
ಬೆಂಗಳೂರು, (ಜುಲೈ.21): ನಗರದ ಅಂತಾರಾಷ್ಟ್ರೀಯ ಪ್ರದರ್ಶನ ಮೈದಾನದಲ್ಲಿ ಆರಂಭಿಸುತ್ತಿರುವ ಕೋವಿಡ್ ಕೇರ್ ಕೇಂದ್ರದಲ್ಲಿ ಅಗತ್ಯಕ್ಕೆ ತಕ್ಕ ಸೌಲಭ್ಯಗಳಿಲ್ಲ. ಸರ್ಕಾರ ಕೂಡಲೇ ಆ ಕುರಿತು ಗಮನ ಹರಿಸಬೇಕು ಎಂದು ವಿಪಕ್ಷ ನಾಯಕರಾದ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಇಂದು (ಮಂಳವಾರ) ಸಿದ್ದರಾಮಯ್ಯ ಅವರು ಕೋವಿಡ್ ಕೇರ್ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿಯ ವ್ಯವಸ್ಥೆಗಳ ಬಗ್ಗೆ ಪರಿಶೀಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏಷ್ಯಾದಲ್ಲೇ ಅತಿದೊಡ್ಡ ಕೋವಿಡ್ ಆರೈಕೆ ಕೇಂದ್ರ ಆರಂಭಿಸಲಾಗಿದೆ ಎಂದು ಮುಖ್ಯಮಂತ್ರಿಯವರು ಹೇಳಿದ್ದರು. ಹೀಗಾಗಿ ಇಲ್ಲಿಯ ವ್ಯವಸ್ಥೆ ಹೇಗಿದೆ ಎಂಬುದನ್ನು ನೋಡಲು ಬಂದಿದ್ದೆ ಎಂದು ಹೇಳಿದರು.
ಎರಡು ಸಾವಿರಕ್ಕೂ ಹೆಚ್ಚು ವೈದ್ಯರು, ಅರೆ ವೈದ್ಯ ಸಿಬ್ಬಂದಿ ನೇಮಕವಾಗಬೇಕು. ಇನ್ನೂ ನೇಮಕ ಪ್ರಕ್ರಿಯೆ ನಡೆಯುತ್ತಲೇ ಇದೆ. ಶುಕ್ರವಾರದಿಂದ ಸೋಂಕಿತರ ದಾಖಲಾತಿ ಆರಂಭವಾಗುತ್ತದೆ. ವೈದ್ಯರೇ ಇಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದರು.
ಹಾಸಿಗೆ, ದಿಂಬು, ಬೆಡ್‍ಶೀಟ್ ಒದಗಿಸುವ ಗುತ್ತಿಗೆದಾರರ ಸಮಸ್ಯೆಯೇ ಇನ್ನೂ ಇತ್ಯರ್ಥವಾಗಿಲ್ಲ. 800 ರೂ. ಪ್ರಕಾರ ಬಾಡಿಗೆಗೆ ಪಡೆಯುವುದಾಗಿ ಸರ್ಕಾರ ಹೇಳಿತ್ತು. ಸಾರ್ವಜನಿಕವಾಗಿ ಟೀಕೆಗಳು ಬಂದ ಬಳಿಕ ಈಗ ಸರ್ಕಾರವೇ ಖರೀದಿ ಮಾಡುತ್ತಿದೆ. ಅದೂ ಇತ್ಯರ್ಥವಾಗಿಲ್ಲ. ಬಾಡಿಗೆಯೋ, ಖರೀದಿಯೋ ಎಂಬುದು ಮೊದಲು ಇತ್ಯರ್ಥವಾಗಬೇಕು ಎಂದು ಆಗ್ರಹಿಸಿದರು.
ಕೇಂದ್ರದಲ್ಲಿ ಶೌಚಾಲಯಗಳು ದೂರ ಇವೆ. ವಯಸ್ಸಾದವರು ಹೋಗಿ ಬರಲು ಕಷ್ಟ. ಒಳಚರಂಡಿ ವ್ಯವಸ್ಥೆ ಸಹ ಸರಿಯಾಗಿಲ್ಲ. ತಾತ್ಕಾಲಿಕ ವ್ಯವಸ್ಥೆಯೇನೋ ಮಾಡಿದ್ದಾರೆ. ಸರ್ಕಾರ ಉದಾಸೀನ ತೋರಿಸಿರುವುದು ಸ್ಪಷ್ಟವಾಗಿದೆ. ಅಗತ್ಯಕ್ಕೆ ಅನುಗುಣವಾಗಿ ಸಿದ್ಧತೆ ಮಾಡಿಕೊಳ್ಳದೇ ಹೋಗಿದ್ದು ಸರ್ಕಾರದ ತಪ್ಪು. ಸೋಂಕು ನಿಯಂತ್ರಣಕ್ಕೆ ಮತ್ತು ಸೋಂಕಿತರ ಚಿಕಿತ್ಸೆಗೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲೇ ಇಲ್ಲ ಎಂದರು.
ಕೊರೋನಾ ವಿಚಾರದಲ್ಲಿ ರಾಜ್ಯ ಸರ್ಕಾರ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಪ್ರತಿಪಕ್ಷಗಳು ಸಲಹೆ ನೀಡಿದರೆ ಗಂಭೀರವಾಗಿ ಪರಿಗಣಿಸುವುದಿಲ್ಲ. ವಿಧಾನ ಮಂಡಲ ಅಧಿವೇಶನ ಕರೆಯುವುದಿಲ್ಲ. ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿರುವ ಸರ್ಕಾರ ಈಗಲಾದರೂ ಎಚ್ಚೆತ್ತುಕೊಳ್ಳಬೇಕು ಎಂದು ಕಿಡಿಕಾರಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.