
ಬೆಂಗಳೂರು, (ಫೆ.14) : ರಾಜ್ಯದಲ್ಲಿ ಮೀಸಲಾತಿ ವಿಚಾರದಲ್ಲಿ ಭಾರಿ ಚರ್ಚೆ ನಡೆಯುತ್ತಿದ್ದ ಸಂದರ್ಭಲ್ಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.
ತಮ್ಮ ಟ್ವೀಟರ್ ಖಾತೆಯಲ್ಲಿ ಸರಣಿ ಟ್ವೀಟ್ ಮಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಂಘ ಪರಿವಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮೀಸಲಾತಿಯನ್ನು ವಿರೋಧಿಸುತ್ತಲೇ ಬಂದಿರುವ ಬಿಜೆಪಿ ನಾಯಕರು ಸಾಲುಸಾಲಾಗಿ ನಿಂತು ಮೀಸಲಾತಿಗಾಗಿ ಕೂಗೆಬ್ಬಿಸಿರುವುದು ಪ್ರಾಮಾಣಿಕ ಜ್ಞಾನೋದಯವೇ ? ಸಾಮಾಜಿಕ ನ್ಯಾಯದ ಹೋರಾಟದ ದಿಕ್ಕುತಪ್ಪಿಸುವ ಇನ್ನೊಂದು ರಾಜಕೀಯ ಷಡ್ಯಂತ್ರವೇ ? ಎಂದು ಪ್ರಶ್ನಿಸಿದ್ದಾರೆ.
ಮಂಡಲ್ ವರದಿಯನ್ನು ವಿರೋಧಿಸಿ ಮೈಗೆ ಬೆಂಕಿಹಚ್ಚಿಕೊಂಡವರು ಯಾರು? ಉನ್ನತ ಶಿಕ್ಷಣದಲ್ಲಿ ಮೀಸಲಾತಿಯನ್ನು ವಿರೋಧಿಸಿ ಬೀದಿಗಿಳಿದವರು ಯಾರು? ಸ್ಥಳೀಯ ಸಂಸ್ಥೆಗಳಲ್ಲಿನ ಮೀಸಲಾತಿಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದ ರಾಮಾ ಜೋಯಿಸ್ ಯಾವ ಪಕ್ಷದವರು? ಉತ್ತರಿಸುವಿರಾ ಎಂದು ರಾಜ್ಯ ಬಿಜೆಪಿಗೆ ಟ್ಯಾಗ್ ಮಾಡಿದ್ದಾರೆ.
ಮೀಸಲಾತಿಯನ್ನು ನೇರವಾಗಿ ವಿರೋಧಿಸಲಿಕ್ಕಾಗದ ಸಂಘ ಪರಿವಾರದ ನಾಯಕರು ವಿವಾದ ಸೃಷ್ಟಿಸಿ, ಸಮುದಾಯಗಳನ್ನು ಪರಸ್ಪರ ಕಾದಾಟಕ್ಕಿಳಿಸಿ ಸಾಮಾಜಿಕ ನ್ಯಾಯದ ಹೋರಾಟದ ಹಾದಿ ತಪ್ಪಿಸುವ ಕುಟಿಲ ಕಾರಸ್ಥಾನಕ್ಕೆ ಅಮಾಯಕ ಜನತೆ ಬಲಿಯಾಗಬಾರದು. ಜಾತಿಯಿಂದಲೇ ನರಕ, ಧರ್ಮದಿಂದಲೇ ಸ್ವರ್ಗ, ನಾವೆಲ್ಲ ಹಿಂದೂ, ನಾವೆಲ್ಲ ಒಂದು ಎಂದು ಹಿಂದೂ ಸಮಾಜೋತ್ಸವ ನಡೆಸುತ್ತಿದ್ದ ಸಂಘ ಪರಿವಾರ ಈಗ ಯಾಕೆ ಜಾತಿ ಸಮಾವೇಶಗಳಿಗೆ ಪ್ರಾಯೋಜಕತ್ವ ನೀಡುತ್ತಿದೆ? ಯಾರಾದರೂ ಉತ್ತರಿಸುವಿರಾ? ಎಂದು ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.