ಇಂದು (ಬುಧವಾರ) ಮುಖ್ಯಮಂತ್ರಿ ಬಿಎಸ್ ಯಡಿಯುರಪ್ಪನವರ ನೇತೃತ್ವದ ನಡೆದ ಸಚಿವ ಸಂಪುಟದಲ್ಲಿ ಏನೆಲ್ಲಾ ಚರ್ಚೆಗಳಾದವು ಎನ್ನುವ ಬಗ್ಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾಹಿತಿ ಕೊಟ್ಟಿದ್ದಾರೆ.
ಬೆಂಗಳೂರು, (ಮಾ.03): ಬಿಎಸ್ ಯಡಿಯೂರಪ್ಪನವರ ನೇತೃತ್ವದಲ್ಲಿ ಇಂದು (ಬುಧವಾರ) ಸಚಿವ ಸಂಪುಟದ ಸಭೆಯಲ್ಲಿ ಹಲವು ನಿರ್ಣಯ ತೆಗೆದುಕೊಂಡಿದ್ದೇವೆ. ಪಂಚಮಸಾಲಿ ಮೀಸಲಾತಿ ಬಗ್ಗೆ ಚರ್ಚೆಯಾಗಿದೆ ಎಂದು ಗೃಹಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ರಾಜ್ಯ ಸಚಿವ ಸಂಪುಟ ಸಭೆ ಮುಕ್ತಾಯದ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು, ವಾಲ್ಮೀಕಿ ಎಸ್ಟಿ ಮೀಸಲಾತಿ ಹೆಚ್ಚಳಕ್ಕೆ ಬೇಡಿಕೆ ಇಟ್ಟಿದ್ದಾರೆ. ಕುರುಬ ಸಮುದಾಯ ಎಸ್ಟಿಗೆ ಸೇರಿಸಲು ಒತ್ತಾಯವಿದೆ. ಇತರ ಸಮುದಾಯಗಳು ಮೀಸಲಾತಿಗೆ ಒತ್ತಾಯಿಸಿದ್ದಾರೆ. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ಉನ್ನತ ಮಟ್ಟದ ಸಮಿತಿ ರಚನೆ ಮಾಡಲು ಒಪ್ಪಿಗೆ ಸೂಚಿಸಲಾಗಿದೆ ಎಂದರು.
ಜಾರಕಿಹೊಳಿ ರಾಜೀನಾಮೆಯಿಂದ ತೆರವಾದ ಖಾತೆ ಯಾರ ಹೆಗಲಿಗೆ..?
ಇನ್ನು ಹಾಲುಮತದ ಕುಲಶಾಸ್ತ್ರ ಅಧ್ಯಯನಕ್ಕೆ ಕೊಡಲಾಗಿದೆ. ಇವುಗಳಿಗೆ ಮೀಸಲಾತಿ ಕೊಡಲು ಶೇ.50ರಷ್ಟು ಹೆಚ್ಚಾಗುತ್ತದೆ. ಬೇರೆ ಬೇರೆ ರಾಜ್ಯಗಳಲ್ಲಿ ಶೇ.50ರಷ್ಟು ಹೆಚ್ಚು ಮಾಡಲಾಗಿದೆ. ಈ ಹೆಚ್ಚು ಮಾಡಿರುವುದನ್ನ ಸುಪ್ರೀಂ ರದ್ಧುಪಡಿಸಿದೆ. ಹಾಗಾಗಿ ಇದಕ್ಕೆ ಹೆಚ್ಚಿನ ಕಾನೂನು ಅಭಿಪ್ರಾಯಬೇಕಿದೆ. ಸಂವಿಧಾನದ ಚೌಕಟ್ಟಿನಲ್ಲಿ ಪರಾಮರ್ಶಿಸಬೇಕಿದೆ. ಇದು ಸರ್ಕಾರದ ಕೈಯಿಂದ ಆಗುವುದಿಲ್ಲ, ಹಾಗಾಗಿ ಸಮಗ್ರ ವರದಿ ನೀಡಲು ಸಮಿತಿ ರಚನೆ ಮಾಡಿದೆ ಎಂದು ತಿಳಿಸಿದರು.
ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಮಧ್ಯಾಹ್ನ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ಸಂಪುಟದಲ್ಲಿ ಇದರ ಬಗ್ಗೆ ಚರ್ಚೆಯಾಗಲಿಲ್ಲ, ಕಬ್ಬನ್ ಪಾರ್ಕ್ ಸ್ಟೇಷನ್ನಲ್ಲಿ ಕಂಪ್ಲೈಂಟ್ ಲಾಡ್ಜ್ ಆಗಿದೆ. ಯಾವ ತನಿಖೆ ಮಾಡಬೇಕು ಅನ್ನೋದು ನಿರ್ಧಾರವಾಗಿಲ್ಲ, ತನಿಖೆಯಾಗಲಿದೆ, ಯಾವುದು ಅನ್ನೋದು ನಂತರ ನಿರ್ಧರಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.