
ಬಾಗಲಕೋಟೆ (ಏ.7): ನಂಬಿಕೆ ದ್ರೋಹ, ವಿಶ್ವಾಸ ದ್ರೋಹಕ್ಕೆ ಮತ್ತೊಂದು ಹೆಸರೇ ಸಿದ್ದರಾಮಯ್ಯ ಎಂಬ ಯಡಿಯೂರಪ್ಪ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ‘ನಾನು ಯಾರಿಗಾದರೂ ದ್ರೋಹ ಮಾಡಿದ್ರೆ ಹೇಳಲಿ, ಸುಮ್ಮ ಸುಮ್ಮನೆ ಹೇಳಿ ಬಿಟ್ರೆ ಹೇಗೆ?’ ಎಂದು ಪ್ರಶ್ನಿಸಿದ್ದಾರೆ. ‘ಆಧಾರ ಇದ್ದರೆ ಮಾತನಾಡಿ, ಸುಮ್ಮನೆ ಮಾತನಾಡೋದಲ್ಲ. ನನ್ನ ಜೀವನದಲ್ಲಿ ಆ ತರಹ ಮಾತನಾಡಿಲ್ಲ. ನಾನು ಆಧಾರ ಸಹಿತ ಮಾತನಾಡೋನು, ಆಧಾರ ಇಲ್ಲದೆ ಇದ್ದರೆ ಆಧಾರ ರಹಿತ ಆಗುತ್ತೆ, ಅದಕ್ಕೆ ಯಾವ ಕಿಮ್ಮತ್ತೂ ಇರಲ್ಲ’ ಎಂದಿದ್ದಾರೆ.
- ಹಾಗಾದ್ರೆ ಬಿಎಸ್‌ವೈ ಕಳ್ಳ, ಭ್ರಷ್ಟರಾ?
ಸೋಮವಾರ ಬಾಗಲಕೋಟೆಯ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಯಡಿಯೂರಪ್ಪ ಅವರನ್ನು ನಾನು ಕಳ್ಳ ಅಂತೀನಿ, ಭ್ರಷ್ಟ ಅಂತೀನಿ. ನಾನು ಹೇಳಿದಾಕ್ಷಣ ಅವರು ಕಳ್ಳ, ಭ್ರಷ್ಟ ಆಗುತ್ತಾರಾ?. ಸುಮ್ಮ ಸುಮ್ಮನೆ ಹೇಳೋದಲ್ಲ. ಅವರಿಗೆ ವಯಸ್ಸಾದ ಮೇಲೆ ಅರಳು-ಮರಳು ಆಗಿದೆ. ಅವರ ಕಾಲದಲ್ಲಿ ಭ್ರಷ್ಟ ಎಂದು ಯಾರನ್ನು ಕರೆದರು?. ಯಾರನ್ನು ಯತ್ನಾಳ ಭ್ರಷ್ಟ ಎಂದು ಕರೆದರು?. ಹಾಗಾದರೆ, ಯಡಿಯೂರಪ್ಪನವರು ಭ್ರಷ್ಟ ಅಲ್ವಾ?. ಇದು ನಾನು ಹೇಳಿದ್ದಲ್ಲ, ಅವರ ಪಕ್ಷದ ಮನುಷ್ಯನೇ ಹೇಳಿರೋದು. ವಿಶ್ವನಾಥ ಅವರೂ ಯಡಿಯೂರಪ್ಪ ಮೇಲೆ ಭ್ರಷ್ಟಾಚಾರ ಆರೋಪ ಮಾಡಿದ್ದರು. ಅವರ ಪಕ್ಷದವರೇ ಅವರ ಮೇಲೆ ಆರೋಪ ಮಾಡಿದರೆ ಸುಳ್ಳಾ, ನಿಜಾನೋ?’ ಎಂದು ಪ್ರಶ್ನೆ ಮಾಡಿದರು.
ಸ್ವಜಾತಿಯ ಅಭ್ಯರ್ಥಿ ಆಗಿರುವ ಕಾರಣ ಸಿಎಂ ಬಾಗಲಕೋಟೆಗೆ ಪ್ರಚಾರಕ್ಕೆ ಬಂದಿದ್ದಾರೆ ಎಂಬ ಯಡಿಯೂರಪ್ಪ ಆರೋಪಕ್ಕೆ ಪ್ರತಿಕ್ರಿಯಿಸಿ, ಯಡಿಯೂರಪ್ಪ ಯಾವ ಜಾತಿ?. ಯಾರ ಪರ ಪ್ರಚಾರ ಮಾಡುತ್ತಿದ್ದಾರೆ?. ಅವರು ಉಮೇಶ ಮೇಟಿ ಪರ ಪ್ರಚಾರ ಮಾಡುತ್ತಿದ್ದಾರಾ?. ಚರಂತಿಮಠ ಯಾವ ಜಾತಿ?. ಚರಂತಿಮಠ ಲಿಂಗಾಯತರು, ಹಾಗಾದರೆ ಅವರು ಮಾಡುತ್ತಿರೋದೇನು?. ಉಮೇಶ ಮೇಟಿ ನಮ್ಮ ಪಕ್ಷದ ಅಭ್ಯರ್ಥಿ. ಹಾಗಾಗಿ ಪ್ರಚಾರ ಮಾಡ್ತೀನಿ, ದಾವಣಗೆರೆಯಲ್ಲಿ ಲಿಂಗಾಯತ ಅಭ್ಯರ್ಥಿ ಇದ್ದಾರೆ. ಅಲ್ಲಿಗೆ ಪ್ರಚಾರಕ್ಕೆ ಹೋಗಿಲ್ವಾ?.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.