
ಬೆಂಗಳೂರು(ಫೆ.04): ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಭಿನ್ನಾಭಿಪ್ರಾಯ ಹೊಂದಿರುವ ಪಕ್ಷದ ನಾಯಕರ ಚಟುವಟಿಕೆ ದೆಹಲಿಗೆ ಸ್ಥಳಾಂತರಗೊಂಡಿದ್ದು, ವಿಜಯೇಂದ್ರ ಬದಲಿಗೆ ಬೇರೊಬ್ಬರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಿಸಬೇಕು ಎಂಬ ಬೇಡಿಕೆಯೊಂದಿಗೆ ಮಂಗಳವಾರದಿಂದ ಮೂರು ದಿನಗಳ ಕಾಲ ವರಿಷ್ಠರ ಮನವೊಲಿಸುವ ಪ್ರಯತ್ನ ನಡೆಸಲಿದ್ದಾರೆ.
‘ಮಾಡು ಇಲ್ಲವೇ ಮಡಿ’ ಎಂಬ ಘೋಷಣೆ ಬೆನ್ನಲ್ಲೇ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬಣದ ನಾಯಕರು ದೆಹಲಿಗೆ ಎಡತಾಕಿದ್ದಾರೆ. ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ ಅವರು ಸೋಮವಾರ ಸಂಜೆ ದೆಹಲಿ ತಲುಪಿದರು. ಯತ್ನಾಳ, ಅರವಿಂದ ಲಿಂಬಾವಳಿ, ಜಿ.ಎಂ.ಸಿದ್ದೇಶ್ವರ, ಬಿ.ಪಿ.ಹರೀಶ, ಅಣ್ಣಾಸಾಹೇಬ್ ಜೊಲ್ಲೆ ಮತ್ತಿತರರು ಮಂಗಳವಾರ ದೆಹಲಿ ತಲುಪಲಿದ್ದಾರೆ. ಬಳಿಕ ವಿಜಯೇಂದ್ರ ವಿರುದ್ಧ ಕಾರ್ಯಾಚರಣೆ ಆರಂಭಿಸಲಿದ್ದಾರೆ.
ಬಿಜೆಪಿ ಭಿನ್ನಪಡೆಯ ರಾಜ್ಯಾಧ್ಯಕ್ಷ ಅಭ್ಯರ್ಥಿ ದಿಲ್ಲಿಯಲ್ಲಿ ಘೋಷಣೆ?
ನೂತನ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಇತರ ಹಿಂದುಳಿದ ವರ್ಗದವರನ್ನು (ಒಬಿಸಿ) ಅಥವಾ ದಲಿತರನ್ನು ಪರಿಗಣಿಸಬೇಕು ಎಂಬ ಪ್ರಮುಖ ಬೇಡಿಕೆ ಮುಂದಿಡಲು ಭಿನ್ನರು ಉದ್ದೇಶಿಸಿದ್ದಾರೆ. ಜತೆಗೆ ಪಕ್ಷದಲ್ಲಿ ವಿಜಯೇಂದ್ರ ಬಣ, ಯತ್ನಾಳ ಬಣ, ತಟಸ್ಥ ಬಣಗಳು ಎಂಬುದಾಗಿ ಇಲ್ಲ. ಎಲ್ಲ ಹಿರಿಯ ನಾಯಕರೂ ವಿಜಯೇಂದ್ರ ನಾಯಕತ್ವದ ವಿರುದ್ಧವಾಗಿದ್ದಾರೆ ಎಂಬುದನ್ನು ಮನವರಿಕೆ ಮಾಡಿಕೊಡಲು ಪ್ರಯತ್ನಿಸಲಿದ್ದಾರೆ.
ಸಂಸತ್ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರದ ಸಚಿವರು ಹಾಗೂ ಪಕ್ಷದ ಸಂಸದರನ್ನು ಭೇಟಿ ಮಾಡಿ ಚರ್ಚಿಸಲಿದ್ದಾರೆ. ಬಳಿಕ ವರಿಷ್ಠರನ್ನು ಕಂಡು ವಿಜಯೇಂದ್ರ ಅವರ ಕಾರ್ಯವೈಖರಿ ವಿವರಿಸಿ ತಮ್ಮ ಬೇಡಿಕೆಗಳನ್ನು ಮುಂದಿಡಲಿದ್ದಾರೆ ಎಂದು ತಿಳಿದು ಬಂದಿದೆ.
ವಿಜಯೇಂದ್ರ ವಿರುದ್ಧ ದೂರು-ಯತ್ನಾಳ:
ಸೋಮವಾರ ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ, ವಿಜಯೇಂದ್ರ ವಿರುದ್ಧ ದೂರು ನೀಡಲು ನಾವು ದೆಹಲಿಗೆ ತೆರಳುತ್ತಿದ್ದೇವೆ ಎಂದು ತಿಳಿಸಿದರು.
ರಾಧಾಮೋಹನ್ ಸಭೆಯ ಬಳಿಕ ವಿಜಯೇಂದ್ರ ಪರ ಹೆಚ್ಚಿದ ಬೆಂಬಲ
ಸೂಕ್ತ ವ್ಯಕ್ತಿಗಳ ಕೈಗೆ ರಾಜ್ಯ ಬಿಜೆಪಿ ನಾಯಕತ್ವ ಕೊಡಬೇಕು ಎಂಬುದು ನಮ್ಮ ಆಗ್ರಹ. ಇದನ್ನು ಹೈಕಮಾಂಡ್ ಆಲಿಸಲಿದೆ ಎಂಬ ವಿಶ್ವಾಸವಿದೆ. ಬಿಜೆಪಿಗೆ ಭ್ರಷ್ಟಾಚಾರದ ಕುಟುಂಬ ಬೇಕೇ? ಪ್ರಾಮಾಣಿಕರು, ಪಕ್ಷ ನಿಷ್ಠ ಕಾರ್ಯಕರ್ತರು ಬೇಕೇ? ಎಂದು ವರಿಷ್ಠರನ್ನು ಆಗ್ರಹಿಸುತ್ತೇವೆ. ಕುಟುಂಬಶಾಹಿ ಬಿಜೆಪಿಯಲ್ಲಿ ಅಂತ್ಯವಾಗಬೇಕು. ಹಿಂದುತ್ವ ಪ್ರತಿಪಾದಿಸುವ ವ್ಯಕ್ತಿಗಳ ಕೈಗೆ ರಾಜ್ಯ ಬಿಜೆಪಿ ನಾಯಕತ್ವ ಕೊಡಬೇಕು ಎಂಬುದು ನಮ್ಮ ಒತ್ತಾಯ ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಯತ್ನಾಳ, ರಾಜ್ಯಾಧ್ಯಕ್ಷ ಸ್ಥಾನದ ಚುನಾವಣೆಗೆ ನಮ್ಮ ಸ್ಪರ್ಧೆ ಖಚಿತ. ವಿಜಯೇಂದ್ರ ಅವರನ್ನೇ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಮುಂದುವರೆಸಿದರೆ ರಾಜ್ಯದಲ್ಲಿ ಬಿಜೆಪಿ ಉಳಿಯುವುದಿಲ್ಲ ಎಂಬುದು ವರಿಷ್ಠರಿಗೆ ಮನವರಿಕೆ ಆಗಿದೆ. ಹೀಗಾಗಿ, ರಾಜ್ಯಾಧ್ಯಕ್ಷರ ಬದಲಾವಣೆ ಖಚಿತ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.