'ನಿಮ್ಮಂಥ ಕಳ್ಳೆತ್ತು ದೇಶದಲ್ಲೇ ಇಲ್ಲ..' ಬಿಜೆಪಿ ಕಳ್ಳೆತ್ತು ಎಂಬ ಸಿಎಂ ಹೇಳಿಕೆಗೆ ಚಲವಾದಿ ನಾರಾಯಣಸ್ವಾಮಿ ತಿರುಗೇಟು

Published : Mar 31, 2026, 12:53 PM IST
Chalavadi Narayanaswamy

ಸಾರಾಂಶ

ಬಾಗಲಕೋಟೆ ಉಪಚುನಾವಣೆ ಪ್ರಚಾರದ ವೇಳೆ, ಬಿಜೆಪಿ ಮುಖಂಡ ಚಲುವಾದಿ ನಾರಾಯಣಸ್ವಾಮಿ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ರಸ್ತೆ ಗುಂಡಿ ಮುಚ್ಚಲು ಯೋಗ್ಯತೆ ಇಲ್ಲದ ಈ ಸರ್ಕಾರಕ್ಕೆ ಜನರೇ ಮಣ್ಣು ಮುಚ್ಚಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಬಾಗಲಕೋಟೆ (ಮಾ.31): ನಾನು ನಿನ್ನೆ ಕೆಲ ಹಳ್ಳಿಗಳಿಗೆ ಹೋಗಿದ್ದೆ. ಅಲ್ಲಿನ ಪರಿಸ್ಥಿತಿ ಹೇಗಿದೆ ಎಂದರೆ ಈ ಸರ್ಕಾರಕ್ಕೆ ಗುಂಡಿ ಮುಚ್ಚಲಿಕ್ಕೆ ಯೋಗ್ಯತೆ ಇಲ್ಲ ಎಂದು ಚಲುವಾದಿ ನಾರಾಯಣಸ್ವಾಮಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಬಾಗಲಕೋಟೆ ಉಪಚುನಾವಣೆ ಹಿನ್ನೆಲೆ ಬಿಜೆಪಿ ಅಭ್ಯರ್ಥಿ ಪರ ಭರ್ಜರಿ ಪ್ರಚಾರ ನಡೆಸಿದರು. ಈ ವೇಳೆ ಮಾತನಾಡಿದ ಅವರು, 'ಉಮೇಶ್ ಮೇಟಿ ಗೆಲ್ಲಿಸಿ, ನನ್ನ ಕೈ ಬಲಪಡಿಸಿ' ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಟಾಂಗ್ ನೀಡಿದರು.

ಕಾಂಗ್ರೆಸ್‌ನವರು ಕಳೆದ ಚುನಾವಣೆಗೆ ಬಂದೋರು ಮತ್ತೆ ಈ ಹಳ್ಳಿಗಳ ಕಡೆ ತಲೆಹಾಕಿ ಮಲಗಿಲ್ಲ. ಇವತ್ತು ಅವರು(ಸಿಎಂ) ಬರುತ್ತಾರೆ ಎಂದು ಕಪ್ಪಗಿರುವ ರಸ್ತೆಗೆ ಕೆಂಪು ಮಣ್ಣು ಹಾಕಿ ಮುಚ್ಚಿದ್ದಾರೆ. ಆದರೆ ಇಲ್ಲಿನ ಜನ ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಹಳ್ಳದಲ್ಲಿ ಕೆಂಪು ಮಣ್ಣು ಹಾಕಿ ಮುಚ್ಚುವ ಕಾಲ ಬಂದಿದೆ, ಮುಚ್ಚುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಚೀಫ್ ಮಿನಿಸ್ಟರ್ ಅರ್ಥ ಕಳ್ಕೊಂಡು ಚೀ..ಫ್ ಮಿನಿಸ್ಟರ್ ಆಗಿದೆ

ಸಿಎಂ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ಚಲವಾದಿ ನಾರಾಯಣಸ್ವಾಮಿ ಅವರು, ಸಿಎಂ ಅಂದ್ರೆ ಚೀಫ್ ಮಿನಿಸ್ಟರ್ ಆದ್ರೆ ಇವರಿಂದಾಗಿ ಅದು ಅರ್ಥ ಕಳ್ಕೊಂಡು ಅದೀಗ ಚೀ..ಫ್ ಮಿನಿಸ್ಟರ್ ಆಗಿದೆ. ಇವರ ಪರಿಸ್ಥಿತಿ ಇಷ್ಟೇನೇ ಯಾಕೆಂದರೆ ಇನ್ನೊಂದು ಹದಿನೈದು ದಿವಸ ಸಿಎಂ ಆಗಿರಬಹುದು. ಚುನಾವಣೆ ಬಳಿಕ ಆ ಕಡೆಯಿಂದ ಕೀ ಕೊಡೋಕೆ ಶುರುವಾಗಿದೆ. ಸದನದಲ್ಲಿ ಕಲಾಪ, ಚುನಾವಣೆ ಬರದೇ ಇದ್ದಿದ್ರೆ ಈಗಾಗಲೇ ಮುಖ್ಯಮಂತ್ರಿ ರಿಸೈನ್ ಮಾಡ್ಬಿಟ್ಟಿರ್ತಿದ್ರು. ಆದರೆ ಚುನಾವಣೆ ಬಂದಾಗ ರಾಜೀನಾಮೆ ಕೊಟ್ರೆ ನಾವು ಸೋತುಬಿಡ್ತೇವೆ ಎಂಬ ಆತಂಕದಿಂದ ಸಿಎಂ ಆಗಿದ್ದ ಸಿದ್ದರಾಮಯ್ಯ ಮುಂದುವರಿದಿದ್ದಾರೆ. ಆದರೆ ಈ ಕಾಂಗ್ರೆಸ್ ಅವನ್ನು ಇಟ್ಕೊಂಡ್ರೂ ಸೋಲುತ್ತೆ. ಅವರ ಪರಿಸ್ಥಿತಿ ಬಹಳ ಹದಗೆಟ್ಟಿದೆ ಅವರಿಗೆ ಅರ್ಥವಾಗುತ್ತಿಲ್ಲ. ಇದೇ ಕಾರಣಕ್ಕೆ ಮತ ಹಾಕುವಂತೆ ಮತದಾರರಿಗೆ ಧಮ್ಕಿ ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಾವಣಗೆರೆ, ಬಾಗಲಕೋಟೆ ಎರಡಲ್ಲೂ ನಾವೇ ಗೆಲ್ತೀವಿ

ಬಾಗಲಕೋಟೆ, ದಾವಣಗೆರೆ ಎರಡೂ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳೇ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಚಲುವಾದಿ ನಾರಾಯಣಸ್ವಾಮಿ ಅವರು, ಕಾಂಗ್ರೆಸ್ ಸರ್ಕಾರದಲ್ಲಿ ಯಾವುದಕ್ಕೂ ಸಮಯವಿಲ್ಲ. ಕೈ ಬಲಪಡಿಸಬೇಕು ಅಂತಾ ಸಿದ್ದರಾಮಯ್ಯ ಹೇಳಿದ್ದಾರೆ. ಯಾವ ಕೈ ಬಲಪಡಿಸಬೇಕು? ಡಿಕೆ ಶಿವಕುಮಾರ್ ಅವರ ಕಾಲು ಎಳೆಯುವ ಕೈ ಬಲಪಡಿಸಬೇಕಾ? ಎಂದು ಲೇವಡಿ ಮಾಡಿದರು.

ಬಿಜೆಪಿಗರು ಕಳ್ಳೆತ್ತು ಎಂದ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು

ಬಿಜೆಪಿಗರು ಕಳ್ಳೆತ್ತು ಇದ್ದಂಗೆ ರಾಜ್ಯದಲ್ಲಿ ಉಳುಮೆ ಮಾಡುವ ಎತ್ತುಗಳು ಬೇಕು ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡೀದ ಚಲವಾದಿ ನಾರಾಯಣಸ್ವಾಮಿ ಅವರು, ಸಿದ್ದರಾಮಯ್ಯನವರು ಎತ್ತುಗಳಿಗೆ ದೋಖಾ ಮಾಡಿಯೇ ಬಂದವರು. ಅವರು‌ ಮೊದಲು ಇದ್ದ ಪಕ್ಷದ ಚಿಹ್ನೆ ಯಾವುದು? ಅಲ್ಲಿ ದೋಖಾ ಮಾಡಿ ಕೈ ಹಿಡಕೊಂಡು ಬಂದವರು. ಈ ಕೈ ಕತ್ತರಿಸಿದ ಕೈ, ತುಂಡರಿಸಿದ ಕೈ ಅದು. ಆಕ್ಸಿಡೆಂಟ್ ಆದಾಗ ತುಂಡಾಗಿ ಬಿದ್ದಿರುತ್ತದಲ್ಲ ಆ ಕೈ. ಈಗ ಅದಕ್ಕೆ ಜೀವ ಇಲ್ಲ ಅದು ನಿರ್ಜೀವ ಕೈ. ಅದರಿಂದ ಏನೂ ಆಗುವುದಿಲ್ಲ, ನಾವು ಕಳ್ಳೆತ್ತು ಅಲ್ಲ ಸುಳ್ಳೆತ್ತೂ ಅಲ್ಲ, ನಿಮ್ಮಂತಹ ಕಳ್ಳೆತ್ತು ದೇಶದಲ್ಲೇ ಇಲ್ಲ. ಹೀಗಾಗಿ ಮುಂದೆ ದೇಶದಿಂದಲೇ ನೀವು ಕಣ್ಮರೆಯಾಗುವ ಪರಿಸ್ಥಿತಿ ಜನ ಎದುರು ನೋಡ್ತಾ ಇರುವಾಗ ಅದರ ಬಗ್ಗೆ ಏನು ಮಾತಾನಾಡ್ತೀರಿ? ಕಳ್ಳೆತ್ತುಗಳು ಅಂದ್ರೆ ಕಾಂಗ್ರೆಸ್ ಪಕ್ಷವೇ ಎಂದು ತಿರುಗೇಟು ನೀಡಿದರು..

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಸದ ಸಾಗರ್ ಖಂಡ್ರೆ ಹೆಸರೇಳಿಕೊಂಡು ಭಗವಂತ ಖೂಬಾರಿಗೆ ಜೀವ ಬೆದರಿಕೆ! FIR
Karnataka Bypolls: ಇಂದಿನಿಂದ ಉಪಚುನಾವಣೆ ಅಖಾಡಕ್ಕೆ ಡಿಕೆಶಿ, ದಾವಣಗೆರೆ, ಬಾಗಲಕೋಟೆ ಪ್ರಚಾರದ ಜೊತೆಗೆ ಅಸ್ಸಾಂ ಗೆಲುವಿನ ಬಗ್ಗೆ ಹೇಳಿದ್ದೇನು?