ವಾಲ್ಮೀಕಿ ಹಗರಣದಲ್ಲಿ ಮಾಜಿ ಸಚಿವ ನಾಗೇಂದ್ರ ಕಿಂಗ್ ಪಿನ್ ಎಂದು ಚಾರ್ಜ್ ಶೀಟ್ ಸಲ್ಲಿಕೆ ಆಗಿರುವುದು ಬಿಜೆಪಿಯ ಕುತಂತ್ರದಿಂದ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬಿಜೆಪಿ ವಿರುದ್ಧ ಗರಂ ಆಗಿದ್ದಾರೆ.
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಸೆ.11): ವಾಲ್ಮೀಕಿ ಹಗರಣದಲ್ಲಿ ಮಾಜಿ ಸಚಿವ ನಾಗೇಂದ್ರ ಕಿಂಗ್ ಪಿನ್ ಎಂದು ಚಾರ್ಜ್ ಶೀಟ್ ಸಲ್ಲಿಕೆ ಆಗಿರುವುದು ಬಿಜೆಪಿಯ ಕುತಂತ್ರದಿಂದ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬಿಜೆಪಿ ವಿರುದ್ಧ ಗರಂ ಆಗಿದ್ದಾರೆ. ಕೊಡಗು ಜಿಲ್ಲೆಯ ಶನಿವಾರಸಂತೆಯಲ್ಲಿ ನೂತನ ಬಸ್ಸು ನಿಲ್ದಾಣದ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ಕೇಂದ್ರ ಬಿಜೆಪಿಯವರ ಕುತಂತ್ರದಿಂದ ನಾಗೇಂದ್ರ ಅವರ ಹೆಸರನ್ನು ಚಾರ್ಜ್ ಶೀಟಿನಲ್ಲಿ ಸೇರಿಸಲಾಗಿದೆ. ನಮ್ಮ ದೇಶದಲ್ಲಿ ಸಿಬಿಐ, ಇಡಿ ಮತ್ತು ಐಟಿ ಬಗ್ಗೆ ಹೆಚ್ಚಿಗೆ ಏನು ಹೇಳುವಂತಿಲ್ಲ. ಆ ರೀತಿ ಆಗಿ ಹೋಗಿದೆ. ಕೇಂದ್ರದಿಂದ ಏನು ಡೈರೆಕ್ಷನ್ ಬರುತ್ತೋ ಆ ರೀತಿ ಈ ಎಲ್ಲಾ ಸಂಸ್ಥೆಗಳು ಮಾಡುತ್ತವೆ.
ಇನ್ನು ಮಣಿಪುರ, ಮಹಾರಾಷ್ಟ್ರ ಅಲ್ಲೆಲ್ಲಾ ವಿಪಕ್ಷದಲ್ಲಿ ಇದ್ದ ದೊಡ್ಡ ನಾಯಕರುಗಳ ಮೇಲೆ ಸಾಕಷ್ಟು ಆಪಾದನೆಗಳಿದ್ದವು. ಅವರನ್ನೆಲ್ಲಾ ಬಿಜೆಪಿ ಅವರು ತಮ್ಮ ಪಕ್ಷಕ್ಕೆ ಸೇರಿಸಿಕೊಂಡರು. ಆಪಾದನೆಗಳಿದ್ದವರನ್ನೆಲ್ಲಾ ವಾಷಿಂಗ್ ಪೌಡರ್ ನಿರ್ಮಾದಲ್ಲಿ ಕ್ಲೀನಿಂಗ್ ಮಾಡಿದರು. ಒಬ್ಬರಿಗೆ ಮುಖ್ಯಮಂತ್ರಿ ಸ್ಥಾನ ಕೊಟ್ಟಿದ್ದಾರೆ, ಇನ್ನೊಬ್ಬರಿಗೆ ಉಪಮುಖ್ಯಮಂತ್ರಿ ಸ್ಥಾನ ಕೊಟ್ಟಿದ್ದಾರೆ. ಈ ರೀತಿ ಅನೇಕ ಆಪಾದನೆಗಳಿದ್ದವರನ್ನು ಪಕ್ಷಕ್ಕೆ ಸೇರಿಸಿಕೊಂಡು ಹುದ್ದೆಗಳನ್ನು ಕೊಟ್ಟಿದ್ದಾರೆ. ಯಾರು ಅವರ ಮಾತನ್ನು ಕೇಳುವುದಿಲ್ಲವೋ ಅವರಿಗೆ ನಾಗೇಂದ್ರ ಅವರ ರೀತಿ ಮಾಡುತ್ತಾರೆ ಎಂದು ಹೇಳುವ ಮೂಲಕ ಸಚಿವ ನಾಗೇಂದ್ರ ಅವರನ್ನು ಬಿಜೆಪಿಗೆ ಸೆಳೆಯುವ ಪ್ರಯತ್ನ ನಡೆದಿತ್ತು ಎನ್ನುವುದನ್ನು ಪರೋಕ್ಷವಾಗಿ ಹೇಳಿದ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಕಳೆದ ಹತ್ತು ವರ್ಷಗಳಿಂದ ದೇಶದಲ್ಲಿ ಇದೇ ತಾನೆ ನಡೆಯುತ್ತಿರುವುದು ಎಂದು ರಾಮಲಿಂಗರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ರಾಮೇಶ್ವರಂ ಕೆಫೆ ಸ್ಫೋಟದ ದಿನವೇ ಬಿಜೆಪಿ ಕಚೇರಿಯನ್ನು ಸ್ಫೋಟಿಸುವ ಸಂಚನ್ನು ಉಗ್ರ ರೂಪಿಸಿದ್ದ ಎನ್ನುವ ವಿಷಯಕ್ಕೆ ಸಂಬಂಧಿಸಿದ್ದ ಈ ಕುರಿತು ಎನ್ಐಎ ಸ್ಪಷ್ಪಟಿಸಿದೆ ಎನ್ನುವ ಪ್ರಶ್ನೆಗೆ ಅದು ಇರಬಹುದೇನೋ, ಆ ಮಾಹಿತಿ ಅವರಿಗೆ ಇರುತ್ತದೆ ಅಲ್ಲವೇ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಇದಕ್ಕೂ ಮೊದಲು ಶನಿವಾರಸಂತೆಯಲ್ಲಿ ನೂತನ ಬಸ್ಸು ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಶಂಕುಸ್ಥಾಪನೆ ನೆರವೇರಿಸಿದರು. 1.85 ಕೋಟಿ ವೆಚ್ಚದಲ್ಲಿ ನೂತನ ಬಸ್ಸು ನಿಲ್ದಾಣ ನಿರ್ಮಿಸಲಾಗುತ್ತಿದೆ. ಸದ್ಯ 95 ಲಕ್ಷ ರೂಪಾಯಿ ಅನುದಾನ ಬಿಡುಗಡೆಯಾಗಿದ್ದು, ಉಳಿದ ಅನುದಾನ ಕೂಡಲೇ ಬಿಡುಗಡೆಯಾಗಲಿದೆ.
ಸಿದ್ದರಾಮಯ್ಯನವರೇ 5 ವರ್ಷ ಸಿಎಂ: ಕೆಲ ಸಚಿವರಿಗೆ ತಿರುಗೇಟು ನೀಡಿದ ಸಚಿವ ರಾಮಲಿಂಗಾರೆಡ್ಡಿ
ಇನ್ನು ಆರೇಳು ತಿಂಗಳಲ್ಲಿ ಬಸ್ಸು ನಿಲ್ದಾಣ ಕಾಮಗಾರಿ ಪೂರ್ಣಗೊಂಡು ಜನರ ಬಳಕೆ ದೊರೆಯಲಿದೆ ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ಹೇಳಿದರು. ಮಡಿಕೇರಿ ಶಾಸಕ ಮಂತರ್ ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಬಿಜೆಪಿಯ ಸುಜಾಕುಶಾಲಪ್ಪ ಭಾಗವಹಿಸಿದ್ದರು. ಹಾಸನ, ದಕ್ಷಿಣ ಕನ್ನಡ ಹಾಗೂ ಕೊಡಗು ಮೂರು ಜಿಲ್ಲೆಗಳ ಗಡಿಯಲ್ಲಿ ಇರುವ ಶನಿವಾರಸಂತೆಗೆ ಹಲವು ವರ್ಷಗಳಿಂದ ಬಸ್ಸು ನಿಲ್ದಾಣ ಆಗಬೇಕೆನ್ನುವ ಜನರ ಬೇಡಿಕೆ ಇತ್ತು. ಅದು ಈಗ ಸಾಕಾರಗೊಳ್ಳುತ್ತಿದೆ. ಅದಕ್ಕೆ ನನ್ನ ಕ್ಷೇತ್ರದ ಜನ ನನಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಅವರಿಗೆ ನಾನು ಧನ್ಯವಾದ ಹೇಳಬೇಕು ಎಂದು ಮಡಿಕೇರಿ ಶಾಸಕ ಮಂತರ್ ಗೌಡ ಹೇಳಿದರು.