
ಬೆಂಗಳೂರು: ರಾಜಧಾನಿ ಬೆಂಗಳೂರು ರಸ್ತೆಯಲ್ಲಿನ ಗುಂಡಿ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ (CM Siddaramaiah) ಮತ್ತು ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ವಿರುದ್ಧ ಜೆಡಿಎಸ್ (JDS) ಖಾರವಾಗಿ ವಾಗ್ದಾಳಿ ನಡೆಸಿದೆ. ರಸ್ತೆ ಗುಂಡಿಗಳನ್ನು ಮುಚ್ಚಲು ಗುತ್ತಿಗೆದಾರರಿಗೆ ಅಂತಿಮ ಗಡುವು ನೀಡಲಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದರು. ಈ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಜೆಡಿಎಸ್, ಆಗೋ ಪೂಜೆ ಆಗುತ್ತಿರಲಿ, ಊದೋ ಶಂಖ ಊದಿ ಬಿಡುವ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪವನ್ನು ಮಾಡಿದೆ.
ಬೆಂಗಳೂರಿನ ರಸ್ತೆ ಗುಂಡಿಗಳ ಸಮಸ್ಯೆಯನ್ನು ಬಗೆಹರಿಸಲು ನವೆಂಬರ್ ಒಳಗೆ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಗುತ್ತಿಗೆದಾರರಿಗೆ ಅಂತಿಮ ಗಡುವು ನೀಡಲಾಗಿದೆ. ಸ್ವಚ್ಛ ಬೆಂಗಳೂರು ಹಾಗೂ ಸುಗಮ ಸಂಚಾರವೇ ನಮ್ಮ ಗುರಿಯಾಗಿರುವುದರಿಂದ ಆದಷ್ಟು ಬೇಗ ರಸ್ತೆ ಗುಂಡಿಗಳಿಗೆ ಜಿಬಿಎ ಮುಕ್ತಿ ನೀಡಲಿದೆ ಎಂದು ಡಿಕೆ ಶಿವಕುಮಾರ್ ಮಾಹಿತಿ ನೀಡಿ ಟ್ವೀಟ್ ಮಾಡಿದ್ದರು.
694 ಕೋಟಿ ರೂ. ವೆಚ್ಚದಲ್ಲಿ 349 ಕಿ.ಮೀ ಉದ್ದದ 182 ರಸ್ತೆಗಳ ಬ್ಲ್ಯಾಕ್ ಟಾಪಿಂಗ್ ಕಾಮಗಾರಿ. ಕಾಮಗಾರಿ ಪ್ರಗತಿಯಲ್ಲಿರುವ ರಸ್ತೆಗಳಲ್ಲಿ ನೀರು ನಿಲ್ಲದಂತೆ, ಗುಂಡಿಗಳು ಇಲ್ಲದಂತೆ ಡಾಂಬರೀಕರಣ ಮಾಡಲು ಸೂಚನೆ ನೀಡಲಾಗಿದೆ. ನವೆಂಬರ್‌ನೊಳಗೆ ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆ. 401 ಕಿ.ಮೀ ಉದ್ದದ 178 ರಸ್ತೆಗಳು ದೋಷಮುಕ್ತವಿದ್ದು, ಅಲ್ಲಲ್ಲಿ ಬಿದ್ದಿರುವ ಗುಂಡಿ ಮತ್ತು ಮೇಲ್ಫ್ ಪದರ ಹಾಳಾಗಿದ್ದರೆ ಗುತ್ತಿಗೆದಾರರೇ ದುರಸ್ತಿಪಡಿಸಲು ಸೂಚನೆ ನೀಡಲಾಗಿದೆ. ವಾಹನ ಸವಾರರ ಸುರಕ್ಷತೆಯೇ ನಮ್ಮ ಆದ್ಯತೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: ಮಾಲೂರು ಕೈ ಶಾಸಕನ ಸೀಟಿಗೆ ಕಂಟಕ, 4 ವಾರದಲ್ಲಿ ಎಣಿಕೆ ಆದ್ರೆ ಶಾಸಕ ಸ್ಥಾನ ನಂದೇ ಎಂದ ಬಿಜೆಪಿ ಪರಾಜಿತ ಅಭ್ಯರ್ಥಿ ಮಂಜುನಾಥ್ ಗೌಡ
"ಆಗೋ ಪೂಜೆ ಆಗುತ್ತಿರಲಿ, ಊದೋ ಶಂಖ ಊದಿ ಬಿಡುವ" - CM 30%, DCM 30% =60% ಕಾಂಗ್ರೆಸ್. ಕಳೆದ ವರ್ಷ (2024) ಸೆಪ್ಟಂಬರ್ ತಿಂಗಳಲ್ಲಿ ಬೆಂಗಳೂರಿನ ಗುಂಡಿ ಬಿದ್ದ ರಸ್ತೆಗಳನ್ನು ಮುಚ್ಚಲು ಬರೋಬ್ಬರಿ 659 ಕೋಟಿ ರೂ. ಖರ್ಚು ತೋರಿಸಿದ್ದೀರಿ. ಈ ವರ್ಷವೂ (2025) ರಸ್ತೆ ಗುಂಡಿಗೆ ತೇಪೆಹಾಕಲು ಬರೋಬ್ಬರಿ 694 ಕೋಟಿ ರೂ. ವೆಚ್ಚ ಮಾಡುತ್ತಿದ್ದೀರಿ.
ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಬೆಂಗಳೂರು ಮೂಲಸೌಕರ್ಯಗಳ ಕೊರತೆ ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿಯೂ #BrandBengaluru ಹೆಸರಲ್ಲಿ 60% ಲೆಕ್ಕದಲ್ಲಿ ದೋಚುವುದೇ ಸಿಎಂ , ಡಿಸಿಎಂ ಮೆಗಾ ಪ್ಲ್ಯಾನ್! ಲೂಟಿಯನ್ನು ಬಿಟ್ಟು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಇನ್ನದಾರೂ ಬೆಂಗಳೂರಿನಿಂದ ವಲಸೆ ಹೋಗುತ್ತಿರುವ ಕಂಪನಿಗಳನ್ನು ಮತ್ತು ಉದ್ಯಮಿಗಳನ್ನು ಉಳಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಿ ಎಂದು ಜೆಡಿಎಸ್ ಟ್ವೀಟ್ ಮಾಡಿದೆ.
ಇದನ್ನೂ ಓದಿ: ಬಿಹಾರದ ಹೆಚ್‌ಡಿ ಕುಮಾರಸ್ವಾಮಿ ಆಗ್ತಾರಾ ಚಿರಾಗ್ ಪಾಸ್ವಾನ್? ಬಿಜೆಪಿಗೆ ಬಿಗ್ ಶಾಕ್!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.