ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಜೋರಾದ ಹಳ್ಳಿ ರಾಜಕೀಯ| ಪಕ್ಷಗಳ ಬೆಂಬಲಿತರಿಗೆ ಸ್ವತಂತ್ರರ ಸೆಡ್ಡು| ಈಗಾಗಲೇ 16 ಗ್ರಾಮ ಪಂಚಾಯಿತಿಗಳ 284 ಸ್ಥಾನಗಳಲ್ಲಿ 19 ಸ್ಥಾನಕ್ಕೆ ಅವಿರೋಧ ಆಯ್ಕೆ| ಉಳಿದ 263 ಸ್ಥಾನಕ್ಕೆ ಅಂತಿಮ ಕಣದಲ್ಲಿರುವ 673 ಜನರು|
ರಾಘವೇಂದ್ರ ಹೆಬ್ಬಾರ್
ಭಟ್ಕಳ(ಡಿ.16): ತಾಲೂಕಿನಲ್ಲಿ ಹಳ್ಳಿ ರಾಜಕೀಯ ಜೋರಾಗಿದ್ದು, 16 ಗ್ರಾಮ ಪಂಚಾಯತ್‌ನಲ್ಲೂ ಚುನಾವಣೆಯ ಅಖಾಡ ರಂಗೇರಿದೆ. ಈಗಾಗಲೇ 16 ಗ್ರಾಮ ಪಂಚಾಯಿತಿಗಳ 284 ಸ್ಥಾನಗಳಲ್ಲಿ 19 ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿದ್ದು, ಉಳಿದ 263 ಸ್ಥಾನಕ್ಕೆ 673 ಜನರು ಅಂತಿಮ ಕಣದಲ್ಲಿದ್ದಾರೆ. ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪಕ್ಷದ ಚಿಹ್ನೆ ಮೇಲೆ ಸ್ಪರ್ಧಿಸಲು ಅವಕಾಶಲ್ಲದಿದ್ದರೂ ಅಭ್ಯರ್ಥಿಗಳ ಆಯ್ಕೆಯಿಂದ ಹಿಡಿದು ಎಲ್ಲವೂ ಪಕ್ಷಗಳ ಮೇಲ್ವಿಚಾರಣೆಯಲ್ಲೇ ನಡೆಯುತ್ತಿರುವುದು ವಿಶೇಷ.
undefined
ಗ್ರಾಮ ಪಂಚಾಯತ್ ಚುನಾವಣೆ ಗ್ರಾಮೋದ್ಧಾರ, ಸ್ಥಳೀಯ ಅಭಿವೃದ್ಧಿ, ಸಮಸ್ಯೆ ಬಗೆಹರಿಯುವಿಕೆ ದೃಷ್ಟಿಯಿಂದ ಬಹಳಷ್ಟುಪ್ರಾಮುಖ್ಯತೆ ಪಡೆದಿದೆ. ಭಟ್ಕಳ ತಾಲೂಕಿನ 16 ಗ್ರಾಮ ಪಂಚಾಯತ್‌ಗಳ ಪೈಕಿ ಕಳೆದ ಸಲ 14 ಗ್ರಾಪಂಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಅಧಿಕಾರದಲ್ಲಿದ್ದರೆ, ಎರಡು ಪಂಚಾಯತ್‌ಗಳಲ್ಲಿ ಮಾತ್ರ ಬಿಜೆಪಿ ಬೆಂಬಲಿಗರು ಅಧಿಕಾರ ಪಡೆದಿದ್ದರು. ಆದರೆ. ಈ ಸಲ ಕಾಂಗ್ರೆಸ್ ಶಾಸಕರು ಅಧಿಕಾರದಲ್ಲಿಲ್ಲ. ಭಟ್ಕಳದಲ್ಲಿ ಬಿಜೆಪಿ ಶಾಸಕರಿದ್ದು, ಹೆಚ್ಚಿನ ಗ್ರಾಪಂಗಳಲ್ಲಿ ಬೆಂಬಲಿಗರನ್ನು ಅಧಿಕಾರಕ್ಕೆ ತರಲು ಪ್ರಯತ್ನ ನಡೆಸಿದ್ದಾರೆ. ಹಾಗಂತ ಕಾಂಗ್ರೆಸ್ ಹಾಗೂ ಮಾಜಿ ಶಾಸಕರು ಸುಮ್ಮನೇ ಕೂತಿಲ್ಲ. ಅವರೂ ಪಂಚಾಯತ್‌ಗಳಲ್ಲಿ ಈ ಹಿಂದೆ ತಮ್ಮ ಬೆಂಬಲಿಗರ ಅಧಿಕಾರವನ್ನು ಉಳಿಸಿಕೊಳ್ಳಲು ಶತಪ್ರಯತ್ನ ನಡೆಸಿದ್ದಾರೆ.
ಈ ಸಲದ ಗ್ರಾಮ ಪಂಚಾಯತ್ ಚುನಾವಣೆ ಹಾಲಿ ಮತ್ತು ಮಾಜಿ ಶಾಸಕರು ತೀವ್ರ ಪ್ರತಿಷ್ಠೆಯನ್ನಾಗಿಸಿಕೊಂಡಿದ್ದು, ಭವಿಷ್ಯದ ದೃಷ್ಟಿಯಿಂದ ಇಬ್ಬರಿಗೂ ಇದು ಮಹತ್ವದ್ದೆನಿಸಿದೆ. ಈ ಸಲದ ಚುನಾವಣೆಯಲ್ಲಿ ಮೀಸಲಾತಿಯಿಂದ ಸ್ಪರ್ಧಿಸಲಾಗದವರು ತಮ್ಮ ಪತ್ನಿ, ಸಹೋದರ, ಸಹೋದರಿ ಮತ್ತಿತರ ಸಂಬಂಧಿಕರನ್ನು ಕಣಕ್ಕಿಳಿಸುವುದರ ಮೂಲಕ ಮತ್ತೊಮ್ಮೆ ಪರೋಕ್ಷವಾಗಿ ಗ್ರಾಪಂ ಗದ್ದುಗೆಗೇರಲು ಪ್ರಯತ್ನ ನಡೆಸಿದ್ದಾರೆ.
'ಕೋಡಿಹಳ್ಳಿ ಚಂದ್ರಶೇಖರ ಅನಗತ್ಯವಾಗಿ ಮೂಗು ತೂರಿಸುತ್ತಿದ್ದಾರೆ'
ಕೆಲ ಪಂಚಾಯತ್‌ಗಳಲ್ಲಿ ರಾಜಕೀಯ ಪಕ್ಷಗಳ ಹಿರಿಯ ಮುಖಂಡರೂ ಕಣಕ್ಕಿಳಿದು ಅದೃಷ್ಟಪರೀಕ್ಷೆಗೆ ಮುಂದಾಗಿದ್ದಾರೆ. ಹಲವು ಪಂಚಾಯಿತಿಗಳಲ್ಲಿ ಹಿರಿಯರ ಜೊತೆ ಯುವಕರೂ ಕಣಕ್ಕಿಳಿದಿರುವುದು ವಿಶೇಷ. ಚುನಾವಣೆಯಲ್ಲಿ ಮತದಾರರು ಸ್ಥಳೀಯ ಸಮಸ್ಯೆ, ಜಾತಿ ಲೆಕ್ಕಾಚಾರ, ಸ್ಪರ್ಧಿಸಿದ ಅಭ್ಯರ್ಥಿಯ ಸ್ಪಂದಿಸುವ ಗುಣ ನೋಡಿ ಮತಚಲಾಯಿಸುವ ಸಾಧ್ಯತೆ ಇದೆ. ಒಟ್ಟಾರೆಯಾಗಿ ತಾಲೂಕಿನಲ್ಲಿ ಗ್ರಾಮ ಪಂಚಾಯತ್ ಚುನಾವಣೆಗೆ ಒಂದು ವಾರ ಬಾಕಿ ಇರುವಾಗಲೇ ಕಣ ರೋಚಕವಾಗುತ್ತಿದೆ. ಅಭ್ಯರ್ಥಿಗಳ ಮನೆಮನೆ ಪ್ರಚಾರ, ಮತದಾರರ ಓಲೈಕೆಯೂ ಜೋರಾಗಿದೆ. ಹಾಲಿ, ಮಾಜಿ ಶಾಸಕರು, ರಾಜಕೀಯ ಪಕ್ಷಗಳು ತಮ್ಮ ಬೆಂಬಲಿತ ಅಭ್ಯರ್ಥಿಗಳಿಗೆ ಸಾಥ್ ನೀಡುತ್ತಿರುವುದು ಎಲ್ಲಡೆ ಕಂಡು ಬಂದಿದೆ. ಸ್ಥಳೀಯ ಮಟ್ಟದ ಚುನಾವಣೆ ಇದಾಗಿರುವುದರಿಂದ ಅಭ್ಯರ್ಥಿಯ ಗೆಲುವಿಗೆ ಪಕ್ಷದ ಬೆಂಬಲ ಮತ್ತು ಜಾತಿ ಲೆಕ್ಕಾಚಾರವೂ ಮುಖ್ಯವಾಗಲಿದೆ.
ಭಟ್ಕಳದಲ್ಲಿ 92,528 ಮತದಾರರು
ಭಟ್ಕಳದ 16 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 46,965 ಪುರುಷ, 45,563 ಮಹಿಳಾ ಮತದಾರರಿದ್ದು, ಒಟ್ಟು 92,528 ಮತದಾರರಿದ್ದಾರೆ. 610 ಜನ ಮತಗಟ್ಟೆಮಟ್ಟದ ಅಧಿಕಾರಿಗಳನ್ನು ನೇಮಿಸಲಾಗಿದ್ದು 8 ಸೆಕ್ಟರ್ ಅಧಿಕಾರಿಗಳ ತಂಡ ಕಾರ್ಯಾಚಣೆ ನಡೆಸಲಿದೆ. 137 ಮತಗಟ್ಟೆಗಳು ಇರಲಿದ್ದು, ಪ್ರತಿ ಮತಗಟ್ಟೆಗಳಲ್ಲಿಯೂ ಸಿದ್ದತೆ ಮಾಡಿಕೊಳ್ಳಲಾಗಿದೆ. 38 ಸೂಕ್ಷ್ಮ ಹಾಗೂ 17 ಅತಿಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದ್ದು, ಎಲ್ಲಡೆ ನಿಗಾ ಇಡಲಾಗಿದೆ.
ಈ ಬಾರಿಯ ಗ್ರಾಪಂ ಚುನಾವಣೆಯಲ್ಲಿ ಹೆಚ್ಚಿನ ಪಂಚಾಯತ್‌ಗಳಲ್ಲಿ ಬಿಜೆಪಿ ಪಕ್ಷದ ಬೆಂಬಲಿತರು ಆಯ್ಕೆಯಾಗುವ ಸಾಧ್ಯತೆ ಇದೆ. ಶಾಸಕರು, ಪಕ್ಷದವರು ಹೀಗೆ ಎಲ್ಲರೂ ಸೇರಿ ಬೆಂಬಲಿತರನ್ನು ಗೆಲ್ಲಿಸಲು ಪ್ರಯತ್ನ ನಡೆಸಿದ್ದೇವೆ ಎಂದು ಭಟ್ಕಳ ಬಿಜೆಪಿ ಮಂಡಳಾಧ್ಯಕ್ಷ ಸುಬ್ರಾಯ ದೇವಡಿಗ ತಿಳಿಸಿದ್ದಾರೆ.
ಭಟ್ಕಳದ 16 ಗ್ರಾಪಂನಲ್ಲೂ ಪಕ್ಷದ ಕಾಂಗ್ರೆಸ್ ಬೆಂಬಲಿತರನ್ನು ಕಣಕ್ಕಿಳಿಸಲಾಗಿದೆ. ಕಳೆದ ಸಲ ಪಕ್ಷದ ಬೆಂಬಲಿತರು ಅಧಿಕಾರದಲ್ಲಿದ್ದ ಪಂಚಾಯತ್‌ಗಳನ್ನು ಉಳಿಸಿಕೊಳ್ಳಲು ಪ್ರಯತ್ನ ನಡೆಸಲಾಗಿದೆ. ಪಕ್ಷದ ಬೆಂಬಲಿತರಾಗಿ ಕಳೆದ ಸಲ ಗೆದ್ದಷ್ಟೆ ಅಭ್ಯರ್ಥಿಗಳು ಗೆಲ್ಲುವ ನಿರೀಕ್ಷೆ ಇದೆ ಎಂದು ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ ನಾಯ್ಕ ಹೇಳಿದ್ದಾರೆ.
ಗ್ರಾಪಂ ಚುನಾವಣೆಯಲ್ಲಿ ಕೆಲವೆಡೆ ನಮ್ಮ ಜೆಡಿಎಸ್ ಬೆಂಬಲಿತರು ಸ್ಪರ್ಧೆಯಲ್ಲಿದ್ದು, ಅವರನ್ನು ಗೆಲ್ಲಿಸುವ ಪ್ರಯತ್ನ ನಡೆಸಲಾಗಿದೆ ಎಂದು ಭಟ್ಕಳ ಜೆಡಿಎಸ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ತಿಳಿಸಿದ್ದಾರೆ.