
ಬಾಗಲಕೋಟೆ (ಏ.4): ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದಷ್ಟು ಲಜ್ಜೆಗೇಡಿ ಸರ್ಕಾರವನ್ನು ನಾವು ಎಂದೂ ನೋಡಿರಲಿಲ್ಲ. ಸರ್ಕಾರರದ ನೀತಿಗಳಿಂದ ಬೇಸತ್ತ ಮತದಾರರು ಉಪಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಲಿದ್ದಾರೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ಬಾಗಲಕೋಟೆ ಕ್ಷೇತ್ರದ ಉಪಚುನಾವಣೆ ಹಿನ್ನೆಲೆ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಶಾಸಕರಾಗಿದ್ದ ವೀರಣ್ಣ ಚರಂತಿಮಠ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅವರು ಕ್ಷೇತ್ರಕ್ಕಾಗಿ ದುಡಿದಿದ್ದಾರೆ. ಈ ಬಾರಿಯೂ ಅವರನ್ನು ಮತದಾರರು ಗೆಲ್ಲಿಸಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು..
ಕರ್ನಾಟಕದಲ್ಲಿ ಕಾಂಗೆಸ್ ಸರ್ಕಾರ ಬಂದು ಮೂರು ವರ್ಷ ಆಗಿದೆ. ಇಷ್ಟಾದರೂ ಯಾವುದೇ ಅಭಿವೃದ್ಧಿ ಕಾರ್ಯ ಆಗಿಲ್ಲ. ನಾನು 48 ವರ್ಷಗಳಿಂದ ರಾಜಕಾರಣದಲ್ಲಿದ್ದೇನೆ. ಈ ಅವಧಿಯಲ್ಲಿ ಸಾಕಷ್ಟು ಸರ್ಕಾರ ನೋಡಿದ್ದೇನೆ. ಅಧಿಕಾರದಲ್ಲಿದ್ದ ಮುಖ್ಯಮಂತ್ರಿಗಳನ್ನು ಕಂಡಿದ್ದೇನೆ. ಆದರೆ ಇಷ್ಟು ಕೆಟ್ಟ ಮತ್ತು ಲಜ್ಜೆಗೇಡಿ ಸರ್ಕಾರ ಇರಲಿಲ್ಲ. ಯಾರೇ ಸಿಎಂ ಆದರೂ ರಾಜ್ಯದ ಅಭಿವೃದ್ಧಿ, ಹಿತಕ್ಕೆ ಆದ್ಯತೆ ನೀಡುತ್ತಿದ್ದರು. ಆದರೆ ಈಗಿನ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಕಾರ್ಯವನ್ನೇ ಮಾಡುತ್ತಿಲ್ಲ ಎಂದು ಆರೋಪಿಸಿದರು.
ಈ ಹಿಂದೆ ಅಧಿಕಾರದಲ್ಲಿದ್ದ ಮುಖ್ಯಮಂತ್ರಿಗಳು ಉಚಿತ ಕೊಡುಗೆ ನೀಡಿದ್ದಾರೆ. ಈ ಕಾಂಗ್ರೆಸ್ ಸರ್ಕಾರವೂ ಗ್ಯಾರಂಟಿ ನೀಡುತ್ತಿದೆ. ಪುಕ್ಕಟೆ ನೀಡುತ್ತಿದೆ. ನಾವು ಉಚಿತವಾಗಿ ಕೊಡಬೇಡಿ ಎಂದು ಹೇಳುವುದಿಲ್ಲ. ಆದರೆ ರಾಜ್ಯದ ಅಭಿವೃದ್ಧಿ ನಿರ್ಲಕ್ಷ್ಯ ಮಾಡಿ, ಕಡೆಗಣಿಸಿ, ಕುಂಠಿತ ಮಾಡಿ ಪುಕ್ಕಟೆ ಕೊಡಬಾರದು. ಇದು ಪಾಪಗೇಡಿ ಕೆಲಸ ಎಂದರು.
ರಾಜ್ಯದ ಕಾಂಗ್ರೆಸ್ ಸರ್ಕಾರ ದಿನಬೆಳಗಾದರೆ ಮುಸ್ಲಿಮರ ಹೆಸರು ಹೇಳುತ್ತದೆ. ಮಧ್ಯಾಹ್ನ ದಲಿತರ ಹೆಸರು, ಸಂಜೆಯಾದರೆ ಹಿಂದುಳಿದ ವರ್ಗದ ಹೆಸರು ಹೇಳುತ್ತದೆ. ಆದರೆ ಈ ಮೂರೂ ಸಮುದಾಯಗಳಿಗೆ ಸರ್ಕಾರ ಮೋಸ ಮಾಡಿದೆ. ಎಸ್‌ಸಿ, ಎಸ್‌ಟಿ ಸೇರಿದಂತೆ ಎಲ್ಲರ ಹಣವನ್ನು ಲೂಟಿ ಮಾಡಿ ಗ್ಯಾರಂಟಿಗಳಿಗೆ, ಬೇರೆ ರಾಜ್ಯದ ಚುನಾವಣೆಗಳಿಗೆ ಬಳಸಿದ್ದಾರೆ ಎಂದು ದೂರಿದರು.
ಕ್ಷೇತ್ರದ ಜನ ಸೂಕ್ಷ್ಮ ಇದ್ದಾರೆ. ಅವರು ಬುದ್ಧಿವಂತರಾಗಿದ್ದಾರೆ. ಈ ಹಿಂದಿಗಿಂತ ಹೆಚ್ಚು ವಿದ್ಯಾವಂತರಾಗಿದ್ದಾರೆ. ಯಾರಿಗೆ ಮತ ಹಾಕಬೇಕು ಎಂಬುದನ್ನು ವಿವೇಚನೆಯಿಂದ ತೀರ್ಮಾನ ಮಾಡಲಿದ್ದಾರೆ. ವೀರಣ್ಣ ಚರಂತಿಮಠ ಅವರು ಗೆಲುವು ಸಾಧಿಸಲಿದ್ದಾರೆ ಎಂಬ ಎಲ್ಲಾ ವಿಶ್ವಾಸ ಇದೆ ಎಂದರು.
\Bಕಾಂಗ್ರೆಸ್ ಸೇರಿ ಕೆಟ್ಟ ಸಿದ್ಧರಾಮಯ್ಯ: \Bಕಾಂಗ್ರೆಸ್ ಕಾರ್ಯಕರ್ತರನ್ನು ಬಿಟ್ಟು ಚುನಾವಣೆಯಲ್ಲಿ ಅಧಿಕಾರಿಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ನವರು ಅಧಿಕಾರಿಗಳನ್ನು ಚುನಾವಣೆಯಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಶಿಕ್ಷಕರು ಇನ್ವಾಲ್ವ ಆಗಿದ್ದಾರೆ ಅದಕ್ಕಾಗಿ ಅವರಿಗೆ 1 ಕೋಟಿ ಕೊಟ್ಟಿದ್ದಾರಂತೆ. ಸಿಎಂ ಸಿದ್ದರಾಮಣ್ಣ ಬಹಳ ಒಳ್ಳೆಯ ಮನುಷ್ಯ ಇದ್ದ.ಆದರ ಕಾಂಗ್ರೆಸ್ ಸೇರಿ ಕೆಟ್ಟ ಹೋದ. ಮೊದಲು ನಮ್ಮ ಮನೆಗೆ ಬರ್ತಿದ್ದ, ನನ್ನ ಜೊತೆ ಕೆಲಸ ಮಾಡ್ಯಾನ, ಆದ್ರ ಮೊದಲ ಬಂಗಾರದಂತಹ ಮನುಷ್ಯ ಈಗ ಕೆಟ್ಟ ಹೋದ. ಈಗ ಅವನ ಮನೆ ಕರಪ್ಟ್, ಎಲ್ಲಾ ಕರಪ್ಟ್ ಎಂದು ಜಿಗಜಿಣಗಿ ಆರೋಪಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.