ಸಿಡಿ ಕೇಸ್ ಕ್ಲಿಯರ್ ಆಗಿದೆ, ರಮೇಶ್​​ಗೆ ಮತ್ತೆ ಸಚಿವ ಸ್ಥಾನ ಸಿಗಲಿ: ಬಾಲಚಂದ್ರ ಜಾರಕಿಹೊಳಿ

By Suvarna NewsFirst Published Mar 20, 2022, 1:09 PM IST
Highlights

ಪಂಚರಾಜ್ಯ ಚುನಾವಣೆ ಬಳಿಕ ಮತ್ತೆ ಸಚಿವ ಸಂಪುಟ ಪುನರ್‌ರಚನೆ, ವಿಸ್ತರಣೆ ವಿಚಾರ ಮುನ್ನಲೆಗೆ ಬಂದಿದೆ‌. ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸಹೋದರ ರಮೇಶ್ ಜಾರಕಿಹೊಳಿ ಪರ ಬ್ಯಾಟ್ ಬೀಸಿದ್ದಾರೆ.

ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ

ಬೆಳಗಾವಿ (ಮಾ.20): ಪಂಚರಾಜ್ಯ ಚುನಾವಣೆ (5  State Election) ಬಳಿಕ ಮತ್ತೆ ಸಚಿವ ಸಂಪುಟ ಪುನರ್‌ರಚನೆ, ವಿಸ್ತರಣೆ ವಿಚಾರ ಮುನ್ನಲೆಗೆ ಬಂದಿದೆ‌. ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಕೆಎಂಎಫ್ (KMF) ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ (Balachandra Jarkiholi) ಸಹೋದರ ರಮೇಶ್ ಜಾರಕಿಹೊಳಿ (Ramesh Jarkiholi) ಪರ ಬ್ಯಾಟ್ ಬೀಸಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, 'ಏಪ್ರಿಲ್‌ನಲ್ಲಿ ಸಂಪುಟ ವಿಸ್ತರಣೆ ಮಾಡಬಹುದು ಅಂತಾ ಹೇಳುತ್ತಿದ್ದಾರೆ. ಆಗ ಬೆಳಗಾವಿ ಜಿಲ್ಲೆಯ ಶಾಸಕರಿಗೆ ಅವಕಾಶ ಸಿಗಬಹುದು‌. ಬೆಳಗಾವಿ ಜಿಲ್ಲೆಗೆ ಒಳ್ಳೆಯದಾಗುತ್ತೆ. 

ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ಸಿಗುವ ವಿಚಾರವಾಗಿ ಪ್ರತಿಕ್ರಿಯಿಸಿ 'ಸಿಡಿ ಪ್ರಕರಣ ಆದ್ಮೇಲೆ ಅದೇ ನೆಪವಿಟ್ಟು ರಿಸೈನ್ ಮಾಡಿದ್ದರು. ಈಗ ಸಿಡಿ ಕೇಸ್ ಮುಗಿಯಲು ಬರುತ್ತಿದೆ. ಹೈಕೋರ್ಟ್‌ಗೆ ಪಿಐಎಲ್ ಹಾಕಿದ್ದರು, ತೀರ್ಪು ಬಂದ ಬಳಿಕ ಸುಪ್ರೀಂಕೋರ್ಟ್‌ಗೆ ಹೋದರು‌. ಸುಪ್ರೀಂಕೋರ್ಟ್ ಸಹ ವಾಪಸ್ ಹೈಕೋರ್ಟ್ ನಲ್ಲಿ ಡಿಸಿಷನ್ ತಗೋಳಿ ಅಂದ್ರು‌. ಕಳೆದ ತಿಂಗಳು ಹತ್ತನೇ ತಾರೀಖು ಆ ಪಿಐಎಲ್ ಡಿಸ್ಮಿಸ್ ಆಗಿದೆ. ಮೇನ್ ಪಿಟಿಷನ್ ಡಿಸ್ಮಿಸ್ ಆಯ್ತು,ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ರಿಪೋರ್ಟ್ ಸಬ್ಮಿಟ್ ಮಾಡಿದ್ರು. ಸಿಡಿ ಕೇಸ್ ಬಿ-ರಿಪೋರ್ಟ್‌ನಲ್ಲಿ ಹೆಚ್ಚು ಕಡಿಮೆ ಟ್ರ್ಯಾಪ್ ಅಂತಾ ಇದೆ. 

ಹೆಚ್ಚು ಕಡಿಮೆ ರಮೇಶ್ ಅವರ ಮೇಲೆ ಯಾವುದೂ ಕೇಸ್ ಇಲ್ಲ. ಸಣ್ಣಪುಟ್ಟ ಬೇರೆ ಬೇರೆ ಯಾವುದೋ ಎಫ್ಐಆರ್ ಕ್ವ್ಯಾಶಿಂಗ್ ಕೇಸ್ ಇವೆ. ರಮೇಶ್ ಜಾರಕಿಹೊಳಿ ಅವರ ಸಿಡಿ ಕೇಸ್ ಕ್ಲಿಯರ್ ಆಗಿದೆ. ಪಕ್ಷದಲ್ಲೂ ಅದನ್ನೇ ಹೇಳುತ್ತಿದ್ದರು, ಕೇಸ್ ಕ್ಲಿಯರ್ ಆದಮೇಲೆ ಮಾಡೋಣ ಅಂತಿದ್ದರು‌‌. ಆದಷ್ಟು ಬೇಗ ಒಳ್ಳೆಯದಾಗಲಿ ಅಂತಾ ನಾವು ಹಾರೈಸುತ್ತೇವೆ. ಹೈಕಮಾಂಡ್ ನಾಯಕರ ಜೊತೆ ನಾವೇನೂ ಮಾತನಾಡಿಲ್ಲ‌.‌ ರಮೇಶ್ ಜಾರಕಿಹೊಳಿ ಅವರಿಗೆ ಒಳ್ಳೆಯದಾಗಲಿ ಅಂತಾ ಹಾರೈಸುತ್ತೇವೆ.‌ ರಮೇಶ್ ಜಾರಕಿಹೊಳಿಗೆ ಒಳ್ಳೆಯದಾಗುತ್ತೆ ಅಂತಾ ಆಸೆ ಇಟ್ಟುಕೊಂಡಿದ್ದೇವೆ. ಪಂಚರಾಜ್ಯ ಚುನಾವಣೆ ಬಳಿಕ ಹೊಸ ಮುಖ್ಯಮಂತ್ರಿ ಆಯ್ಕೆ ಸಂಬಂಧ ನಾಯಕರು ಬ್ಯುಸಿ ಇದ್ದಾರೆ. 

Puneeth Rajkumar: ಪವರ್ ಸ್ಟಾರ್ ಅಪ್ಪು ಅನಘ್ರ್ಯ ರತ್ನ: ಬಾಲಚಂದ್ರ ಜಾರಕಿಹೊಳಿ

ಮಾರ್ಚ್ 25ರವರೆಗೂ ಎಲ್ಲರೂ ಹೆಚ್ಚು ಕಡಿಮೆ ಬ್ಯುಸಿ ಇದ್ದಾರೆ‌‌. ಮಾರ್ಚ್ 25ರ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಗೆ ಹೋಗುತ್ತಾರೆ‌. ಹೈಕಮಾಂಡ್ ನಾಯಕರ ಅನುಮತಿ ಪಡೆದು ಏಪ್ರಿಲ್ ಮೊದಲ ವಾರದಲ್ಲಿ ಸಂಪುಟ ವಿಸ್ತರಣೆ ಆಗುವ ಭರವಸೆ ಇದೆ‌. ಬೆಳಗಾವಿ ಜಿಲ್ಲೆಗೆ ಎಷ್ಟು ಸಚಿವ ಸ್ಥಾನ ಕೊಡುತ್ತಾರೆ ಎಂಬುದು ಹೈಕಮಾಂಡ್‌ ಹಾಗೂ ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ‌. ಎಷ್ಟು ಮಂದಿಗೆ ಮಾಡ್ತಾರೆ ಎಷ್ಟು ಮಂದಿಯನ್ನು ಬಿಡ್ತಾರೆ ಗೊತ್ತಿಲ್ಲ. ಹೈಕಮಾಂಡ್, ಸಿಎಂ ಕೈಗೊಳ್ಳುವ ನಿರ್ಧಾರಕ್ಕೆ ನಾವೆಲ್ಲರೂ ಬದ್ಧ ವಾಗಿರಬೇಕಾಗುತ್ತೆ' ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.

ಬೆಳಗಾವಿ ಬಿಜೆಪಿ ಬಣ ರಾಜಕಾರಣ ಬಗ್ಗೆ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಿಷ್ಟು: ಬೆಳಗಾವಿ ಜಿಲ್ಲಾ ಬಿಜೆಪಿಯಲ್ಲಿ ಬಣ ರಾಜಕೀಯ ವಿಚಾರವಾಗಿ ಪ್ರತಿಕ್ರಿಯಿಸಿರುವ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, 'ರಮೇಶ್ ಜಾರಕಿಹೊಳಿ, ಸಿಎಂ ಚರ್ಚೆ ಮಾಡಿರಬೇಕು ನನಗೆ ಆ ವಿಷಯ ಗೊತ್ತಿಲ್ಲ. ನಾನೂ ಅವತ್ತು ಪ್ರಯತ್ನ ಮಾಡಿದ್ದೆ, ಆದ್ರೆ ಯಾರೂ ಅದಕ್ಕೆ ಸ್ಪಂದಿಸಲಿಲ್ಲ. ಹೀಗಾಗಿ ನಾವು ನಮ್ಮ ಪಾಡಿಗೆ ಕೆಲಸ ಮಾಡ್ತಾ ಸುಮ್ಮನಿದ್ದೇವೆ. ಮುಂದೆ ಅವಕಾಶ ಸಿಕ್ಕರೆ ಮತ್ತೆ ನೋಡೋಣ ಎಂದಿದ್ದಾರೆ. 

ಇನ್ನು ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ್ ಕತ್ತಿ ವಿರುದ್ಧ ನೌಕರಸ್ಥರ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸಿದ ಬಾಲಚಂದ್ರ ಜಾರಕಿಹೊಳಿ, 'ಕಳೆದ ಬಾರಿ ಚುನಾವಣೆ ನಡೆದಾಗ ರಾಜ್ಯಾಧ್ಯಕ್ಷ ನಳಿನಕುಮಾರ್ ಕಟೀಲ್, ಪ್ರಹ್ಲಾದ್ ಜೋಶಿಯವರು, ಸಂಘಪರಿವಾರದವರು ಬಂದು ಕೂಡಿ ಎಲ್ಲಾ ಸೆಟಲ್ ಮಾಡಿದ್ದಾರೆ. ಅವರ ಮುಂದೆಯೇ ಸರಿ ಮಾಡಿ ಅಂತಾ ಹೇಳಿ ವಿಷಯ ತರುತ್ತೇವೆ. ಅವರೇ ಏನು ಮಾಡುತ್ತಾರೆ ನೋಡೋಣ. ನೌಕರಸ್ಥರ ಸಮಸ್ಯೆ ಬಗೆಹರಿಸಲು ನೌಕರಸ್ಥರ ಸಂಘದವರು ಹೇಳಿದ್ದರು‌‌. ನೌಕರಸ್ಥರಿಗೂ ಒಳ್ಳೆಯದಾಗಬೇಕು, ರೈತರಿಗೂ ಒಳ್ಳೆಯದಾಗಬೇಕು. ಎಲ್ಲರೂ ಕೂಡಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡ್ತೀವಿ' ಎಂದಿದ್ದಾರೆ.

Belagavi: ಹಾಲಿನ ದರ ಹೆಚ್ಚಳ ಬಗ್ಗೆ KMF ಅಧ್ಯಕ್ಷರು ಹೇಳಿದ್ದೇನು?

'ದಿ ಕಾಶ್ಮೀರ ಫೈಲ್ಸ್' ಚಿತ್ರ ನೋಡಿ ರಿಯ್ಯಾಕ್ಟ್ ಮಾಡ್ತೀನಿ': ಇನ್ನು 'ದಿ ಕಾಶ್ಮೀರ ಫೈಲ್ಸ್' (The Kashmir Files) ಚಿತ್ರದ ವಿಚಾರವಾಗಿ ಬಿಜೆಪಿ (BJP) ಕಾಂಗ್ರೆಸ್ (Congress) ನಾಯಕರ ಮಧ್ಯೆ ಟಾಕ್‌ಫೈಟ್ ವಿಚಾರವಾಗಿ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ, 'ದಿ ಕಾಶ್ಮೀರ್ ಫೈಲ್ಸ್ ಚಿತ್ರ ನೋಡ್ತೀನಿ, ನೋಡಿದ್ಮೇಲೆ ರಿಯ್ಯಾಕ್ಟ್ ಮಾಡ್ತೀನಿ. ನಮ್ಮವರ ಹೇಳಿಕೆ ಸರಿ ಇದೆಯೋ, ಅವರ ಹೇಳಿಕೆ ಸರಿ ಇದೆಯೋ ಚಿತ್ರ ನೋಡಿದ ಬಳಿಕ ರಿಯ್ಯಾಕ್ಟ್ ಮಾಡ್ತೀನಿ‌‌. ಜನ ಆಲ್‌ರೇಡಿ ಸಿನಿಮಾ ನೋಡ್ತಿದ್ದಾರೆ, ಕಲೆಕ್ಷನ್ ಚೆನ್ನಾಗಿದೆ ಅಂತಾ ವರದಿ ಬರ್ತಿದೆ. ಐದು ರಾಜ್ಯಗಳ ಚುನಾವಣೆಯಲ್ಲಿ ನಾಲ್ಕು ರಾಜ್ಯ ಬಿಜೆಪಿ ಗೆದ್ದ ಮೇಲೆ ಕಾಂಗ್ರೆಸ್‌ನವರಿಗೆ ಏನ್ ಹೇಳಬೇಕು ಅರ್ಥ ಆಗ್ತಿಲ್ಲ. ಕಾಂಗ್ರೆಸ್ ಬಗ್ಗೆ ತಲೆ ಕೆಡಿಸಿಕೊಳ್ಳೋದು‌ ಬೇಡ, 2023ರ ಚುನಾವಣೆ ಗಮನದಲ್ಲಿಟ್ಟುಕೊಂಡು ಕೆಲಸ ಮಾಡೋಣ' ಎಂದಿದ್ದಾರೆ.

'ಯಾರೂ ಪಕ್ಷ ಬಿಡಲ್ಲ, 17 ಶಾಸಕರೂ ಬಿಜೆಪಿಯಿಂದಲೇ ಸ್ಪರ್ಧೆ': ಮತ್ತೊಂದೆಡೆ ಪಕ್ಷ ಬಿಟ್ಟು ಹೋದವರು ಬಂದ್ರೆ ಮತ್ತೆ ಸೇರಿಸಿಕೊಳ್ತೀವಿ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಬಾಲಚಂದ್ರ ಜಾರಕಿಹೊಳಿ‌, 'ಸುಮ್ಮನೇ ಎಲ್ಲರೂ ವದಂತಿ ಹಬ್ಬಿಸುತ್ತಿದ್ದಾರೆ,ಅವರು ಹೋಗ್ತಾರೆ ಇವರು ಹೋಗ್ತಾರೆ ಅಂತಾ ಹೇಳುತ್ತಿದ್ದಾರೆ‌. ಯಾರೂ ಪಕ್ಷ ಬಿಟ್ಟು ಹೋಗಲ್ಲ, ಬಿಜೆಪಿಯಲ್ಲೇ ಇರುತ್ತಾರೆ. 2023ರ ಚುನಾವಣೆಯಲ್ಲಿ 17 ಶಾಸಕರು ಬಿಜೆಪಿ ಟಿಕೆಟ್‌ ಮೇಲೆಯೇ ಸ್ಪರ್ಧಿಸುತ್ತಾರೆ. ಸುಮ್ಮನೇ ವದಂತಿ ಹಬ್ಬಿಸುತ್ತಾರೆ ಅದನ್ನ ತಲೆಕೆಡಿಸಿಕೊಳ್ಳೋದು ಬೇಡ' ಎಂದು ತಿಳಿಸಿದ್ದಾರೆ.

click me!