15 ವರ್ಷದ ಸಾಧನೆ, ಮೋದಿ ಅಭಿವೃದ್ಧಿಯೇ ನನಗೆ ಶ್ರೀರಕ್ಷೆ: ಪಿ.ಸಿ.ಮೋಹನ್‌ ವಿಶೇಷ ಸಂದರ್ಶನ!

Published : Apr 22, 2024, 06:23 AM IST
15 ವರ್ಷದ ಸಾಧನೆ, ಮೋದಿ ಅಭಿವೃದ್ಧಿಯೇ ನನಗೆ ಶ್ರೀರಕ್ಷೆ: ಪಿ.ಸಿ.ಮೋಹನ್‌ ವಿಶೇಷ ಸಂದರ್ಶನ!

ಸಾರಾಂಶ

ಬಿರುಸಿನ ಪ್ರಚಾರದ ನಡುವೆ ಪಿ.ಸಿ.ಮೋಹನ್‌ ‘ಕನ್ನಡಪ್ರಭ’ಕ್ಕೆ ನೀಡಿದ ಸಂದರ್ಶನದಲ್ಲಿ ತಾವು ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಯೋಜನೆಗಳು, ತಂದಿರುವ ಅನುದಾನ, ಮುಂದೆ ಗೆದ್ದರೆ ಮಾಡಲಿರುವ ಅಭಿವೃದ್ಧಿಯ ಕನಸುಗಳ ಬಗ್ಗೆ ಹಂಚಿಕೊಂಡಿದ್ದಾರೆ.

ಮೋಹನ್ ಹಂಡ್ರಂಗಿ

ಬೆಂಗಳೂರು (ಏ.22): ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸತತ ಮೂರು ಗೆದ್ದು ‘ಹ್ಯಾಟ್ರಿಕ್‌ ಸಂಸದ’ ಎನಿಸಿರುವ ಪಿ.ಸಿ.ಮೋಹನ್‌, ನಾಲ್ಕನೇ ಬಾರಿಗೆ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕ್ಷೇತ್ರದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಮಿಂಚಿನ ಸಂಚಾರ ಮಾಡಿ ಮತಯಾಚಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ಸಾಧನೆಗಳು ಹಾಗೂ ತಾವು ಕಳೆದ 15 ವರ್ಷಗಳಲ್ಲಿ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ಈ ಬಾರಿ ಗೆಲುವಿನ ದಡ ಸೇರಿಸುವ ವಿಶ್ವಾಸದಲ್ಲಿದ್ದಾರೆ. ಬಿರುಸಿನ ಪ್ರಚಾರದ ನಡುವೆ ‘ಕನ್ನಡಪ್ರಭ’ಕ್ಕೆ ನೀಡಿದ ಸಂದರ್ಶನದಲ್ಲಿ ತಾವು ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಯೋಜನೆಗಳು, ತಂದಿರುವ ಅನುದಾನ, ಮುಂದೆ ಗೆದ್ದರೆ ಮಾಡಲಿರುವ ಅಭಿವೃದ್ಧಿಯ ಕನಸುಗಳ ಬಗ್ಗೆ ಹಂಚಿಕೊಂಡಿದ್ದಾರೆ.

* ಈ ಬಾರಿ ಬಿಜೆಪಿ ಚುನಾವಣಾ ಅಜೆಂಡಾ ಅಭಿವೃದ್ಧಿಯೋ ಅಥವಾ ಹಿಂದುತ್ವವೋ?
ಹಿಂದುತ್ವ ಎನ್ನುವುದು ಇದ್ದೇ ಇರುತ್ತದೆ. ಆದರೆ, ಅಭಿವೃದ್ಧಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. 2014ರಲ್ಲಿ ಯುಪಿಎ ಸರ್ಕಾರದ ಭ್ರಷ್ಟಾಚಾರದ ವಿಚಾರ ತೆಗೆದುಕೊಂಡು ಚುನಾವಣೆಗೆ ಹೋಗಿದ್ದೆವು. ಕಾಂಗ್ರೆಸ್‌ ಕಳೆದ 75 ವರ್ಷಗಳಲ್ಲಿ ಮಾಡದ ಅಭಿವೃದ್ಧಿ ಕೆಲಸಗಳನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಕಳೆದ 10 ವರ್ಷಗಳಲ್ಲಿ ಮಾಡಿದೆ. ಮೋದಿ ಅವರ ಸಾಧನೆಯನ್ನು ಜನರ ಮುಂದಿರಿಸಿ ಮತ ಕೇಳುತ್ತಿದ್ದೇವೆ.

ಅಟಲ್‌ರಂತೆ ನರೇಂದ್ರ ಮೋದಿ ಕೂಡ ಸೋಲುತ್ತಾರೆ: ಮುಖಾಮುಖಿ ಸಂದರ್ಶನದಲ್ಲಿ ಸುರ್ಜೇವಾಲಾ

* ಪ್ರಧಾನಿ ಮೋದಿ ಸಾಧನೆ ಒಂದೆಡೆಯಾದರೆ, ನಿಮ್ಮ ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಏನು?
ನಾನು ಎರಡು ಬಾರಿ ಶಾಸಕ, ಮೂರು ಬಾರಿ ಸಂಸದನಾಗಿದ್ದೇನೆ. 40 ವರ್ಷಗಳ ಬೆಂಗಳೂರು ಉಪನಗರ ರೈಲು ಯೋಜನೆಯ ಕನಸು ನನಸು ಮಾಡಿದ್ದೇನೆ. ಕಳೆದ ವರ್ಷ ಮೋದಿ ಅವರು ಈ ಯೋಜನೆಗೆ ಬಜೆಟ್‌ನಲ್ಲಿ ಅನುದಾನ ಮೀಸಲಿರಿಸುವುದರ ಜತೆಗೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಇನ್ನು 40 ತಿಂಗಳಲ್ಲಿ ಈ ಯೋಜನೆ ಪೂರ್ಣಗೊಳ್ಳಲಿದೆ. ಇದರಿಂದ ಸುಮಾರು 10 ಲಕ್ಷ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಈ ಯೋಜನೆ ಅನುಷ್ಠಾನಕ್ಕಾಗಿ ನಾನು ಸಂಸತ್ತಿನ ಒಳಗೆ ಮತ್ತು ಹೊರಗೆ ಹೋರಾಟ ಮಾಡಿದ್ದೇನೆ. ಇನ್ನು ನಮ್ಮ ಮೆಟ್ರೋ ವಿಸ್ತರಣೆ ವೇಗವಾಗಿ ನಡೆಯುತ್ತಿದೆ. ಹೊಸ ಮಾರ್ಗಗಳು ಮುಂದಿನ ದಿನಗಳಲ್ಲಿ ಬರಲಿವೆ. ಸ್ಮಾರ್ಟ್‌ ಸಿಟಿ ಯೋಜನೆಯಡಿ ನನ್ನ ಕ್ಷೇತ್ರದಲ್ಲೇ ಸುಮಾರು ಒಂದು ಸಾವಿರ ಕೋಟಿ ರು. ವೆಚ್ಚದ ಕಾಮಗಾರಿಗಳು ನಡೆದಿವೆ. ನಾನು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಮತದಾರರು ಗುರುತಿಸುತ್ತಿದ್ದಾರೆ.

* 3 ಬಾರಿ ಗೆದ್ದರೂ ನಿರೀಕ್ಷಿತ ಅಭಿವೃದ್ಧಿ ಆಗಿಲ್ಲ ಎಂಬ ಆರೋಪವಿದೆಯಲ್ಲ?
ನಾನು ಸಂಸದನಾಗಿ ಕಳೆದ 15 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಜನರಿಗೆ ಯಾವಾಗ ಬೇಕಾದರೂ ಸಿಗುವ ಸಂಸದ ನಾನು. ಒಂದು ಫೋನ್‌ ಕರೆಯಲ್ಲಿ ಬಹಳ ಸುಲಭವಾಗಿ ಜನರ ಕೈಗೆ ಸಿಗುತ್ತೇನೆ. ಯುಪಿಎ ಅವಧಿಯ ಬೈಯಪ್ಪನಹಳ್ಳಿ ರೈಲು ನಿಲ್ದಾಣ ಅಭಿವೃದ್ಧಿ ನೆನೆಗುದಿಗೆ ಬಿದ್ದಿತ್ತು. ನಾನು 310 ಕೋಟಿ ರು. ಅನುದಾನ ತಂದು ಏರ್‌ಪೋರ್ಟ್‌ ಮಾದರಿಯಲ್ಲಿ ಅಭಿವೃದ್ಧಿ ಮಾಡಿದ್ದೇನೆ. ಇನ್ನು 480 ಕೋಟಿ ರು. ವೆಚ್ಚದಲ್ಲಿ ಕಂಟೋನ್ಮೆಂಟ್‌ ರೈಲು ನಿಲ್ದಾಣದ ಅಭಿವೃದ್ಧಿ ಮಾಡಿದ್ದೇನೆ. 25 ಕೋಟಿ ರು. ವೆಚ್ಚದಲ್ಲಿ ವೈಟ್‌ಫೀಲ್ಡ್‌ ರೈಲು ನಿಲ್ದಾಣದ ಅಭಿವೃದ್ಧಿ ನಡೆಯುತ್ತಿದೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಅಭಿವೃದ್ಧಿ ಮಾಡಿದ್ದೇನೆ. ಯುಪಿಎ ಸರ್ಕಾರ ಬೆಂಗಳೂರನ್ನು ಕಡೆಗಣಿಸಿತ್ತು. ನಮ್ಮ ಸರ್ಕಾರದ ಅವಧಿಯಲ್ಲಿ ಬೆಂಗಳೂರಿಗೆ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಮಾಡಿದ್ದೇನೆ.

* ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಬ್ಬರದ ಪ್ರಚಾರದಿಂದ ಪೈಪೋಟಿ ಎದುರಾಗಬಹುದೇ?
ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳು ಸಿಗದೆ ಕೊನೆಗೆ ಮನ್ಸೂರ್‌ ಅಲಿಖಾನ್‌ ಅವರನ್ನು ಅಭ್ಯರ್ಥಿ ಮಾಡಿದ್ದಾರೆ. ನಾನು ಕಳೆದ ಆರು ತಿಂಗಳಿಂದ ಗಮನಿಸಿರುವಂತೆ ಕೆಲ ಮಂತ್ರಿಗಳು ಹಾಗೂ ನಾಯಕರನ್ನು ಸ್ಪರ್ಧಿಸುವಂತೆ ಕೇಳಿದ್ದಾರೆ. ಆದರೆ, ಯಾರೊಬ್ಬರೂ ಸ್ಪರ್ಧಿಸಲು ಮುಂದೆ ಬಂದಿಲ್ಲ. ಹೀಗಾಗಿ ಕಾಂಗ್ರೆಸ್‌ನವರು ಮನ್ಸೂರ್‌ ಅವರನ್ನು ಅಭ್ಯರ್ಥಿ ಮಾಡಿದ್ದಾರೆ. ಈ ಬಾರಿ ಕಳೆದ ಬಾರಿಗಿಂತ ಹೆಚ್ಚಿನ ಮತಗಳ ಅಂತರದಲ್ಲಿ ಗೆಲುವ ಸಾಧಿಸುವ ವಿಶ್ವಾಸವಿದೆ.

* ಮತದಾರರ ಮನಗೆಲ್ಲಲು ವಿಶೇಷ ಕಾರ್ಯತಂತ್ರ? ಜನರ ಪ್ರತಿಕ್ರಿಯೆ ಹೇಗಿದೆ?
ಕ್ಷೇತ್ರದಲ್ಲಿ ಪ್ರಚಾರದ ವೇಳೆ ಮತದಾರರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೇಂದ್ರ ಸರ್ಕಾರದ ಸಾಧನೆಗಳ ಬಗ್ಗೆ ಜನರಿಗೆ ತಿಳಿಸಲಾಗುತ್ತಿದೆ. ಪಾರ್ಕ್‌ಗಳು, ಅಪಾರ್ಟ್‌ಮೆಂಟ್‌ಗಳು, ಸಂಘ-ಸಂಸ್ಥೆಗಳಿಗೆ ಭೇಟಿ ನೀಡಿ ಪ್ರಧಾನಿ ಮೋದಿ ಅವರ ಸಾಧನೆಗಳು, ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. ಸಮುದಾಯದ ಮುಖಂಡರನ್ನು ಭೇಟಿಯಾಗುತ್ತಿದ್ದೇವೆ. ಹೋದಲೆಲ್ಲ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮತದಾರರ ಪ್ರತಿಕ್ರಿಯೆ ಕಂಡು ನನಗೆ ಮತ್ತು ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಾಗಿದೆ. ಸುಡುಬಿಸಿಲು, ಆಯಾಸದ ಪರಿವಿಲ್ಲದೆ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿದ್ದೇವೆ.

* ಉಪನಗರ ರೈಲು ಅನುಷ್ಠಾನ ವಿಳಂಬಕ್ಕೆ ಕಾರಣವೇನು?
ರಾಜ್ಯದಲ್ಲಿ ಇಂದಿನ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ. ಉಪನಗರ ರೈಲು ಯೋಜನೆ ಸಂಬಂಧ ಭೂಸ್ವಾಧೀನಕ್ಕೆ ಆಸಕ್ತಿ ಕೊಡಲಿಲ್ಲ. ನಾವು ಒತ್ತಡ ಹಾಕಿದ ಪರಿಣಾಮ ಈಗ ಯೋಜನೆ ಅನುಷ್ಠಾನದ ಕೆಲಸಗಳಿಗೆ ಚಾಲನೆ ಸಿಕ್ಕಿದೆ. ಇನ್ನು 40 ತಿಂಗಳಲ್ಲಿ ಯೋಜನೆ ಪೂರ್ಣಗೊಳ್ಳುವ ವಿಶ್ವಾಸವಿದೆ.

* ಗೆದ್ದರೆ ಯಾವ ರೀತಿಯ ಅಭಿವೃದ್ಧಿಗೆ ಒತ್ತು ನೀಡುವಿರಿ?
ಬೆಂಗಳೂರು ನಗರ ಎಂದರೆ ಕರೆಗಳ ನಗರ, ಉದ್ಯಾನಗಳ ನಗರ ಎಂಬ ಖ್ಯಾತಿ ಇತ್ತು. ಈಗ ನಾನಾ ಕಾರಣಗಳಿಂದ ಟ್ರಾಫಿಕ್‌ ಸಿಟಿ ಎಂದು ಕರೆಯಲಾಗುತ್ತಿದೆ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ಸಾರ್ವಜನಿಕ ಸಾರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಅಂದರೆ, ಉಪನಗರ ರೈಲು ಯೋಜನೆಯನ್ನು ಬೇಗ ಪೂರ್ಣಗೊಳಿಸುವುದು, ಮೆಟ್ರೋ ರೈಲು ಮಾರ್ಗ ವಿಸ್ತರಣೆ, ಕೇಂದ್ರದ ಯೋಜನೆಗಳ ಅಡಿ ಬಿಎಂಟಿಸಿಗೆ ಹೆಚ್ಚಿನ ಎಲೆಕ್ಟ್ರಿಕಲ್‌ ಬಸ್‌ಗಳನ್ನು ಒದಗಿಸಲು ಆದ್ಯತೆ ನೀಡಲಾಗುವುದು. ಜನರ ನಿರೀಕ್ಷೆಗೆ ತಕ್ಕಂತೆ ಸಾರ್ವಜನಿಕ ಸಾರಿಗೆಗೆ ಒತ್ತು ನೀಡಿದರೆ, ಜನ ಖಾಸಗಿ ವಾಹನಗಳನ್ನು ಬಿಟ್ಟು ಸಾರ್ವಜನಿಕ ಸಾರಿಗೆ ಬಳಕೆಗೆ ಮುಂದಾಗುತ್ತಾರೆ. ಇದರಿಂದ ಸಂಚಾರ ದಟ್ಟಣೆ ಸಮಸ್ಯೆ ನಿಯಂತ್ರಣಕ್ಕೆ ಬರಲಿದೆ. ಅಂತೆಯೆ ಕೆರೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತೇನೆ. ಈಗಾಗಲೇ ನಗರದಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಇದನ್ನು ಸುಧಾರಿಸಲು ಕೆರೆಗಳ ಅಭಿವೃದ್ಧಿಗೆ ಕೇಂದ್ರದಿಂದ ಹೆಚ್ಚಿನ ಅನುದಾನ ತರುವೆ. ನೀರಿನ ಮರುಬಳಕೆಗೆ ಸಂಬಂಧಿಸಿದಂತೆ ಕಾನೂನು ರೂಪಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರದ ಮೇಲೆ ಒತ್ತಡ ತರುತ್ತೇನೆ.

* ಕಾಂಗ್ರೆಸ್‌ ಈ ಬಾರಿ ಹೆಚ್ಚಿನ ಸ್ಥಾನ ಗೆಲ್ಲುವ ರಣೋತ್ಸಾಹದಲ್ಲಿದೆ?
ರಾಜ್ಯದ 28 ಕ್ಷೇತ್ರಗಳಲ್ಲೂ ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಕಾಂಗ್ರೆಸ್‌ ಈಗ ಒಡೆದ ಮನೆಯಾಗಿದೆ. 10 ತಿಂಗಳ ಹಿಂದೆ ಈ ಸರ್ಕಾರ ಅಧಿಕಾರಕ್ಕೆ ಬಂದಿದೆ. ಜನ ಯಾಕಾದರೂ ಮತ ನೀಡಿದೆವೂ ಎಂದು ಪಶ್ಚಾತಾಪಪಡುತ್ತಿದ್ದಾರೆ. ಈ ಸರ್ಕಾರ ಬೆಂಗಳೂರು ಅಭಿವೃದ್ಧಿಗೆ ಒಂದು ಬಿಡಿಗಾಸು ನೀಡಿಲ್ಲ. ರಸ್ತೆ ಗುಂಡಿ ಮುಚ್ಚಿಲ್ಲ. ಕುಡಿಯುವ ನೀರಿನ ವಿಚಾರದಲ್ಲಿ ಅವ್ಯವಸ್ಥೆಯಾಗಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಬೆಂಗಳೂರು ಸಚಿವರಾಗಿದ್ದಾರೆ. ಆದರೆ, ಅವರು ನಾನು ಯಾವಾಗ ಮುಖ್ಯಮಂತ್ರಿ ಆಗುತ್ತೇನೋ ಎಂದು ಓಡಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನ ಉಳಿಸಿಕೊಳ್ಳಲು ಓಡಾಡುತ್ತಿದ್ದಾರೆ. ಇನ್ನು ಸಚಿವರು ನಾವು ಯಾರ ಜತೆಗೆ ಇದ್ದರೆ ಮುಂದೆ ಅನುಕೂಲ ಎಂಬ ಲೆಕ್ಕಾಚಾರದಲ್ಲಿ ಇದ್ದಾರೆ. ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದಿದೆ. ಕಾನೂನು ಮತ್ತು ಸುವ್ಯವಸ್ಥೆ ಕುಸಿದಿದೆ. ಈ ಬಾರಿ ಕಾಂಗ್ರೆಸ್‌ಗೆ ಜನ ತಕ್ಕಪಾಠ ಕಲಿಸಲಿದ್ದಾರೆ.

ಕೇಂದ್ರ ಸರ್ಕಾರದಿಂದಲೇ ಹೊಸ ಸುದ್ದಿಸಂಸ್ಥೆ ಆರಂಭಕ್ಕೆ ಪ್ಲಾನ್‌: ದೂರದರ್ಶನಕ್ಕೆ ಹೊಸರೂಪ

* ಹಲವು ಹೊಸಮುಖಗಳಿಗೆ ಅವಕಾಶ ಸಿಕ್ಕರೂ ನಿಮಗೆ ಟಿಕೆಟ್‌ ತಪ್ಪದ ಗುಟ್ಟು?
ಕ್ಷೇತ್ರ ಮರುವಿಂಗಡಣೆ ಬಳಿಕ ನನಗೆ ಪಕ್ಷ ನಾಲ್ಕು ಬಾರಿ ಟಿಕೆಟ್‌ ಕೊಟ್ಟಿದೆ. ಮೂರು ಬಾರಿ ಜನ ಆಶೀರ್ವಾದ ಮಾಡಿದ ಪರಿಣಾಮ ಗೆದ್ದಿದ್ದೇನೆ. ನಾಲ್ಕನೇ ಬಾರಿಯೂ ಜನ ಆಶೀರ್ವಾದ ಮಾಡುವ ವಿಶ್ವಾಸವಿದೆ. ನಾನು ಕ್ಷೇತ್ರದ ಜನರ ಬಳಿ ಉತ್ತಮ ಸಂಬಂಧ ಇರಿಸಿಕೊಂಡಿದ್ದೇನೆ. ನನ್ನ ಕೆಲಸದ ರಿಪೋರ್ಟ್‌ ಚೆನ್ನಾಗಿದೆ. ಎಲ್ಲಾ ರಾಜಕೀಯ ಪಕ್ಷಗಳು ಪ್ರತಿ ಕ್ಷೇತ್ರದ ಸರ್ವೆ ಮಾಡಿಸುವುದು ಸಾಮಾನ್ಯ. ಅದರಂತೆ ಸರ್ವೆಯಲ್ಲಿ ನನ್ನ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ. ಹೀಗಾಗಿ ಪಕ್ಷ ನನಗೆ ನಾಲ್ಕನೇ ಬಾರಿಗೆ ಅವಕಾಶ ಕಲ್ಪಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಒಂದೇ ಕಾರಲ್ಲಿ ಪ್ರಯಾಣಿಸಿದ ಖರ್ಗೆ, ಡಿಕೆಶಿ: ತೀವ್ರ ರಾಜಕೀಯ ಕುತೂಹಲ
Karnataka News Live: BBK 12 - ಕಿಚ್ಚ ಸುದೀಪ್‌ ಮುಂದೆ ರೇಷ್ಮೆ ಶಾಲಿನಲ್ಲಿ ಹೊಡೆದಂತೆ ಸತ್ಯದರ್ಶನ ಮಾಡಿಸಿದ ಗಿಲ್ಲಿ ನಟ