ಅಮೆರಿಕ ರೀತಿ ಬಿಹಾರ ರೋಚಕ ಹಣಾಹಣಿ: ಅಮಿತ್‌ ಶಾ ಇಲ್ಲದ ಮೊದಲ ಚುನಾವಣೆ!

By Kannadaprabha NewsFirst Published Nov 11, 2020, 7:30 AM IST
Highlights

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್‌ ಟ್ರಂಪ್‌ ಮತ್ತು ಜೋ ಬೈಡೆನ್‌ ನಡುವೆ ರೋಚಕ ಹಣಾಹಣಿ| ಬಿಹಾರದಲ್ಲೂ ಎನ್‌ಡಿಎ ಹಾಗೂ ಮಹಾಘಟಬಂಧನ್ ನಡುವೆ ಜಿದ್ದಾಜಿದ್ದಿನ ಫೈಟ್| ಅಮಿತ್‌ ಶಾ ಇಲ್ಲದ ಮೊದಲ ಚುನಾವಣೆ!

ಪಟನಾ(ನ.11): ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್‌ ಟ್ರಂಪ್‌ ಮತ್ತು ಜೋ ಬೈಡೆನ್‌ ನಡುವೆ ರೋಚಕ ಹಣಾಹಣಿ ಏರ್ಪಟ್ಟಂತೆ ಬಿಹಾರ ಜವಿಧಾನಸಭೆ ಚುನಾವಣೆಯಲ್ಲೂ ಎನ್‌ಡಿಎ ಮತ್ತು ಮಹಾಗಠಬಂಧನದ ನಡುವೆ ಮತ ಎಣಿಕೆಯ ಕೊನೆಯ ಹಂತದವರೆಗೂ ಬಿರುಸಿನ ಪೈಪೋಟಿ ನಡೆಯಿತು. ಅಂತಿಮವಾಗಿ ಸರಳ ಬಹುಮತ ಪಡೆಯುವಲ್ಲಿ ಎನ್‌ಡಿಎ ಸಫಲವಾಯಿತು.

ಮತ ಎಣಿಕೆ ಆರಂಭದಲ್ಲಿ ಗಠಬಂಧನ ಮುನ್ನಡೆ ಸಾಧಿಸಿದ್ದರೆ, ಬಳಿಕ ಎನ್‌ಡಿಎ ಮುನ್ನಡೆ ಕಾಯ್ದುಕೊಂಡಿತು. ಎರಡೂ ಮೈತ್ರಿ ಕೂಟಗಳು 110, 120 ಕ್ಷೇತ್ರಗಳ ಆಸುಪಾಸಿನಲ್ಲಿ ಮುನ್ನಡೆ ಸಾಧಿಸಿದ್ದವು. ಅಂತಿಮ ಹಂತದ ಮತ ಎಣಿಕೆವರೆಗೂ ಜಿದ್ದಾಜಿದ್ದಿನ ಹಾವು ಏಣಿ ಆಟ ಮುಂದುವರೆದಿತ್ತು.

ಕೊನೇ ಕ್ಷಣದಲ್ಲಿ ಎನ್‌ಡಿಎ ಬಹುಮತ ಲಭಿಸಿ ಗಠಬಂಧನಕ್ಕೆ ನಿರಾಸೆಯಾಯಿತು. ನ.3ರಂದು ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲೂ ಟ್ರಂಪ್‌ ಮತ್ತು ಬೈಡೆನ್‌ ನಡುವೆ ಇದೇ ರೀತಿಯ ಜಿದ್ದಾಜಿದ್ದಿ ನಡೆದು 4 ದಿನಗಳ ನಂತರ ಫಲಿತಾಂಶ ಡೆಮಾಕ್ರಟಿಕ್‌ ಪಕ್ಷದ ಬೈಡೆನ್‌ ಕಡೆಗೆ ವಾಲಿತ್ತು.

ಅಮಿತ್‌ ಶಾ ಇಲ್ಲದ ಮೊದಲ ಚುನಾವಣೆ!

ಈ ಬಾರಿಯ ಬಿಹಾರ ಚುನಾವಣೆಯಲ್ಲಿನ ಗೆಲುವು ಬಿಜೆಪಿ ಮತ್ತು ಎನ್‌ಡಿಎ ಪಾಲಿಗೆ ಹೊಸ ಅನುಭವ. ಕಾರಣ, ಬಿಜೆಪಿಯ ಚುನಾವಣಾ ಚಾಣಕ್ಯ ಖ್ಯಾತಿಯ ಅಮಿತ್‌ ಶಾ ಈ ಬಾರಿ ಬಿಹಾರಕ್ಕೆ ಚುನಾವಣಾ ಪ್ರಚಾರಕ್ಕೆ ಆಗಮಿಸಲು ಆಗಿರಲಿಲ್ಲ. ತೆರೆಮರೆಯಲ್ಲಿ, ಮೈತ್ರಿ ಕುದುರಿಸುವಲ್ಲಿ ಅಮಿತ್‌ ಶಾ ಪ್ರಮುಖ ಪಾತ್ರ ವಹಿಸಿದ್ದರಾದರೂ, ನೇರವಾಗಿ ಪ್ರಚಾರ ಕಣಕ್ಕೆ ಧುಮುಕಿರಲಿಲ್ಲ.

ಅಮಿತ್‌ ಶಾ ರಾಷ್ಟ್ರ ರಾಜಕಾರಣಕ್ಕೆ ಧುಮುಕಿದ ಬಳಿಕ ಅವರ ಬಹಿರಂಗ ಪಾತ್ರವಿಲ್ಲದೇ ಬಿಜೆಪಿ ಎದುರಿಸಿದ ಮೊದಲ ಚುನಾವಣೆ ಇದಾಗಿತ್ತು. ಹೀಗಾಗಿಯೇ ಚುನಾವಣೆಯ ಫಲಿತಾಂಶದ ಬಗ್ಗೆ ಸಾಕಷ್ಟುಕುತೂಹಲವಿತ್ತು. ಆ ಕುತೂಹಲಕ್ಕೆ ತೆರೆ ಎಳೆಯುವಂತೆ ಇದೀಗ ಎನ್‌ಡಿಎ ಮೈತ್ರಿಕೂಟ ಜಯಗಳಿಸಿ ಮತ್ತೊಮ್ಮೆ ಅಧಿಕಾರದತ್ತ ಹೆಜ್ಜೆ ಇಟ್ಟಿದೆ.

click me!