ಪ್ರಸ್ತುತ ಸಾಲಿನಲ್ಲಿ 30 ಸಾವಿರಕ್ಕೂ ಹೆಚ್ಚು ಶಿಕ್ಷಕರು ಕೌನ್ಸೆಲಿಂಗ್ ಮೂಲಕ ಯಾವುದೇ ಗೊಂದಲವಿಲ್ಲದೇ ಪಾರದರ್ಶಕವಾಗಿ ವರ್ಗಾವಣೆಗೊಂಡಿರುವ ಮಾಹಿತಿ ಕೇಳಿ ಸಂತಸವಾಗಿದೆ ಎಂದು ವಿಪ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.
ಹುಬ್ಬಳ್ಳಿ (ಆ.19): ಪ್ರಸ್ತುತ ಸಾಲಿನಲ್ಲಿ 30 ಸಾವಿರಕ್ಕೂ ಹೆಚ್ಚು ಶಿಕ್ಷಕರು ಕೌನ್ಸೆಲಿಂಗ್ ಮೂಲಕ ಯಾವುದೇ ಗೊಂದಲವಿಲ್ಲದೇ ಪಾರದರ್ಶಕವಾಗಿ ವರ್ಗಾವಣೆಗೊಂಡಿರುವ ಮಾಹಿತಿ ಕೇಳಿ ಸಂತಸವಾಗಿದೆ ಎಂದು ವಿಪ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿ, ನಾನು 2006-07ರಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವನಾದಾಗ ದೇಶದಲ್ಲಿಯೇ ಮೊದಲಬಾರಿ ಪ್ರಾಥಮಿಕ ಹಂತದಿಂದ ಪದವಿಪೂರ್ವ ಹಂತದ ವರೆಗಿನ ಶಾಲಾ- ಕಾಲೇಜು ಶಿಕ್ಷಕರ ವರ್ಗಾವಣೆಗೆ ಕೌನ್ಸೆಲಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿದ್ದೆ.
ಆರಂಭದಲ್ಲಿ ಕೆಲ ಸಣ್ಣಪುಟ್ಟ ನ್ಯೂನ್ಯತೆಗಳು ವರ್ಗಾವಣೆ ನೀತಿಯಲ್ಲಿದ್ದರೂ ಕಾಲಕಾಲಕ್ಕೆ ಬದಲಾವಣೆ ಆಗುವ ಮೂಲಕ ಪ್ರಸ್ತುತ ಸಾಲಿನಲ್ಲಿ 30 ಸಾವಿರಕ್ಕೂ ಹೆಚ್ಚು ಶಿಕ್ಷಕರು ವರ್ಗಾವಣೆ ನೀತಿಯ ಲಾಭ ಪಡೆದಿದ್ದಾರೆ. ಇದೊಂದು ದಾಖಲೆಯ ವರ್ಗಾವಣೆ ಎಂಬ ಮಾಹಿತಿ ಕೂಡ ಇಲಾಖೆಯಿಂದ ಇದೆ. ವರ್ಗಾವಣೆ ಕುರಿತು ಸಾಕಷ್ಟುಅನುಮಾನಗಳು ಇಲ್ಲಸಲ್ಲದ ಆರೋಪಗಳು ಇಂದಿನ ದಿನಮಾನಗಳಲ್ಲಿ ಕೇಳುತ್ತಿದ್ದೇವೆ. 2006-07ರ ಪೂರ್ವದಲ್ಲಿಯೂ ಶಿಕ್ಷಣ ಇಲಾಖೆಯಲ್ಲಿ ವರ್ಗಾವಣೆಯ ಒಂದು ದೊಡ್ಡ ಜಾಲವೇ ಇತ್ತು.
ಮೂಲಭೂತ ಸೌಲಭ್ಯವಿಲ್ಲದೆ ಮಂಕಾದ ಮಲೆನಾಡ ಕುಗ್ರಾಮ: ಮನನೊಂದ ಗ್ರಾಮಸ್ಥರಿಂದ ಪ್ರಧಾನಿ ಮೋದಿಗೆ ಪತ್ರ
ನೂರಾರು ಕೋಟಿ ವರ್ಗಾವಣೆಯ ಮೂಲಕ ನಡೆಯುತ್ತಿತ್ತು ಎಂಬ ಮಾಹಿತಿ ಸಹ ಕೇಳುತ್ತಾ ಬಂದಿದ್ದೆ. ಇದಕ್ಕೊಂದು ಇತಿಶ್ರೀ ಹಾಡಬೇಕೆಂಬ ದೃಢ ಸಂಕಲ್ಪದಿಂದ ಉತ್ತಮ ಅಧಿಕಾರಿಗಳ ತಂಡ ಕಟ್ಟಿಕೊಂಡು ದೇಶದಲ್ಲಿಯೇ ಮೊದಲಬಾರಿ ವರ್ಗಾವಣೆ ನೀತಿ ಜಾರಿಗೊಳಿಸುವ ಮೂಲಕ ಯಾವೊಬ್ಬ ಶಿಕ್ಷಕರು ಜನಪ್ರತಿನಿಧಿಗಳ ಬಳಿ ಬರದ ಹಾಗೆ, ಹಾಗೂ ವಿಧಾನಸೌಧದ ಸುತ್ತದ ಹಾಗೆ ನೋಡಿಕೊಂಡಿದ್ದು ಈ ವರ್ಗಾವಣೆ ನೀತಿಯಿಂದ. ಇದರಿಂದಾಗಿ ಶಿಕ್ಷಣ ಇಲಾಖೆ ವರ್ಗಾವಣೆ ವಿಷಯದಲ್ಲಿ ಕೆಟ್ಟಹೆಸರನ್ನು ಪಡೆದುಕೊಳ್ಳದೇ ಇಲ್ಲ-ಸಲ್ಲದ ಆರೋಪದಿಂದ ಮುಕ್ತವಾಗಿರುವುದಕ್ಕೆ ಖುಷಿ ಎನಿಸುತ್ತದೆ.
ಪಕ್ಷ ಬಿಟ್ಟವರು ಮೋದಿಗಾಗಿ ವಾಪಸ್ ಬನ್ನಿ: ಶೆಟ್ಟರ್, ಸವದಿಗೆ ಪರೋಕ್ಷ ಆಹ್ವಾನ ನೀಡಿದ ಶೋಭಾ ಕರಂದ್ಲಾಜೆ
ಪ್ರಸ್ತುತ ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆಯಲ್ಲಿ ಕೌನ್ಸೆಲಿಂಗ್ ಮೂಲಕ ವರ್ಗಾವಣೆಗೊಳ್ಳುತ್ತಿರುವುದರಿಂದ ಅಲ್ಲಿನ ಸಿಬ್ಬಂದಿ ನಿರಾಳವಾಗಿ ಕೆಲಸ ಮಾಡುವಂತಾಗಿದೆ. ಎಲ್ಲ ಇಲಾಖೆಗಳ ಸಿಬ್ಬಂದಿಯನ್ನು ಕೌನ್ಸೆಲಿಂಗ್ ಮೂಲಕ ವರ್ಗಾವಣೆಗೊಳಿಸುವ ಪದ್ಧತಿಯನ್ನು ಅಳವಡಿಸಿಕೊಂಡರೆ ಅನಾವಶ್ಯಕವಾಗಿ ಉಂಟಾಗುವ ಇಲ್ಲಸಲ್ಲದ ಆರೋಪಗಳಿಂದ ಮುಕ್ತರಾಗಬಹುದು. ಹಾಗೂ ಸಾರ್ವಜನಿಕರಿಂದ ಸರ್ಕಾರಕ್ಕೆ ಆಗುವ ಮುಜುಗರವನ್ನು ತಪ್ಪಿಸಿಕೊಳ್ಳಬಹುದು ಎಂದು ಸಲಹೆ ನೀಡಿದ್ದಾರೆ.