ ಗೆಲ್ಲುತ್ತೇವೆ ಎಂದು ಹೇಳಿ ಅಷ್ಟೇ ಸಂಖ್ಯೆಯನ್ನು ಗೆಲ್ಲುವ ಮೂಲಕ ದೇಶದ ರಾಜಕೀಯ ಲೆಕ್ಕದಲ್ಲಿ ತಾವು ಪಕ್ಕಾ ಎಂದು ನಿರೂಪಿಸಿದ್ದರು.
ಜತೆಗೆ 2014ರ ಲೋಕಸಭೆ ಚುನಾವಣೆಯಲ್ಲೂ 9 ಸ್ಥಾನ ಗೆಲ್ಲುವಂತೆ ಮಾಡಲು ಯಶಸ್ವಿಯಾದರು. ಇತ್ತೀಚೆಗೆ ನಡೆದ ವಿಧಾನಸಭೆ ಉಪ ಚುನಾವಣೆಯಲ್ಲೂ ಶಿಗ್ಗಾವಿ, ಸಂಡೂರು ಹಾಗೂ ಚನ್ನಪಟ್ಟಣ ಕ್ಷೇತ್ರಗಳನ್ನು ಕ್ಲೀನ್ ಸ್ವೀಪ್ ಮಾಡಲು ಪ್ರಮುಖ ಪಾತ್ರ ಪೋಷಿಸಿದರು.
ಸಂಘಟನೆ ಬಲಪಡಿಸಿದ ಶಿವಕುಮಾರ್ ಬೂತ್ ಮಟ್ಟದಿಂದ ರಾಜ್ಯದ ಮಟ್ಟದವರೆಗೆ ಸಂಘಟನಾ ವ್ಯವಸ್ಥೆಯನ್ನು ಪುನರ್ ಸ್ಥಾಪಿಸಿದರು. ಸದಸ್ಯತ್ವ ಆಂದೋಲನದ ಮೂಲಕ ಯುವಕರು, ಮಹಿಳೆಯರು ಪಕ್ಷ ಸೇರ್ಪಡೆಗೊಳ್ಳುವಂತೆ ಮಾಡಿ ಪಕ್ಷ ಸಂಘಟನೆಗೆ ಹುರುಪು ನೀಡಿದರು.
ಕೊರೋನಾ ವೇಳೆ ಜನರ ಕಷ್ಟಕ್ಕೆ ಸ್ಪಂದನೆ:
ಕೊರೋನಾ ಅವಧಿಯಲ್ಲಿ ಉಚಿತ ಪ್ರಯಾಣ, ರೈತರಿಂದ ತರಕಾರಿ ಖರೀದಿ ಮಾಡಿ ಸಂತ್ರಸ್ತರಿಗೆ ಹಂಚುವ ಮೂಲಕ ರೈತರು ಹಾಗೂ ಸಂತ್ರಸ್ತರು ಇಬ್ಬರಿಗೂ ನೆರವಾಗುವುದು. ಕೊರೋನಾದಲ್ಲಿ ಚಿಕಿತ್ಸೆ, ಆಕ್ಸಿಜನ್ ಇಲ್ಲದೆ ಪರದಾಡಿದ್ದವರಿಗೆ ಪಕ್ಷದ ಮೂಲಕ ನೆರವಾಗಿದ್ದರು. ಜತೆಗೆ ಕೊರೋನಾ ವೇಳೆಯ ಬಿಜೆಪಿ ವೈಫಲ್ಯಗಳನ್ನು ಎತ್ತಿ ತೋರಿದರು.
ಕೊರೋನಾ ವೇಳೆ ನಡೆದಿದ್ದ ಅವ್ಯವಹಾರ, 40% ಕಮಿಷನ್, ಪೇ-ಸಿಎಂ ಅಂತಹ ವಿಶಿಷ್ಟ ಹೋರಾಟಗಳ ಮೂಲಕ ಬಿಜೆಪಿ ಸರ್ಕಾರದ ಭ್ರಷ್ಟಾಚಾರವನ್ನು ಜನರ ಮುಂದೆ ತೆರೆದಿಟ್ಟರು. ಚಿಲುಮೆ ಮತದಾರರ ಪಟ್ಟಿ ಹಗರಣ, ರೈತರು, ಯುವಕರು ಹಾಗೂ ಉದ್ಯೋಗ ಸಮಸ್ಯೆಗಳ ಬಗ್ಗೆ ಜನಾಂದೋಲನ ರೂಪಿಸಿದ್ದರು.
ಆಪರೇಷನ್ ಹಸ್ತದ ರೂವಾರಿ:
2023ರ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದಲ್ಲಿದ್ದ ಕೆಲವು ನಾಯಕರನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆಯುವಲ್ಲಿಯೂ ಡಿ.ಕೆ ಶಿವಕುಮಾರ್ ಪಾತ್ರ ಇತ್ತು. ಲಕ್ಷ್ಮಣ ಸವದಿ, ಜಗದೀಶ್ ಶೆಟ್ಟರ್ ಅವರಂತಹ ನಾಯಕರನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆಯುವಲ್ಲಿ ಯಶಸ್ವಿ ಆದರು. ಉಪ ಚುನಾವಣೆ ವೇಳೆ ಸಿ.ಪಿ. ಯೋಗೇಶ್ವರ್ ಅವರನ್ನು ಸೆಳೆಯುವ ಮೂಲಕ ಜೆಡಿಎಸ್‌ಗೆ ಟಕ್ಕರ್ ನೀಡಿದ್ದರು.
ಮೇಕೆದಾಟು ಪಾದಯಾತ್ರೆ, ರಾಜಕೀಯ ತಿರುವು:
ಡಿ.ಕೆ. ಶಿವಕುಮಾರ್ ಅವರ ಮಹತ್ವಾಕಾಂಕ್ಷಿ ಮೇಕೆದಾಟು ಪಾದಯಾತ್ರೆ ರಾಜಕೀಯಕ್ಕೆ ದೊಡ್ಡ ತಿರುವು ನೀಡಿತು. ಕೋವಿಡ್ ವೇಳೆಯಲ್ಲೇ ಕಾವೇರಿ ನೀರಿಗೆ ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಒತ್ತಾಯಿಸಿ ಆಗಿನ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರ ಜತೆಗೂಡಿ ಸಾವಿರಾರು ಕಾರ್ಯಕರ್ತರೊಂದಿಗೆ ಎರಡು ಹಂತದಲ್ಲಿ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸಿದ್ದರು. ತನ್ಮೂಲಕ ಪಕ್ಷದ ಶಕ್ತಿ ಪ್ರದರ್ಶನ ನಡೆಸಿದ್ದಲ್ಲದೆ ಹೊಸ ಹುರುಪು ನೀಡಿದರು.
ರಾಹುಲ್‌ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯನ್ನೂ ರಾಜ್ಯದಲ್ಲಿ ಯಶಸ್ವಿಯಾಗಿ ನಡೆಸಿದ ಶ್ರೇಯವೂ ಡಿ.ಕೆ. ಶಿವಕುಮಾರ್ ನೇತೃತ್ವದ ಕೆಪಿಸಿಸಿಗೆ ಸಲ್ಲುತ್ತದೆ.
100 ಕಾಂಗ್ರೆಸ್ ಭವನ ನಿರ್ಮಾಣದ ಕಂಕಣ:
ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಪ್ರಧಾನ ಕಚೇರಿಯ ರೂಪುರೇಷೆ ಬದಲಿಸಿದ ಅವರು, ಪಕ್ಕದಲ್ಲೇ ಭಾರತ್ ಜೋಡೋ ಭವನ ನಿರ್ಮಿಸಿದರು. ರೇಸ್‌ಕೋರ್ಸ್ ರಸ್ತೆ ಬಳಿ ಬೃಹತ್ ಕಟ್ಟಡ ನಿರ್ಮಾಣಕ್ಕೂ ರೂಪುರೇಷೆ ಸಿದ್ಧಪಡಿಸಿದ್ದಾರೆ.
ಜತೆಗೆ ಬೆಳಗಾವಿಯಲ್ಲಿ ಮಹಾತ್ಮಗಾಂಧೀಜಿ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದ ಎಐಸಿಸಿ ಅಧಿವೇಶನದ 100ನೇ ವಾರ್ಷಿಕೋತ್ಸವ ಅಂಗವಾಗಿ ರಾಜ್ಯದಲ್ಲಿ ಒಟ್ಟು 100 ಕಾಂಗ್ರೆಸ್ ಭವನ ನಿರ್ಮಿಸಲು ಪಣ ತೊಟ್ಟಿದ್ದಾರೆ.
ಅಧ್ಯಕ್ಷರಾಗಿ ಡಿಕೆ ಸಾಧನೆ ಹಾದಿ
- 2018ರ ವಿಧಾನಸಭಾ ಚುನಾವಣೆ, 2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಕಳಪೆ ಸಾಧನೆ
- ಇಂಥ ಸಂಕಷ್ಟಮಯ ಸ್ಥಿತಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದ ಮಹತ್ವದ ಹೊಣೆ ಹೊತ್ತ ಡಿಕೆಶಿ
- ಕೊರೋನಾ ವೇಳೆ ಉಚಿತ ಪ್ರಯಾಣ, ಜನರಿಗೆ ಆಕ್ಸಿಜನ್, ರೈತರಿಂದ ಉತ್ಪನ್ನ ಖರೀದಿಸಿ ನೆರವು
- 40% ಕಮಿಷನ್, ಪೇ-ಸಿಎಂ ಅಂತಹ ವಿಶಿಷ್ಟ ಹೋರಾಟಗಳ ಮೂಲಕ ಬಿಜೆಪಿ ವಿರುದ್ಧ ಹೋರಾಟ
- ಮತದಾರರ ಪಟ್ಟಿ ಹಗರಣ, ರೈತರು, ಯುವಕರು, ಉದ್ಯೋಗ ಸಮಸ್ಯೆಗ ಬಗ್ಗೆ ಜನಾಂದೋಲನ
- 2023ರ ವಿಧಾನಸಭಾ ಚುನಾವಣೆಯಲ್ಲಿ ಭಾರೀ ರಣತಂತ್ರ ರೂಪಿಸಿ 136 ಸ್ಥಾನ ಗೆಲ್ಲುವ ಭವಿಷ್ಯ
- ಹೇಳಿದಷ್ಠೇ ಸ್ಥಾನ ಗೆದ್ದು ಪಕ್ಕಾ ಚುನಾವಣಾ ರಣತಂತ್ರಗಾರ ಎಂದು ಸಾಬೀತುಪಡಿಸಿದ ನಾಯಕ
ಇಂದು ಕೈ ಶಾಸಕರಿಗೆ ಡಿಕೆಶಿ ಡಿನ್ನರ್ ಪಾರ್ಟಿ
ಕೆಪಿಸಿಸಿ ಅಧ್ಯಕ್ಷರಾಗಿ ಆರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮಾರ್ಚ್ 10ರ ಮಂಗಳವಾರ ಸಂಜೆ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಪಕ್ಷದ ಎಲ್ಲಾ ಶಾಸಕರಿಗೆ ಔತಣ ಕೂಟ ಏರ್ಪಡಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರು ಹಾಗೂ ಪಕ್ಷದ ಶಾಸಕರು, ಪರಿಷತ್ ಸದಸ್ಯರು ಸೇರಿದಂತೆ ಪ್ರಮುಖ ನಾಯಕರಿಗೆ ಶಿವಕುಮಾರ್ ಅವರು ಆಹ್ವಾನ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೇರಿ ಬಹುತೇಕರು ಔತಣಕೂಟದಲ್ಲಿ ಭಾಗವಹಿಸುವುದು ಖಚಿತವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.