
ಬೆಂಗಳೂರು (ಜೂ.28): ‘ಭಾರತ್ ಜೋಡೋ ಯಾತ್ರೆ’ ಯೋಜನೆ ಕುರಿತು ಚರ್ಚಿಸಲು ಎಐಸಿಸಿ ಹಮ್ಮಿಕೊಂಡಿರುವ ಸಭೆಯಲ್ಲಿ ಭಾಗವಹಿಸಲು ಮಂಗಳವಾರ ವಿಧಾಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿ ಹಿರಿಯ ಕಾಂಗ್ರೆಸ್ ನಾಯಕರು ದೆಹಲಿಗೆ ತೆರಳಲಿದ್ದಾರೆ. ಮಂಗಳವಾರ ಸಂಜೆ 4 ಗಂಟೆಗೆ ಭಾರತ್ ಜೋಡೋ ಯಾತ್ರೆ ಆಯೋಜನಾ ಸಮಿತಿಯ ಸಭೆ ಕರೆಯಲಾಗಿದೆ. ದಿಗ್ವಿಜಯ್‌ಸಿಂಗ್ ನೇತೃತ್ವದಲ್ಲಿ ನಡೆಯಲಿರುವ ಈ ಸಭೆಯಲ್ಲಿ ಭಾಗವಹಿಸಲು ಮಂಗಳವಾರ ಬೆಳಗ್ಗೆ 10 ಗಂಟೆಗೆ ಇಬ್ಬರೂ ನಾಯಕರು ಬೆಂಗಳೂರಿನಿಂದ ದೆಹಲಿಗೆ ತೆರಳಲಿದ್ದಾರೆ.
ಮಂಗಳವಾರ ಹಾಗೂ ಬುಧವಾರ ಎರಡು ದಿನಗಳ ಕಾಲ ಸಭೆ ನಡೆಯಲಿದ್ದು, ಬುಧವಾರ ಸಂಜೆ ಇಬ್ಬರೂ ನಾಯಕರು ಬೆಂಗಳೂರಿಗೆ ವಾಪಸಾಗಲಾಗುವ ಸಾಧ್ಯತೆಯಿದೆ. ಉದಯಪುರದಲ್ಲಿ ಇತ್ತೀಚೆಗೆ ನಡೆದ ನವ ಸಂಕಲ್ಪ ಶಿಬಿರದಲ್ಲಿ ಪಕ್ಷವು ‘ಭಾರತ್ ಜೋಡೋ ಯಾತ್ರೆ’ ಘೋಷಿಸಿತ್ತು. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಹಮ್ಮಿಕೊಂಡಿರುವ ಯಾತ್ರೆ ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಪ್ರಾರಂಭವಾಗಲಿದೆ. ಈ ಆಯೋಜನಾ ಸಮಿತಿ ಕರೆದಿರುವ ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ತೆರಳುತ್ತಿದ್ದಾರೆ.
ಕೊಪ್ಪಳದಲ್ಲಿ ಸಿದ್ದು-ಡಿಕೆಶಿ: ಮದ್ವೆ ಕಾರ್ಯಕ್ರಮದ ಮಧ್ಯೆ ಟಿಕೆಟ್ ಫೈಟ್
ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಮಂಗಳವಾರ ಬೆಳಗ್ಗೆ ಬೆಂಗಳೂರಿನಿಂದ ದೆಹಲಿಗೆ ತೆರಳಲಿದ್ದು, ಸಂಜೆ 4 ಗಂಟೆಗೆ ಆಯೋಜನಾ ಸಮಿತಿ ಅಧ್ಯಕ್ಷ ದಿಗ್ವಿಜಯ್‌ಸಿಂಗ್ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಬುಧವಾರ ಬೆಳಗ್ಗೆ 11 ಗಂಟೆಗೆ ಮತ್ತೆ ಸಭೆ ಸೇರಲಿದೆ. ಬಳಿಕ ಮಧ್ಯಾಹ್ನ 3 ಗಂಟೆಗೆ ಹಿರಿಯ ನಾಯಕರೊಂದಿಗೆ ಚರ್ಚಿಸಿ ಬೆಂಗಳೂರಿಗೆ ವಾಪಸಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇಂದು ಕಾಂಗ್ರೆಸ್ ಮಹತ್ವದ ಸಭೆ: ಕಾಂಗ್ರೆಸ್ ಪಕ್ಷಕ್ಕೆ ಮರುಜೀವ ನೀಡಲು ಹಮ್ಮಿಕೊಳ್ಳಲು ಉದ್ದೇಶಿಸಲಾಗಿರುವ ‘ಭಾರತ್ ಜೋಡೋ’ ಅಭಿಯಾನಕ್ಕೆ ಸಂಬಂಧಿಸಿದಂತೆ ಮಂಗಳವಾರ ದಿಲ್ಲಿಯಲ್ಲಿ ಮಹತ್ವದ ಸಭೆ ನಡೆಯಲಿದೆ. ಕನ್ಯಾಕುಮಾರಿಯಲ್ಲಿ ಗಾಂಧಿ ಜಯಂತಿಯಂದು ಆರಂಭವಾಗಲಿರುವ ಯಾತ್ರೆ ಕರ್ನಾಟಕ ಸೇರಿ 16 ರಾಜ್ಯಗಳಲ್ಲಿ ಸಾಗಿ ದಿಲ್ಲಿಯ ಗಾಂಧೀಜಿ ಸಮಾಧಿ ‘ರಾಜಘಾಟ್’ನಲ್ಲಿ ಅಂತ್ಯಗೊಳ್ಳಲಿದೆ.
ಸಿದ್ದರಾಮಯ್ಯ ಸಾಮರ್ಥ್ಯ ಡಬಲ್ ಎಂಜಿನ್‌ಗಿಲ್ಲ: ಡಿ.ಕೆ.ಶಿವಕುಮಾರ್
ರಾಹುಲ್ ಗಾಂಧಿ ಸೇರಿ ಅನೇಕ ನಾಯಕರು ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಹೀಗಾಗಿ ಯಾತ್ರೆಗೆ ವ್ಯಾಪಕ ಸಿದ್ಧತೆ ನಡೆಯಬೇಕಿದ್ದು, ಸಭೆ ಆಯೋಜಿಸಲಾಗಿದೆ. ದೇಶದ ವಿವಿಧ ರಾಜ್ಯಗಳ ಕಾಂಗ್ರೆಸ್ ಮುಖಂಡರು ಸಭೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಮೂಲಗಳು ಹೇಳಿವೆ. ಯಾತ್ರೆಗೆ ವಿವಿಧ ವಿಪಕ್ಷಗಳ ಸಹಕಾರ ಕೋರುವ ಬಗ್ಗೆಯೂ ಕಾಂಗ್ರೆಸ್ ಚಿಂತಿಸುತ್ತಿದೆ ಎಂದು ಅವು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.