ಬಸನಗೌಡ ಪಾಟೀಲ್ ಯತ್ನಾಳ್, ಪಕ್ಷ ವಿರೋಧಿ ಹೇಳಿಕೆ ಹಿನ್ನೆಲೆಯಲ್ಲಿ ಈಗಾಗಲೇ ಅವರಿಗೆ ನೋಟಿಸ್ ಜಾರಿಮಾಡಲಾಗಿದೆ. ಆದರೂ ಸಹ ಇದೀಗ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ತುಮಕೂರು, (ಫೆ.14): ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಸಿಎಂ ಪುತ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಗುಡುಗಿದ್ದಾರೆ.
ತುಮಕೂರಿನಲ್ಲಿ ಇಂದು (ಭಾನುವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ರಾಜ್ಯದಲ್ಲಿ ನಿನ್ನೆ 42 ಅಧಿಕಾರಿಗಳ ವರ್ಗಾವಣೆಯಾಗಿದೆ. ಹೋಲ್ ಸೇಲ್ ವ್ಯಾಪಾರದಂತೆ ಅಧಿಕಾರಿಗಳ ವರ್ಗಾವಣೆ ಮಾಡಿದ್ದಾರೆ. ಇಲ್ಲಿಯೂ ಹಣದ ಆಟ ನಡೆದಿದೆ. ಇನ್ನು ಪಂಚಮಸಾಲಿ ಸಮುದಾಯ ಒಡೆಯುವ ಯತ್ನ ಮಾಡಲಾಗುತ್ತಿದೆ. ಸಿಎಂ ಪುತ್ರ ವಿಜಯೇಂದ್ರ, ಸಚಿವ ನಿರಾಣಿ ಇಂತಹ ಯತ್ನ ನಡೆಸುತ್ತಿದ್ದಾರೆ. ವಿಜಯೇಂದ್ರ 8 ದಿನ ದೆಹಲಿಯಲ್ಲಿ ಯಾಕಿದ್ದರು? ಯಾವ ತನಿಖಾ ಸಂಸ್ಥೆ ಇವರನ್ನು ವಿಚಾರಣೆ ನಡೆಸುತ್ತಿದೆ. ದೆಹಲಿ ಎಲ್ಲಾ ವಿಚಾರ ನನಗೆ ಗೊತ್ತು ಎಂದು ಎಂದು ಹೊಸ ಬಾಂಬ್ ಸಿಡಿಸಿದರು.
ವರ್ಗಾವಣೆ ಪರ್ವ: 9 ಜಿಲ್ಲಾಧಿಕಾರಿ ಸೇರಿದಂತೆ ಒಟ್ಟು 42 ಅಧಿಕಾರಿಗಳ ಎತ್ತಂಗಡಿ
ಇನ್ನು.ಸಿಎಂ ಬಿಎಸ್ ವೈ ಪುತ್ರ ವಿಜಯೇಂದ್ರ ಭವಿಷ್ಯದ ರಾಜಾಹುಲಿ ಎಂಬ ಎಸ್.ಟಿ.ಸೋಮಶೇಖರ್ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಯಾರು ರಾಜಾಹುಲಿ, ಯಾರು ಬೆಟ್ಟದ ಹುಲಿ ಎಂದು ರಾಜ್ಯದ ಜನತೆ ಮುಂದೆ ನಿರ್ಧರಿಸುತ್ತಾರೆ ಎಂದರು.
ರಾಜ್ಯದಲ್ಲಿ ಯಾರು ರಾಜಾಹುಲಿ ಆಗ್ತಾರೆ, ಯಾರು ಬೆಟ್ಟದ ಹುಲಿ ಆಗ್ತಾರೆ ಎಂಬುದನ್ನು ಭವಿಷ್ಯದಲ್ಲಿ ಜನರೇ ತೀರ್ಮಾನ ಮಾಡ್ತಾರೆ. ಹಣವಿದ್ದರೆ ಎಲ್ಲವೂ ಸಾಧ್ಯ ಎಂಬುದು ಸುಳ್ಳು. ಹಣದಿಂದ ಏನುಬೇಕಾದರೂ ಮಾಡಲು ಸಾಧ್ಯ ಎನ್ನುವುದಾದರೆ ಟಾಟಾ ಬಿರ್ಲಾ ಅವರೇ ಪ್ರಧಾನಿ ಆಗುತ್ತಿದ್ದರು. ಯಾಕೆ ಡಿ.ಕೆ.ಶಿವಕುಮಾರ್ ಬಳಿ ಇಂದು ಹಣವಿಲ್ಲವೇ? ದೇಶದಲ್ಲಿ ಹಣವಿದ್ದವರು ಎಷ್ಟೊಂದು ಜನರಿದ್ದಾರೆ ಹೀಗಿರುವಾಗ ಹಣದಿಂದಲೇ ಎಲ್ಲ ಸಾಧ್ಯ ಎಂಬುದು ಕೇವಲ ಭ್ರಮೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ವಿಜಯೇಂದ್ರಗೆ ಟಾಂಗ್ ಕೊಟ್ಟರು.