ರಾಜ್ಯದಲ್ಲೂ ಬಿಹಾರ ರೀತಿ ಮತಪಟ್ಟಿ ವಿಶೇಷ ಪರಿಷ್ಕರಣೆ ಪ್ರಕ್ರಿಯೆ ಆರಂಭ: ರಾಜ್ಯ ಚುನಾವಣಾಧಿಕಾರಿ

Published : Sep 18, 2025, 08:45 AM IST
voter list 2025

ಸಾರಾಂಶ

ಪ್ರಸ್ತುತ ರಾಜ್ಯದಲ್ಲಿ 5.40 ಕೋಟಿಗೂ ಅಧಿಕ ಮತದಾರರು ಇದ್ದಾರೆ. ಈ ಬಾರಿ ನಡೆಸಲು ಉದ್ದೇಶಿರುವ ಎಸ್ಐಆರ್‌ನಲ್ಲಿ 2002ರ ಮತದಾರರ ಪಟ್ಟಿ ಹಾಗೂ ಈಗಿನ ಮತದಾರರ ಪಟ್ಟಿ ನಡುವಿನ ವ್ಯತ್ಯಾಸ ಪರಿಶೀಲಿಸುತ್ತೇವೆ. ಮತದಾರರ ಹೆಸರು, ವಿಳಾಸ ಇತ್ಯಾದಿ ಅಂಶಗಳನ್ನು ತಾಳೆ ಮಾಡುತ್ತೇವೆ.

ಬೆಂಗಳೂರು (ಸೆ.18): ಬಿಹಾರ ಮಾದರಿಯಲ್ಲೇ ಕರ್ನಾಟಕದಲ್ಲೂ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ(ಎಸ್ಐಆರ್‌) ಸಂಬಂಧ ಸಿದ್ಧತೆಗಳು ಆರಂಭಗೊಂಡಿವೆ. ಈ ಮಾಸಾಂತ್ಯದೊಳಗೆ ಎಲ್ಲಾ ತರಬೇತಿ ಪ್ರಕ್ರಿಯೆಗಳು ಮುಗಿಯಲಿದ್ದು, ಕೇಂದ್ರ ಚುನಾವಣಾ ಆಯೋಗದ ಅಧಿಸೂಚನೆ ಹೊರಬಿದ್ದ ಬಳಿಕ ರಾಜ್ಯದಲ್ಲಿ ಎಸ್ಐಆರ್‌ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್‌ ತಿಳಿಸಿದ್ದಾರೆ. ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯಲ್ಲಿ ಎಸ್ಐಆರ್‌ ಕುರಿತು ನಡೆದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಎಸ್ಐಆರ್‌ ನಡೆಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ನಡೆಸುತ್ತಿದ್ದೇವೆ.

ಸೆಪ್ಟೆಂಬರ್‌ 23ರೊಳಗೆ 58 ಸಾವಿರಕ್ಕೂ ಅಧಿಕ ಬೂತ್‌ ಮಟ್ಟದ ಅಧಿಕಾರಿಗಳ ತರಬೇತಿ ಪೂರ್ಣಗೊಳ್ಳಲಿದೆ. ನಂತರ ಕೇಂದ್ರ ಚುನಾವಣಾ ಆಯೋಗದ ಸೂಚನೆ ಮೇರೆಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಈ ಎಸ್ಐಆರ್‌ ಪ್ರಮುಖ ಉದ್ದೇಶ ರಾಜ್ಯದಲ್ಲಿ ಅರ್ಹ ಮತದಾರರು ಮತದಾರರ ಪಟ್ಟಿಯಲ್ಲಿರುವುದನ್ನು ಖಾತರಿಪಡಿಸುವುದು ಮತ್ತು ಅನರ್ಹ ಮತದಾರರನ್ನು ಮತದಾರರ ಪಟ್ಟಿಯಿಂದ ಕೈ ಬಿಡುವುದಾಗಿದೆ. ರಾಜ್ಯದಲ್ಲಿ ಕೊನೆದಾಗಿ 2002ನೇ ಸಾಲಿನಲ್ಲಿ ಎಸ್ಐಆರ್‌ ನಡೆದಿತ್ತು. ಆಗ ರಾಜ್ಯದಲ್ಲಿ 3.40 ಕೋಟಿ ಮತದಾರರು ಇದ್ದರು. ಆ ಮತದಾರರ ಪಟ್ಟಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ ಎಂದರು.

ಪ್ರಸ್ತುತ ರಾಜ್ಯದಲ್ಲಿ 5.40 ಕೋಟಿಗೂ ಅಧಿಕ ಮತದಾರರು ಇದ್ದಾರೆ. ಈ ಬಾರಿ ನಡೆಸಲು ಉದ್ದೇಶಿರುವ ಎಸ್ಐಆರ್‌ನಲ್ಲಿ 2002ರ ಮತದಾರರ ಪಟ್ಟಿ ಹಾಗೂ ಈಗಿನ ಮತದಾರರ ಪಟ್ಟಿ ನಡುವಿನ ವ್ಯತ್ಯಾಸ ಪರಿಶೀಲಿಸುತ್ತೇವೆ. ಮತದಾರರ ಹೆಸರು, ವಿಳಾಸ ಇತ್ಯಾದಿ ಅಂಶಗಳನ್ನು ತಾಳೆ ಮಾಡುತ್ತೇವೆ. ಈ ಎಸ್‌ಐಆರ್‌ ಪ್ರಕ್ರಿಯೆಗೆ ಕನಿಷ್ಠ ಮೂರು ತಿಂಗಳ ಕಾಲಾವಕಾಶ ಬೇಕಾಗಬಹುದು ಎಂದು ಹೇಳಿದರು.

ಮತಪಟ್ಟಿ ಪರಿಷ್ಕರಣೆ ಚಾಲ್ತಿಯಲ್ಲಿದೆ: ರಾಜ್ಯದಲ್ಲಿ ಪ್ರಸ್ತುತ ಮತಪಟ್ಟಿ ಪರಿಷ್ಕರಣೆ ಪ್ರಕ್ರಿಯೆಗಳು ಚಾಲ್ತಿಯಲ್ಲಿವೆ. ಸುಮಾರು 10 ಸಾವಿರ ಮತಪಟ್ಟಿ ಪರಿಷ್ಕರಣೆ ಅರ್ಜಿಗಳು ಬಾಕಿಯಿವೆ. ಇವುಗಳನ್ನು ತ್ವರಿತ ವಿಲೇವಾರಿ ಮಾಡಿಸುವಂತೆ ಎಲ್ಲಾ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸೂಚಿಸಲಾಗಿದೆ. ಕೇಂದ್ರ ಚುನಾವಣಾ ಆಯೋಗದಿಂದ ಎಸ್ಐಆರ್‌ ಅಧಿಸೂಚನೆ ಹೊರಬಿದ್ದ ತಕ್ಷಣ ಈ ಮತಪಟ್ಟಿ ಪರಿಷ್ಕರಣೆ ಪ್ರಕ್ರಿಯೆಗಳು ಸ್ಥಗಿತವಾಗಲಿವೆ ಎಂದರು.

ಕ್ಯೂಆರ್ ಕೋಡ್‌ ಮುದ್ರಿತ ಗಣತಿ ನಮೂನೆ: ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಪ್ರತಿ ಮನೆಗೆ ತೆರಳಿ ಪ್ರತಿ ಮತದಾರರ ಅಸಲಿಯತ್ತು ಕುರಿತು ಪರಿಶೀಲಿಸಲಾಗುವುದು. ಅಂತೆಯೇ ಮತದಾರರ ನಾಗರಿಕತ್ವವನ್ನು ಪರಿಶೀಲಿಸಲಾಗುವುದು. ಪ್ರತಿ ಮತದಾರನಿಗೆ ಕ್ಯೂಆರ್‌ ಕೋಡ್ ಒಳಗೊಂಡ ಎರಡು ಗಣತಿ ನಮೂನೆ ಮುದ್ರಿಸುತ್ತೇವೆ. ಈ ಪೈಕಿ ಒಂದನ್ನು ಮತಗಟ್ಟೆ ಅಧಿಕಾರಿ ಚುನಾವಣಾ ಆಯೋಗಕ್ಕೆ ಸಲ್ಲಿಸಲಿದ್ದಾರೆ. ಮತ್ತೊಂದು ಮತದಾರನ ಬಳಿಯೇ ಇರಲಿದೆ. ಆಯೋಗಕ್ಕೆ ಸಲ್ಲಿಕೆಯಾದ ಮಾಹಿತಿ ಆಯೋಗದ ಸರ್ವರ್‌ನಲ್ಲಿ ಇರಲಿದೆ. ಎಸ್ಐಆರ್ ಪ್ರಕ್ರಿಯೆ ವೇಳೆ ಪ್ರತಿ ಮತದಾರ ಘೋಷಣಾ ಪತ್ರಕ್ಕೆ ಕಡ್ಡಾಯವಾಗಿ ಸಹಿ ಹಾಕಬೇಕು. ತಪ್ಪು ಮಾಹಿತಿ ನೀಡಿರುವುದು ಕಂಡು ಬಂದಲ್ಲಿ ಘೋಷಣಾ ಪತ್ರದ ಆಧಾರದ ಮೇಲೆ ಆ ವ್ಯಕ್ತಿಯ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಅವಕಾಶವಿದೆ ಎಂದು ಹೇಳಿದರು.

ಆನ್‌ಲೈನ್‌ನಲ್ಲಿಯೂ ಮಾಹಿತಿಗೆ ಅವಕಾಶ: ಮತಗಟ್ಟೆ ಮಟ್ಟದ ಅಧಿಕಾರಿ (ಬಿಎಲ್‌ಒ) ಮನೆಗೆ ಭೇಟಿ ನೀಡಿದ ವೇಳೆ ಮತದಾರ ಇಲ್ಲವಾದರೆ, ಆತ ತಾನಿರುವ ಸ್ಥಳದಿಂದ ಆನ್‌ಲೈನ್ ಮೂಲಕ ಎಸ್‌ಐಆರ್‌ಗೆ ಒಳಗಾಗಲು ಅವಕಾಶವಿದೆ. ಗಣತಿ ನಮೂನೆಯಲ್ಲಿನ ಭಾವ ಚಿತ್ರ ಬದಲಾವಣೆ ಸೇರಿದಂತೆ ಇತರೆ ಮಾಹಿತಿ ತಿದ್ದುಪಡಿಗೆ ಅವಕಾಶವಿದೆ. ಎಸ್ಐಆರ್‌ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಕರಡು ಮತದಾರರ ಪಟ್ಟಿಗೆ ಆಕ್ಷೇಪ ಸಲ್ಲಿಕೆಗೂ ಅವಕಾಶ ಕಲ್ಪಿಸಲಾಗುವುದು ಎಂದು ವಿ.ಅನ್ಬುಕುಮಾರ್‌ ತಿಳಿಸಿದರು.

ಒಂದಕ್ಕಿಂತ ಹೆಚ್ಚು ಕಡೆ ಹೆಸರಿದ್ದಲ್ಲಿ ಪತ್ತೆ: ಎಸ್ಐಆರ್‌ ಪ್ರಕ್ರಿಯೆ ವೇಳೆ ದಾಖಲಿಸಲಾದ ಮಾಹಿತಿ ಮತ್ತು ಮತದಾರನ ಭಾವಚಿತ್ರವನ್ನು ತಂತ್ರಜ್ಞಾನದ ಮುಖಾಂತರ ಪರಿಶೀಲಿಸಲಾಗುವುದು. ಶೇ.65ರಷ್ಟು ಹೋಲಿಕೆ ಕಂಡು ಬಂದಲ್ಲಿ ಆ ಬಗ್ಗೆ ನಿಗಾವಹಿಸಲಾಗುವುದು. ಇದರಿಂದ ಒಂದಕ್ಕಿಂತ ಹೆಚ್ಚು ಕಡೆ ಮತದಾರರ ಪಟ್ಟಿಯಲ್ಲಿ ಹೆಸರಿರುವ ಮತದಾರರನ್ನು ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ.

ನಿಗದಿತ 12 ದಾಖಲೆ ಪೈಕಿ ಒಂದು ಸಲ್ಲಿಕೆ

ಪಿಂಚಣಿದಾರರ ಗುರುತಿನ ಚೀಟಿ/ ಪಿಂಚಣಿ ಸಂದಾಯ ಆದೇಶ, ಜನನ ಪ್ರಮಾಣಪತ್ರ, ಪಾಸ್‌ಪೋರ್ಟ್‌, ಮಾನ್ಯತೆ ಪಡೆದ ಶೈಕ್ಷಣಿಕ ಪ್ರಮಾಣಪತ್ರ, ಕಾಯಂ ನಿವಾಸ ಪ್ರಮಾಣಪತ್ರ, ಅರಣ್ಯ ಹಕ್ಕು ಪ್ರಮಾಣಪತ್ರ, ಜಾತಿ ಪ್ರಮಾಣ ಪತ್ರ, ರಾಷ್ಟ್ರೀಯ ಪೌರತ್ವ ರಿಜಿಸ್ಟರ್‌, ಕುಟುಂಬ ರಿಜಿಸ್ಟರ್‌, ಸರ್ಕಾರಿ ಜಮೀನು, ಮನೆ ಹಂಚಿಕೆ ಪ್ರಮಾಣ ಪತ್ರ, ಆಧಾರ್‌ ಕಾರ್ಡ್‌ ಸೇರಿದಂತೆ 12 ದಾಖಲೆಗಳನ್ನು ಮಾತ್ರ ಎಸ್ಐಆರ್‌ಗೆ ಪರಿಗಣಿಸಲಾಗುತ್ತದೆ. ವಿಶೇಷ ಪ್ರಕರಣಗಳ ಸಂದರ್ಭದಲ್ಲಿ ಮತದಾರರ ನೋಂದಣಿ ಅಧಿಕಾರಿ ತೀರ್ಮಾನ ಕೈಗೊಳ್ಳಲಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಡಕೆ ಬೆಳೆಗಾರರ ನೆರವಿಗೆ ಕೇಂದ್ರ ತುರ್ತಾಗಿ ಮಧ್ಯಪ್ರವೇಶಿಸಲಿ: ಸಂಸದ ಬಿ.ವೈ.ರಾಘವೇಂದ್ರ
ರಾಜ್ಯದಲ್ಲಿ ರಾಜಕೀಯ ಹೊಲಸೆದ್ದು, ಎಲ್ಲ ಪಕ್ಷಗಳು ಗಬ್ಬೆದ್ದು ಹೋಗಿವೆ: ಕೆ.ಎಸ್.ಈಶ್ವರಪ್ಪ