ಕಲಘಟಗಿ ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಬಿಗ್ ಫೈಟ್: ಹಾಲಿ‌ ಶಾಸಕನ ವಿರುದ್ಧ ಭುಗಿಲೆದ್ದ ಅಸಮಾಧಾನ

By Govindaraj S  |  First Published Mar 31, 2023, 9:42 PM IST

ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಟಿಕೆಟ್ ಆಕಾಂಕ್ಷಿಗಳ ಮೈ ಕೊಡವಿ ನಿಂತಿದ್ದಾರೆ. ಅದರಲ್ಲೂ ಕಲಘಟಗಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಥಳೀಯ ಅಸ್ಮಿತೆ ಮತ್ತೊಮ್ಮೆ ಸ್ಪೋಟಗೊಂಡಿದೆ. 


ಹುಬ್ಬಳ್ಳಿ (ಮಾ.31): ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಟಿಕೆಟ್ ಆಕಾಂಕ್ಷಿಗಳ ಮೈ ಕೊಡವಿ ನಿಂತಿದ್ದಾರೆ. ಅದರಲ್ಲೂ ಕಲಘಟಗಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಥಳೀಯ ಅಸ್ಮಿತೆ ಮತ್ತೊಮ್ಮೆ ಸ್ಪೋಟಗೊಂಡಿದೆ. ಹಾಲಿ ಶಾಸಕ ನಿಂಬಣ್ಣವರ್ ವಿರುದ್ಧ ತೊಡೆತಟ್ಟಿರುವ ಹದಿಮೂರು ಜನ ಆಕಾಂಕ್ಷಿಗಳು ಬಿಜೆಪಿ ಟಿಕೆಟ್‌ಗಾಗಿ ವರಿಷ್ಠರ ಮನೆ ಬಾಗಿಲು ತಟ್ಟುತ್ತಿದ್ದಾರೆ. ಧಾರವಾಡ ಜಿಲ್ಲೆಯ ಕಲಘಟಗಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ಗಾಗಿ ಬಿಗ್ ಫೈಟ್ ಶುರುವಾಗಿದೆ. ಹಾಲಿ ಬಿಜೆಪಿ ಶಾಸಕ ಸಿ.ಎಮ್. ನಿಂಬಣ್ಣವರ್‌ಗೆ ವಯಸ್ಸಾಗಿದ್ದು, ಶಾಸಕರಾಗಿ ಗೆದ್ದ ಬಳಿಕ ನಿರೀಕ್ಷಿತ ಪ್ರಮಾಣದ ಕೆಲಸ ಮಾಡಿಲ್ಲ.‌ 

ಈ ಬಾರೀ ಶಾಸಕ ಸಿಎಮ್ ನಿಂಬಣ್ಣನವರ್  ಬಿಟ್ಟು ಹೊಸಬರಿಗೆ ಟಿಕೆಟ್ ಕೊಡುವಂತೆ ಸ್ವಪಕ್ಷೀಯರೇ ಕೂಗೆಬ್ಬಿಸಿದ್ದಾರೆ. ಬಿಜೆಪಿಯ ಹದಿಮೂರು ಜನ ಆಕಾಂಕ್ಷಿಗಳು ವರಿಷ್ಠರನ್ನು ಭೇಟಿಯಾಗಿ ಟಿಕೆಟ್ ಕೊಡುವಂತೆ ಮನವಿ ಸಲ್ಲಿಸುತ್ತಿದ್ದಾರೆ. ಒಂದೇ ಗುಂಪಿನಲ್ಲಿ ತೆರಳಿ ತಮ್ಮಲ್ಲಿಯೇ ಒಬ್ಬರಿಗೆ ಟಿಕೆಟ್ ಕೊಡುವಂತೆ ಮನವಿ ಮಾಡುತ್ತಿದ್ದಾರೆ. ವಿ.ಎಸ್. ಪಾಟೀಲ್, ವಾಯ್.ಎನ್. ಪಾಟೀಲ್, ಸದಾನಂದ ಚಿಂತಾಮಣಿ, ಡಾ.‌ಮಹೇಶ್ ತಿಪ್ಪಣ್ಣವರ್, ಮಹಾಂತೇಶ್ ತಹಶೀಲ್ದಾರ್, ಶಿವಾನಂದ ಹಿರೇಮಠ, ಬ್ರಹ್ಮಕುಮಾರ್ ಅಳಗವಾಡಿ, ಬಸವರಾಜ ಕೆಲಗೇರಿ, ಬಸವರಾಜ ಕರಡಿಕೊಪ್ಪ, ಶಂಕರ ಬಸವರಡ್ಡಿ, ಕಲ್ಮೇಶ್ ಹಾವೇರಿಪೇಟ, ವಿಠ್ಠಲ ಯಡಳ್ಳಿ, ಕರಿಯಪ್ಪ ಅಮ್ಮಿನಬಾವಿ ಬಿಜೆಪಿ ಟಿಕೆಟ್‌ಗೆ‌ ಮನವಿ ಸಲ್ಲಿಸಿದ್ದಾರೆ. 

Latest Videos

undefined

Kodagu: ವಿಶ್ವ ಕಂಡ ವೀರಾಸೇನಾನಿ ಜನರಲ್ ತಿಮ್ಮಯ್ಯ: ಜಿಲ್ಲಾಡಳಿತ ವತಿಯಿಂದ 117ನೇ ಜನ್ಮ ದಿನಾಚರಣೆ

ಪಕ್ಷಕ್ಕಾಗಿ ದುಡಿಯುತ್ತಾ ಬಂದಿರುವ ತಮ್ಮಲ್ಲೇ ಒಬ್ಬರಿಗೆ ಟಿಕೆಟ್ ಕೊಟ್ಟರೆ ಒಟ್ಟಾಗಿ ಹೋರಾಡಿ ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಬಿಜೆಪಿ ಪ್ರಮುಖರಿಗೆ ಮನವರಿಕೆ ಮಾಡಲು ಪ್ರಯತ್ನಿಸುತ್ತಿದ್ದಾರೆ‌‌. 2018ರ ವಿಧಾನಸಭಾ ಚುನಾವಣೆಯಲ್ಲಿ ಕಲಘಟಗಿ ಕ್ಷೇತ್ರದ ಬಿಜೆಪಿ ಟಿಕೆಟ್ ಹುಬ್ಬಳ್ಳಿಯ ಮಹೇಶ್ ತೆಂಗಿನಕಾಯಿ ಅವರಿಗೆ ಕೊಡಲಾಗಿತ್ತು‌. ಆದರೆ ಸ್ಥಳೀಯ ಅಸ್ಮಿತೆ ಮುಂದಿಟ್ಟುಕೊಂಡು ಇದೇ ಮುಖಂಡರು ಪ್ರತಿಭಟನೆ ನಡೆಸಿದ್ದರು. ಹುಬ್ಬಳ್ಳಿಯ ಮಹೇಶ್ ತೆಂಗಿನಕಾಯಿಗೆ ಟಿಕೆಟ್ ಕೊಡದಂತೆ ಹೋರಾಟ ಮಾಡಿ ಬಿ ಫಾರ್ಮ್ ವಾಪಸ್ ಪಡೆಯುವಂತೆ ಮಾಡಿದ್ದರು‌. ಸ್ಥಳೀಯರ ಹೋರಾಟಕ್ಕೆ ಮಣಿದ ಬಿಜೆಪಿ ಹೈಕಮಾಂಡ್ ಕಲಘಟಗಿ ಕ್ಷೇತ್ರದವರಾದ ಸಿ.ಎಮ್. ನಿಂಬಣ್ಣವರ್‌ಗೆ ಕಣಕ್ಕಿಳಿಸಿತ್ತು. 

ಈ ವೇಳೆ ಸಿ.ಎಮ್‌. ನಿಂಬಣ್ಣವರ್ ತನ್ನ ಕೊನೆಯ ಚುನಾವಣೆ ಅಂತಾ ಬಿಂಬಿಸಿದ್ದರು‌. ತನಗೆ ವಯಸ್ಸಾಗಿದ್ದು ಒಂದು ಅವಕಾಶ ಕೊಡಿ, ಮುಂದಿನ ಚುನಾವಣೆಯಲ್ಲಿ ಯುವಕರಿಗೆ ಆದ್ಯತೆ ಕೊಡೋಣ ಅಂತಾ ಭರವಸೆ ನೀಡಿದ್ದರು. ಆದರೆ ಈಗ ಸಿ.ಎಮ್. ನಿಂಬಣ್ಣವರ್ ಉಲ್ಟಾ ಹೊಡೆದಿದ್ದಾರೆ‌‌. ಈ ಬಾರಿ ಮತ್ತೊಮ್ಮೆ ಚುನಾವಣಾ ಕಣಕ್ಕೆ ಇಳಿಯುವ ಆಸೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸ್ಥಳೀಯ ಬಿಜೆಪಿ ಕಾರ್ಯಕರ್ತ ಪಡೆ ಶಾಸಕ ನಿಂಬಣ್ಣವರ್ ವಿರುದ್ಧ ಸಿಡಿದೆದ್ದಿದೆ‌. ಸ್ಥಳೀಯ ಹದಿಮೂರು ಜನರ ಪಟ್ಟಿಯಲ್ಲಿಯೇ ಒಬ್ಬರಿಗೆ ಟಿಕೆಟ್ ಕೊಡುವವರೆಗೆ ಹೋರಾಟ ಮಾಡುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ. 

ಶಾಸಕ ಸಿ.ಎಮ್. ನಿಂಬಣ್ಣವರ್‌ಗೆ 75 ವರ್ಷ ವಯಸ್ಸಾಗಿದೆ. ಅವರ ಬದಲಿಗೆ ಬೇರೆಯವರಿಗೆ ಟಿಕೆಟ್ ಕೊಡಲು ಬಿಜೆಪಿ ಹೈಕಮಾಂಡ್ ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ. ಜಗದೀಶ್ ಶೆಟ್ಟರ್ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಗಳಾಗಿದ್ದ ಮಹೇಶ್ ತೆಂಗಿನಕಾಯಿ, ಡಾ. ಮಹೇಶ್ ನಾಲವಾಡ್ ಅಥವಾ ಆರ್‌ಎಸ್‌ಎಸ್ ಪ್ರಮುಖರೊಬ್ಬರಿಗೆ ಕಲಘಟಗಿ ಟಿಕೆಟ್ ಫೈನಲ್ ಮಾಡಬಹುದು ಅನ್ನೋ ಮಾತಿದೆ‌. ಅಲ್ಲದೆ ಕಲಘಟಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್‌ಗೆ ಫೈಟ್ ನಡೆಸಿರುವ ಸಂತೋಷ್ ಲಾಡ್ ಮತ್ತು ನಾಗರಾಜ್ ಛಬ್ಬಿ ನಡುವೆ ಯಾರಿಗೆ ಟಿಕೆಟ್ ಕೈತಪ್ಪಿದ್ರೂ ಬಿಜೆಪಿ ಕದ ತಟ್ತಾರೆ ಎನ್ನಲಾಗುತ್ತಿದೆ‌. 

ಕೊಡಗಿನ ಅಭ್ಯರ್ಥಿಗಳ ಆಯ್ಕೆಗೆ ಮತದಾನದ ಮೂಲಕ ಅಭಿಪ್ರಾಯ ಸಂಗ್ರಹಿಸಿದ ಬಿಜೆಪಿ!

ಹೀಗಾಗಿ ಹೊರಗಿನವರಿಗೆ ಟಿಕೆಟ್ ಬೇಡ. ಪಕ್ಷಕ್ಕಾಗಿ ದುಡಿದವರಿಗೇ ಬಿಜೆಪಿ ಟಿಕೆಟ್ ಕೊಡಬೇಕು ಅಂತಾ ಹದಿಮೂರು ಜನರ ತಂಡ ಶತಾಯಗತಾಯ ಪ್ರಯತ್ನ ನಡೆಸುತ್ತಿದೆ‌. ಇದು ಬಿಜೆಪಿ ವರಿಷ್ಠರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು ಯಾರಿಗೆ ಟಿಕೆಟ್ ಫೈನಲ್ ಆಗುತ್ತೆ ಅನ್ನೋ ಕುತೂಹಲಕ್ಕೆ ಕಾರಣವಾಗಿದೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!