ಮಂಕುಬೂದಿ ಎರಚಿ ಅಧಿಕಾರಕ್ಕೇರಿದ ನರೇಂದ್ರ ಮೋದಿ: ಲಕ್ಷ್ಮಣ ಸವದಿ

By Kannadaprabha News  |  First Published Apr 5, 2024, 5:30 AM IST

ನಾನು ಕಳೆದ 25 ವರ್ಷಗಳಿಂದ ಬಿಜೆಪಿಯಲ್ಲಿದ್ದು, ಆ ಪಕ್ಷದ ಮುಖಂಡರ ತಂತ್ರಗಾರಿಕೆ ಬಗ್ಗೆ ನನಗೆ ಅರಿವಿದೆ. ಒಂದು ಸುಳ್ಳನ್ನು ಅನೇಕ ಬಾರಿ ಹೇಳುವ ಮೂಲಕ ಅದನ್ನೇ ಸತ್ಯ ಎಂದು ಬಿಂಬಿಸುತ್ತಾರೆ: ಲಕ್ಷ್ಮಣ ಸವದಿ 


ಅಥಣಿ(ಏ.05):  ದೇಶದಲ್ಲಿ 10 ವರ್ಷಗಳಿಂದ ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸುಳ್ಳು ಆಶ್ವಾಸನೆಗಳನ್ನು ನೀಡಿ ಜನರ ಕಣ್ಣಿಗೆ ಮಂಕುಬೂದಿ ಎರಚುವ ಮೂಲಕ ಅಧಿಕಾರಕ್ಕೆ ಬಂದಿದ್ದಾರೆ ಎಂದು ಶಾಸಕ ಲಕ್ಷ್ಮಣ ಸವದಿ ಆರೋಪಿಸಿದರು. 

ಪಟ್ಟಣದ ಪುರಸಭೆ ಕಾಂಪ್ಲೆಕ್ಸ್‌ನಲ್ಲಿ ಕಾಂಗ್ರೆಸ್ ಪಕ್ಷದ ಜನಸಂಪರ್ಕ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ನಾನು ಕಳೆದ 25 ವರ್ಷಗಳಿಂದ ಬಿಜೆಪಿಯಲ್ಲಿದ್ದು, ಆ ಪಕ್ಷದ ಮುಖಂಡರ ತಂತ್ರಗಾರಿಕೆ ಬಗ್ಗೆ ನನಗೆ ಅರಿವಿದೆ. ಒಂದು ಸುಳ್ಳನ್ನು ಅನೇಕ ಬಾರಿ ಹೇಳುವ ಮೂಲಕ ಅದನ್ನೇ ಸತ್ಯ ಎಂದು ಬಿಂಬಿಸುತ್ತಾರೆ ಎಂದು ದೂರಿದರು.

Latest Videos

undefined

ಹುಬ್ಬಳ್ಳಿ ಜನ್ಮಭೂಮಿ, ಬೆಳಗಾವಿ ನನ್ನ ಕರ್ಮಭೂಮಿ-ಶೆಟ್ಟರ್; ಮೊದಲು ಮನೆ ಅಡ್ರೆಸ್ ತೋರಿಸಲಿ ಎಂದ ಹೆಬ್ಬಾಳ್ಕರ್

ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ನಂತರ ದೇಶದ ಜನರು ಅನೇಕ ನಿರೀಕ್ಷೆಗಳನ್ನು ಹೊಂದಿದ್ದರು. ಬಡ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪೆಟ್ರೋಲ್, ಡಿಸೇಲ್‌, ಗ್ಯಾಸ್ ಬೆಲೆ ಕಡಿಮೆ ಮಾಡುತ್ತೇವೆ. ದೇಶದೆಲ್ಲೆಡೆ ಬುಲೆಟ್ ಟ್ರೈನ್, ತಾಲೂಕು ಕೇಂದ್ರಗಳಲ್ಲಿ ವಿಮಾನ ನಿಲ್ದಾಣ ಮಾಡುವುದಾಗಿ ಸೋಷಿಯಲ್ ಮೀಡಿಯಾಗಳನ್ನು ಬಳಸಿಕೊಂಡು ಪ್ರಚಾರ ಪಡೆದುಕೊಂಡರು. ಆದರೆ, ಕಳೆದ 10 ವರ್ಷಗಳಲ್ಲಿ ನಿರೀಕ್ಷೆ ಪ್ರಮಾಣದ ಪ್ರಗತಿ ಕಂಡಿಲ್ಲ ಎಂದು ದೂರಿದರು.

ಕನಿಷ್ಠ ಪಕ್ಷ ನದಿಗಳ ಜೋಡಣೆ ಮಾಡುತ್ತೇವೆ ಎಂಬ ಆಶ್ವಾಸನೆ ಕೂಡ ಈಡೇರಲಿಲ್ಲ. ಬಿಜೆಪಿ ಅನೇಕ ಸುಳ್ಳುಗಳನ್ನು ಸತ್ಯ ಎಂದು ಬಿಂಬಿಸಿ ದೇಶದ ಜನರಿಗೆ ಮೋಸ ಮಾಡುತ್ತಿದೆ. ಲೋಕಸಭಾ ಚುನಾವಣಾ ಈ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಕುರಿತು ಪ್ರತಿಯೊಬ್ಬ ಮತದಾರರಿಗೆ ಮನವರಿಕೆ ಮಾಡುವ ಮೂಲಕ ನಮ್ಮ ಪಕ್ಷದ ಅಧಿಕೃತ ಅಭ್ಯರ್ಥಿ ಪ್ರಿಯಾಂಕ ಜಾರಕಿಹೊಳಿ ಅವರನ್ನು ಗೆಲ್ಲಿಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಕೋರಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಸದಾಶಿವ ಬುಟಾಳಿ, ಗಜಾನನ ಮಂಗಸೂಳಿ, ಅಸ್ಲಂ ನಾಲಬಂದ, ಬಸವರಾಜ ಗುಮಟಿ, ರಮೇಶ ಸಿಂದಗಿ, ಅಥಣಿ ಬ್ಲಾಕ್ ಅಧ್ಯಕ್ಷ ಸಿದ್ದಾರ್ಥ ಶಿಂಗೆ, ಬಾಬು ಖೇಮಲಾಪೂರ, ಸುರೇಶ ಮಾಯಣ್ಣವರ, ಶಾಂತಿನಾಥ ನಂದೇಶ್ವರ, ರಾಮನಗೌಡ ಪಾಟೀಲ, ತೆಲಸಂಗ ಬ್ಲಾಕ್ ಅಧ್ಯಕ್ಷ ಅಮೋಘಸಿದ್ಧ ಕೊಬ್ಬರಿ, ಪುರಸಭಾ ಸದಸ್ಯ ರಾವಸಾಬ ಐಹೊಳೆ, ವಿಲೀನ ಯಲಮಲ್ಲೇ, ರವಿ ಬಡಕಂಬಿ ಸೇರಿದಂತೆ ಅನೇಕರು ಇದ್ದರು.

click me!