
ಬೆಂಗಳೂರು/ಚಾಮರಾಜನಗರ(ಸೆ.29): ಕಾಂಗ್ರೆಸ್‌ಗೆ ಚೈತನ್ಯ ತುಂಬಲು ದೇಶದ ಉದ್ದಗಲಕ್ಕೂ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಸುತ್ತಿರುವ ‘ಭಾರತ ಐಕ್ಯತಾ ಯಾತ್ರೆ’ ಸೆ.30ರಂದು ಕರ್ನಾಟಕ ಪ್ರವೇಶ ಮಾಡಲಿದೆ. ತಮ್ಮ ನೇತಾರನಿಗೆ ಅದ್ಧೂರಿ ಸ್ವಾಗತ ನೀಡಿ ರಾಜ್ಯದಲ್ಲಿ 21 ದಿನಗಳ ಯಾತ್ರೆಯನ್ನು ಯಶಸ್ವಿಗೊಳಿಸಲು ರಾಜ್ಯ ಕಾಂಗ್ರೆಸ್ ನಾಯಕರು ಸಜ್ಜಾಗಿದ್ದಾರೆ.
ಪ್ರಸ್ತುತ ನೆರೆಯ ರಾಜ್ಯ ಕೇರಳದಲ್ಲಿ ಯಾತ್ರೆ ನಡೆಸುತ್ತಿರುವ ರಾಹುಲ್ ಗಾಂಧಿ ಹಾಗೂ ಇತರೆ ಎಐಸಿಸಿ ನಾಯಕರು ಸೆ.30ರಂದು ಚಾಮರಾಜನಗರ ಜಿಲ್ಲೆಯ ಮೂಲಕ ರಾಜ್ಯ ಪ್ರವೇಶಿಸಿ, ಅ.19ರಂದು ರಾಯಚೂರು ಮೂಲಕ ತೆಲಂಗಾಣಕ್ಕೆ ತೆರಳಲಿದ್ದಾರೆ. ಈ ನಡುವೆ 21 ದಿನಗಳ ಕಾಲ ರಾಜ್ಯದ ಸುಮಾರು ಎಂಟು ಜಿಲ್ಲೆಗಳ ಮೂಲಕ 511 ಕಿ.ಮೀ. ದೂರ ಯಾತ್ರೆ ಸಂಚರಿಸಲಿದೆ. ಸೆ.30ರಂದು ಬೆಳಗ್ಗೆ 9 ಗಂಟೆಗೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನಿಂದ ಯಾತ್ರೆ ಅಧಿಕೃತವಾಗಿ ಆರಂಭವಾಗಲಿದೆ. ರಾಹುಲ್ ಗಾಂಧಿ ಅವರ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ರಾಜ್ಯದ ಹಲವು ನಾಯಕರು ಹೆಜ್ಜೆ ಹಾಕಲಿದ್ದಾರೆ.
ಯಾತ್ರೆ ರಾಜ್ಯ ಪ್ರವೇಶಿಸುತ್ತಿದ್ದಂತೆ ರಾಹುಲ್ ಗಾಂಧಿ ಅವರನ್ನು ಅದ್ಧೂರಿ ಸ್ವಾಗತದೊಂದಿಗೆ ಎದುರುಗೊಳ್ಳಲು ಈಗಾಗಲೇ ಅಗತ್ಯ ಸಿದ್ಧತೆ ಆರಂಭವಾಗಿದೆ. ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಸೇರಿದಂತೆ ಯಾತ್ರೆಯ ಉಸ್ತುವಾರಿ ಹೊತ್ತಿರುವ ಪಕ್ಷದ ನಾಯಕರು ಈಗಾಗಲೇ ಸಿದ್ಧತೆಗಳ ಪರಿಶೀಲನೆ ನಡೆಸಿದ್ದಾರೆ. ಸುಮಾರು 25 ರಿಂದ 30 ಸಾವಿರಕ್ಕೂ ಅಧಿಕ ಮಂದಿ ಗುಂಡ್ಲುಪೇಟೆಯಲ್ಲಿ ನಡೆಯಲಿರುವ ಈ ಯಾತ್ರೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಮೊದಲ ದಿನದ ಯಾತ್ರೆ ಹೇಗಿರುತ್ತೆ?:
ಗುಂಡ್ಲುಪೇಟೆ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಿಂದ ಆರಂಭವಾಗಲಿರುವ ಪಾದಯಾತ್ರೆ ವೀರನಪುರ ಕ್ರಾಸ್ ಬಳಿಯ ಕೆಬ್ಬೇಕಟ್ಟೆಶನೇಶ್ವರ ದೇವಸ್ಥಾನದವರೆಗೆ ನಡೆಯಲಿದೆ. ಅಲ್ಲೇ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿದ್ದು, ಆ ಬಳಿಕ ಆದಿವಾಸಿಗಳು ಹಾಗೂ ಕೊರೋನಾ ಸಮಯದಲ್ಲಿ ಆಕ್ಸಿಜನ್ ಕೊರತೆಯಿಂದ ಮೃತಪಟ್ಟವರ ಕುಟುಂಬದ ಸದಸ್ಯರೊಂದಿಗೆ ರಾಹುಲ್ ಗಾಂಧಿ ಸಂವಾದ ನಡೆಸಲಿದ್ದಾರೆ. ಸಂಜೆ 4 ಗಂಟೆ ಬಳಿಕ ಪಾದಯಾತ್ರೆ ಮತ್ತೆ ಆರಂಭಗೊಂಡು, ಬೇಗೂರು ತನಕ 19 ಕಿ.ಮೀ. ಕ್ರಮಿಸಲಿದೆ. ಬೇಗೂರು ಬಳಿಯ ತ್ರಿಪುರ ಸುಂದರಿ ಕಲ್ಯಾಣ ಮಂಟಪ ಬಳಿಯ ಜಮೀನಿನಲ್ಲಿ ಎಲ್ಲರೂ ವಾಸ್ತವ್ಯ ಹೂಡಲಿದ್ದಾರೆ. ಅ.1ರ ಬೆಳಗ್ಗೆ 7 ಗಂಟೆಗೆ ಮತ್ತೆ ಆರಂಭವಾಗಲಿರುವ ಪಾದಯಾತ್ರೆ ಗುಂಡ್ಲುಪೇಟೆ ಗಡಿ ತನಕ ಮುಂದುವರಿಯಲಿದೆ.
ಚಾಮರಾಜನಗರ ಜಿಲ್ಲೆಯ ಬಳಿಕ ಮೈಸೂರು, ಮಂಡ್ಯ, ತುಮಕೂರು, ಚಿತ್ರದುರ್ಗ, ದಾವಣಗೆರೆ, ರಾಯಚೂರು, ಬಳ್ಳಾರಿ ಜಿಲ್ಲೆಗಳ ವಿವಿಧ ವಿಧಾನಸಭಾ ಕ್ಷೇತ್ರ, ಲೋಕಸಭಾ ಕ್ಷೇತ್ರಗಳ ಮೂಲಕ ಯಾತ್ರೆ ಸಂಚರಿಸಲಿದೆ. ಆಯಾ ಜಿಲ್ಲೆಗಳಲ್ಲಿ ಯಾತ್ರೆ ಸಂಚರಿಸುವಾಗ ಸುತ್ತಮುತ್ತಲ ಕ್ಷೇತ್ರಗಳ ಪಕ್ಷದ ಶಾಸಕರು, ನಾಯಕರು, ಮುಖಂಡರು, ಕಾರ್ಯಕರ್ತರು ಭಾಗಿಯಾಗುವಂತೆ ಕೆಪಿಸಿಸಿ ಈಗಾಗಲೇ ಸ್ಪಷ್ಟಸೂಚನೆ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.