
ರಾಮನಗರ (ಜು.19): ಬಿಡದಿ ಟೌನ್ ಶಿಪ್) ಯೋಜನೆ ಪರವಾಗಿ ಮತ್ತು ವಿರೋಧಿಸಿ ರೈತರು ನಡೆಸುತ್ತಿರುವ ಚಳವಳಿ ತಾರಕಕ್ಕೇರಿದೆ. ಮತ್ತೊಂದೆಡೆ ಜೆಡಿಎಸ್ ಮತ್ತು ಬಿಜೆಪಿ ನಡುವೆ ಕ್ರೆಡಿಟ್ ವಾರ್ ಶುರುವಾಗಿದೆ.
ಕಾಂಗ್ರೆಸ್ ನೇತೃತ್ವದ ರಾಜ್ಯಸರ್ಕಾರ ಬಿಡದಿ ಟೌನ್ ಶಿಪ್ ಯೋಜನೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ಈ ವಿಚಾರ ಸದ್ಯ ರಾಜ್ಯ ಮಾತ್ರವಲ್ಲದೆ ದೇಶದಲ್ಲಿಯೂ ಚರ್ಚೆಯಾಗುತ್ತಿರುವ ಹಾಗೂ ರಾಜಕೀಯ ಜಿದ್ದಾಜಿದ್ದಿಗೂ ಕಾರಣವಾಗಿದೆ.
ಭೂ ಸ್ವಾಧೀನ ವಿರುದ್ಧ ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿಗಳ ರೈತರ ಭೂ ಹಿತರಕ್ಷಣಾ ಸಮಿತಿ ರಚಿಸಿಕೊಂಡು ಹೋರಾಟ ಆರಂಭಿಸಿದರು. ಬೈರಮಂಗಲ ವೃತ್ತವನ್ನೇ ಚಳವಳಿಯ ಕೇಂದ್ರ ಸ್ಥಳವನ್ನಾಗಿ ಮಾಡಿಕೊಂಡಿತು. ರೈತರ ಹೋರಾಟಕ್ಕೆ ಅನೇಕ ರೈತ, ದಲಿತ ಮತ್ತು ಕನ್ನಡಪರ ಸಂಘಟನೆಗಳು ಬೆಂಬಲ ನೀಡಿ ಶಕ್ತಿ ತುಂಬಿದವು. ಜೆಡಿಎಸ್ ಹೋರಾಟವನ್ನು ಬೆಂಬಲಿಸಿದ್ದು ಮಾತ್ರವಲ್ಲದೆ ಸಂಪೂರ್ಣವಾಗಿ ಭಾಗವಹಿಸಿತು. ಅದಾದ ಬಳಿಕ ಬಿಜೆಪಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿತು..
ಇದೀಗ ಟೌನ್ ಶಿಪ್ ಯೋಜನೆ ವಿರುದ್ಧ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಹೋರಾಟ ತೀವ್ರಗೊಳಿಸಿವೆ. ಆದರೆ, ಉಭಯ ಪಕ್ಷಗಳ ನಾಯಕರು ಒಗ್ಗಟ್ಟು ಕಾಯ್ದುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿಯೇ ಟೌನ್ ಶಿಪ್ ವಿರುದ್ಧದ ಹೋರಾಟ ಕವಲು ದಾರಿಯಲ್ಲಿ ಸಾಗಿದೆ.
ಈಗ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಮೈತ್ರಿ ಇದ್ದರೂ, ಬಿಡದಿ ಟೌನ್ ಶಿಪ್ ಯೋಜನೆ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ಎರಡೂ ಪಕ್ಷಗಳ ನಡುವೆ ಮೈತ್ರಿ ಮೂಡಿಲ್ಲ. ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ಎರಡು ಪ್ರಮುಖ ವಿರೋಧ ಪಕ್ಷಗಳ ಭಿನ್ನ ನಡೆ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿದೆ.
ಈ ಟೌನ್‌ಶಿಪ್ ಯೋಜನೆ ವಿರೋಧಿಸಿ ಕಳೆದ 495 ದಿನಗಳಿಂದ ರೈತರು ಹೋರಾಟ ನಡೆಸುತ್ತಿದ್ದಾರೆ. ಚಳವಳಿಯ ವೇದಿಕೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಒಟ್ಟಾಗಿ ಕಾಣಿಸಿಕೊಂಡಿಲ್ಲ. ಯೋಜನೆ ವಿರುದ್ಧದ ಸುದ್ದಿಗೋಷ್ಠಿಗಳಾಗಲಿ ಅಥವಾ ಯೋಜನಾ ವ್ಯಾಪ್ತಿಯ ಗ್ರಾಮಗಳಿಗೆ ಭೀಟಿ ನೀಡುವ ವಿಚಾರದಲ್ಲಿಯೂ ಎರಡೂ ಪಕ್ಷದ ನಾಯಕರು ಒಗ್ಗಟ್ಟು ಪ್ರದರ್ಶಿಸುತ್ತಿಲ್ಲ.
ಕೆಲ ದಿನಗಳ ಹಿಂದೆಯಷ್ಟೇ ಯೋಜನಾ ಪ್ರದೇಶದ ಗ್ರಾಮಗಳಲ್ಲಿ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪಾದಯಾತ್ರೆ ನಡೆಸಿದಾಗ ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿರವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಬಹಿರಂಗ ಚರ್ಚೆಗೆ ಪಂಥಾಹ್ವಾನ ನೀಡಿ ಬೈರಮಂಗಲ ವೃತ್ತಕ್ಕೆ ಭೇಟಿ ನೀಡಿದ್ದರು. ಆಗಲೂ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಸುಳಿದಿರಲಿಲ್ಲ.
ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ, ಛಲವಾದಿ ನಾರಾಯಣಸ್ವಾಮಿ, ಮಾಜಿ ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ ನೇತೃತ್ವದ ಬಿಜೆಪಿ ನಿಯೋಗ ಗ್ರಾಮಗಳಿಗೆ ಬಂದಾಗ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಕಾಣಿಸಿಕೊಳ್ಳಲಿಲ್ಲ.
ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಬಿಜೆಪಿ ನಡೆಸಿದ ಹೋರಾಟದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರರವರು ಜೆಡಿಎಸ್ ನಾಯಕರೊಂದಿಗೆ ಚರ್ಚಿಸಿ ಪಾದಯಾತ್ರೆ ಹಮ್ಮಿಕೊಳ್ಳುವುದಾಗಿ ಘೋಷಣೆ ಮಾಡಿದ್ದರು. ಆದರೀಗ ಜೆಡಿಎಸ್ ನಾಯಕರು ತರಾತುರಿಯಲ್ಲಿ ಸುದ್ಧಿಗೋಷ್ಠಿ ನಡೆಸಿ ಬಿಜೆಪಿಗೂ ಮೊದಲೇ ಪಾದಯಾತ್ರೆ ದಿನಾಂಕ ಘೋಷಣೆ ಮಾಡಿದೆ.
ಜೆಡಿಎಸ್ ಜುಲೈ 30, 31 ಮತ್ತು ಆಗಸ್ಟ್ 1 ರಂದು ಸುಮಾರು 38 ಕಿಲೋಮೀಟರ್‌ಗಳ 3 ದಿನಗಳ ಕಾಲ ಪಾದಯಾತ್ರೆ ನಡೆಸಲು ಉದ್ದೇಶಿಸಿದೆ. ಬಿಜೆಪಿ ನಾಯಕರು ನಮ್ಮ ಪಕ್ಷದ ನಾಯಕರ ಜೊತೆ ಮಾತನಾಡಿದರೆ ಒಟ್ಟಾಗಿ ಹೋಗಬಹುದು ಎಂದು ಜೆಡಿಎಸ್ ನಾಯಕರು ಪ್ರತಿಕ್ರಿಯಿಸಿದ್ದಾರೆ.
ಉಭಯ ಪಕ್ಷಗಳು ಸೇರಿ ಹೋರಾಟ ನಡೆಸುವ ಕುರಿತು ಎರಡೂ ಪಕ್ಷಗಳ ನಾಯಕರ ಮಟ್ಟದಲ್ಲಿ ತೀರ್ಮಾನವಾಗಬೇಕು ಎನ್ನುತ್ತಾರೆ ಸ್ಥಳೀಯ ಜೆಡಿಎಸ್ ಮತ್ತು ಬಿಜೆಪಿ ಮುಖಂಡರು.
ಬಿಡದಿ ಟೌನ್ ಶಿಪ್ ಯೋಜನೆಗಾಗಿ ಬಿಡದಿ ಹೋಬಳಿಯ ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 9 ಕಂದಾಯ ಗ್ರಾಮಗಳಲ್ಲಿ ಭೂ ಸ್ವಾಧೀನಕ್ಕೆ 15 ತಿಂಗಳ ಹಿಂದೆಯೇ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು. ಜೂನ್ 10ರಂದು 3 ಗ್ರಾಮ ಹಾಗೂ ಜುಲೈ 15ರಂದು 4 ಕಂದಾಯ ಗ್ರಾಮಗಳ ಭೂ ಸ್ವಾಧೀನಕ್ಕಾಗಿ ಫೈನಲ್ ನೋಟಿಫಿಕೇಷನ್ ಹೊರ ಬಿದ್ದಿದೆ. ಮೊದಲ ಹಂತದಲ್ಲಿನ 518 ಎಕರೆ 45 ಗುಂಟೆ ಮತ್ತು ಎರಡನೇ ಹಂತದಲ್ಲಿನ 4941 ಎಕರೆ 59 ಗುಂಟೆ ಸೇರಿ ಒಟ್ಟು 5460 ಎಕರೆ 4 ಗುಂಟೆ ಭೂ ಸ್ವಾಧೀನಕ್ಕೆ ರಾಜ್ಯ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಿದಂತಾಗಿದೆ. ಇನ್ನು 2 ಕಂದಾಯ ಗ್ರಾಮಗಳ ಭೂ ಸ್ವಾಧೀನದ ಅಂತಿಮ ಅಧಿಸೂಚನೆ ಮಾತ್ರ ಬಾಕಿ ಉಳಿದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.