
ಬೆಂಗಳೂರು(ಡಿ.03): ವಿಧಾನಪರಿಷತ್‌ನಲ್ಲಿ ಅಧಿಕ ಸಂಖ್ಯಾಬಲ ಹೊಂದಿದ್ದರೂ ಸಭಾಪತಿ ಸ್ಥಾನಕ್ಕೆ ಅಗತ್ಯ ಇರುವ ಸಂಖ್ಯಾಬಲ ಇಲ್ಲದ ಕಾರಣ ಆಡಳಿತಾರೂಢ ಬಿಜೆಪಿ ಮುಂದಿನ ಒಂದೂವರೆ ವರ್ಷಗಳ ಕಾಲ ಜೆಡಿಎಸ್‌ಗೆ ಸಭಾಪತಿ ಸ್ಥಾನ ಬಿಟ್ಟುಕೊಟ್ಟು, ಮುಂದೆ 2022ರಲ್ಲಿ ಸಭಾಪತಿ ಹುದ್ದೆ ಅಲಂಕರಿಸಲು ಮುಂದಾಗಿದೆ.
ಇತ್ತೀಚೆಗೆ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಮೇಲ್ಮನೆಯಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಳಿಕ ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ ವಿರುದ್ಧ ಆಡಳಿತಾರೂಢ ಬಿಜೆಪಿ ಅವಿಶ್ವಾಸ ಮಂಡನೆಗೆ ತೀರ್ಮಾನಿಸಿದೆ. ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಬಿಜೆಪಿ ಸದಸ್ಯರನ್ನು ಸಭಾಪತಿಯನ್ನಾಗಿ ಮಾಡಲು ಸಂಖ್ಯಾಬಲದ ಕೊರತೆ ಇದೆ. ಹೀಗಾಗಿ ಜೆಡಿಎಸ್ ಬೆಂಬಲ ಪಡೆದುಕೊಂಡು ಈಗಿರುವ ಸಭಾಪತಿಗಳನ್ನು ಕೆಳಗಿಳಿಸಲು ಸಜ್ಜಾಗಿದೆ.
ಸಂಖ್ಯಾಬಲ ಕಡಮೆಯಿದ್ದರೂ ಸಭಾಪತಿ ಸ್ಥಾನ ಮಾತ್ರ ತನಗೇ ನೀಡುವಂತೆ ಜೆಡಿಎಸ್ ಪಟ್ಟು ಹಿಡಿದಿದೆ. ಈ ಸಂಬಂಧ ಬಿಜೆಪಿಯಲ್ಲಿಯೂ ಸಹಮತ ವ್ಯಕ್ತವಾಗಿದೆ. ಜೆಡಿಎಸ್‌ನ ಹಿರಿಯ ಮುಖಂಡ ಬಸವರಾಜ ಹೊರಟ್ಟಿ ಅವರಿಗೆ ಒಂದೂವರೆ ವರ್ಷಗಳ ಕಾಲ ಸಭಾಪತಿ ಸ್ಥಾನ ನೀಡಲು ಮುಂದಾಗಿದೆ. ಬಿಜೆಪಿಗೆ ಉಪಸಭಾಪತಿ ಸ್ಥಾನ ಲಭಿಸಲಿದೆ.
ಸಭಾಪತಿ ಪ್ರತಾಪಚಂದ್ರ ಶೆಟ್ಟಿ ವಿರುದ್ಧ ಬಿಜೆಪಿ ಅವಿಶ್ವಾಸ
2022ರ ಜೂನ್-ಜುಲೈವರೆಗೆ ವಿಧಾನಪರಿಷತ್ತಿನ ಯಾವುದೇ ಚುನಾವಣೆ ನಡೆಯುವುದಿಲ್ಲ. ತರುವಾಯ ಕೆಲ ಸ್ಥಾನಗಳಿಗೆ ಚುನಾವಣೆ ಮತ್ತು ನಾಮನಿರ್ದೇಶನಗಳು ನಡೆಯಲಿವೆ. ಆಗ ಬಿಜೆಪಿ ಸಂಪೂರ್ಣವಾಗಿ ಸಂಖ್ಯಾಬಲ ಪಡೆದುಕೊಳ್ಳುವ ಸಾಧ್ಯತೆಯಿದೆ. ಅಲ್ಲಿಯವರೆಗೆ ಜೆಡಿಎಸ್‌ನ ಬೆಂಬಲ ಪಡೆದು ಅದೇ ಪಕ್ಷಕ್ಕೆ ಸಭಾಪತಿ ಸ್ಥಾನ ನೀಡುವ ಬಗ್ಗೆ ಚರ್ಚೆ ನಡೆದಿದೆ. ಅಗತ್ಯ ಸ್ಥಾನ ಪಡೆದ ಬಳಿಕ ಬಿಜೆಪಿ ಸದಸ್ಯನನ್ನು ಸಭಾಪತಿಯನ್ನಾಗಿ ನಿಯೋಜಿಸಲು ಚಿಂತನೆ ನಡೆದಿದೆ. ಈ ಬಗ್ಗೆ ಜೆಡಿಎಸ್ ಮತ್ತು ಬಿಜೆಪಿಯ ಅಂತರವಲಯದಲ್ಲಿಯೂ ಸಮಾಲೋಚನೆ ನಡೆದಿದ್ದು, ಉಭಯಪಕ್ಷಗಳ ವರಿಷ್ಠರು ಸಹ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ಹೇಳಿವೆ.
75 ಸದಸ್ಯರಿರುವ ಪರಿಷತ್‌ನಲ್ಲಿ ಸಭಾಪತಿ ಸ್ಥಾನಕ್ಕೆ 39 ಮಂದಿಯ ಬೆಂಬಲ ಅಗತ್ಯ ಇದೆ. ಬಿಜೆಪಿ 31, ಕಾಂಗ್ರೆಸ್ 28, ಜೆಡಿಎಸ್ 14 ಮತ್ತು ಒಬ್ಬರು ಪಕ್ಷೇತರ ಸದಸ್ಯರಿದ್ದಾರೆ. ಬಿಜೆಪಿ ಸದಸ್ಯರನ್ನು ಸಭಾಪತಿಯನ್ನಾಗಿ ನೇಮಕ ಮಾಡಲು 8 ಮಂದಿಯ ಸದಸ್ಯರ ಕೊರತೆ ಇದೆ. ಹೀಗಾಗಿ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರನ್ನು ಕೆಳಗಿಳಿಸಲು ಬಿಜೆಪಿಗೆ ಜೆಡಿಎಸ್ ಬೆಂಬಲ ಅಗತ್ಯ ಇದೆ. ಜೆಡಿಎಸ್‌ನ ಹಿರಿಯ ನಾಯಕ ಬಸವರಾಜ ಹೊರಟ್ಟಿ ಅವರಿಗೆ ಸಭಾಪತಿ ಹುದ್ದೆ ನೀಡಲು ಚರ್ಚೆಗಳು ನಡೆಯುತ್ತಿವೆ. ಜೆಡಿಎಸ್ ಪಕ್ಷದಲ್ಲಿಯೂ ಸಹ ಹೊರಟ್ಟಿ ಅವರಿಗೆ ನೀಡಬೇಕು ಎಂಬ ಒತ್ತಾಯ ಇದೆ. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಹೊರಟ್ಟಿಅವರನ್ನು ಹಂಗಾಮಿ ಸಭಾಪತಿಯನ್ನಾಗಿ ಮಾಡಲಾಗಿತ್ತು. ಆದರೆ, ರಾಜಕೀಯ ಕಾರಣಾಂತರಗಳಿಂದಾಗಿ ಸಭಾಪತಿ ಹುದ್ದೆಯಿಂದ ಕೆಳಗಿಳಿಸಲಾಯಿತು. ಇದೀಗ ಮತ್ತೊಮ್ಮೆ ಸಭಾಪತಿಯನ್ನಾಗಿ ಮಾಡಲು ಬಿಜೆಪಿ-ಜೆಡಿಎಸ್ ಮುಂದಾಗಿದೆ.
ಕಳೆದ ಅಧಿವೇಶನದ ಅವಧಿಯಲ್ಲಿ ಕರ್ನಾಟಕ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಮತ್ತು ಕೈಗಾರಿಕ ಮತ್ತಿತರ ವಿವಾದಾತ್ಮಕ ತಿದ್ದುಪಡಿ ಮಸೂದೆಗೆ ವಿಧಾನಸಭೆಯಲ್ಲಿ ಅಂಗೀಕರಿಸಲ್ಪಟ್ಟ ಬಳಿಕ ಮೇಲ್ಮನೆಯಲ್ಲಿ ಅಂಗೀಕರಿಸಲು ಸಾಧ್ಯವಾಗಲಿಲ್ಲ. ಅಲ್ಲದೇ, ಅಧಿವೇಶನದ ಕೊನೆಯ ದಿನ ವಿಷಯಗಳು ಚರ್ಚೆಯಾಗುತ್ತಿರುವ ವೇಳೆ ಕಲಾಪವನ್ನು ದಿಢೀರ್ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.