* ಬೆಳಗಾವಿ ಜಿಲ್ಲೆಯಲ್ಲಿ ರಾಜಕೀಯ ಧೃವೀಕರಣ
* ಬೆಳಗಾವಿಯಲ್ಲಿ ಆಪರೇಷನ್ ಹಸ್ತ
* ಪ್ರಭಾವಿ ನಾಯಕ ಕಾಂಗ್ರೆಸ್ ಸೇರ್ಪಡೆಗೆ ವೇದಿಕೆ, ಮುಹೂರ್ತ ಫಿಕ್ಸ್
* 2023ರ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಸಜ್ಜು
ಬೆಳಗಾವಿ, (ಡಿ.20): 2023ರ ವಿಧಾನಸಭೆ (Karnataka Assembly Poll 2023)ಚುನಾವಣೆಗೆ ಈಗಿನಿಂದಲೇ ಬೆಳಗಾವಿ ಜಿಲ್ಲೆಯಲ್ಲಿ ರಾಜಕೀಯ ಧೃವೀಕರಣ ಆರಂಭವಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಸಂಪೂರ್ಣವಾಗಿ ನೆಲಕಚ್ಚಿದೆ. ಇದೀಗ ಪಕ್ಷಕ್ಕೆ ಮತ್ತೊಂದು ಶಾಕ್ ಎದುರಾಗಿದೆ. ಗೋಕಾಕ್ ಪ್ರಭಾವಿ ನಾಯಕ, ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿ ಕಾಂಗ್ರೆಸ್ ನತ್ತ ಮುಖ ಮಾಡಿದ್ದು, ಇದಕ್ಕೆ ವೇದಿಕೆ, ಮುಹೂರ್ತ ಫಿಕ್ಸ್ ಆಗಿದೆ.
undefined
ಹೌದು..ಇದೇ ಡಿಸೆಂಬರ್ 21ರಂದು ಅಶೋಕ್ ಪೂಜಾರಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಈ ಬಗ್ಗೆ ಅವರೇ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಸ್ಪಷ್ಟಪಡಿಸಿದ್ದಾರೆ.
ಡಿಕೆಶಿ ಭೇಟಿಯಾದ ಜೆಡಿಎಸ್‌ನ ಮುಖಂಡ : ಮತ್ತೊಂದು ವಿಕೆಟ್ ಪತನ
ಇಂದು(ಸೋಮವಾರ) ಬೆಳಗಾವಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅಶೋಕ್ ಪೂಜಾರಿ, ನಾನು ಡಿ.21ರಂದು ಬೆಳಗಾವಿ ಕಾಂಗ್ರೆಸ್ ಭವನದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಸೇರಲಿದ್ದೇನೆ ಎಂದು ಹೇಳಿದರು.
ಅಂದು ಸಂಜೆ 4 ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಶಾಸಕರಾದ ಲಕ್ಷ್ಮಿ ಹೆಬ್ಬಾಳಕರ, ಎಚ್.ಕೆ. ಪಾಟೀಲ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ನಾನು ಕಾಂಗ್ರೆಸ್ ಸೇರುತ್ತೇನೆ ಎಂದು ಒಂದು ವರ್ಷದಿಂದಲೂ ವದಂತಿ ಹರಡಿತ್ತು. ನಾನು ಗೋಕಾಕ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಗಲು ಕಾರಣಾಂತರಗಳಿಂದ ಸಾಧ್ಯವಾಗಿರಲಿಲ್ಲ. ಪಕ್ಷದ ಅನೇಕ ಮುಖಂಡರು ಕಾಂಗ್ರೆಸ್ ಸೇರುವಂತೆ ಸಂಪರ್ಕಿಸಿದ್ದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅಧಿಕೃತವಾಗಿ ಆಹ್ವಾನ ನೀಡಿದ್ದರು. ಗೋಕಾಕದಲ್ಲಿನ ಸರ್ವಾಧಿಕಾರಿ ಧೋರಣೆ ವಿರುದ್ಧದ ನಿಮ್ಮ ಹೋರಾಟಕ್ಕೆ ನಾವೂ ಕೈಜೋಡಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಈಚೆಗೆ ಪಕ್ಷಕ್ಕೆ ಸ್ವಾಗತ ಕೋರಿದ್ದರು. ಅಭಿಮಾನಿಗಳು, ಹಿತೈಷಿಗಳ ಜೊತೆ ಸೇರುತ್ತಿದ್ದೇನೆ. ಮೂರು ಬಾರಿ ಜೆಡಿಎಸ್ ಹಾಗೂ ಒಮ್ಮೆ ಬಿಜೆಪಿಯಿಂದ ಗೋಕಾಕದಲ್ಲಿ ಸ್ಪರ್ಧೆ ಮಾಡಿದ್ದೆ. ಆದರೆ, ಗೆಲ್ಲಲಾಗಿರಲಿಲ್ಲ. ಪಕ್ಷದ ನೀತಿ- ಸಿದ್ಧಾಂತವನ್ನು ಒಪ್ಪಿ ಬೇಷರತ್ತಾಗಿ ಸೇರುತ್ತಿದ್ದೇನೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಕೇಳಿಲ್ಲ. ಕೊಟ್ಟರೆ ಸ್ಪರ್ಧೆ ಮಾಡುತ್ತೇನೆ ಎಂದರು.
ರಮೇಶ ಜಾರಕಿಹೊಳಿ ಹಾಗೂ ಅವರ ಕುಟುಂಬದ ಕೆಲವರು ಗೋಕಾಕದಲ್ಲಿ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ಇದಕ್ಕೆ ಅವರದೇ ಕುಟುಂಬವಾದ ಸತೀಶ ಜಾರಕಿಹೊಳಿ ಅಪವಾದ ಆಗಿದ್ದಾರೆ ಎಂದು ತಿಳಿಸಿದರು.
ಪೂಜಾರಿ, ಜೆಡಿಎಸ್ ಪಕ್ಷದಲ್ಲಿದ್ದರು. ಬಳಿಕ ಬಿಜೆಪಿ ಸೇರಿದ್ದರು. ಗೋಕಾಕ ಉಪ ಚುನಾವಣೆ ಸಂದರ್ಭದಿಂದಲೂ ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿದ್ದರು. ಈಗ ಅಧಿಕೃತವಾಗಿ ಪಕ್ಷ ಸೇರುತ್ತಿದ್ದಾರೆ.
ಬೆಳಗಾವಿ ಲೋಕಸಭಾ ಉಪಚುನಾವಣೆ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅಶೋಕ ಪೂಜಾರಿಗೆ ಕಾಂಗ್ರೆಸ್ ಸೇರುವಂತೆ ಆಹ್ವಾನ ನೀಡಿದ್ದರು. ಆ ವೇಳೆ ಬೆಳಗಾವಿಗೆ ಆಗಮಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಜೊತೆ ಚರ್ಚಿಸಿದ ಬಳಿಕ ಅಂತಿಮ ತೀರ್ಮಾನವನ್ನು ಅಶೋಕ ಪೂಜಾರಿ ಪ್ರಕಟಿಸಿದ್ದರು
ಅಲ್ಲದೇ ಈಗಾಗಲೇ ಬೆಂಗಳೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನ ಖುದ್ದಾಗಿ ಭೇಟಿ ಮಾಡಿದ್ದು, ಕಾಂಗ್ರೆಸ್ ಸೇರ್ಪಡೆ ಇಂಗಿತವನ್ನ ವ್ಯಕ್ತಪಡಿಸಿದ್ದರು.
4 ಬಾರಿ ಸೋತಿರುವ ಅಶೋಕ್ ಪೂಜಾರಿ
ಅಶೋಕ ಪೂಜಾರಿ ಅವರು ಗೋಕಾಕ್ ಕ್ಷೇತ್ರದಲ್ಲಿ ನಾಲ್ಕು ಬಾರಿ ಸೋಲು ಕಂಡಿದ್ದಾರೆ. 2008 ಮತ್ತು 2013ರಲ್ಲಿ ಜೆಡಿಎಸ್, 2018ರಲ್ಲಿ ಬಿಜೆಪಿ, 2019ರ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಅವರು ಕಣಕ್ಕಿಳಿದಿದ್ದರು.
ಬೆಳಗಾವಿಯಲ್ಲಿ ಹಿಡಿತ ಸಾಧಿಸಲು ಕಾಂಗ್ರೆಸ್ ಸಜ್ಜು
ಹೌದು....ಬೆಳಗಾವಿ ಬಿಜೆಪಿಯ ಭದ್ರಕೋಟೆ..ಆದ್ರೆ, ಕಳೆದ ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ ನಾಲ್ಕೈದು ಸಾವಿರಗಳ ಮತದಿಂದ ಮಾತ್ರ ಗೆಲುವು ಕಂಡಿದೆ. ಅಲ್ಲದೇ ಇತ್ತೀಚೆಗೆ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಹಾಂತೇಶ್ ಕವಟಗಿಮಠ ಅವರು ಸೋಲುಕಂಡಿದ್ದಾರೆ. ಇದರೊಂದಿಗೆ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಬಿಜೆಪಿ ಸೊರಗುತ್ತಿದ್ದು, ಕಾಂಗ್ರೆಸ್ ಬಲಿಷ್ಠವಾಗುತ್ತಿದೆ.
ಇದೀಗ ಅಶೋಕ್ ಪೂಜಾರಿ ಸಹ ಪಕ್ಷಕ್ಕೆ ಸೇರಿಸಿಕೊಂಡು ಮುಂದಿನ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಬಲಿಷ್ಠಗೊಳಿಸಲು ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಪ್ಲಾನ್ ಆಗಿದೆ.