
ಬೆಂಗಳೂರು, [ನ.08]: ರಾಜ್ಯದ ಪಂಚ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಮೈತ್ರಿ ಸರ್ಕಾರವನ್ನು ಮತ್ತಷ್ಟು ಬಲಗೊಳಿಸಿದ್ದು, ಮುಂದಿನ ಲೋಕಸಭಾ ಚುನಾವಣೆಗೆ ಮುನ್ನುಡಿ ಬರೆದಿದೆ.
ಅದರಲ್ಲೂ ಬಿಜೆಪಿ ಭದ್ರಕೋಟೆ ಎನಿಸಿದ್ದ ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ಸಿನ ವಿ.ಎಸ್. ಉಗ್ರಪ್ಪ, ಬಿಜೆಪಿಯ ಜೆ. ಶಾಂತಾ ವಿರುದ್ಧ 243161 ಮತಗಳ ಅಂತರದಿಂದ ದಾಖಲೆಯ ಗೆಲುವು ಸಾಧಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ಉಪಚುನಾವಣೆ ಫಲಿತಾಂಶ: ಮ್ಯಾನ್ ಆಫ್ ದಿ ಸಿರೀಸ್ ಗೋಸ್ ಟು ಸಿದ್ದರಾಮಯ್ಯ..!
ತನ್ನ ಭದ್ರಕೋಟೆಯಾಗಿದ್ದ ಬಳ್ಳಾರಿಯಲ್ಲಿ ರೆಡ್ಡಿ ಬ್ರದರ್ಸ್ ಮ್ಯಾಜಿಕ್ ಮಕಾಡೆ ಮಲಗಿದೆ.ಈ ಹಿಂದೆ ಕಾಂಗ್ರೆಸ್ ನ ಭದ್ರಕೋಟೆಯಾಗಿದ್ದ ಬಳ್ಳಾರಿಯನ್ನು ರೆಡ್ಡಿ ಬ್ರದರ್ಸ್ ಬಿಜೆಪಿ ಭದ್ರಕೋಟೆಯನ್ನಾಗಿಸಿದ್ದರು. ಆದರೆ ಬರೊಬ್ಬರಿ ಒಂದು ದಶಕ ನಂತರ ಬಳ್ಳಾರಿಯಲ್ಲಿ ಭದ್ರವಾದ ನೆಲೆ ಕಂಡುಕೊಳ್ಳುವುದಕ್ಕೆ ಸಾಧ್ಯವಾಗಿದೆ. 2018 ರ ವಿಧಾನಸಭಾ ಚುನಾವಣೆಯಲ್ಲಿಯೂ ಸಹ ಬಳ್ಳಾರಿಯಲ್ಲಿ ಕಾಂಗ್ರೆಸ್ ಪ್ರಾಬಲ್ಯ ಮೆರೆದಿತ್ತು.
ಈಗ ಮತ್ತೊಮ್ಮೆ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದ್ದು ದಶಕಗಳಿಂದ ಎದುರಿಸುತ್ತಿದ್ದ ಸೋಲಿನಿಂದ ಹೊರಬಂದಿದೆ. ಆದ್ರೆ ಬಳ್ಳಾರಿ ಗೆಲುವಿನ ಕ್ರೆಡಿಟ್ ಯಾರಿಗೆ ಎನ್ನುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಬಳ್ಳಾರಿ ಲೋಕಸಭಾ ಬೈ ಎಲೆಕ್ಷನ್ ಗೆ ಸಚಿವ ಡಿ.ಕೆ. ಶಿವಕುಮಾರ್ ಅವರ ಉಸ್ತುವಾರಿ ನೀಡಲಾಗಿತ್ತು. ಅವರ ಕಾರ್ಯತಂತ್ರಗಳಿಂದಲೇ ಉಗ್ರಪ್ಪ ಗೆದ್ದಿದ್ದಾರೆ ಎನ್ನುವುದು ಕೆಲವರ ವಾದವಾಗಿದೆ. ಇನ್ನು ಕೆಲವರು ಬಳ್ಳಾರಿ ವಿಕ್ಟರಿ ಕ್ರೆಡಿಟ್ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ ಎಂದು ವಾದಿಸುತ್ತಿದ್ದಾರೆ.
ಈ ಹಿನ್ನಲೆಯಲ್ಲಿ ಈ ಬಗ್ಗೆ ನಿಮ್ಮ ಸುವರ್ಣ ನ್ಯೂಸ್ ಫೇಸ್‌ಬುಕ್‌ನಲ್ಲಿ ‘ಬಳ್ಳಾರಿ ಗೆಲುವಿನ ಕ್ರೆಡಿಟ್ ಯಾರಿಗೆ?’ ಎಂದು ಒಂದು ಪೋಲ್ ಹಾಕಿದ್ದು, ನಿಮ್ಮ ಮತ ಯಾರಿಗೆ ಎಂದು ಕೇಳಿತ್ತು. ಈ ಒಂದು ಪೋಲಿಂಗ್‌ನಲ್ಲಿ ಸರಿಸುಮಾರು 30 ಸಾವಿರ ಓದುಗರು ವೋಟಿಂಗ್ ಮಾಡಿದ್ದು, 14 ಸಾವಿರ ಜನರರು ಸಿದ್ದರಾಮಯ್ಯ ಪರ ವೋಟ್ ಮಾಡಿದ್ರೆ, 15 ಸಾವಿರ ಜನರು ಬಳ್ಳಾರಿ ಗೆಲುವಿನ ಕ್ರೆಡಿಟ್ ಡಿ.ಕೆ.ಶಿವಕುಮಾರ್‌ಗೆ ಎಂದು ವೋಟ್ ಮಾಡಿದ್ದಾರೆ.
ಈ ಸಮೀಕ್ಷೆಯಲ್ಲಿ ಸಿದ್ದು ಹಾಗೂ ಡಿಕೆಶಿ ಇಬ್ಬರಿಗೂ ಭಾರೀ ಬೆಂಬಲ ವಾಕ್ತವಾಗಿದ್ದು, ತುಸು ಅಂತರದಲ್ಲಿ ಡಿ.ಕೆ.ಶಿವಕುಮಾರ್ ಮೇಲುಗೈ ಸಾಧಿಸಿದ್ದಾರೆ ಅಷ್ಟೇ. ಒಟ್ಟಿನಲ್ಲಿ ಓದುಗರ ಪ್ರಕಾರ ಬಳ್ಳಾರಿ ಬೈ ಎಲೆಕ್ಷನ್ ಗೆಲುವಿನ ಕ್ರೆಡಿಟ್ ಯಾರಿಗೆ ಎನ್ನುವ ಸಮೀಕ್ಷೆಯಲ್ಲಿ ಸಿದ್ದರಾಮಯ್ಯಗಿಂತ ಕೊಂಚ ಅಂದರೆ ಶೇ. 2ರಷ್ಟು ಡಿ.ಕೆ. ಶಿವಕುಮಾರ್ ಅವರಿಗೆ ಸಲ್ಲಬೇಕು ಎನ್ನುವುದು ಜನಾಭಿಪ್ರಾಯವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.